ಸ್ವಭಾಷಾ ಚಾತುರ್ಮಾಸ್ಯ ಸೀಮೋಲ್ಲಂಘನ ಧರ್ಮಸಭೆಯಲ್ಲಿ ರಾಘವೇಶ್ವರ ಶ್ರೀ ಘೋಷಣೆ – ಶಿಷ್ಯಹಿತಂ ಮಹಾಸಂಕಲ್ಪ: ಪ್ರತಿ ಶಿಷ್ಯರ ಮನೆಗೆ ಸ್ವರ್ಣಯಾತ್ರೆ

ಮಠ

ಗೋಕರ್ಣ: ಸಮಸ್ತ ಗುರು ಪರಂಪರೆಯ ಆಶೀರ್ವಾದವನ್ನು ಹೊತ್ತು ಸಮಾಜದ ಪ್ರತಿ ಶಿಷ್ಯರ ಮನೆಗೆ ಸ್ವರ್ಣಪಾದುಕೆ ಚಿತ್ತೈಸುವ ಸ್ವರ್ಣಯಾತ್ರೆ ಈ ವರ್ಷದ ವಿಜಯದಶಮಿಯಿಂದ ಆರಂಭವಾಗಲಿದೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿ ನುಡಿದರು.

ಅಶೋಕೆಯಲ್ಲಿ ಸ್ವಭಾಷಾ ಚಾತುರ್ಮಾಸ್ಯ ವ್ರತ ಕೈಗೊಂಡ ಶ್ರೀಗಳು ಸೀಮೋಲ್ಲಂಘನ ಬಳಿಕ ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡುವ ವೇಳೆ ಈ ಉದ್ಘೋಷ ಮಾಡಿದರು.

ಶ್ರೀಮಠದ ಶಿಷ್ಯತ್ವ ಹೊಂದಿರುವ ಎಲ್ಲರ ಹೆಸರಲ್ಲಿ ಸಂಕಲ್ಪ ಮಾಡಿ ಶಿಷ್ಯಹಿತಂ ಎಂಬ ಬೃಹತ್ ಕಾರ್ಯಕ್ರಮ ಆಯೋಜಿಸಿದ್ದು, ಇದಕ್ಕೆ ಪೂರ್ವಭಾವಿಯಾಗಿ ಸ್ವರ್ಣಪಾದುಕೆಗಳು ಮನೆ ಮನೆಗೆ ತೆರಳಲಿವೆ ಎಂದು ನುಡಿದರು. ಪ್ರತಿ ಶಿಷ್ಯರ ಹೆಸರು, ರಾಶಿ, ನಕ್ಷತ್ರ, ಗೋತ್ರ ಸಹಿತವಾಗಿ ಸಂಕಲ್ಪ ಮಾಡಿ ಭಗವಂತನನ್ನು ಆರಾಧಿಸುವ ಈ ವಿಶಿಷ್ಟ ಕಾರ್ಯಕ್ರಮ ನೂರಾರು ಸಂಕಲ್ಪ ಮಂಟಪ, ಸಾವಿರಾರು ವೈದಿಕರನ್ನೊಳಗೊಂಡಿರುತ್ತದೆ. ಶಿಷ್ಯರ ಸರ್ವತೋಮುಖ ಹಿತವನ್ನು ಬಯಸಿ, ಭಗವಂತನಲ್ಲಿ ಸಂಪ್ರಾರ್ಥನೆ ಮಾಡುವ ಪೂರ್ವಭಾವಿಯಾಗಿ ಗುರು ಅನುಗ್ರಹ ಪ್ರತಿ ಮನೆ ತಲುಪಲಿದೆ. ಇಡೀ ಶಿಷ್ಯಸ್ತೋಮ ಗುರುಪರಂಪರೆಯ ಅನುಗ್ರಹದ ಸ್ವರ್ಣಘಳಿಗೆಯ ಪ್ರತೀಕ್ಷೆಯಲ್ಲಿರಿ ಎಂದು ಕರೆ ನೀಡಿದರು.

ಗುರು ತಾನೇ ನೀಡಿದರೆ ಅದಕ್ಕೆ ಅನನ್ಯ ಫಲ ಎಂದು ಶಾಸ್ತ್ರಗಳು ಹೇಳಿವೆ. ಅದರ ಫಲ ಪ್ರತಿಮನೆಗೆ ದೊರಕಲಿದೆ. ಗುರು ಪರಂಪರೆಯ ಪರಮಾನುಗ್ರಹ ಬದುಕಿನ ಎಲ್ಲ ಗ್ರಹಣಗಳನ್ನು ಬಿಡಿಸಲಿ. ಸಾಧನೆಯ ಮಹಾಪರ್ವಕ್ಕೆ ಮುನ್ನುಡಿಯಾಗಲಿ ಎಂದು ಆಶೀರ್ವದಿಸಿದರು.

