ನೀವು ದೇವಾಲಯದಲ್ಲಿ ದೇವದರ್ಶನ ಮಾಡಲು ಹೋದಾಗ ಮೊದಲು ನಿಮ್ಮ ದೃಷ್ಟಿ, ಗಮನಗಳು ಯಾವುದರ ಮೇಲಿರುತ್ತದೆ? ದೇವರ ಮುಖವೇ? ಕಣ್ಣೇ? ಮೈಯೇ? ಪಾದವೇ? ಅಲಂಕಾರವೇ? ಪೂಜೆಯ ಮೇಲೆಯೇ? ಯಾವುದರ ಮೇಲೆ ನಿಮ್ಮ ಮನಸ್ಸನ್ನು ನಿಲ್ಲಿಸುತ್ತೀರಿ? ಮನಸ್ಸಿನ ನಿಜವಾದ ಏಕಾಗ್ರತೆಗೆ ಕಣ್ಣು ಮುಚ್ಚಿಯೇ ಧ್ಯಾನಿಸಬೇಕಲ್ಲವೇ? ಈ ಸಂಶಯಕ್ಕೆ ಎಡೆಕೊಡದಂತೆ, ಭಜನೆಯು ಮನಸ್ಸಿನ ಏಕಾಗ್ರತೆಗೆ ಸಹಾಯಕವಾಗಿ, ಭಗವಂತನ ನಾಮಸ್ಮರಣೆಯತ್ತಲೇ ನಮ್ಮ ಮನವು ನಿಲ್ಲುವಂತೆ ಮಾಡುತ್ತದೆ ಎಂದೇ ಹರಿದಾಸರು ‘ನೀನ್ಯಾಕೋ ನಿನ್ನ ಹಂಗ್ಯಾಕೋ! ನಿನ್ನ ನಾಮದ ಬಲ ಒಂದಿದ್ದರೆ ಸಾಕೋ’ ಎಂದರು. ಏಕವ್ಯಕ್ತಿಯಾಗಲೀ ಸಮೂಹವಾಗಲಿ ಭಜನೆಯನ್ನು ಮಾಡುವಾಗ ಅದರ ಸಂಗೀತ – ಸಾಹಿತ್ಯಗಳು ಹಾಡುವವರ ಹಾಗೂ ಅನುಭಾವಿಸುವವರ ಮನಸ್ಸು – ಬುದ್ಧಿಗಳನ್ನು ಒಂದುಗೂಡಿಸುತ್ತದೆ. ಎಲ್ಲರ ಮನಸ್ಸು ಒಂದೆಡೆಯೇ ಕೇಂದ್ರೀಕೃತವಾಗಿ ದೇವಧ್ಯಾನವನ್ನು ಮಾಡುತ್ತವೆ. ಇಲ್ಲಿ ದೇವಸ್ವರೂಪದ ಚಿಂತನೆಯ ಬದಲು ನಾಮಸ್ಮರಣೆಯತ್ತಲೇ ಗಮನವಿದ್ದು ಮನವು ಏಕಾಗ್ರತೆಯಿಂದ ಭಗವಂತನನ್ನು ಧ್ಯಾನಿಸುತ್ತದೆ. ಸಮೂಹವಾಗಿ ಭಜನೆ ಮಾಡಿದಾಗ ಮನಸ್ಸು ನಿರ್ಮಲವಾಗಿ ಜ್ಞಾನ, ಭಕ್ತಿ, ವೈರಾಗ್ಯಗಳು ಯಥಾಯೋಗ್ಯವಾಗಿ ಸಿದ್ಧಿಸಿ ಆ ವ್ಯಕ್ತಿಗಳನ್ನು ಪವಿತ್ರಗೊಳಿಸುವುದು ಮಾತ್ರವಲ್ಲದೆ ಸುತ್ತಮುತ್ತಲಿನ ವಾತಾವರಣವನ್ನು ಶುಚಿಗೊಳಿಸಿ, ಒಗ್ಗಟ್ಟು ಹೆಚ್ಚಿಸಿ ಸಮಾಜದ ಸುಧಾರಣೆಗೂ ಸಹಾಯಕವಾಗುತ್ತದೆ. ಸಮೂಹವಾಗಿ ಭಜನಗೋಷ್ಠಿಗಳನ್ನು ಏರ್ಪಡಿಸುವುದರಿಂದ ಭಗವದ್ಭಕ್ತಿಯ ಪಾರವಶ್ಯತೆಯೂ ಆನಂದವೂ ಸಾಮೂಹಿಕವಾಗಿಯೇ ಪ್ರಚೋದನೆಯಾಗುತ್ತದೆ. ಎಂದೇ ದೇಶವು ವಿಪ್ಲವದ ಸಂಕಷ್ಟದಲ್ಲಿದ್ದಾಗ ಭಕ್ತಿಪಂಥವು ಭಾರತದಲ್ಲೆಲ್ಲ ತುಂಬಿಕೊಂಡು ಶ್ರೀಸಾಮಾನ್ಯರಲ್ಲಿ ಭಜನಪದ್ಧತಿಯು ಬಹು ಜನಪ್ರಿಯವಾಯಿತು ಹಾಗೂ ಲಘುಭಕ್ತಿಸಂಗೀತ ಅಥವಾ ಧಾರ್ಮಿಕ ಸಂಗೀತಗಳಿಗೆ ಪರ್ಯಾಯವೆನಿಸಿತು.
