ಬೆಂಗಳೂರು: ಹವ್ಯಕ ಮಹಾಮಂಡಲದ ವೈವಾಹಿಕ, ವಿದ್ಯಾರ್ಥಿವಾಹಿನೀ ಹಾಗೂ ಮಾತೃ ವಿಭಾಗಗಳು ಜಂಟಿಯಾಗಿ ಆಯೋಜಿಸಿದ್ದ ‘ಸತ್ಪಥ’ ಪ್ರಥಮ ಕಾರ್ಯಾಗಾರವು ಯಶಸ್ವಿಯಾಗಿ ನಿಜ ಜ್ಯೇಷ್ಠ ಶುಕ್ಲ ಚತುರ್ದಶಿಯಂದು (28-06-2026) ವಿಜಯನಗರದ ಶ್ರೀಭಾರತೀ ವಿದ್ಯಾಲಯದಲ್ಲಿ ನೆರವೇರಿತು.


ಮಕ್ಕಳ ಸರ್ವತೋಮುಖ ಬೆಳವಣಿಗೆ, ಉತ್ತಮ ವ್ಯಕ್ತಿತ್ವ ನಿರ್ಮಾಣ ಹಾಗೂ ಸದ್ಗುಣ-ಸದಾಚಾರಗಳನ್ನು ಬೆಳೆಸುವ ಮೂಲಕ ಅವರ ಭವಿಷ್ಯವನ್ನು ಸನ್ಮಾರ್ಗದತ್ತ ರೂಪಿಸುವ ಹಾಗೂ ಸುಖೀ ಕುಟುಂಬದ ಉದ್ದೇಶದಿಂದ ಹಮ್ಮಿಕೊಳ್ಳಲಾದ ಈ ಕಾರ್ಯಾಗಾರದಲ್ಲಿ ಬೆಂಗಳೂರು ಪ್ರಾಂತದ ವಿವಿಧ ಭಾಗಗಳಿಂದ ಆಗಮಿಸಿದ್ದ 130ಕ್ಕೂ ಹೆಚ್ಚು ಮಕ್ಕಳು ಹಾಗೂ ಪೋಷಕರು ಉತ್ಸಾಹದಿಂದ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾದರು.
ಕಾರ್ಯಕ್ರಮದ ಆರಂಭದಲ್ಲಿ ಶಿಷ್ಯವೃಂದದವರಿಂದ ಶ್ರೀಮಹಾಗಣೇಶ ಪಂಚರತ್ನ ಸ್ತೋತ್ರ ಹಾಗೂ ಶ್ರೀಅರ್ಧನಾರೀಶ್ವರ ಸ್ತೋತ್ರಗಳ ಭಕ್ತಿಪೂರ್ವಕ ಪಠನ ನಡೆಯಿತು. ಸ್ತೋತ್ರ ಪಠಣವನ್ನು ಕುಮಾರಿ ಅನ್ವಿತಾ ಸಾವಿತ್ರಿ ಭಟ್ ಹಾಗೂ ಕುಮಾರಿ ಅನುಷಾ ಸಾವಿತ್ರಿ ಭಟ್ ಅವರು ಸುಂದರವಾಗಿ ಮುನ್ನಡೆಸಿದರು. ತದನಂತರ ನಡೆದ ದೀಪ ಪ್ರಜ್ವಲನೆ, ಗುರುವಂದನೆ ಹಾಗೂ ಗೋವಂದನೆಯೊಂದಿಗೆ ಕಾರ್ಯಾಗಾರವನ್ನು ಉದ್ಘಾಟಿಸಲಾಯಿತು.
ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ಹವ್ಯಕ ಮಹಾಮಂಡಲ ಬೆಂಗಳೂರು ಪ್ರಾಂತದ ಉಪಾಧ್ಯಕ್ಷ ಜಿ. ಜಿ. ಹೆಗಡೆ, ಮಹಾಮಂಡಲದ ಪ್ರಧಾನ ಕಾರ್ಯದರ್ಶಿ ಮಹೇಶ ಚಟ್ನಳ್ಳಿ, ವೈವಾಹಿಕ ವಿಭಾಗದ ಸಂಯೋಜಕಿ ಡಾ. ಶಾರದಾ ಜಯಗೋವಿಂದ ಹಾಗೂ ವಿದ್ಯಾರ್ಥಿವಾಹಿನೀ ಪ್ರಧಾನೆ ಅರ್ಚನಾ ಕುರುವೇರಿ, ಕ್ಲಿನಿಕಲ್ ಸೈಕಾಲಜಿಸ್ಟ್ ಹಾಗೂ ಶ್ರೀಭಾರತೀ ವಿದ್ಯಾಲಯದ ವಿದ್ಯಾರ್ಥಿ ಸಲಹೆಗಾರರಾದ ಭಾವನಾ ಉಪಸ್ಥಿತರಿದ್ದರು.
