ವರ್ಧಂತಿ ಉತ್ಸವದಂತೆ ಆಚರಣೆಯಾಯ್ತು ಶಾಲೆಯ ಹುಟ್ಟುಹಬ್ಬ

ಶಿಕ್ಷಣ

ಮುಜುಂಗಾವು: ಮುಜುಂಗಾವು ಶ್ರೀಭಾರತೀ ವಿದ್ಯಾಪೀಠದ ವರ್ಧಂತ್ಯುತ್ಸವವು 26.01.2019ರ ಶನಿವಾರ ನಡೆಯಿತು. ಬೆಳಗ್ಗೆ 9.30ಕ್ಕೆ ದೀಪಪ್ರಜ್ವಲನೆ, ಶಂಖನಾದ ಹಾಗೂ ಧ್ವಜಾರೋಹಣದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಶ್ರೀ ಪುರುಷೋತ್ತಮಾಚಾರ್ಯರು ಧ್ವಜಾರೋಹಣ ಮಾಡಿ ಮಾತನಾಡಿದರು.ಆಡಳಿತ ಮಂಡಳಿ ಅಧ್ಯಕ್ಷರಾದ ಎಸ್. ಎನ್. ರಾವ್ ಮುನ್ನಿಪ್ಪಾಡಿ ಹಿತವಚನ ನುಡಿದರು.

ಅಪರಾಹ್ನ 2 ಗಂಟೆಯಿಂದ ಸಮಾರೋಪ ಸಮಾರಂಭ ನಡೆಯಿತು. ಈ ಕಾರ್ಯಕ್ರಮಕ್ಕೆ ಅಭ್ಯಾಗತರಾಗಿ ಆಗಮಿಸಿದ ಎಡನಾಡು ಗ್ರಾಮದ ಗ್ರಾಮಾಧಿಕಾರಿಗಳಾದ ಶ್ರೀ ಸತ್ಯನಾರಾಯಣ ತಂತ್ರಿಯವರು ಮಾತನಾಡಿ, ಒಬ್ಬ ವಿದ್ಯಾರ್ಥಿಯ ಹುಟ್ಟುಹಬ್ಬವೆಂದರೆ ಅವನಿಗೆ ಮಾತ್ರ ಸಂತೋಷ, ಸಡಗರ. ಆದರೆ ಶಾಲೆಯ ವರ್ಧಂತಿಯೆಂದರೆ ಶಾಲೆಯ ಹುಟ್ಟುಹಬ್ಬ. ಆ ಶಾಲೆಗೆ ಸಂಬಂಧಪಟ್ಟ ಎಲ್ಲರಿಗೂ ಸಂತಸದ ಜಾತ್ರೆ, ಉತ್ಸವವಿದ್ದಂತೆ. ಎಲ್ಲರ ತನುಮನಗಳ ಚೇತರಿಕೆ, ವರ್ಧಮಾನ. ಪಠ್ಯ ಆಂಗ್ಲಮಾಧ್ಯಮವಾದರೂ ಅದರೊಂದಿಗೆ ಸಂಸ್ಕೃತವನ್ನೂ ಸಂಸ್ಕೃತಿಯನ್ನೂ ಕಲಿಸುವ ಶಾಲೆ ಇದು. ಇಲ್ಲಿ ಕಲಿಯುವ ಮಕ್ಕಳು ಧನ್ಯರು. ಈ ಊರಿನ ಜನರು ಇಂತಹ ಶಾಲೆಗೇ ಮಕ್ಕಳನ್ನು ಕಳುಹಿಸುವ ಯೋಚನೆ ಮಾಡಿ ಎಂದರು.

ಅತಿಥಿಗಳಾಗಿ ಆಗಮಿಸಿದ ಶ್ರೀ ಗೋವಿಂದ ಭಟ್ ಮುಳ್ಳಂ‌‌ಕೊಚ್ಚಿಯವರು ಮಾತನಾಡುತ್ತಾ ಸಂಸ್ಕೃತ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಲಿಕೆ ಮಕ್ಕಳಿಂದಲೇ ಆರಂಭವಾಗಬೇಕು ಎಂದರು.

ಮತ್ತೊಬ್ಬ ಅಭ್ಯಾಗತ ಶ್ರೀ ಪಿ. ಜಿ. ಕೃಷ್ಣ ಭಟ್ ಪುದುಕೋಳಿಯವರು ಮಾತನಾಡಿ ಯಾವುದೇ ವಿಷಯವನ್ನು ಕಲಿಯಲು ಬಾಲ್ಯದಿಂದಲೇ ಅಭ್ಯಾಸ ಮಾಡಿದಲ್ಲಿ ಅದು ಕರಗತವಾಗುವುದರಲ್ಲಿ ಸಂಶಯವಿಲ್ಲವೆಂದು ಮಕ್ಕಳಿಗೆ ಕಿವಿಮಾತು ಹೇಳಿ ಶುಭಕೋರಿದರು.

