ಧರ್ಮವೆಂಬ ಸೂರ್ಯನಿಗೆ ಅಧರ್ಮದ ಕಾರ್ಮೋಡಗಳು ಕವಿದು, ಮೈಮನಗಳೆಲ್ಲವೂ ಮಸುಕಾಗಿದ್ದ ಕಾಲವೊಂದಿತ್ತು. ಅದು ಕ್ರಿ.ಶ. ಎಂಟನೇ ಶತಮಾನದ ಪ್ರಥಮ ದಶಕದ ಸಮಯ. ವೇದೋಕ್ತವಾದ ಆಚರಣೆಗಳು ಕೇವಲ ಹೆಸರಿಗಷ್ಟೇ ಉಳಿದು, ಸಮಾಜವು ತನ್ನ ಮೂಲ ಸಂಸ್ಕಾರಗಳಿಂದ ವಿಮುಖವಾಗಿ ವೈದಿಕ ಮಾರ್ಗದಿಂದ ದೂರ ಸರಿಯುತ್ತಿತ್ತು. ಇಂತಹ ಕತ್ತಲೆಯ ಸಮಯದಲ್ಲಿ, ಧರ್ಮದ ಪುನರುತ್ಥಾನಕ್ಕಾಗಿ ಸಹಜವಾದ ಜೀವಂತ ಹಂಬಲವೊಂದು ಸಮಾಜದಲ್ಲಿ ಮೊಳಕೆಯೊಡೆಯಿತು.
“ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ” ಎಂಬ ಪರಮಾತ್ಮನ ಸಂಕಲ್ಪ ಮತ್ತೊಮ್ಮೆ ಕಾರ್ಯರೂಪಕ್ಕೆ ಬರಲು ವೇದಿಕೆ ಸಿದ್ಧವಾಗಿತ್ತು. ಭಾರತದ ಬಾಂದಳದಲ್ಲಿ ದಿವ್ಯ ಪ್ರಭೆಯೊಂದರ ಉದಯವಾಯಿತು. ಅರಿವೆಂಬ ಬೆಳಕಿನಿಂದ ಇಳೆಯನ್ನು ಬೆಳಗುವ ಬಾಲ ಭಾಸ್ಕರನು ವಿಶ್ವದ ಪೂರ್ವಪ್ರದೇಶದಲ್ಲಿರುವ ಭಾರತದಲ್ಲಿ ಉದಯಿಸಿ ತನ್ನ ಜ್ಞಾನರೂಪದ ಕಿರಣಗಳಿಂದ ಪ್ರಪಂಚದಲ್ಲಿ ನವಚೈತನ್ಯವನ್ನು ಚಿಗುರಿಸಿ ಜ್ಞಾನಸುಧಾಚಿಂತನದಿಂದ ಮಾನವರನ್ನು ಪಾವನಗೊಳಿಸಿದನು.
೧. ಆಚಾರ್ಯ ಶಂಕರರ ಅಪ್ರತಿಮ ಜೀವನ ಮತ್ತು ಜ್ಞಾನದ ವೈಭವ
ಆಚಾರ್ಯ ಶಂಕರರ ಜೀವನವೇ ಒಂದು ಮಹಾಕಾವ್ಯ. ಭವಸುಖದ ಆಸಕ್ತಿ ಕಳೆದು ಶಿವಸುಖದ ಶಾಶ್ವತಾನಂದ ಅನುಭವಿಸುವ ಹಾದಿಯನ್ನು ತೋರಿದ ಶ್ರೀಶಂಕರರು ನೀಡಿದ ದಿವ್ಯ ವಾಙ್ಮಯಗಳು ಇಂದಿಗೂ ಮಾನವಕುಲಕ್ಕೆ ದಾರಿದೀಪವಾಗಿ ಉಳಿದಿವೆ.
ಅಷ್ಟವರ್ಷೇ ಚತುರ್ವೇದೀ ದ್ವಾದಶೇ ಸರ್ವಶಾಸ್ತ್ರವಿತ್ |
ಷೋಡಶೇ ಕೃತವಾನ್ ಭಾಷ್ಯಂ ದ್ವಾತ್ರಿಂಶೇ ಮುನಿರಭ್ಯಗಾತ್ ||
ಎಂಟನೇ ವಯಸ್ಸಿಗೆ ನಾಲ್ಕು ವೇದಗಳಲ್ಲಿ ನಿಷ್ಣಾತರಾದ ಬಾಲಶಂಕರರು, ಹನ್ನೆರಡನೇ ವಯಸ್ಸಿಗೆ ಸಕಲ ಶಾಸ್ತ್ರಗಳನ್ನು ಕರತಲಾಮಲಕ ಮಾಡಿಕೊಂಡವರು. ಜ್ಞಾನದ ತೃಷೆ ಮತ್ತು ಲೋಕಕಲ್ಯಾಣದ ಹಂಬಲದಿಂದ ಅವರು ತಮ್ಮ ಹದಿನಾರನೇ ವಯಸ್ಸಿಗೆ ‘ಪ್ರಸ್ಥಾನತ್ರಯ’ಗಳಿಗೆ (ಉಪನಿಷತ್ತು, ಬ್ರಹ್ಮಸೂತ್ರ, ಭಗವದ್ಗೀತೆ) ಭಾಷ್ಯಗಳನ್ನು ಬರೆದರು.