ನಮ್ಮತನ ಉಳಿಸಿಕೊಳ್ಳಿ

ನಾವು ಎಂಥದ್ದೇ ಪರಿಸ್ಥಿತಿಯಲ್ಲೂ ನಮ್ಮತನವನ್ನು ಬಿಡಬಾರದು; ನಮ್ಮತನವನ್ನು ಬಿಟ್ಟು ಬದುಕುವುದು ಸಾವಿಗೆ ಸಮಾಜ; ಸರ್ವತ್ರ ನಮ್ಮತನವನ್ನು ಉಳಿಸಿಕೊಳ್ಳಬೇಕು. ಸ್ವಭಾಷಾ ಅಭಿಯಾನ ಚಾತುರ್ಮಾಸ್ಯಕ್ಕೆ ಅಥವಾ ಶಿಷ್ಯರಿಗೆ ಸೀಮಿತವಾಗದೇ ನಾಡಿನ ಹೊರಗೂ ಪಸರಿಸಬೇಕು. ಸ್ವಭಾಷಾ ಚಾತುರ್ಮಾಸ್ಯದ ಪರಿಕಲ್ಪನೆ ಭಗವತ್ಪ್ರೇರಣೆ. ಮನೆಮಾತನ್ನು ಮತ್ತೆ ನೆನಪಿಸಿಕೊಳ್ಳುವ ಕಾರ್ಯ ಚಾತುರ್ಮಾಸ್ಯದಲ್ಲಿ ನಡೆದಿದೆ. ಹೊಸ ಅನ್ವೇಷಣೆ, ಅನುಶೋಧನೆಗಳಿಗೆ ಹೊಸ ಪದಗಳನ್ನು ಸೃಷ್ಟಿಸುವ ಅಗತ್ಯವಿದೆ ಎಂದರು.


ದಿನಕ್ಕೊಂದು ಆಂಗ್ಲಪದ ತ್ಯಜಿಸುವ ಅಭಿಯಾನದಲ್ಲಿ ‘ಶೇವಿಂಗ್’ ಪದ ಕೈಬಿಡುವಂತೆ ಸಲಹೆ ಮಾಡಿದರು. ಮುಖಕ್ಷೌರ ಎಂಬ ಕನ್ನಡ ಶಬ್ದ ಬಳಕೆಯಲ್ಲಿದೆ. ವಪನ, ಮುಂಡನ, ಹೆರೆ, ಬೋಳಿಸು, ಎಂಬ ಶಬ್ದಗಳೂ ಆಡುಭಾಷೆಗಳಲ್ಲಿ ಪ್ರಯೋಗಗಳಿವೆ. ಪರ್ಶಿಯನ್ ಮೂಲದ ಹಜಾಮತಿ ಶಬ್ದವೂ ಬಳಸಲ್ಪಡುತ್ತಿದೆ ಎಂದು ವಿವರಿಸಿದರು.

ಕ್ಷೌರ ಒಳ್ಳೆಯ ಕ್ರಿಯೆ; ನಮ್ಮ ಸಂಸ್ಕøತಿಯಲ್ಲಿ ಇದಕ್ಕೆ ವಿಶೇಷ ಮಹತ್ವವಿದೆ. ಶುಭಗ್ರಹಗಳ ವಾರದಲ್ಲೇ ಕ್ಷೌರ ಮಾಡುವುದು ರೂಢಿ. ಇದು ಹೊಸ ಪರ್ವದ ಆರಂಭಕ್ಕೆ ಮುನ್ನುಡಿ. ಕೆಲ ತಿಥಿಗಳೂ ನಿಷಿದ್ಧ. ಚೌತಿ, ಚತುರ್ದಶಿ, ಸಂಕ್ರಾಂತಿ, ಹುಣ್ಣಿಮೆ, ಅಮಾವಾಸ್ಯೆ, ಅಷ್ಟಮಿ, ನವಮಿಗಳು ಯೋಗ್ಯವಲ್ಲ ಎಂದು ವಿಶ್ಲೇಷಿಸಿದರು.

ನಮ್ಮೆಲ್ಲರ ಬದುಕು ಭಗವತ್ಕಾರುಣ್ಯದ ಭಿಕ್ಷೆ, ಕರುಣೆ, ಆಶೀರ್ವಾದ. ಬಹುಜನ, ಬಹುದಿನ, ಬಹುಶ್ರಮ, ಬಹುವಿತ್ತ ಸಾಧ್ಯ ಸತ್ರಯಾಗ ನಡೆಯುತ್ತಿತ್ತು. ಸಹಸ್ರಾರು ವರ್ಷಗಳ ಕಾಲ ಇದು ನಡೆಯುತ್ತಿತ್ತು. ಇದನ್ನು ನೆನಪಿಸುವ ರೀತಿಯಲ್ಲಿ ಚಾತುರ್ಮಾಸ್ಯ ಅತ್ಯದ್ಭುತವಾಗಿ ನಡೆದಿದೆ. ಯಾವುದೇ ಸಮಿತಿಯೇ ಇಲ್ಲದೇ ಕಾರ್ಯಕ್ಕೊಬ್ಬ ಸಮರ್ಪಿತ ಕಾರ್ಯಕರ್ತನ ಶ್ರಮದ ಫಲವಾಗಿ ಇದು ಸಾಧ್ಯವಾಗಿದೆ ಎಂದರು.

ಯಾವುದೇ ಪೂರ್ವಸಿದ್ಧತೆ ಇಲ್ಲದೆ ಸರಳ, ಸಹಜ, ಆಡಂಬರರಹಿತವಾಗಿ ನಡೆಯಬೇಕು ಎನ್ನುವುದು ನಮ್ಮ ಅಪೇಕ್ಷೆಯಾಗಿತ್ತು. ಅದರಂತೆ ಈ ಬಾರಿಯ ಚಾತುರ್ಮಾಸ್ಯ ಊಟ- ಉಸಿರಾಟದಷ್ಟೇ ಸಹಜವಾಗಿ ನಡೆದಿದೆ. ಕೃತಯುಗದ ಆರಂಭದಲ್ಲಿ ರಾಜ- ರಾಜ್ಯ ಎಂಬ ಪರಿಕಲ್ಪನೆ ಇರಲಿಲ್ಲ. ಚತುರ್ವರ್ಣಗಳೂ ಇರಲಿಲ್ಲ. ಎಲ್ಲರೂ ಬ್ರಹ್ಮಜ್ಞಾನ ಪಡೆದ ಹಂಸರು ಮಾತ್ರ ಇದ್ದರು. ಈ ಬಾರಿಯ ಚಾತುರ್ಮಾಸ್ಯ ಕೂಡಾ ಅಂತೆಯೇ ಆಗಿದೆ. ಯಾರೂ ಏನನ್ನೂ ಆದೇಶಿಸದೇ ತಾವಾಗಿಯೇ ಸ್ವಯಂಸ್ಫೂರ್ತಿಯಿಂದ ಕಾರ್ಯ ನಿರ್ವಹಿಸಿದ್ದಾರೆ. ಇಡೀ ಮಠದ ವ್ಯವಸ್ಥೆಯೇ ಹೀಗೆ ನಡೆಯಬೇಕು ಎನ್ನುವುದು ನಮ್ಮ ಅಪೇಕ್ಷೆ ಎಂದು ಬಣ್ಣಿಸಿದರು.


ಪ್ರತಿಯೊಬ್ಬರೂ ತಮ್ಮ ತಮ್ಮ ಕರ್ತವ್ಯವನ್ನು ತಿಳಿದುಕೊಂಡು ಅವರ ಆತ್ಮ ಮೆಚ್ಚುವಂತೆ ಅದನ್ನು ನಿರ್ವಹಿಸಿದರೆ ಅದು ಅತ್ಯುತ್ತಮ ವ್ಯವಸ್ಥೆಯಾಗುತ್ತದೆ. ಇದರಲ್ಲಿ ಅತ್ಯಂತ ದೊಡ್ಡ ಧನ್ಯತೆ ಇದೆ. ಹೊಗಳಿಕೆಯಿಂದ ಸತ್ಕಾರ್ಯದ ಪುಣ್ಯ ಕ್ಷಯಿಸುತ್ತದೆ. ಇಂಥ ಕಾರ್ಯಗಳಿಂದ ಪುಣ್ಯ ವೃದ್ಧಿಯಾಗುತ್ತದೆ. ಇದು ಕೃತಯುಗದ ಒಂದು ಸಣ್ಣ ಹೊಳಹು ಎಂದು ಹೇಳಿದರು.
ಯಥಾಯೋಗ್ಯವಾಗಿ, ಧರ್ಮಕಾರ್ಯಗಳು ಚೆನ್ನಾಗಿ ನಡೆದವು. ನಿರ್ವಿಘ್ನವಾಗಿ ಚಾತುರ್ಮಾಸ್ಯ ಸಂಪನ್ನಗೊಂಡಿದೆ. ತತ್ವಗಳನ್ನು, ಸೂಕ್ಷ್ಮಗಳನ್ನು ತಿಳಿದುಕೊಂಡು ಆರಾಧಿಸಿದರೆ ಅದಕ್ಕೆ ಫಲ ಅಧಿಕ ಎಂದು ವಿಶ್ಲೇಷಿಸಿದರು.

