ಉರುವಾಲು: ಶ್ರೀಭಾರತೀ ವಿದ್ಯಾಸಂಸ್ಥೆಯಲ್ಲಿ ಗುರುವಿನಾಗಮನದ ಧನ್ಯತೆಯ ಕ್ಷಣವದು. ಚೈತ್ರ ಕೃಷ್ಣ ಷಷ್ಠಿಯಂದು (08-04-2026) ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ವಿದ್ಯಾಸಂಸ್ಥೆಗೆ ಪಾದಬೆಳೆಸಿದರು. ಶ್ರೀಗುರುಗಳನ್ನು ಪೂರ್ಣ ಕುಂಭದೊಂದಿಗೆ ಸ್ವಾಗತಿಸಲಾಯಿತು. ಧೂಳೀ ಪಾದುಕಾ ಪೂಜೆ ಸಮರ್ಪಿಸಲಾಯಿತು. ತದನಂತರ ಶ್ರೀಕರಾರ್ಚಿತ ಶ್ರೀಸೀತಾರಾಮಚಂದ್ರ-ಚಂದ್ರಮೌಳೀಶ್ವರ-ರಾಜರಾಜೇಶ್ವರೀ ದೇವರ ಪೂಜೆ ನಡೆಯಿತು.

ಸಪ್ತಮಿಯಂದು (09-04-2026) ಸಂಸ್ಥೆಯ ವತಿಯಿಂದ ಶ್ರೀಗುರುಭಿಕ್ಷಾ ಸೇವೆ ನೆರವೇರಿತು. ಅಂದು ಶ್ರೀಸಂಸ್ಥಾನದವರು ‘ಅನ್ನಪೂರ್ಣಾ’ ಬಿಸಿ ಊಟ ಯೋಜನೆಯ ಕಟ್ಟಡ ಕಾಮಗಾರಿಯ ಶಂಕುಸ್ಥಾಪನೆಯನ್ನು ನಡೆಸಿದರು.

ಜೊತೆಗೆ ಸೌರ ವಿದ್ಯುತ್ ಘಟಕ ಹಾಗೂ ಸ್ಮಾರ್ಟ್ ಕ್ಲಾಸ್ ಉದ್ಘಾಟನೆಗಳು ನೆರವೇರಿದವು. ಬಳಿಕ ಶ್ರೀಸಂಸ್ಥಾನದವರು ಶ್ರೀಸಂದೇಶವನ್ನು ಅನುಗ್ರಹಿಸಿದರು. ‘ಇದು ಪುರಾತನ ಶಾಲೆ. 1956ನೇ ಇಸವಿಯಲ್ಲಿಯೇ ಸ್ವಂತ ಕಟ್ಟಡದಲ್ಲಿ ಸಂಸ್ಥಾಪನೆಗೊಂಡಿರುವ ಶಾಲೆಯಿದು. ಅಲ್ಲಿಂದ ಇಲ್ಲಿಗೆ ಬಹಳ ದೀರ್ಘಕಾಲ ನಡೆದಿದೆ. ಆದರೆ ಈ ಶಾಲೆಗೆ ವೃದ್ಧಾಪ್ಯ ಬರುತ್ತಿಲ್ಲ; ಯೌವನ ಬರುತ್ತಿದೆ. ಇದು ಬೇರೆ ಬೇರೆ ರೀತಿಯಿಂದ ತನ್ನನ್ನು ತಾನು ಸಿಂಗರಿಸಿಕೊಳ್ಳುತ್ತಿದೆ’ ಎಂದು ನೂತನವಾಗಿ ನಿರ್ಮಾಣಗೊಳ್ಳಲಿರುವ ಕಟ್ಟಡಗಳ ಬಗ್ಗೆ, ಜಾರಿಯಾಗಲಿರುವ ಯೋಜನೆಗಳ ಬಗ್ಗೆ ಪ್ರಶಂಸಿಸಿ ಹರಸಿದರು.