ಸಭಾ ಕಾರ್ಯಕ್ರಮದ ಬಳಿಕ ತಾಂಡವ ಗಣಪತಿ, ಭರತನಾಟ್ಯ, ಸ್ವಾಗತಹಾಡು, ಗಣರಾಜ್ಯೋತ್ಸವದ ಪ್ರಯುಕ್ತ ಭಾಷಣ, ಪುಟ್ಟಮಕ್ಕಳಿಂದ ಆಂಗ್ಲ ಭಾಷೆಯಲ್ಲಿ ಸ್ವಗತಪರಿಚಯ, ಯೋಗಾಭ್ಯಾಸ, ವಿವೇಕಾನಂದರ ಬಾಲ್ಯಕತೆ, ತುಳುನೃತ್ಯ, ಭರತನಾಟ್ಯ, ಹತ್ತನೆಯ ತರಗತಿಯ ಕೃತ್ತಿಕಾಳಿಂದ ಹರಿಕಥಾಕಾಲಕ್ಷೇಪ. ಹೀಗೆ ವೈವಿಧ್ಯತೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದುವು.

ಎಲ್. ಕೆ. ಜಿ. ಮಕ್ಕಳಿಂದ ಎಸ್. ಎಸ್. ಎಲ್. ಸಿ. ವರೆಗಿನ ಎಲ್ಲ ವಿದ್ಯಾರ್ಥಿ ವಿದ್ಯಾರ್ಥಿನಿಯರ ಬಹುಮುಖ ಪ್ರತಿಭೆ ಸಮಾರಂಭದಲ್ಲಿ ಅನಾವರಣಗೊಂಡು ಮಕ್ಕಳ ಹೆತ್ತವರಿಗೂ ಶಿಕ್ಷಕವರ್ಗಕ್ಕೂ ಸಾರ್ಥಕಭಾವ ಮೂಡಿದರೆ, ಅತಿಥಿ ಅಭ್ಯಾಗತರಿಗೆ ಮನಸ್ಸು ಮುದಗೊಂಡಿತು.
ಅಧ್ಯಕ್ಷರು ಮಕ್ಕಳಿಂದ ರಚಿತವಾದ ವಾರ್ಷಿಕ ಮುಖವಾಣಿ ಪುಸ್ತಕ ‘ಬೆಳಕು’ ಬಿಡುಗಡೆ ಗೊಳಿಸಿದರು. ಆಡಳಿತಮಂಡಳಿ ಕಾರ್ಯದರ್ಶಿ ಶ್ರೀ ಶ್ಯಾಮರಾಜ ದೊಡ್ಡಮಾಣಿ ಪ್ರಸ್ತಾವನೆಗೈದು, ಮುಖ್ಯೋಪಾಧ್ಯಾಯಿನಿ ಶ್ರೀಮತಿ ಚಿತ್ರಾಸರಸ್ವತಿ ವಾರ್ಷಿಕ ವರದಿ ವಾಚಿಸಿದರು.

ಕಲಿಕೆ ಹಾಗೂ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಗ್ರಂಥಪಾಲಿಕೆ ಶ್ರೀಮತಿ ವಿಜಯಾ ಸುಬ್ರಹ್ಮಣ್ಯ, ವೇದಮೂರ್ತಿ ಕೋಣಮ್ಮೆ ಶ್ರೀ ಮಹಾದೇವಭಟ್ಟರು ಕೊಂಗೋಟು, ಶ್ರೀ ಗಣಪತಿಭಟ್ಟರು ಬೆಳ್ಳಿಗೆಮನೆ ಹಾಗೂ ಪಂಜಿಗೆದ್ದೆಮನೆ ಇವರುಗಳಿಂದೆಲ್ಲ ಪ್ರತಿವರ್ಷ ಕೊಡಮಾಡುವ ಪ್ರತಿಭಾ ಪುರಸ್ಕಾರವನ್ನು ಅರ್ಹ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.

ಹೈಸ್ಕೂಲು ವಿದ್ಯಾರ್ಥಿನಿಯರು ಪ್ರಾರ್ಥನೆ ಹಾಡಿ, ಕು. ಕೃತಿಕಾ ಕಾರ್ಯಕ್ರಮ ನಿರೂಪಿಸಿದಳು. ಅಂತಿಮವಾಗಿ ಆಡಳಿತಾಧಿಕಾರಿ ಶ್ರೀ ಶ್ಯಾಮ್ ಭಟ್ ದರ್ಭೆಮಾರ್ಗ ವಂದನಾರ್ಪಣೆಗೈದರು.

 

Author Details


Srimukha

Leave a Reply

Your email address will not be published. Required fields are marked *