ಬೆಂಗಳೂರು: ಪ್ರಪಂಚದಲ್ಲಿ ಗುರುವಿಗೆ ಪರ್ಯಾಯವಿಲ್ಲ. ಗುರುವಿಗೆ ಇನ್ನೊಂದು ಗುರು ಪರ್ಯಾಯವಾಗಲು ಸಾಧ್ಯವಿಲ್ಲ. ಹಾಗೆಯೇ ಜೀವನದಲ್ಲಿ ಇಬ್ಬರು ಗುರುವನ್ನು ಆಶ್ರಯಿಸಿದಾಗ ಶಿಷ್ಯನ ಅವನತಿ ಆಗುತ್ತದೆ ಎಂದು ಸನಾತನ ಪರಂಪರೆ ಹೇಳುತ್ತದೆ ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಹೇಳಿದರು.
ಬೆಂಗಳೂರಿನ ಗಿರಿನಗರದಲ್ಲಿರುವ ಶಾಖಾ ಮಠದಲ್ಲಿ ಬ್ರಹೈಕ್ಯ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಂದ್ರ ಭಾರತೀ ಮಹಾಸ್ವಾಮಿಗಳ ಆರಾಧನಾ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಭಗವಂತನಿಗೆ ಗುರು ಪರ್ಯಾಯ. ಆದರೆ ಭಗವಂತ ಗುರುವಿಗೆ ಪರ್ಯಾಯವಲ್ಲ.
ಜೀವನದ ಗುರಿಯನ್ನು ಮುಟ್ಟಲು ಗುರುವಿನ ಆಶ್ರಯ ಅತ್ಯಗತ್ಯ. ಗುರುವಿಲ್ಲದಿದ್ದರೆ ಜೀವನ ಏನೇನೋ ಆಗುತ್ತದೆ. ಆದರೆ ಗುರುವಿದ್ದಾಗ ಏನಾಗಬೇಕೋ ಅದಾಗುತ್ತದೆ ಎಂದರು. ಕಣ್ಣಿನ ಮುಂದಿದ್ದಾಗ ನೆನಪಿಡುವ ನಾವು, ಕಣ್ಮರೆಯಾದಾಗ ಅವರನ್ನು ಮರೆಯುವುದು ಮನುಷ್ಯನ ಸಾಮಾನ್ಯ ಗುಣವಾಗಿದೆ. ಆದರೆ ಗುರುವನ್ನು ನಾವು ಮರೆಯಬಾರದು. ಈ ಹಿನ್ನೆಲೆಯಲ್ಲಿ ಆರಾಧನೆ ಮೂಲಕ ಗುರುಗಳನ್ನು ಸ್ಮರಿಸುವ ಕಾರ್ಯ ನಡೆಯುತ್ತಿದೆ. ಗುರು ದೈಹಿಕವಾಗಿ ಇಲ್ಲದೇ ಇದ್ದರು, ಚೈತನ್ಯವಾಗಿದ್ದು ಮಾರ್ಗದರ್ಶನ ನೀಡುವ ಶಕ್ತಿ ಗುರುವಿಗಿದೆ ಎಂದು ಅಭಿಪ್ರಾಯಪಟ್ಟರು.

ಧಾರ್ಮಿಕ ಪಂಚಾಂಗವನ್ನು ಲೋಕಾರ್ಪಣೆ ಮಾಡಿದ ಶ್ರೀಗಳು, ನಾವು ಈ ಪ್ರಪಂಚದಲ್ಲಿ ಬಾಳಲು ಕಾಲಪ್ರಜ್ಞೆ ಬೇಕು. ಕಾಲಪ್ರಜ್ಞೆಗೆ ಪಂಚಾಗ ಅವಶ್ಯ. ಹಾಗೆಯೇ ಈ ಲೋಕವನ್ನು ಮೀರಲು ಗುರುಕೃಪೆ ಬೇಕು ಎಂದರು.
ಬೆಳಗ್ಗೆ ಮಠೀಯಬದ್ಧತಿಯಂತೆ ತೀರ್ಥರಾಜ ಪೂಜೆ ಸೇರಿದಂತೆ ಧಾರ್ಮಿಕ ವಿಧಿವಿಧಾನಗಳ ಮೂಲಕ ಮಠದ 35ನೇ ಪೀಠಾಧಿಪತಿಗಳಾದ ಬ್ರಹ್ಮೈಕ್ಯ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಂದ್ರ ಭಾರತೀ ಮಹಾಸ್ವಾಮಿಗಳ ಆರಾಧನೆ ನಡೆಯಿತು. ಶ್ರೀಮಠದಿಂದ ಪ್ರಕಾಶಿತವಾದ ಪರಾಭವ ಸಂವತ್ಸರದ ಪಂಚಾಂಗವನ್ನು ಲೋಕಾರ್ಪಣೆ ಮಾಡಲಾಯಿತು.
ಶ್ರೀಮಠದ ಸಮ್ಮುಖ ಸರ್ವಾಧಿಕಾರಿಗಳಾದ ತಿಮ್ಮಪ್ಪಯ್ಯ ಮಡಿಯಾಲ್, ಪ್ರಶಾಸನಾಧಿಕಾರಿ ಸಂತೋಷ ಹೆಗಡೆ, ವಿತ್ತಾಧ್ಯಕ್ಷ ಗಣೇಶ ಜೆ.ಎಲ್, ಹವ್ಯಕ ಮಹಾಮಂಡಲದ ಅಧ್ಯಕ್ಷರಾದ ಹರಿಪ್ರಸಾದ್ ಪೆರಿಯಪ್ಪು, ಶಾಸನತಂತ್ರದ ಅಧ್ಯಕ್ಷರಾದ ಮೋಹನ್ ಭಾಸ್ಕರ ಹೆಗಡೆ, ರಮೇಶ್ ಹೆಗಡೆ ಕೊರಮಂಗಲ, ವಾದಿರಾಜ್ ಸಾಮಗ, ರಾಮಚಂದ್ರ ಭಟ್ ಕೆಕ್ಕಾರು ಸೇರಿದಂತೆ ಪ್ರಮುಖರು ಹಾಗೂ ವಿವಿಧ ಭಾಗಗಳಿಂದ ಆಗಮಿಸಿದ್ದ ಶಿಷ್ಯಭಕ್ತರು ಉಪಸ್ಥಿತರಿದ್ದರು.