ವೈದಿಕಧರ್ಮದ ರಕ್ಷಣೆಗಾಗಿ ದೇಶದಾದ್ಯಂತ ಕಾಲ್ನಡಿಗೆಯಲ್ಲೇ ಸಂಚರಿಸಿ, ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಧರ್ಮದ ಧ್ವಜವನ್ನು ಗಗನದೆತ್ತರಕ್ಕೆ ಏರಿಸಿದ ಶಂಕರಭಗವತ್ಪಾದರು ಪಂಚದೇವತಾ ಪೂಜೆಯ ಪದ್ಧತಿಯನ್ನು ಪ್ರಚಾರಪಡಿಸಿದರು. ತಾವು ಪ್ರತಿಪಾದಿಸಿದ ಅದ್ವೈತ ಸಿದ್ಧಾಂತವನ್ನು ಬೆಳೆಸುವುದಕ್ಕೂ, ಧರ್ಮದ ಉಳಿವಿಗಾಗಿಯೂ ಶಂಕರಾಚಾರ್ಯರು ಅನೇಕ ಪೀಠಗಳನ್ನು ಸ್ಥಾಪಿಸಿ ತಮ್ಮ ಶಿಷ್ಯರುಗಳನ್ನು ಪೀಠಾಧಿಪತಿಗಳನ್ನಾಗಿ ಮಾಡಿದರು.
೨. ಶ್ರೀಶಂಕರರ ಸಂಕಲ್ಪ ಮತ್ತು ಶ್ರೀರಾಮಚಂದ್ರಾಪುರಮಠದ ಉದಯ
ಪರಮಶಿವನ ಅಭಿವ್ಯಕ್ತ ಸ್ವರೂಪಿಗಳಾಗಿರುವ ಶ್ರೀಶಂಕರಭಗವತ್ಪಾದರು ಸನಾತನ ಧರ್ಮದ ಮೌಲ್ಯಗಳನ್ನು ಪುನರುತ್ಥಾನಗೊಳಿಸಲು ಸಂಕಲ್ಪಿಸಿ, ಸ್ಥಾಪಿಸಿದ ಅನೇಕ ಪೀಠಗಳಲ್ಲಿ ವಿಶೇಷವಾದುದು ಶ್ರೀರಾಮಚಂದ್ರಾಪುರ ಮಠ. ಶ್ರೀಶಂಕರಾಚಾರ್ಯರ ಜೇಷ್ಠ ಶಿಷ್ಯಪರಂಪರೆಯೆಂಬುದು ಶ್ರೀಮಠದ ಹೆಮ್ಮೆ.
ಜಗದ್ಗುರುಗಳಾದ ಆಚಾರ್ಯ ಶಂಕರರು ಗೋಕರ್ಣದ ಅಶೋಕೆಯಲ್ಲಿ ಪ್ರತಿಷ್ಠಾಪಿಸಿದ ಈ ಪೀಠವು, ಸಮಾಜಕ್ಕೆ ಧರ್ಮದ ಹಾದಿಯನ್ನು ತೋರುವ ದಾರಿದೀಪವಾಯಿತು.
ಆಚಾರ್ಯ ಶಂಕರರ ಪ್ರಧಾನ ಶಿಷ್ಯರಾದ ಶ್ರೀಸುರೇಶ್ವರಾಚಾರ್ಯರು, ಸಮಸ್ತ ಶಾಸ್ತ್ರಗಳ ಸಾರವನ್ನು ಅರಿತಿದ್ದ ಮಹಾಮೇಧಾವಿಗಳು. ಅವರಿಂದ ಸಂನ್ಯಾಸ ದೀಕ್ಷೆಯನ್ನು ಪಡೆದು, ಈ ಪವಿತ್ರ ಪೀಠದ ಪ್ರಥಮ ಪೀಠಾಧಿಪತಿಗಳಾಗಿ ಅಲಂಕರಿಸಿದವರು ಪರಮಪೂಜ್ಯ ಶ್ರೀಶ್ರೀವಿದ್ಯಾನಂದಾಚಾರ್ಯರು. ಅಂದಿನಿಂದ ಆರಂಭವಾದ ಈ ಯತಿ ಪರಂಪರೆಯು ಅವಿಚ್ಛಿನ್ನವಾಗಿ ಮುಂದುವರಿದು ಇಂದಿಗೂ ತನ್ನ ಪರಿಶುದ್ಧತೆಯನ್ನು ಕಾಯ್ದುಕೊಂಡು ಮುಂದುವರಿಯುತ್ತಿದೆ.
೩. ಅಖಂಡ ೩೬ ಯತಿಶ್ರೇಷ್ಠರ ತಪೋಬಲ
ಜಗತ್ತಿನಲ್ಲಿ ಅದೆಷ್ಟೋ ಸಾಮ್ರಾಜ್ಯಗಳು ಉದಯಿಸಿ ಅಳಿದು ಹೋಗಿವೆ, ಸಂಸ್ಕೃತಿಗಳು ಬದಲಾಗಿವೆ. ಆದರೆ ಶ್ರೀರಾಮಚಂದ್ರಾಪುರಮಠದ ಪರಂಪರೆ ಮಾತ್ರ ಕಿಂಚಿತ್ತೂ ಮಸುಕಾಗದೆ, ೩೬ ಯತಿಶ್ರೇಷ್ಠರ ದಿವ್ಯಮಾರ್ಗದರ್ಶನದಲ್ಲಿ ಅವಿಚ್ಛಿನ್ನವಾಗಿ ಇಂದಿಗೂ ಬೆಳಗಿ ಮುಂದುವರಿಯುತ್ತಿದೆ. ತನ್ನ ಜ್ಞಾನದ ಕಿರಣಗಳನ್ನು ಜಗತ್ತಿಗೆ ಪಸರಿಸುತ್ತಿದೆ.