ಭಜನೆಯು ಭಗವಂತನನ್ನು ಯಾವ ಭೇದಭಾವವೂ ಇಲ್ಲದೆ ಎಲ್ಲರೂ ಒಟ್ಟು ಸೇರಿ ಭಕ್ತಿಯಿಂದ ಸಂಗೀತಮಾಧ್ಯಮದಲ್ಲಿ ಆರಾಧಿಸುವ ಸುಲಭ ವಿಧಾನ. ಭಜನೆಗೆ ಮುಖ್ಯವಾದದ್ದು ಭಕ್ತಿ. ಭಜನೆಯಲ್ಲಿ ಹಾಡುಗಳನ್ನು ಹಾಡಲು ರಾಗ, ತಾಳ, ಶ್ರುತಿಗೆ ತಂಬೂರಿ, ಅಥವಾ ಬೇರೆ ಇನ್ನಾವುದೇ ಶ್ರುತಿಯ ಉಪಕರಣ, ವಾದ್ಯಗಳು, ಗೆಜ್ಜೆ ಮುಂತಾದವನ್ನು ಉಪಯೋಗಿಸಿದರೆ ಮನಸ್ಸನ್ನು ಏಕಾಗ್ರಗೊಳಿಸಲು ಅನುಕೂಲವಾಗುತ್ತದೆ. ಭಜನಗಾನವು ಸುಲಭಶೈಲಿಯ ಮಾತು – ಧಾತುಗಳಲ್ಲಿಯೂ, ಹೆಚ್ಚಾಗಿ ನಾಮಾವಳಿಗಳಲ್ಲಿಯೂ ಇದ್ದು ಜನಸಾಮಾನ್ಯರಿಗೆ ಅನುಸರಿಸಲು ಸುಲಭವಾದ ಜಾನಪದ ಛಂದಸ್ಸು, ಮಟ್ಟು, ರಾಗ, ತಾಳಗಳಲ್ಲಿದ್ದು , ಭಕ್ತಿಪಂಥದ ಮಹಾಸಂತರ ಹಾಗೂ ಪ್ರವರ್ತಕರ ರಚನೆಗಳನ್ನು ಹಾಡುತ್ತಾರೆ. ಹಲವೊಮ್ಮೆ ಜನಸಾಮಾನ್ಯರೂ ತಮ್ಮ ಶಕ್ತ್ಯಾನುಸಾರ ತಮ್ಮ ಇಷ್ಟದೈವಗಳ ಮೇಲೆ ರಚಿಸಿ ಹಾಡುವುದೂ ಉಂಟು. ಭಜನಗೋಷ್ಠಿಗಳಲ್ಲಿ ಭಾಗವತ ಅಥವಾ ಮುಖ್ಯಗಾಯಕನು ಹಾಡಿದ ಹಾಡಿನ ಸಾಲುಗಳನ್ನು ಗೋಷ್ಠಿಯು ಯಥಾವತ್ತಾಗಿ ಪುನರುಚ್ಚರಿಸುತ್ತದೆ. ಗಾಯನದ ಜೊತೆಗೆ ಸರಳವಾದ ಹಸ್ತ-ಪಾದ ಚಲನೆಗಳುಳ್ಳ ನರ್ತನವೂ ಕೆಲವೊಮ್ಮೆ ಇದ್ದು ಹಾಡುತ್ತ ಕುಣಿಯುತ್ತ ಮನಸ್ಸು, ದೇಹ, ಕಂಠಗಳು ಒಂದೇ ಕಡೆ ಕೇಂದ್ರೀಕೃತವಾಗಿ ಪಾರವಶ್ಯತೆ, ಏಕಾಗ್ರತೆಗಳು ಭಜನಗೋಷ್ಠಿಗೆ ಸುಲಭವಾಗಿ ಲಭಿಸುತ್ತದೆ.
