ಗೋಕರ್ಣ ಜೂ.08 : ಶೂನ್ಯದಲ್ಲಿ ಜಗತ್ತಿನ ಪೂರ್ಣ ಚಿತ್ರ ಬಿಡಿಸುವ ಮಹಾಕಲಾವಿದ ಶಿವ. ಕಲೆ ತಲೆಯ ಮೇಲೆ ಕಿರೀಟ ಇದ್ದ ಹಾಗೆ ಎಂಬುದನ್ನು ಜಗತ್ತಿಗೆ ತೋರಿಸುವ ಕಾರ್ಯ ಮಾಡಿದ್ದಾನೆ. ಕಲಾಸ್ವರೂಪರಾದ ದೇವರ ಸನ್ನಿಧಿಯಲ್ಲಿ ನಾದವು ವಿಜ್ರಂಭಿಸಬೇಕು. ಆನಂದದ ಹಿಂದೆ ಭಗವಂತನ ಕರುಣೆ ಇದೆ ಎಂದು ರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿಗಳು ಹೇಳಿದರು.
ಅವರು ಶ್ರೀ ಕ್ಷೇತ್ರ ಗೋಕರ್ಣ ಸಂಸ್ಥಾನ ಶ್ರೀಮಹಾಬಲೇಶ್ವರ ದೇವ ದೇವಸ್ಥಾನದಲ್ಲಿ ಶಿವಪದ ವೇದಿಕೆ ಲೋಕಾರ್ಪಣೆ ಮಾಡಿ ಆಶೀರ್ವಚನ ನೀಡಿದರು.
ನಾದ ಮತ್ತು ನೃತ್ಯದ ಸಮ್ಮಿಲನವಾಗಿ ಶಿವಪದವಿದೆ. ಜಗತ್ತಿನ ಪ್ರತಿಯೊಬ್ಬ ಕಲಾವದನಿಗೆ ಶಿವಪದ ವೇದಿಕೆಯಾಗಿದೆ. ಶಿವನ ಸನ್ನಿಧಿಯಲ್ಲಿ ಪ್ರತಿಯೊಬ್ಬರಿಗೂ ಸೇವೆ ಸಲ್ಲಿಸುವ ಮುಕ್ತ ಅವಕಾಶವಿದೆ. ಕಲೆ ಇದೆ ಎಂದರೆ ಶಿವನ ಸನ್ನಿಧಿಯಲ್ಲಿ ನೆಲೆ ಇದೆ ಎಂದು ಹೇಳಿದರು.
ಪುಣೆಯ ಕಲಾವಿದ ಸಂದೀಪ್ ಧವಲೆ ಅವರು ವೇದಿಕೆ ಮುಂದೆ ವಿಶಿಷ್ಟ ಬಹುವರ್ಣದ ರಂಗೋಲಿ ರಚಿಸಿದ್ದರು. ಪ್ರಿಯಾ, ಶ್ವೇತ ನೃತ್ಯ ಪ್ರದರ್ಶನ ಮಾಡಿದರು. ಪಂಡಿತ್ ವೆಂಕಟೇಶ್ ಕುಮಾರ್ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಉಪಾಧಿವಂತ ಮಂಡಳಿ ಅಧ್ಯಕ್ಷ ಶಿತಿಕಂಠ ಹಿರೆ, ತಾಲೂಕು ಪಂಚಾಯಿತಿ ಅಧ್ಯಕ್ಷ ಮಹೇಶ್ ಶೆಟ್ಟಿ ಉಪಸ್ಥಿತರಿದ್ದರು. ಆಡಳಿತಾಧಿಕಾರಿ ಜಿ. ಕೆ. ಹೆಗಡೆ ಪ್ರಸ್ತಾವನೆಗೈದರು.