ಪ್ರಥಮ ಗುರುಗಳಿಂದ ಹಿಡಿದು ಇಂದಿನವರೆಗೆ ಈ ಪೀಠವನ್ನು ಅಲಂಕರಿಸಿದ ಪ್ರತಿಯೊಬ್ಬ ಯತಿಗಳೂ ತಮ್ಮ ತಪಸ್ಸು, ಪಾಂಡಿತ್ಯ ಮತ್ತು ಕರುಣೆಯಿಂದ ಭಕ್ತರ ಬಾಳನ್ನು ಬೆಳಗಿದ್ದಾರೆ. ಸನಾತನ ಧರ್ಮದ ಆಚಾರ-ವಿಚಾರಗಳನ್ನು ಲವಲೇಶವೂ ಚ್ಯುತಿ ಬಾರದಂತೆ ಕಾಪಾಡಿಕೊಂಡು ಬಂದಿರುವ ಪವಿತ್ರ ಗುರುಪೀಠ ಎಂಬ ಹೆಗ್ಗಳಿಕೆ ನಮ್ಮ ಶ್ರೀಮಠದ್ದು.
೩೬ನೇ ಪೀಠಾಧಿಪತಿಗಳಾಗಿರುವ ಪರಮಪೂಜ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಈ ಭವ್ಯ ಪರಂಪರೆಯ ಆಧುನಿಕ ದ್ರಷ್ಟಾರರು. ಅವರ ಕಾಲಘಟ್ಟದಲ್ಲಿ ಶ್ರೀಮಠವು ತನ್ನ ಕಾರ್ಯಗಳ ವ್ಯಾಪ್ತಿ ವಿಸ್ತರಿಸಿಕೊಂಡು, ಗೋ ಸಂರಕ್ಷಣೆ – ಧಾರ್ಮಿಕ ಸಂಘಟನೆ – ಪರಿಸರ ರಕ್ಷಣೆ – ಸಾಂಸ್ಕೃತಿಕ ಜಾಗೃತಿಯ ಮಹಾಕೇಂದ್ರವಾಗಿ ರೂಪಾಂತರಗೊಂಡಿದೆ. ವಿಷ್ಣುಗುಪ್ತ ವಿಶ್ವವಿದ್ಯಾಪೀಠದಂತಹ ಮಹಾವಿದ್ಯಾಲಯವು ಕೂಡ ಸ್ಥಾಪನೆಗೊಂಡು ಭವ್ಯ ಭಾರತದ ಇತಿಹಾಸ ಮರುಕಳಿಸುವ ನಿಟ್ಟಿನಲ್ಲಿ ರೂಪುಗೊಳ್ಳುತ್ತಿದೆ.
೪. ಭಾನ್ಕುಳಿಯ ಶಂಕರಪಂಚಮೀ: ಶಂಕರರ ಸ್ಮೃತಿಯಲ್ಲಿ ಲೋಕಶಂಕರ ಕಾರ್ಯ
ಶಂಕರ ಜಯಂತಿಯನ್ನು ಶಂಕರಪಂಚಮೀ ಎಂಬ ಅಭಿದಾನದೊಂದಿಗೆ ಆರಂಭಿಸಿದ ಕೀರ್ತಿ ಶ್ರೀರಾಮಚಂದ್ರಾಪುರ ಮಠದ್ದು. ಶಂಕರ ಪಂಚಮಿಯ ಜೊತೆ ಸಮಾಜದ ಒಳಿತಿಗಾಗಿ ಅನೇಕ ಧಾರ್ಮಿಕ ಕಾರ್ಯಕ್ರಮಗಳನ್ನು ಕೂಡ ಹಮ್ಮಿಕೊಳ್ಳಲಾಗುತ್ತಿರುವುದು ಈ ಕಾರ್ಯಕ್ರಮದ ವಿಶೇಷತೆ.
ಪ್ರತಿವರ್ಷ ಚೈತ್ರ ಮಾಸ ಕಳೆದು ವೈಶಾಖದ ಆಗಮನವಾಗುತ್ತಿದ್ದಂತೆ ಶಿಷ್ಯಭಕ್ತರ ಮನದಲ್ಲಿ ಶಂಕರ ಜಯಂತಿ ಆಚರಣೆಯ ಸಂಭ್ರಮ ಮನೆಮಾಡುತ್ತದೆ. ಶ್ರೀಸಂಸ್ಥಾನದವರ ದಿವ್ಯ ಮಾರ್ಗದರ್ಶನದಲ್ಲಿ ವೈಶಾಖ ಶುಕ್ಲ ಪಂಚಮಿಯ ಶ್ರೀಶಂಕರರ ಅವತಾರದ ಶುಭದಿನವನ್ನು ಶಂಕರಪಂಚಮೀ ಎಂದು ನಾವೆಲ್ಲರೂ ಆಚರಿಸುತ್ತಿದ್ದೇವೆ.
ಶ್ರೀಗುರುಗಳ ದಿವ್ಯ ಉಪಸ್ಥಿತಿಯಲ್ಲಿ ನಡೆಯುವ ಈ ಉತ್ಸವದ ಅಂತರಂಗ ಮತ್ತು ಬಹಿರಂಗ ವೈಭವದ ವರ್ಣನೆ ಸುಲಭವಲ್ಲ.
ಶಂಕರಾಚಾರ್ಯರ ಮಹಾಕಾರ್ಯಗಳನ್ನು ಸಮಾಜಕ್ಕೆ ತಲುಪಿಸುವುದು ಶ್ರೀಸಂಸ್ಥಾನದವರು ನಡೆಸಿ ಬರುತ್ತಿರುವ ಘನೋದ್ದೇಶ. ಶಂಕರ ತತ್ತ್ವದ ಅನಾವರಣವಾಗುವ ವಿಶೇಷ ಕಾರ್ಯಕ್ರಮವೇ ಶಂಕರಪಂಚಮೀ.
ನಮ್ಮ ಸಂಸ್ಕೃತಿಯ ಸೊಗಡು, ಗುರುಗಳ ದಿವ್ಯ ಸನ್ನಿಧಿ ಮತ್ತು ಶಿಷ್ಯಭಕ್ತರ ಹೃದಯದ ಹಂಬಲ ಅಲ್ಲಿ ಒಂದಾಗುತ್ತದೆ. ಅಲ್ಲಿಗೆ ಬರುವ ಪ್ರತಿಯೊಬ್ಬ ಶಿಷ್ಯಭಕ್ತನೂ ತನ್ನ ಸಂಸಾರದ ನೋವುಗಳನ್ನು ಮರೆತು, ಶ್ರೀಶಂಕರರ ಪಾದಪದ್ಮಗಳಲ್ಲಿ ನೆಮ್ಮದಿಯನ್ನು ಕಾಣುತ್ತಾನೆ.
೫. ಸ್ತೋತ್ರಾನುಗ್ರಹ: ಆಧ್ಯಾತ್ಮಿಕ ಸಾಧನೆಯ ಸೋಪಾನ
ಶ್ರೀಸಂಸ್ಥಾನದವರ ದಿವ್ಯ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ‘ಶಂಕರಪಂಚಮೀ’ ಉತ್ಸವವು ಆಚಾರ್ಯ ಶಂಕರರ ಜ್ಞಾನಧಾರೆಯನ್ನು ಮನೆಮನೆಗೆ ತಲುಪಿಸುವ ಒಂದು ಪುಣ್ಯಕಾರ್ಯ. ಭಾನ್ಕುಳಿಯ ಮಠದಲ್ಲಿ ವಿಜೃಂಭಿಸುವ ಈ ಉತ್ಸವವು ನಮ್ಮ ಪರಂಪರೆಯ ಶಕ್ತಿಯನ್ನು ಜಗತ್ತಿಗೆ ಸಾರುತ್ತಿದೆ. ಶ್ರೀಗುರುಗಳು ನೀಡುವ ‘ಸ್ತೋತ್ರಾನುಗ್ರಹ’ವು ಶಿಷ್ಯಭಕ್ತರ ಮನದಲ್ಲಿ ಸಂಸ್ಕಾರದ ಬೀಜವನ್ನು ಬಿತ್ತಿ, ಧಾರ್ಮಿಕ ಸಂಘಟನೆಯನ್ನು ರೂಪಿಸಿ, ಬಾಳಿನ ಅಂಧಕಾರವನ್ನು ನೀಗುವ ಜ್ಞಾನ ದೀವಿಗೆಗಳು.
೨೦೧೩ರ ಪುಣ್ಯಕ್ಷಣದಿಂದ ಆರಂಭಗೊಂಡು ಇಂದಿನವರೆಗೆ, ಪ್ರತಿ ವರ್ಷವೂ ಶಂಕರಪಂಚಮಿಯಂದು ಶ್ರೀಸಂಸ್ಥಾನದವರು ಅನುಗ್ರಹಿಸುತ್ತಿರುವ ಒಂದೊಂದು ಸ್ತೋತ್ರವೂ ಭಕ್ತರ ಬದುಕಿನ ಕತ್ತಲನ್ನು ಓಡಿಸುವ ದಿವ್ಯ ಹಣತೆಗಳು . ಶ್ರೀಗುರುಗಳು ನೀಡುವ ಪಾರಾಯಣದ ಗುರಿಯನ್ನು ತಲುಪಿಸುವುದು ಶಿಷ್ಯವೃಂದಕ್ಕೆ ಕೇವಲ ಜವಾಬ್ದಾರಿಯಲ್ಲ, ಅದೊಂದು ಧನ್ಯತೆಯ ಪಯಣ.
೨೦೧೩ ರಿಂದ ಈವರೆಗೆ ಶ್ರೀಗಳು ಅನುಗ್ರಹಿಸಿದ ಈ ಜ್ಞಾನದೀವಿಗೆಗಳು ಲಕ್ಷಾಂತರ ಶಿಷ್ಯಭಕ್ತರ ಬದುಕನ್ನು ಬೆಳಗಿವೆ.
೨೦೧೩ – ಭಜಗೋವಿಂದಮ್
೨೦೧೪ – ವಿಷ್ಣುಷಟ್ಪದೀ
೨೦೧೫ – ಹನುಮಾನ್ ಚಾಲೀಸಾ
೨೦೧೬ – ಆದಿತ್ಯಹೃದಯಮ್
೨೦೧೭ – ಶಿವಪಂಚಾಕ್ಷರ ಸ್ತೋತ್ರ
೨೦೧೮ – ಭಜನರಾಮಾಯಣ
೨೦೧೯ – ಲಕ್ಷ್ಮಿನೃಸಿಂಹಕರಾವಲಂಬ ಸ್ತೋತ್ರ
೨೦೨೦ – ಕನಕಧಾರಾ ಸ್ತೋತ್ರ
೨೦೨೧ – ಶಿವಮಾನಸಪೂಜಾ ಸ್ತೋತ್ರ
೨೦೨೨ – ರಾಮ ಭುಜಂಗಪ್ರಯಾತ ಸ್ತೋತ್ರ
೨೦೨೩ – ಶ್ರೀಗಣೇಶ ಪಂಚರತ್ನ ಸ್ತೋತ್ರ
೨೦೨೪ – ಹನುಮತ್ಪಂಚರತ್ನ ಸ್ತೋತ್ರ
೨೦೨೫ – ಶ್ರೀಗುರುಪಾದುಕಾ ಸ್ತೋತ್ರ
ಗುರುಗಳು ನೀಡಿದ ಕೋಟಿ ಕೋಟಿ ಸಂಖ್ಯೆಯ ಜಪದ ಗುರಿಯನ್ನು ಭಕ್ತರು ಶ್ರದ್ಧೆಯಿಂದ ಪೂರೈಸುವುದು, ಸಮಾಜದಲ್ಲಿ ಸತ್ಕಾರ್ಯಗಳ ಕಡೆಗಿರುವ ಹಂಬಲವನ್ನು ತೋರಿಸುತ್ತದೆ. ಇದು ಶ್ರೀಸಂಸ್ಥಾನದವರ ಸಂಕಲ್ಪ ಶಕ್ತಿಯ ಫಲ.
೬. ಭಕ್ತರ ಅನುಭವದ ನುಡಿಗಳು: ಬದಲಾದ ಬದುಕಿನ ಚಿತ್ರಣ
ಈ ಸ್ತೋತ್ರ ಪಾರಾಯಣದ ಮಹಿಮೆಯನ್ನರಿತ ನೂರಾರು ಶಿಷ್ಯಭಕ್ತರು ತಮ್ಮ ಅಂತರಂಗದ ಮಾತುಗಳನ್ನು ಹಂಚಿಕೊಳ್ಳುವಾಗ ಅವರ ಹೃದಯಗಳು ಭಾವಪೂರ್ಣವಾಗುತ್ತವೆ. ಕಂಗಳಲ್ಲಿ ಶ್ರೀಗುರುಗಳ ಪವಿತ್ರ ಅನುಗ್ರಹವನ್ನು ಪಡೆದ ಸಾರ್ಥಕ ಭಾವ ತುಂಬಿರುತ್ತದೆ.
”ನಮ್ಮ ಮನೆಯಲ್ಲಿ ಸ್ತೋತ್ರ ಪಠಣ ಆರಂಭವಾದ ಮೇಲೆ ವಾತಾವರಣವೇ ಸಂಪೂರ್ಣವಾಗಿ ಬದಲಾಗಿದೆ. ಹಿಂದೆಂದೂ ಇಲ್ಲದ ಶಾಂತಿ, ನೆಮ್ಮದಿ ಇಂದು ನಮ್ಮ ಮನೆಯಲ್ಲಿ ಅನುಭವಕ್ಕೆ ಬರುತ್ತಿದೆ. ಮನದ ಗೊಂದಲಗಳಿಗೆ ಕೂಡ ಈ ಸ್ತೋತ್ರ ಪಾರಾಯಣದಿಂದ ಮುಕ್ತಿ ದೊರಕಿದೆ” ಎಂಬುದು ಶಿಷ್ಯ ಭಕ್ತರ ಅಂತರಾಳದ ಭಕ್ತಿಯ ನುಡಿ.
“ಶ್ರೀಗುರುಗಳಿಂದ ಅನುಗ್ರಹವಾದ ಸ್ತೋತ್ರ ಪಾರಾಯಣ ಮಾಡಲಾರಂಭಿಸಿದ ಮೇಲೆ ಮನೆಯಲ್ಲಿ ಮಕ್ಕಳಿಗೆ ಕೂಡ ಧಾರ್ಮಿಕ ಪ್ರಜ್ಞೆ ಜಾಗೃತವಾಗತೊಡಗಿದೆ. ಅವರು ಸಹಾ ಶ್ರದ್ಧೆಯಿಂದ ಈ ಸ್ತೋತ್ರಗಳನ್ನು ಕಂಠಪಾಠ ಮಾಡಿ ಪ್ರತಿದಿನವೂ ಪಠಿಸುತ್ತಾರೆ. ಇದು ನಮ್ಮ ಸಂಸ್ಕೃತಿಯ ಕುರಿತಾದ ಜಾಗೃತಿಯ ಮೊದಲ ಹೆಜ್ಜೆ ಎಂದೇ ಹೇಳಬಹುದು” ಇದು ನಮ್ಮ ಸಮಾಜದ ಪ್ರತಿಯೊಬ್ಬರ ಹೃದಯದ ಮಾತು. ಈ ಮಾತುಗಳು ನಮ್ಮ ಧಾರ್ಮಿಕ ಸಂಘಟನೆಯ ಮಹತ್ತ್ವವನ್ನು ಎತ್ತಿ ಹಿಡಿಯುತ್ತದೆ.
ಶ್ರೀಗುರುಗಳ ಸಂಕಲ್ಪದಂತೆ ಶಿಷ್ಯ ವೃಂದದ ಉದ್ಧಾರ ಹಾಗು ಸಮಾಜದ ಧಾರ್ಮಿಕ ಶ್ರೇಯಸ್ಸಿಗಾಗಿ ಮನೆಗಳಲ್ಲಿ ನಡೆಸುವ ಸ್ತೋತ್ರಪಾರಾಯಣವು ಸಮಾಜದಲ್ಲಿ ಒಂದು ಭಕ್ತಿಪೂರ್ಣ ವಾತಾವರಣವನ್ನು ನಿರ್ಮಾಣ ಮಾಡಿದೆ. ಮನೆಯ ಹಿರಿಯರು ಸಂಜೆ ದೀಪವಿಟ್ಟು ಸ್ತೋತ್ರ ಪಠಿಸಲು ಕುಳಿತಾಗ, ಅಂಬೆಗಾಲಿಡುವ ಮಕ್ಕಳು ಕೂಡ ಆ ದಿವ್ಯತೆಗೆ ಮನಸೋತು ಜೊತೆಗೂಡುತ್ತಿದ್ದಾರೆ.
ಸಂಚಾರೀವಾಣಿ, ಜಾಲತಾಣಗಳ ಅಬ್ಬರದ ಬಳಕೆಯ ನಡುವೆಯೂ ಇಂದು ಮನೆಮನೆಗಳಲ್ಲಿ ಶ್ರೀಶಂಕರರ ಸ್ತೋತ್ರಗಳು ಅನುರಣಿಸುತ್ತಿವೆ ಎಂದರೆ ಇದು ನಮ್ಮ ಸಂಸ್ಕೃತಿಯ ಪುನರುತ್ಥಾನದ ಸಂಕೇತವಲ್ಲವೇ ?
ಈ ಸ್ತೋತ್ರಗಳ ನಿರಂತರ ಪಠಣದಿಂದ ಮನಸ್ಸಿನ ನಕಾರಾತ್ಮಕ ಚಿಂತನೆಗಳು ದೂರವಾಗಿ, ಸಕಾರಾತ್ಮಕ ಆಲೋಚನೆಗಳು ಮೂಡುತ್ತಿವೆ. ಬದುಕಿನ ಸಂಕಷ್ಟಗಳ ನಡುವೆಯೂ ನೆಮ್ಮದಿಯಿಂದ ಬಾಳುವ ದೃಢತೆ ಈ ಸ್ತೋತ್ರಗಳ ಪಠಣದಿಂದ ದೊರಕುತ್ತದೆ ಎಂಬುದೇ ಈ ದಿವ್ಯ ಸ್ತೋತ್ರಗಳ ವೈಶಿಷ್ಟ್ಯತೆ.
೭.ಸಂಘಟಿತ ಸ್ತೋತ್ರ ಪಾರಾಯಣ: ಸಾಧನೆ ಮತ್ತು ಧಾರ್ಮಿಕ ಸಂಚಲನ
ಇಂದು ನಮ್ಮ ಮನೆ-ಮನಗಳಲ್ಲಿ ಧಾರ್ಮಿಕ ಸಂಚಲನ ಮೂಡಲು ಶ್ರೀಸಂಸ್ಥಾನದವರು ನೀಡುವ ಈ ಸ್ತೋತ್ರಗಳ ಪಾರಾಯಣದ ಗುರಿ ಕಾರಣವಾಗಿದೆ. ಆ ಗುರಿಯನ್ನು ತಲುಪಲು ಶಿಷ್ಯ ಭಕ್ತರು ತಮ್ಮ ಮನೆಗಳಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ, ಶ್ರೀಮಠದ ಕಾರ್ಯಕ್ರಮಗಳಲ್ಲಿ, ದೇವಸ್ಥಾನಗಳಲ್ಲಿ, ಗೋಶಾಲೆಗಳಲ್ಲಿ ಹೀಗೆ ಅನೇಕ ಕಡೆಗಳಲ್ಲಿ ಸಂಘಟಿತರಾಗಿ ಈ ಸ್ತೋತ್ರಗಳನ್ನು ಭಕ್ತಿಯಿಂದ ಪಠಣ ಮಾಡುತ್ತಾರೆ.
ಶ್ರೀಗುರುಗಳು ನೀಡುವ ಕೋಟಿ ಕೋಟಿ ಸಂಖ್ಯೆಯ ಗುರಿ ಇದ್ದರೂ ಕೂಡ ಶಿಷ್ಯಭಕ್ತರು ಅದನ್ನು ಬಹಳ ಶ್ರದ್ಧಾ ಭಕ್ತಿಗಳಿಂದ ಸ್ವೀಕರಿಸಿ, ಸಂಘಟಿತರಾಗಿ ಪಠಿಸುವ ಮೂಲಕ ಆ ಗುರಿಯನ್ನು ಮೀರಿ ಸಾಧನೆ ಮಾಡಿದ್ದಾರೆ. ಶ್ರೀಗುರುಗಳು ನೀಡಿರುವ ಈ ಅನುಗ್ರಹಸ್ತೋತ್ರ ಪಠಣದ ಮೂಲಕ ನಮ್ಮ ಸಮಾಜವು ಅನೇಕ ಸ್ತೋತ್ರಗಳನ್ನು ಕಂಠಪಾಠ ಮಾಡಿಕೊಂಡಿದೆ ಎಂಬುದು ಹೆಮ್ಮೆಯ ವಿಚಾರ. ಇದು ಒಂದು ರೀತಿಯ ಧಾರ್ಮಿಕ ಸಂಘಟನೆಗೆ ತಳಹದಿಯಾಗಿ ರೂಪುಗೊಂಡು ಸಮಾಜದಲ್ಲಿ ಒಂದು ಮಹಾನ್ ಧಾರ್ಮಿಕ ಸಂಚಲನವನ್ನು ಸೃಷ್ಟಿಸಿದೆ.
೮. ಶ್ರೀಗುರುಗಳ ಸಂಕಲ್ಪ: ಧಾರ್ಮಿಕ ಸಮಾಜದ ಭದ್ರಬುನಾದಿ
ಸಮಾಜವನ್ನು ಧಾರ್ಮಿಕವಾಗಿ ಬಲಿಷ್ಠಗೊಳಿಸುವುದು ಸುಲಭದ ಮಾತಲ್ಲ. ಆದರೆ ನಮ್ಮ ಶ್ರೀಗುರುಗಳು ಯಾವುದೇ ಒತ್ತಡವಿಲ್ಲದೆ, ಕೇವಲ ಪ್ರೀತಿ ಮತ್ತು ಕಾರುಣ್ಯದ ಮೂಲಕ ಈ ಬದಲಾವಣೆಯನ್ನು ತಂದಿದ್ದಾರೆ. ಶ್ರೀಗುರುಗಳು ನೀಡುವ ಸ್ತೋತ್ರದ ಅನುಗ್ರಹವು ಪ್ರತಿ ಶಿಷ್ಯನ ಬದುಕಿಗೆ ‘ಅನುಗ್ರಹ ಪ್ರಸಾದ’ವಾಗಿ ಒದಗಿಬಂದಿದೆ.
ಶ್ರೀಸಂಸ್ಥಾನದವರ ಈ ದೂರದೃಷ್ಟಿಯ ಹಿಂದೆ ಇರುವುದು ಕೇವಲ ಧಾರ್ಮಿಕ ಆಚರಣೆಯಲ್ಲ, ಬದಲಿಗೆ ಒಂದು ಗಟ್ಟಿಯಾದ, ಸಂಸ್ಕಾರವಂತ ಮತ್ತು ಧಾರ್ಮಿಕ ಪ್ರಜ್ಞೆಯುಳ್ಳ ಸಮಾಜವನ್ನು ನಿರ್ಮಿಸುವ ಮಹಾನ್ ಕನಸು. ಇಂದು ಮನೆಮನೆಗಳಲ್ಲಿ ಮೊಳಗುತ್ತಿರುವ ಸ್ತೋತ್ರದ ಲಹರಿಗಳು ಆ ಕನಸು ನನಸಾಗುತ್ತಿರುವುದಕ್ಕೆ ಸಾಕ್ಷಿಯಾಗಿವೆ. ಈ ದಿವ್ಯ ಪ್ರವಾಹದಲ್ಲಿ ಮಿಂದು ನಾವೆಲ್ಲರೂ ಪರಿಪಾವನರಾಗುತ್ತಿದ್ದೇವೆ.
ಶ್ರೀಸಂಸ್ಥಾನದವರ ಯೋಚನೆಗಳು ಮತ್ತು ಕಾರ್ಯಗಳು ಮಾನವ ಸಹಜ ತರ್ಕಕ್ಕೆ ನಿಲುಕುವಂತಹವಲ್ಲ. “ಗಗನಂ ಗಗನಾಕಾರಂ ಸಾಗರಃ ಸಾಗರೋಪಮಃ” ಎಂಬಂತೆ ಅವರ ಕಾರ್ಯಗಳಿಗೆ ಅವರೇ ಸಾಟಿ. ಸಮಾಜದಲ್ಲಿ ಸಂಸ್ಕಾರವನ್ನು ತುಂಬುವುದು, ಗೋಸೇವೆಯ ಮೂಲಕ ಪ್ರಕೃತಿಯನ್ನು ರಕ್ಷಿಸುವುದು ಮತ್ತು ಧರ್ಮದ ಸತ್ತ್ವವನ್ನು ಜನಸಾಮಾನ್ಯರಿಗೆ ತಲುಪಿಸುವುದು ಕಾರುಣ್ಯಪೂರಿತ ಸಂಕಲ್ಪವಾಗಿದೆ.
ಇಂದು ಸಮಾಜವು ವಿಘಟಿತವಾಗುತ್ತಿರುವಾಗ, ಶ್ರೀರಾಮಚಂದ್ರಾಪುರಮಠವು ಶಿಷ್ಯಭಕ್ತರನ್ನು ಒಂದು ಸೂತ್ರದಲ್ಲಿ ಕಟ್ಟಿ, ಆಧ್ಯಾತ್ಮಿಕ ಭದ್ರತೆಯನ್ನು ನೀಡುತ್ತಿದೆ.
