ಗ್ರಾಮರಾಜ್ಯ ಟ್ರಸ್ಟ್ ವಿಷ ಮುಕ್ತ ಅಡುಗೆ ಮನೆ – ಮುಕ್ತ ಮಾತು

ಇತರೆ

ಶ್ರೀರಾಮಚಂದ್ರಾಪುರ ಮಠದ ಅಂಗ ಸಂಸ್ಥೆ ಗ್ರಾಮರಾಜ್ಯ ಟ್ರಸ್ಟ್ ಇದರ ಸಮಾಜ ಕ್ಷೇಮದ ಚಿಂತನೆಯ ೧೫ ಸಾರ್ಥಕ ವರ್ಷಗಳ ಸೇವೆಯ ಸಲುವಾಗಿ ಸಮಾಜದ ಜೊತೆಗೆ ಬೆರೆಯುವ , ಸಮಾಜದೊಂದಿಗೆ ಜೋಡಿಸಿಕೊಳ್ಳುವ ಅಭಿಯಾನವೇ ” ವಿಷ ಮುಕ್ತ ಅಡುಗೆ ಮನೆ – ಮುಕ್ತ ಮಾತು ” ಕಾರ್ಯಕ್ರಮ.

ಇತ್ತೀಚೆಗೆ ಈ ಕಾರ್ಯಕ್ರಮಕ್ಕೆ ನಿವೃತ್ತ ಕೆಪಿಟಿಸಿಎಲ್ ಹಿರಿಯ ಅಧಿಕಾರಿಗಳು , ಸಾಹಿತಿಗಳು , ಕಾದಂಬರಿಕಾರರು , ಮೇಲಾಗಿ ಶ್ರೀ ಸಂಸ್ಥಾನದವರು ನಡೆಸಿಕೊಡುವ ರಾಮಕಥೆಯ ಕವಿ , ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ … ಎಂಬ ಎಲ್ಲರ ಮನಮೆಚ್ಚಿದ ಹಾಡಿನ ಕವಿ ಶ್ರೀ ಡಾ. ಗಜಾನನ ಶರ್ಮ ನಮ್ಮೊಡನೆ ಜತೆಯಾದರು.

ಆರೋಗ್ಯಪೂರ್ಣ ಜೀವನಕ್ಕಾಗಿ ಜನ್ಮತಾಳಿದ ಸಂಸ್ಥೆ ಗ್ರಾಮರಾಜ್ಯ. ಶ್ರೀ ಶ್ರೀಗಳವರ ಮಹತ್ ಸಂಕಲ್ಪದಂತೆ ಸಮಾಜದ ಸ್ವಾಸ್ಥ್ಯ ಕಾಪಾಡುವ ಬದ್ಧತೆ ಇದಕ್ಕಿದೆ. ನಾನು ಸಂಸ್ಥೆ ಸ್ಥಾಪನೆ ಆದಾಗಿನಿಂದ ಗ್ರಾಹಕನಾಗಿದ್ದು ಇಲ್ಲಿಯ ವಸ್ತುಗಳ ಬಗ್ಗೆ ಸಂತೃಪ್ತಿ ಹೊಂದಿದ್ದೇನೆ ಎಂದರು. ಬರಿಯ ದರಪಟ್ಟಿ ನೋಡಿ ಆಹಾರ ವಸ್ತುಗಳನ್ನು ಕೊಳ್ಳುವ ಬದಲು ಆರೋಗ್ಯಯುತ ವಸ್ತುಗಳನ್ನು ನೋಡಿ ಕೊಳ್ಳುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಇಲ್ಲದಿದ್ದರೆ ಇಲ್ಲಿ ಉಳಿಸುವ ಮೊತ್ತದ ಬಹುಪಾಲು ಔಷಧಿ ಮಳಿಗೆಗೆ ಸುರಿಯುವ ಸ್ಥಿತಿ ಬರಬಹುದು ಎಂದು ಅರ್ಥಪೂರ್ಣ ಮಾತುಗಳನ್ನು ಆಡಿದರು. ಸಂಸ್ಥೆಯ ಪ್ರಗತಿ ಮತ್ತು ಮುನ್ನಡೆಸುವ ತಂಡದ ಬದ್ಧತೆ , ಉದ್ಯೋಗಿಗಳ ಕಾರ್ಯತತ್ಪರತೆ ಬಗ್ಗೆ ಮೆಚ್ಚುಗೆ ಸೂಚಿಸಿದರು.

ಜತೆಗೆ ನಮ್ಮೊಂದಿಗೆ ಮತ್ತೋರ್ವ ಅಭ್ಯಾಗತರಾಗಿ ನಿವೃತ್ತ ಕೃಷಿ ಇಲಾಖೆ ಅಧಿಕಾರಿಗಳು , ಸಾವಯವ ಕೃಷಿಕರು ಆದ ಶ್ರೀ ಗಣಪತಿ ಐ. ಡಿ. ಆಗಮಿಸಿದ್ದರು. ರಾಸಾಯನಿಕ ಉಪಯೋಗಿಸಿ ಬೆಳೆಸಿದ ಆಹಾರ ಧಾನ್ಯಗಳು ಮತ್ತು ಸಾವಯವ ಕೃಷಿಯ ನಡುವಿನ ವ್ಯತ್ಯಾಸ , ಭೂಮಿಯ ಫಲವತ್ತತೆಯ ಮೇಲೆ ಉಂಟಾಗುವ ಪರಿಣಾಮಗಳು , ಆರೋಗ್ಯಕ್ಕೆ ಉಂಟಾಗುವ ಪರಿಣಾಮಗಳು , ಇತ್ಯಾದಿ ವಿಷಯಗಳ ಬಗ್ಗೆ ಸವಿಸ್ತಾರ ಮಾತುಕತೆ ನಡೆಸಿದರು.

ಮುಖ್ಯ ಸಂವಾದಕಾರರಾಗಿ ಖ್ಯಾತ ಹಿನ್ನಲೆ ಧ್ವನಿ ಕಲಾವಿದ , ನಿರೂಪಕ ಶ್ರೀ ಬಡೆಕ್ಕಿಲ ಪ್ರದೀಪ ಮತ್ತು ಅವರ ತಂಡ ನಮ್ಮೊಂದಿಗೆ ಇದ್ದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಯೋಜಕ ಶಶಾಂಕ ಕಂಗಿಲ ಪ್ರಾಸ್ತಾವಿಕ ನುಡಿಗಳ ಜತೆಗೆ ಅಭ್ಯಾಗತರನ್ನು ಸ್ವಾಗತಿಸಿದರು. ಸಂಸ್ಥೆಯ ಉದ್ಯೋಗಿಗಳು ಈ ಸಂದರ್ಭ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *