ಮಂಜೇಶ್ವರ: ಫಾಲ್ಗುನ ಶುದ್ಧ ದಶಮಿಯಂದು (26-02-2026) ಹವ್ಯಗಂಧ ಸಭಾಭವನದ ಭೂಮಿಪೂಜೆ ಹಾಗೂ ಶಿಲಾನ್ಯಾಸಗಳು ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯಾನುಗ್ರಹದಿಂದ ಸುಸಂಪನ್ನಗೊಂಡಿತು.
ಹವ್ಯಕ ಮಹಾಮಂಡಲಾಂತರ್ಗತ ಮಂಗಳೂರು ಮಂಡಲದ ವೈದಿಕ ಪ್ರಧಾನರಾದ ವೇದಮೂರ್ತಿ ಮುಗುಳಿ ಶ್ರೀರಾಮ ಭಟ್ಟರು ವಿಧ್ಯುಕ್ತವಾಗಿ ನೆರವೇರಿಸಿದರು. ವಿಶೇಷ ಆಹ್ವಾನಿತರಾಗಿ ಡಾ. ಮಾವೆ ಶ್ರೀಧರ ಭಟ್ಟರು ಭಾಗವಹಿಸಿದರು. ಪವಿತ್ರ ಮಂಗಲದ್ರವ್ಯಗಳಿಂದ ಅರ್ಚಿಸಿ, ಶಂಕುಸ್ಥಾಪನೆಯನ್ನು ಮಾಡಲಾಯಿತು. ರವಿರಾಮ ಸಿದ್ಧಮೂಲೆಯವರು ದೈವಜ್ಞ, ಶಿಲ್ಪಿಗಳ ಸ್ಥಾನವನ್ನು ನಿರ್ವಹಿಸಿದರು. ಕಾಮಗಾರಿಯ ನಿರ್ವಹಣೆ ಮಾಡಲಿರುವ ಮೇಸ್ತ್ರಿಯವರನ್ನು ಗೌರವಿಸಲಾಯಿತು.
ಅದಕ್ಕೆ ಮುನ್ನ ಗಣಪತಿ ಹವನ, ಶ್ರೀ ಉಳ್ಳಾಲ್ತಿ ಅಮ್ಮನವರ ಸನ್ನಿಧಿಯಲ್ಲಿ ಪ್ರಾರ್ಥನೆ ನಡೆಸಲಾಯಿತು. ಅನಂತರ ನಡೆದ ಸಭಾಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಬಂದಿದ್ದ ಸ್ಥಳೀಯಾಡಳಿತ ಸಮಿತಿಯ ಚುನಾಯಿತ ಪ್ರತಿನಿಧಿ (ಪಂಚಾಯತ್ ವಾರ್ಡ್ ಮೆಂಬರ್) ಸುಬ್ರಹ್ಮಣ್ಯ ಭಟ್ಟ ಆಟಿಕುಕ್ಕೆ ಇವರು ನಿರ್ಮಾಣ ಕಾರ್ಯಕ್ಕೆ ದೇಣಿಗೆಯನ್ನೂ ನೀಡಿ ಶುಭಹಾರೈಸಿದರು. ಮಂಗಳೂರು ದಕ್ಷಿಣ ವಲಯದ ಗುರಿಕಾರರಾದ ಮಾಣಿಪ್ಪಾಡಿ ರಾಮಚಂದ್ರ ಭಟ್ಟರು, ಹವ್ಯಗಂಧ ಸಮಿತಿಯ ಗೌರವಾಧ್ಯಕ್ಷರಾದ ಉಳುವಾನ ರಾಮಚಂದ್ರ ಭಟ್ಟ ಉಪಸ್ಥಿತರಿದ್ದರು.
ಭೂಮಿದಾನ ನೀಡಿದ್ದ ಮೂಡಂಬಿಕಾನ ರಾಮ ಭಟ್ಟರ ಸಹೋದರರಾದ ಡಾ. ಶಂಕರನಾರಾಯಣ ಭಟ್ಟರು ಉಪಸ್ಥಿತರಿದ್ದು ದೇಣಿಗೆ ನೀಡಿದ್ದು ವಿಶೇಷವೂ, ಮಹತ್ತ್ವಪೂರ್ಣವೂ ಆಗಿತ್ತು.

ಮಂಗಳೂರು ಮಂಡಲ ವಿದ್ಯಾರ್ಥಿ ವಾಹಿನಿಯ ಪ್ರಧಾನರಾದ ಭಾಸ್ಕರ ಹೊಸಮನೆ, ಬಾಯಾರು ವಲಯದ ವಿದ್ಯಾರ್ಥಿ ವಾಹಿನಿ ಪ್ರಧಾನರಾದ ಅನಂತಕೃಷ್ಣ ಭಟ್ಟ ತಾಳ್ತಜೆ, ಹವ್ಯಗಂಧ ಸಮಿತಿಯ ಸರ್ವ ಪದಾಧಿಕಾರಿಗಳು ಭಾಗವಹಿಸಿದ್ದರು. ವಲಯದ ಉಭಯ ಸಮಿತಿಗಳ ಅನ್ಯಾನ್ಯ ವಿಭಾಗಗಳ ಸದಸ್ಯರ ಹಾಗೂ ಸಕ್ರಿಯ ಕಾರ್ಯಕರ್ತರ ಅವಿರತ ಶ್ರಮದ ಫಲವಾಗಿ ಶಿಲಾನ್ಯಾಸದ ಕಾರ್ಯಕ್ರಮ ಸಂಪನ್ನವಾಯಿತು.