ಈಗ ವೈಶಾಖ ಮಾಸದ ದಿನಗಳು. ನಮ್ಮ ಹೃದಯಗಳಲ್ಲಿ ಶಂಕರ ಭಕ್ತಿಯ ನಂದಾದೀಪ ಬೆಳಗುವ ಕಾಲ ಮತ್ತೆ ಸನ್ನಿಹಿತವಾಗಿದೆ. ಭಾನ್ಕುಳಿಯ ಪಾವನ ಭೂಮಿಯಲ್ಲಿ, ಗೋಸ್ವರ್ಗದ ಮಡಿಲಲ್ಲಿ, ಶ್ರೀಗುರುಗಳ ದಿವ್ಯ ಸನ್ನಿಧಿಯಲ್ಲಿ ನಡೆಯುವ ಶಂಕರಪಂಚಮಿಯ ‘ಭವವ ಕಳೆದ ಬ್ರಹ್ಮಭಾವದ ವೈಭವ’ ದಲ್ಲಿ ನಾವೆಲ್ಲರೂ ಪಾಲ್ಗೊಳ್ಳೋಣ.
ಭವಸಾಗರದ ಸುಳಿಯಲ್ಲಿ ಸಿಲುಕಿ, ಅಶಾಂತಿಯಿಂದ ತತ್ತರಿಸುತ್ತಿರುವ ನಮಗೆ ಆಚಾರ್ಯ ಶಂಕರರ ಜ್ಞಾನ ಮತ್ತು ನಮ್ಮ ಗುರುಗಳ ಅನುಗ್ರಹವೇ ಏಕೈಕ ದಾರಿ. ಆ ಮಹಾಚೈತನ್ಯವು ನಮ್ಮನ್ನು ಪೊರೆಯಲಿ, ನಮ್ಮ ಅಜ್ಞಾನದ ಮುಸುಕನ್ನು ಸರಿಸಿ ಜ್ಞಾನದ ಬೆಳಕನ್ನು ನೀಡಲಿ.
ನಮೋಸ್ತು ಗುರುವೇ ತುಭ್ಯಂ ಯೇನ ವೇದಾಃ ಸುರಕ್ಷಿತಾಃ |
ಯೇನ ಭಾರತ ದೇಶೋಯಮ್ ಏಕರಾಷ್ಟ್ರೀಕೃತ ಸ್ವಯಮ್ ||
ಶ್ರೀರಾಮಚಂದ್ರಾಪುರಮಠದoತಹ ದಿವ್ಯ ಪರಂಪರೆಯ ಶಿಷ್ಯರಾಗಿರುವುದು ನಮ್ಮ ಪೂರ್ವಜನ್ಮದ ಸುಕೃತ. ನಾರಾಯಣನಿಂದ ಆರಂಭವಾಗಿ ಶ್ರೀಶಂಕರರ ಮೂಲಕ ಹರಿದುಬಂದ ಈ ಬ್ರಹ್ಮವಿದ್ಯೆಯು ಪರಮಪೂಜ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಮೂಲಕ ನಮಗೆ ಹರಿದು ಬರುತ್ತಿದೆ. ಈ ಅವಿಚ್ಛಿನ್ನ ಜ್ಞಾನವಾಹಿನಿಯಲ್ಲಿ ನಾವೂ ಒಂದು ಹನಿಯಾಗಿ ಸಮರ್ಪಿಸಿಕೊಳ್ಳುವುದು ನಮ್ಮ ಬದುಕಿನ ಸಾರ್ಥಕತೆ.
ಗುರುಪರಂಪರೆಯ ಈ ಭವ್ಯತೆಯನ್ನು ಸ್ಮರಿಸುತ್ತಾ, ಶಂಕರಪಂಚಮಿಯ ಸುದಿನದಂದು ನಮ್ಮನ್ನು ಉದ್ಧರಿಸುತ್ತಿರುವ ಶ್ರೀಗುರುಗಳ ಪಾದಾರವಿಂದಗಳಿಗೆ ಶಿರಬಾಗೋಣ.
ನಾರಾಯಣಂ ಪದ್ಮಭುವಂ ವಸಿಷ್ಠಂ
ಶಕ್ತಿಂ ಚ ತತ್ಪುತ್ರಪರಾಶರಂ ಚ |
ವ್ಯಾಸಂ ಶುಕಂ ಗೌಡಪದಂ ಮಹಾಂತಂ ಗೋವಿಂದಯೋಗೀಂದ್ರಮಥಾಸ್ಯ ಶಿಷ್ಯಮ್ ||
ಶ್ರೀ ಶಂಕರಾಚಾರ್ಯಮಥಾಸ್ಯ ಪದ್ಮಪಾದಂ ಚ ಹಸ್ತಮಾಲಕಂ ಚ ಶಿಷ್ಯಮ್ |
ತಂ ತೋಟಕಂ ವಾರ್ತಿಕಕಾರಮನ್ಯಾನ್ ಅಸ್ಮದ್ಗುರೂನ್ ಸಂತತಮಾನತೋಸ್ಮಿ ||
ಸಮಸ್ತ ಜಗತ್ತಿಗೆ ಶಾಂತಿಯನ್ನು ನೀಡುವ, ಸನಾತನ ಧರ್ಮದ ಉಸಿರಾಗಿರುವ ಶಂಕರಭಗವತ್ಪಾದರು ನಮಗೆ ಮಂಗಳವನ್ನುಂಟುಮಾಡಲಿ.
|| ಶಂಕರಃ ಶಂಕರೋತು ನಃ ||