ಭಜನೆಯು ಶ್ರವಣ, ಕೀರ್ತನ, ಸ್ಮರಣ, ಪಾದಸೇವನ, ವಂದನ, ದಾಸ್ಯ, ಸಖ್ಯ, ಅರ್ಚನ, ಮತ್ತು ನಿವೇದನ ಎಂಬ ನವಭಕ್ತಿಗಳ ಸಾಹಿತ್ಯಗಳಲ್ಲಿ ಮೊದಲನೆಯ ಆರರಲ್ಲಿ ಹೆಚ್ಚು, ಉಳಿದ ವಿಧಗಳಲ್ಲಿ ಅಲ್ಪವಾಗಿಯೂ, ನಡೆಯುತ್ತವೆ. ಸಂಸ್ಕೃತ, ತೆಲುಗು, ತಮಿಳು, ಹಿಂದೀ, ಮರಾಠೀ ಮತ್ತು ಕನ್ನಡ ಭಾಷೆಗಳ ಹಾಡುಗಳನ್ನು ಒಳಗೊಂಡಿರುವುದರಿಂದ ಅವು ಭಕ್ತಿಯ ಮೂಲಕ ಭಾವೈಕ್ಯವನ್ನು ಸಾಧಿಸುತ್ತವೆ. ಭಜನೆಯಲ್ಲಿ ಸುಪ್ರಭಾತ ಭಜನೆ, ಅವರೋಹಣಾತ್ಮಕ ಪ್ರಾತಃಕಾಲ ಭಜನೆ, ಅವರೋಹಣಾತ್ಮಕ ರಾತ್ರಿಭಜನೆಗಳ ಪ್ರಕಾರಗಳುಂಟು. ಸುಪ್ರಭಾತ ಭಜನೆಯಲ್ಲಿ ಆರೋಹಣ ಕ್ರಮದಲ್ಲಾದರೆ ಮೊಟ್ಟಮೊದಲು ತಮ್ಮ ತಮ್ಮ ಗುರುಗಳಿಗೂ, ಅನಂತರ ಪರಮಗುರುಗಳಿಗೂ, ತಮ್ಮ ತಮ್ಮ ಮತದ ಯತಿಗಳಿಗೂ ತದನಂತರ ಸಾತ್ತ್ವಿಕ ದೇವತೆಗಳಿಗೂ ಅನಂತರ ನಾರಾಯಣನಿಗೂ ಭಾಗವತರು ಸುಪ್ರಭಾತವನ್ನು ಹಾಡುತ್ತಾರೆ. ಅವರೋಹಣ ಕ್ರಮದಲ್ಲಾದರೆ ಮೊದಲು ಭಗವಂತನಿಗೆ ಸುಪ್ರಭಾತ, ಅನಂತರ ಸಕಲ ಸಾತ್ತ್ವಿಕ ದೇವತೆಗಳಿಗೂ, ಗುರುಪರಂಪರೆಗೂ ಸುಪ್ರಭಾತವನ್ನು ಹೇಳಿ ಭಜನೆಯನ್ನು ಮಾಡುತ್ತಾರೆ. ರಾತ್ರಿಯಲ್ಲಿ ಆರೋಹಣ ಕ್ರಮದಲ್ಲಿ ಭಜನೆಯನ್ನು ಮಾಡಬೇಕೆಂಬುದು ಹರಿದಾಸರ ನಿಯಮ. ರಾತ್ರಿಯಲ್ಲಿ ಮೊಟ್ಟಮೊದಲು ಕೆಳಗಿನಿಂದ ಎಲ್ಲ ಹರಿದಾಸರನ್ನು ಸ್ತುತಿಸಿ, ಅನಂತರ ಅದೇ ಕ್ರಮದಲ್ಲಿ ಯತಿಗಳನ್ನು, ದೇವತೆಗಳನ್ನು ಸ್ತುತಿಸಿ ಕೊನೆಗೆ ಶ್ರೀನಿವಾಸನನ್ನು ಸ್ತುತಿಸುತ್ತಾರೆ. ಪ್ರಾತಃಕಾಲದಲ್ಲಿ ಭಜನೆಯು ಮುಗಿದ ಮೇಲೆ ಭಗವಂತನಿಗೆ ಮಂಗಳದ ಆರತಿ, ಕೊನೆಯಲ್ಲಿ ಸರ್ವಕರ್ಮ ಸಮರ್ಪಣೆ ಇರುತ್ತದೆ. ರಾತ್ರಿ ಭಜನೆಯಲ್ಲಿ ಈ ವಿಷಯಗಳಲ್ಲವೂ ಇದ್ದು ಕೊನೆಯಲ್ಲಿ ಡೋಲೋತ್ಸವ ಪದ್ಧತಿ ಇದ್ದರೆ ಅದನ್ನೂ ಸೇರಿಸಿ ಲಾಲಿಸೇವೆಯಾಗಿ ಅನಂತರ ಸರ್ವಕರ್ಮ ಸಮರ್ಪಣೆಯಾಗುತ್ತದೆ. ಇದು ಹರಿದಾಸರಿಗೆ ಪರಂಪರಾನುಗತವಾಗಿ ಪ್ರಾಪ್ತಿಯಾದ ಭಜನಾಪದ್ಧತಿಯ ಸಂಪ್ರದಾಯ. ಹರಿದಾಸರು ಪ್ರಾತಃಕಾಲ ಮತ್ತು ರಾತ್ರಿಯ ಭಜನೆಯಲ್ಲಿ ಹೇಳುವ ಭಗವಂತನ ಸ್ತುತಿಗಳಲ್ಲಿ ಕೆಲವು ಕ್ರಮಗಳನ್ನು ಅನುಸರಿಸುತ್ತಾರೆ. ಭಜನೆಯು ಪೂಜೆಯ ಒಂದು ಅಂಗವಾಗಿಯೇ ಪರಿಗಣಿಸಲ್ಪಟ್ಟು ಶಾಸ್ತ್ರದ ಪ್ರಕಾರ ಪೂಜೆಯನ್ನು ಮಾಡುವಾಗ ಭಗವಂತನಿಗೆ ಷೋಡಶೋಪಚಾರಗಳನ್ನು ಸಮರ್ಪಿಸಲೇ ಬೇಕು. ಷೋಡಶೋಪಚಾರಗಳೂ ಭಿನ್ನ ಭಿನ್ನ ಕ್ರಮಗಳಲ್ಲಿ ಹೇಳಲ್ಪಟ್ಟಿದ್ದರೂ ಹರಿದಾಸರಿಗೆ ಸಮ್ಮತವಾದ ಷೋಡಶೋಪಚಾರಗಳು ಆವಾಹನೆ, ಆಸನ, ಅರ್ಘ್ಯ, ಪಾದ್ಯ, ಆಚಮನ, ಸ್ನಾನ, ವಸ್ತ್ರ, ಆಭರಣ – ಉಪವೀತ, ಗಂಧ, ಪುಷ್ಪ, ಧೂಪ, ದೀಪ, ನೈವೇದ್ಯ, ಮಂಗಳಾರತಿ, ಲಾಲಿ, ಸರ್ವಸಮರ್ಪಣೆ – ಎಂಬ ಪ್ರಕಾರದಲ್ಲಿ ನಡೆಯುತ್ತವೆ. ಇಂದು ದಾಸಸಾಹಿತ್ಯವೂ ಹೆಚ್ಚಿನ ಪಾಲು ಲುಪ್ತವಾದ್ದರಿಂದ ಅನೇಕ ವಿಧಗಳು ಉಪಲಬ್ಧವಿಲ್ಲವಾಗಿ ಷೋಡಶೋಪಚಾರಗಳಲ್ಲಿ ಆವಾಹನೆ, ಧೂಪ, ದೀಪ, ನೈವೇದ್ಯಾದಿ ಕೆಲ ಉಪಚಾರಗಳಿಗೆ ಸಂಬಂಧಿಸಿದಂತೆ ಪದಗಳು ದೊರೆತರೂ ಆಸನ, ಅರ್ಘ್ಯ, ಪಾದ್ಯ ಮುಂತಾದ ಉಪಚಾರಗಳ ಬಗ್ಗೆ ಪ್ರತ್ಯೇಕವಾದ ಪದಗಳು ಇಂದು ದೊರೆಯುತ್ತಿಲ್ಲವೆಂದು ಸಂಶೋಧಕರು ಹೇಳುತ್ತಾರೆ.
ಭಜನಗೋಷ್ಠಿಯ ಭಾಗವತನು ಆಸ್ತಿಕನೂ ಭಕ್ತನೂ ಧರ್ಮಾಚರಣನಿರತನೂ ಆಗಿರಬೇಕು. ತನಗಿಂತ ಹಿರಿಯ ಭಾಗವತನಿಂದ ದೀಕ್ಷೆಯನ್ನು ಪಡೆದಿರಬೇಕು. ಇಂತಹ ದೀಕ್ಷೆಯ ಲಾಂಛನವಾಗಿ ತನ್ನ ಬಲತೋಳಿನಲ್ಲಿ ದೀಕ್ಷಾಗುರುವು ಕಟ್ಟಿದ ಸೂತ್ರವನ್ನು ಧರಿಸಿರಬೇಕು. ಭಜನೆಯನ್ನು ಮಾಡುವವರು ಪಾಲಿಸಬೇಕಾದ ಕೆಲವು ನಿಯಮಾವಳಿಗಳನ್ನು ಮಾಧ್ವ ಪರಂಪರೆಯ ಕರ್ನಾಟಕದ ಹರಿದಾಸರು ಹೇಳಿದ್ದಾರೆ. ಅವು ಇಂತಿವೆ — ಭಜನೆ ಮಾಡುವ ವ್ಯಕ್ತಿ ಅರುಣೋದಯ ಕಾಲದಲ್ಲಿ ಏಳಬೇಕು. ಶೌಚಾದಿ ಕಾರ್ಯಗಳನ್ನು ಮುಗಿಸಿ, ಹಲ್ಲುಜ್ಜಿ ಅನುಕೂಲವಾದಲ್ಲಿ ಸ್ನಾನವನ್ನು ಮಾಡಬೇಕು ಅಥವಾ ಮುಖವನ್ನು ತೊಳೆದು ಹಣೆಗೆ ತುಲಸೀ ಮೃತ್ತಿಕೆಗಳನ್ನು ಧರಿಸಿ ಭಜನೆಯನ್ನು ಮಾಡಬೇಕು. ಆಶ್ರಮಕ್ಕನುಗುಣವಾಗಿ ಶುಭ್ರ ವಸ್ತ್ರಗಳನ್ನು ಧರಿಸಬೇಕು. ವಿಷ್ಣುಪ್ರೀತಿಕರವಾದ ತುಲಸೀಮಾಲೆಯನ್ನು ಕೊರಳಲ್ಲಿ ಧರಿಸಬೇಕು. ಸ್ನಾನವನ್ನು ಮಾಡಿದ್ದರೆ, ಗೋಪೀಚಂದನದಿಂದ ಊರ್ಧ್ವಪುಂಢ್ರಗಳನ್ನೂ ಪಂಚಮುದ್ರೆಯನ್ನೂ ಧರಿಸಬೇಕು. ಸಾಯಂಕಾಲದ ಭಜನೆಯಲ್ಲಿ ಹಣೆಗೆ ಗಂಧ, ಅಕ್ಷತೆ – ಅಂಗಾರಗಳನ್ನು ಧರಿಸಬೇಕು. ವೈರಾಗ್ಯಕ್ಕೆ ಪ್ರತಿರೂಪವಾದದ್ದೂ, ವೈರಾಗ್ಯವನ್ನು ಬೆಳೆಸುವಂತಹದೂ ಆದ ಕಾವೀವಸ್ತ್ರವನ್ನು ತಲೆಗೆ ಸುತ್ತಿಕೊಳ್ಳಬೇಕು. ಮನಸ್ಸನ್ನು ಎಚ್ಚರಗೊಳಿಸಿ, ಪ್ರಾಪಂಚಿಕ ಶಬ್ದಗಳು ಕಿವಿಗೆ ಕೇಳದಂತೆ ಮಾಡುವ, ಭಜನೋಪಕರಣಗಳೆನಿಸಿದ ತಾಳ, ಗೆಜ್ಜೆ. ತಂಬೂರಿ, ಢಕ್ಕಿ, ಚಿಟಿಕೆ ಮುಂತಾದುವುಗಳಲ್ಲಿ ಯಾವುದಾದರೂ ಒಂದನ್ನು ಕೈಯಲ್ಲಿ ಧರಿಸಿ ಭಜನೆಯನ್ನು ಮಾಡಬೇಕು. ಆದಷ್ಟೂ ಪ್ರಯತ್ನಿಸಿ ಆಹಾರ ಮತ್ತು ಪಾನೀಯಗಳತ್ತ ಮನಸ್ಸನ್ನು ಹೋಗಗೊಡದೆ ನಿಶ್ಚಲಗೊಳಿಸಬೇಕು. ಭಜನಾಕಾರ್ಯಕ್ರಮವನ್ನು ದೇವಾಲಯದಲ್ಲಾಗಲೀ ಅಥವಾ ಮನೆಯಲ್ಲಿ ದೇವರ ಸನ್ನಿಧಿಯಲ್ಲಾಗಲೀ ನೆರವೇರಿಸಬೇಕು. ಭಜನೆಯಲ್ಲಿ ಪುರಂದರದಾಸರ ಪರಂಪರೆಗೆ ಸೇರಿದ ಹರಿದಾಸರ ಪದಗಳನ್ನು ಹಾಡಬೇಕು. ಭಜನೆಯಲ್ಲಿ ಆದಷ್ಟೂ ಪ್ರಯತ್ನಿಸಿ ಪರಂಪರಾನುಗತವಾದ ರಾಗ – ತಾಳಗಳನ್ನೇ ಬಳಸಬೇಕು. ಸಂಪ್ರದಾಯ ಬದ್ಧವಾದ ರಾಗ ಇದ್ದಾಗ್ಯೂ ಅದನ್ನು ಬಿಟ್ಟು ಹೊಸರಾಗಗಳನ್ನು ಸರ್ವೋತ್ಕೃಷ್ಟಗಳೆನಿಸಿದ ಶ್ರುತಿ – ಸ್ಮೃತಿ – ಪುರಾಣ ರಹಸ್ಯಗಳನ್ನು ತಮ್ಮೊಳಗಿಟ್ಟುಕೊಂಡು ಮಂತ್ರಸದೃಶಗಳೆನಿಸಿದ ಹರಿದಾಸರ ಪದಗಳಿಗೆ ಹಾಕಬಾರದು. (ಈ ನಿಯಮವನ್ನು ಕಡ್ಡಾಯವಾಗಿ ಪಾಲಿಸಿದಲ್ಲಿ ಅನೇಕ ರಾಗಗಳು ಆಯಾ ಕಾಲಾಂತರದಲ್ಲಿ ಬೆಳೆದು ಬಂದ ಇತಿಹಾಸವನ್ನು ತಿಳಿಯಲೂ ಅನುಕೂಲವಾಗುತ್ತದೆ). ಸುವಾಸಿನಿಯರು