ವಿಷವಲ್ಲದ ಪಾತ್ರೆಗಳಲ್ಲಿ, ಅಡ್ಡಪರಿಣಾಮಗಳಿಲ್ಲದ ಪಾರಂಪರಿಕ ಪಾತ್ರೆಗಳಲ್ಲಿ ಆಹಾರ ಸಿದ್ಧಪಡಿಸುವ ವ್ಯವಸ್ಥೆ ಶ್ರೀಮಠದಲ್ಲಿ ಆರಂಭವಾಗಲಿದೆ. ಅದು ಬುದ್ಧಿ- ಸಂಸ್ಕಾರ ಬೆಳೆಯಲು ಪೂರೈಸಲು ಸಹಕಾರಿ ಎಂದರು.

ಸೀಮೋಲ್ಲಂಘನ ಸಂದರ್ಭದಲ್ಲಿ ಗಂಗಾವಳಿ ನದಿಗೆ ಬಾಗಿನ ಸಮರ್ಪಿಸಿದ ಶ್ರೀಗಳು ಗಂಗಾಂಬಿಕಾ ದೇವಸ್ಥಾನದಲ್ಲಿ ಮತ್ತು ಅಶೋಕೆಯ ಮಲ್ಲಿಕಾರ್ಜುನ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಚಾತುರ್ಮಾಸ್ಯ ತಂಡದ ಪ್ರಧಾನ ಸಂಚಾಲಕ ಮಂಜುನಾಥ ಸುವರ್ಣಗದ್ದೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಮಠದ ಪ್ರಶಾಸನಾಧಿಕಾರಿ ಸಂತೋಷ ಹೆಗಡೆ, ವಿತ್ತಾಧ್ಯಕ್ಷ ಗಣೇಶ್ ಜಿ.ಎಲ್, ಶಾಸನತಂತ್ರ ಕಾರ್ಯದರ್ಶಿ ಕೆ.ಪಿ.ಎಡಪ್ಪಾಡಿ, ಹವ್ಯಕ ಮಹಾಮಂಡಲ ಅಧ್ಯಕ್ಷ ಹರಿಪ್ರಸಾದ್ ಪೆರಿಯಪ್ಪು, ಪ್ರಧಾನ ಕಾರ್ಯದರ್ಶಿ ಮಹೇಶ್ ಚಟ್ನಳ್ಳಿ, ಡಾ.ವೈ.ವಿ.ಕೃಷ್ಣಮೂರ್ತಿ, ನಾಗರಾಜ ಭಟ್ ಪೆದಮಲೆ, ಮಹಾಮಂಡಲ ಪದಾಧಿಕಾರಿಗಳಾದ ಈಶ್ವರ ಪ್ರಸಾದ್ ಕನ್ಯಾನ, ಶಾಂತರಾಮ ಹೆಗಡೆ, ದೇವಿಕಾ ಶಾಸ್ತ್ರಿ, ಸೇವಾಖಂಡದ ಶ್ರೀಸಂಯೋಜಕ ಕೇಶವ ಪ್ರಕಾಶ್ ಮುಣ್ಚಿಕಾನ, ವಿವಿವಿ ಆಡಳಿತಾಧೀಕಾರಿ ಡಾ.ಟಿ.ಜೆ.ಪ್ರಸನ್ನಕುಮಾರ್, ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಪಿಆರ್‍ಓ ಎಂ.ಎನ್.ಮಹೇಶ ಭಟ್ಟ, ಚಾತುರ್ಮಾಸ್ಯ ತಂಡದ ಶ್ರೀಕಾಂತ ಪಂಡಿತ, ಅರವಿಂದ ಧರ್ಬೆ, ರಾಘವೇಂದ್ರ, ವಿಷ್ಣು ಬನಾರಿ, ಶ್ರೀಮಠದ ಶಾಸ್ತ್ರಿಗಳಾದ ಸುಚೇತನ ಘನಪಾಠಿಗಳು, ಶ್ರೀಕಾರ್ಯದರ್ಶಿ ಮಧು ಜಿ.ಕೆ, ರಾಘವೇಂದ್ರ ಮಧ್ಯಸ್ಥ ಮತ್ತಿತರರು ಉಪಸ್ಥಿತರಿದ್ದರು. ಸ್ವರಾತ್ಮ ಗುರುಕುಲದ ಪ್ರಾಚಾರ್ಯರಾದ ಹರೀಶ್ ಹೆಗಡೆ ಮಾರ್ಗದರ್ಶನದಲ್ಲಿ ಶತಕಂಠ ಗಾಯನ ನಡೆಯಿತು. ಗಣೇಶ್ ಜೋಶಿ ಮತ್ತು ಬಿಂದು ಅವಧಾನಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *