ಬೆಂಗಳೂರಿನ ಹಂಪಿನಗರದ ಶ್ರೀಭಾರತೀ ವಿದ್ಯಾಲಯದ ನೂತನ ಆಡಳಿತಾಧಿಕಾರಿಯಾಗಿ ನೇಮಕಗೊಂಡಿರುವ ವಿಶ್ರಾಂತ ಪ್ರಾಂಶುಪಾಲರು, ಶಿಕ್ಷಣ ತಜ್ಞರು, ಸಂಪನ್ಮೂಲ ವ್ಯಕ್ತಿಗಳೂ ಆದ ಶ್ರೀ ವಿಶ್ವೇಶ್ವರ ಭಟ್ಟ ಉಂಡೆಮನೆಯವರು ಕಳೆದೆರಡು ದಿನಗಳಿಂದ ಶಿಕ್ಷಕರಿಗೆ ತರಬೇತಿಯನ್ನು ನೀಡುತ್ತಾ ಬಂದಿದ್ದಾರೆ. ಮೊದಲನೆಯ ದಿನದ ವಿಷಯ ವಸ್ತುವು ” ಮಿತ್ರದ್ವಾರಾ ಸ್ವಪರಿಚಯ” .ಪ್ರತಿಯೊಬ್ಬ ಶಿಕ್ಷಕನೂ ೨ ನಿಮಿಷದ ಅವಧಿಯಲ್ಲಿ ತಮ್ಮ ಸಹೋದ್ಯೋಗಿ ಮಿತ್ರರೋರ್ವರ ಮಾಹಿತಿಯನ್ನು ಕಲೆಹಾಕಿ ಶಿಕ್ಷಕ ಸಮೂಹದೆದುರು ಪರಸ್ಪರ ಪರಿಚಯ ಮಾಡಿಕೊಡುವ ಚಟುವಟಿಕೆಯಾಗಿದ್ದು ಬಹಳ ಆಸಕ್ತಿಯುತವಾಗಿತ್ತು.
ಶಿಕ್ಷಕರು ಇಂತಹ ಚಟುವಟಿಕೆಗಳನ್ನು ತಮ್ಮ ತರಗತಿಗಳಲ್ಲಿ ಮಾಡಿಸುವುದರಿಂದ ಮಕ್ಕಳಿಗೆ ಭಯವನ್ನು ನಿವಾರಿಸಬಹುದು, ಮಾತ್ರವಲ್ಲ ಅವರ ಸಂವಹನಾ ಕೌಶಲ್ಯವನ್ನೂ ಸಹ ವೃದ್ಧಿಗೊಳಿಸಬಹುದು ಎಂದು ಅವರು ತಿಳಿಸಿಕೊಟ್ಟರು.
ಎರಡನೆಯ ದಿನದ ಚಟುವಟಿಕೆಯು ಒಬ್ಬ ದಕ್ಷ ಆಡಳಿತಾಧಿಕಾರಿ ಹಾಗೂ ಆದರ್ಶ ಶಿಕ್ಷಕರ ಗುಣಗಳನ್ನು ತಿಳಿಯಪಡಿಸುವುದಾಗಿದ್ದು ಎಲ್ಲ ಶಿಕ್ಷಕರು ಅತ್ಯಂತ ಉತ್ಸುಕತೆಯಿಂದ ಪಾಲ್ಗೊಂಡರು. ವಿಶೇಷವೆಂದರೆ ಇದಾವ ವಿಷಯದ ಕುರಿತೂ ಶ್ರೀಯುತರು ಉಪನ್ಯಾಸ ಕೊಡಲಿಲ್ಲ; ಬದಲಾಗಿ ಶಿಕ್ಷಕರ ಮೂಲಕವೇ ದಕ್ಷ ಅಡಳಿತಾಧಿಕಾರಿಯ ಎಲ್ಲ ಗುಣಗಳು ಪಟ್ಟಿ ಮಾಡಲ್ಪಟ್ಟವು. ಏತನ್ಮಧ್ಯೆ ಅವರು ಪ್ರತಿಯೊಬ್ಬ ಶಿಕ್ಷಕನೂ ತನ್ನ ತರಗತಿಯ ಆಡಳಿತಾಧಿಕಾರಿಯಾಗಿರುತ್ತಾನೆ. ಈ ಎಲ್ಲ ಗುಣಗಳೂ ಶಿಕ್ಷಕರಲ್ಲೂ ಅವಶ್ಯ ಎಂದು ಅರಿವು ಮೂಡಿಸಿದರು.
3ನೆಯ ದಿನವು Auditory, Visual ಹಾಗೂ Kinesthetics ಎಂಬ 3 ಬಗೆಯ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ತಕ್ಕ ರೀತಿಯಲ್ಲಿ ಪಾಠಕ್ರಮದ ಅಳವಡಣೆಯ ವಿಷಯವನ್ನೊಳಗೊಂಡಿತ್ತು. ಜ್ಞಾನ ಸಂಪನ್ನವಾಗಿಯೂ, ಹಾಸ್ಯಾತ್ಮಕವಾಗಿಯೂ ಇದ್ದ ಈ ತರಬೇತಿಯಲ್ಲಿ ಶಿಕ್ಷಕರು ಹರ್ಷದಿಂದ ಪಾಲ್ಗೊಂಡರು.