ಭಜನೆಯನ್ನು ಮಾಡುವಾಗ ಕಡ್ಡಾಯವಾಗಿ ಕಚ್ಚೆಯನ್ನು ಹಾಕಿಕೊಳ್ಳಬೇಕು. ಸಾಮೂಹಿಕ ಭಜನೆಯಲ್ಲಿ ಲೋಕವಾರ್ತೆಗೆ ಅವಕಾಶವನ್ನು ನೀಡಲೇಬಾರದು. ಶಿಸ್ತಾದ ಕ್ರಮದಲ್ಲಿ ಕುಳಿತು ಮನಸ್ಸನ್ನು ನಿರ್ಮಲಗೊಳಿಸಿ ಜ್ಞಾನ – ಭಕ್ತಿ – ವೈರಾಗ್ಯಗಳು ಸಿದ್ಧಿಸುವಂತೆ ಭಜನೆಯನ್ನು ಮಾಡಬೇಕು.
ಭಜನೆಯಲ್ಲಿ ಸ್ಥಾವರ ಭಜನೆ ಹಾಗೂ ಜಂಗಮ ಭಜನೆ, ಹಾಗೂ ಚರಗೋಷ್ಠಿಗಳೆಂಬ ವಿಧಾನಗಳೂ ಉಂಟು. ಸ್ಥಾವರ ಭಜನೆಯೆಂದರೆ ದೇವಾಲಯ, ಮಠ, ಮಂದಿರ, ಮನೆಗಳಲ್ಲಿ ಭಾಗವಹಿಸುವಂತಹ ಎಲ್ಲರೂ ಸೇರಿ ಕುಳಿತು ಭಜನೆಯನ್ನು ಮಾಡುವುದು. ಜಂಗಮಭಜನೆಯಲ್ಲಿ ದಿವ್ಯನಾಮಸಂಕೀರ್ತನವನ್ನು ಮಾಡುವಾಗ ಭಜನೆಯನ್ನು ಮಾಡುವ ಸ್ಥಳದ ಹಜಾರದ ಮಧ್ಯದಲ್ಲಿ ಒಂದು ಪವಿತ್ರ ಸ್ತಂಭವನ್ನು ಸ್ಥಾಪಿಸಿ, ದೀಪವನ್ನು ಹೊತ್ತಿಸಿ, ಕೆಲವು ಭಕ್ತರು ಅದಕ್ಕೆ ಪ್ರದಕ್ಷಿಣೆಯನ್ನು ಮಾಡುತ್ತ ಹಾಡುತ್ತಿದ್ದರೆ, ಕೆಲವರು ಅವರೊಂದಿಗೆ ದನಿಗೂಡಿಸುತ್ತಾರೆ. ಬೇರೆಯ ಚರಭಜನಗೋಷ್ಠಿಗಳಲ್ಲಿ ದೇವಾಲಯದ ಉತ್ಸವಮೂರ್ತಿಯನ್ನು ಮೆರವಣಿಗೆಯನ್ನು ನಡೆಸುವ ಸಂದರ್ಭದಲ್ಲಿ ವೇದಪಾರಾಯಣ ಗೋಷ್ಠಿಯೊಂದಿಗೆ ಭಜನಗೋಷ್ಠಿಯನ್ನೂ ಮಾಡುತ್ತಾರೆ. ಈ ಭಜನಗೋಷ್ಠಿಯನ್ನು ನಡೆಸುವವರು ಮಡಿಯನ್ನುಟ್ಟು ನಾಮಾವಳಿ ಮತ್ತಿತರ ಹಾಡುಗಳನ್ನು ಗಾಯನ ಮಾಡುತ್ತಲೂ ಕೆಲವರು ಅದಕ್ಕೆ ವಾದ್ಯಗಳ ಸಹವಾದನವನ್ನು ಮಾಡುತ್ತಲೂ ನಡೆಸುತ್ತಾರೆ. ಧನುರ್ಮಾಸದ ಸಮಯದಲ್ಲಿ ಬೆಳಗಿನ ಜಾವದಲ್ಲಿಯೇ ಸ್ತ್ರೀ ಪುರುಷಾದಿಯಾಗಿ ಹಳ್ಳಿ – ನಗರಗಳ ಬೀದಿಬೀದಿಗಳಲ್ಲಿ ಭಜನೆಯನ್ನು ಮಾಡುತ್ತ ಸೂರ್ಯೋದಯದ ವೇಳೆಗೆ ದೇವಾಲಯವನ್ನು ತಲುಪಿ ದೇವರ ದರ್ಶನವನ್ನು ಮಾಡಿ ಪ್ರಸಾದವನ್ನು ಸ್ವೀಕರಿಸುತ್ತಾರೆ. ಭಕ್ತಾದಿಗಳು ತಮ್ಮ ಮನೆಯ ಮುಂದೆ ಬರುವ ಭಜನಗೋಷ್ಠಿಯನ್ನು ಭಕ್ತಿಯಿಂದ ಸ್ವಾಗತಿಸಿ ಗೋಷ್ಠಿಯವರು ಒಯ್ಯಲಾಗಿದ್ದ ದೇವರ ಪಟಕ್ಕೂ, ದೀಪಕ್ಕೂ ನಮಸ್ಕರಿಸಿ ಕಾಣಿಕೆಯನ್ನು ಸಮರ್ಪಿಸುತ್ತಾರೆ. ಚೈತ್ರಮಾಸದಲ್ಲಿ ರಾಮೋತ್ಸವ ಭಜನಗೋಷ್ಠಿಗಳು ಹೀಗೆಯೇ ನಡೆದರೂ ಅದಕ್ಕೆ ಸಮಯದ ನಿಬಂಧನೆಗಳಿಲ್ಲ. ಚರಭಜನಗೋಷ್ಠಿಗಳಲ್ಲಿ ವಿಶೇಷವಾದ ಮುಖ್ಯ ರೀತಿಯೊಂದಿದೆ. ಅದೇ ಊಂಛವೃತ್ತಿ. ಇದರಲ್ಲಿ ಭಾಗವತನು ಹರಿದಾಸರ ವೇಷವನ್ನು ಧರಿಸಿ ಬೀದಿಬೀದಿಗಳಲ್ಲಿ ಭಗವನ್ನಾಮಸಂಕೀರ್ತನಗಳನ್ನು, ನಾಮಾವಳಿಗಳನ್ನು ಹಾಡುತ್ತ ನಡೆದರೆ, ಆತನ ಹಿಂದೆ ಭಕ್ತವೃಂದವು ಆತನನ್ನು ಅನುಸರಿಸಿ ಹಾಡುತ್ತ ವಾದನಗಳನ್ನು ಮಾಡುತ್ತ ಹಿಂಬಾಲಿಸುತ್ತಾರೆ. ಅನೇಕ ವೇಳೆ ಈ ಭಜನಗೋಷ್ಠಿಯು ಸರಳವಾದ ದೈಹಿಕ ಚಲನೆಗಳಿಂದ ನರ್ತಿಸುವುದೂ ಉಂಟು. ದಾರಿಯಲ್ಲಿ ಭಕ್ತರು ತಮ್ಮ ತಮ್ಮ ಮನೆಬಾಗಿಲಿನ ಎದುರು ಕಾಯುತ್ತಿದ್ದು ಭಕ್ತಿಯಿಂದ ಕಾಣಿಕೆಯನ್ನೂ ದವಸ ಧಾನ್ಯಗಳನ್ನೂ ಸಲ್ಲಿಸಿ ನಮಿಸಿ ಧನ್ಯರಾಗುತ್ತಾರೆ. ಊಂಛವೃತ್ತಿಯನ್ನು ನಡೆಸುವ ಭಾಗವತರು ನಾಳೆಗೆಂದು ಸಂಪಾದಿಸದೆ ಬಡವನಾಗಿದ್ದು ಸರಳವಾದ ನಿರಾಡಂಬರ ಜೀವನವನ್ನು ನಡೆಸುತ್ತ ಪರಿಶುದ್ಧ ಭಕ್ತಿಪೂರ್ವಕ ಜೀವನವನ್ನು ನಡೆಸುತ್ತ ಭಕ್ತಾದಿಗಳು ನೀಡಿದ ಭಿಕ್ಷೆಯಿಂದ ತನ್ನ, ತನ್ನ ಕುಟುಂಬದ ಹಾಗೂ ಶಿಷ್ಯರ ಉದರಂಭರಣವನ್ನು ಮಾಡುತ್ತ ಶಿಷ್ಯರಿಗೆ ಉಪದೇಶಗಳನ್ನು ನೀಡುತ್ತ ಜೀವನವನ್ನು ಭಗವಂತನಿಗೆ ಸಮರ್ಪಿಸಬೇಕು. ಸಂತ ತ್ಯಾಗರಾಜರು, ತಾಳ್ಳಪಾಕಂ ಚಿನ್ನಯ್ಯ. ಭದ್ರಾಚಲ ರಾಮದಾಸರು. ಬೋಧೇಂದ್ರ ಸದ್ಗುರು ಸ್ವಾಮಿ, ಸದಾಶಿವ ಬ್ರಹ್ಮೇಂದ್ರ, ಶ್ರೀಧರ ಅಯ್ಯಾವಾಳ್, ಕೃಷ್ಣಚೈತನ್ಯ, ತುಕಾರಾಂ ಮುಂತಾದವರಲ್ಲಿ ಅನೇಕರು ಊಂಛವೃತ್ತಿಯ ಜೀವನವನ್ನು ಮಾಡಿದ್ದು ತಾವು ರಚಿಸಿದ ಭಕ್ತಿಸಾಹಿತ್ಯಗಳಿಂದಾಗಿ ಭಜನಾಸಂಪ್ರದಾಯವನ್ನೂ, ಸಂಗೀತವನ್ನೂ ಶ್ರೀಮಂತಗೊಳಿಸಿದರು.
ಭಜನಗೋಷ್ಠಿಗಳಲ್ಲಿ ನಿರ್ಗುಣೋಪಾಸನೆ ಹಾಗೂ ಸಗುಣೋಪಾಸನೆಯ ಎರಡು ಪಂಥಗಳೂ ಇವೆ. ನಿರ್ಗುಣೋಪಾಸನೆಯಲ್ಲಿ ಮುಖ್ಯವಾಗಿ ಕಬೀರ್, ನಾನಕ್ ರಂತಹ ಅನುಭಾವಕರ ಸಾಹಿತ್ಯಗಳಿದ್ದು ಬೋಧೆ, ತತ್ವ, ಪ್ರಮೇಯ, ಚರ್ಯಾ ಇವುಗಳನ್ನು ಕುರಿತಾದ ಹಾಡುಗಳಿದ್ದು ಸಂಕೇತಮಯವಾಗಿರುತ್ತವೆ. ಇವುಗಳಲ್ಲಿ ಭಕ್ತಿಯ ಉದ್ವೇಗವಿಲ್ಲದಿದ್ದರೂ ಆತ್ಮನಿರೀಕ್ಷಣ, ನಿರುಪಾಧಿಕ ಅನ್ವೇಷಣೆಗಳಿರುತ್ತವೆ. ಮೀರಾಬಾಯಿ, ತುಲಸೀದಾಸ, ಸೂರದಾಸ್, ಜ್ಞಾನದೇವ, ಪುರಂದರದಾಸರು, ಕನಕದಾಸರು, ತ್ಯಾಗರಾಜರು,ರಾಮದಾಸರು ಮುಂತಾದ ಅನೇಕಾನೇಕ ಹರಿದಾಸರೂ, ವೇಮನ, ನಾಯನ್ಮಾರರು, ಆಳ್ವಾರರು, ಶಿವಶರಣರು ಮುಂತಾದವರ ರಚನೆಗಳೂ ಸಗುಣಭಕ್ತಿಯ ಭಜನಾಪದ್ಧತಿಗಳಾಗಿದ್ದು ಹೆಚ್ಚು ಜನಪ್ರಿಯವಾಗಿವೆ. ಭಜನಗೋಷ್ಠಿಗಳು ಭಕ್ತಿಯ ಸಂಪ್ರದಾಯನಿಷ್ಠರೂ ಆಗಿರುವ ಸಂಗೀತವಿದ್ವಾಂಸರುಗಳ ಮನೆಯಲ್ಲಿಯೂ ನಡೆಯುತ್ತಿದ್ದವು. ಇವು ಆಸಕ್ತ ರಸಿಕರಿಗೆ ಸ್ಥಳೀಯ ಹಾಗೂ ಪರಸ್ಥಳೀಯ ಸಂಗೀತ ವಿದ್ವಾಂಸರ ಸಂಗೀತವನ್ನು ಆಲಿಸಿ ತಮ್ಮ ಜ್ಞಾನಾನುಭವವನ್ನು ವಿಸ್ತರಿಸಿಕೊಳ್ಳಲು ಅತ್ಯುತ್ತಮ ಸಾಧನವಾಗಿದ್ದವು. ಭಕ್ತರಿಗೂ ಹಾಡಲು ಇವು ಸುವರ್ಣಾವಕಾಶಗಳಾಗುತ್ತಿದ್ದವು. ಇಂತಹ ಗೋಷ್ಠಿಗಳು ಇಂದು ಅಪರೂಪವಾಗುತ್ತಿರುವುದು ದುರದೃಷ್ಟಕರ. ಯಾವ ಶಾಸ್ತ್ರೀಯ ತರಬೇತಿಗಳ ಅಗತ್ಯವೂ ಇಲ್ಲದೆ ಸಂಗೀತವನ್ನು ಉಪಯೋಗಿಸಿ ಮಾಡುವ ಇಂತಹ ಭಜನಾಪದ್ಧತಿಗಳು ಪಂಡಿತ ಮಾತ್ರವಲ್ಲದೆ ಪಾಮರರಿಗೂ ಶಾಸ್ತ್ರೀಯಸಂಗೀತಾಸಕ್ತಿಯನ್ನು ಉಂಟುಮಾಡುವುದರಲ್ಲಿಯೂ, ಭಾವೈಕ್ಯವನ್ನು ಮೂಡಿಸಿ ಉತ್ತಮ ಸಂಸ್ಕಾರವನ್ನು ಬೆಳೆಸುವುದರಲ್ಲಿಯೂ ಒಂದು ಹಂತದಲ್ಲಿ ಯಶಸ್ವಿಯಾಗುತ್ತವೆ.
(ವಿವಿಧ ಆಕರಗಳಿಂದ)