ಪ್ರಾಸ್ತಾವಿಕವಾಗಿ ನುಡಿಗಳನ್ನಾಡಿದ ಡಾ. ಶಾರದಾ ಜಯಗೋವಿಂದ ಅವರು ಕಾರ್ಯಾಗಾರದ ಉದ್ದೇಶ, ಅವಶ್ಯಕತೆ ಹಾಗೂ ಇಂದಿನ ಸಮಾಜದಲ್ಲಿ ಮಕ್ಕಳ ವ್ಯಕ್ತಿತ್ವ ವಿಕಾಸಕ್ಕಾಗಿ ಇಂತಹ ಕಾರ್ಯಕ್ರಮಗಳ ಮಹತ್ತ್ವವನ್ನು ಮನದಟ್ಟಾಗುವಂತೆ ವಿವರಿಸಿದರು. ಅಧ್ಯಕ್ಷೀಯ ನುಡಿಯಲ್ಲಿ ಜಿ. ಜಿ. ಹೆಗಡೆ ಅವರು ‘ಮಕ್ಕಳಲ್ಲಿ ಉತ್ತಮ ಮೌಲ್ಯಗಳು, ಸಂಸ್ಕಾರ ಹಾಗೂ ಜವಾಬ್ದಾರಿಯುತ ಜೀವನಶೈಲಿಯನ್ನು ಬೆಳೆಸುವಲ್ಲಿ ಇಂತಹ ಕಾರ್ಯಾಗಾರಗಳು ಮಹತ್ತರ ಪಾತ್ರ ವಹಿಸುತ್ತವೆ. ಇವುಗಳ ಮೂಲಕ ಸಮಾಜಕ್ಕೆ ಆದರ್ಶಪ್ರಾಯವಾದ ಯುವಪೀಳಿಗೆಯನ್ನು ರೂಪಿಸಬಹುದು’ ಎಂದು ಆಶಯವನ್ನು ವ್ಯಕ್ತಪಡಿಸಿದರು.

ಕಾರ್ಯಾಗಾರದ ವಿವಿಧ ಅವಧಿಗಳಲ್ಲಿ ಪರಸ್ಪರ ಪರಿಚಯ, ಮಕ್ಕಳು, ಪೋಷಕರು, ಹುಡುಗರು ಹಾಗೂ ಹುಡುಗಿಯರಿಗೆ ಪ್ರತ್ಯೇಕವಾಗಿ ಸಂವಾದ, ಗುಂಪುಚರ್ಚೆ, ಪರಸ್ಪರ ಪರಿಚಯ, ವಿಚಾರ ಮಂಥನ ಹಾಗೂ ಪ್ರಾಯೋಗಿಕ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು. ಪ್ರತಿಯೊಂದು ಅವಧಿಯೂ ಭಾಗವಹಿಸಿದವರ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ಅತ್ಯಂತ ಪರಿಣಾಮಕಾರಿಯಾಗಿ ನಡೆಯಿತು.
ಮುಂದುವರೆದ ಅವಧಿಯಲ್ಲಿ ಭಾವನಾ ಮತ್ತು ಡಾ. ಶಾರದಾ ಜಯಗೋವಿಂದ ಅವರ ವಿಶೇಷ ಮಾರ್ಗದರ್ಶನಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾದವು. ಮಕ್ಕಳ ಮನೋವಿಕಾಸ, ಪೋಷಕರ ಜವಾಬ್ದಾರಿ, ಮೌಲ್ಯಾಧಾರಿತ ಜೀವನ ಹಾಗೂ ಆರೋಗ್ಯಕರ ಕುಟುಂಬ ಸಂಬಂಧಗಳ ಕುರಿತು ಅವರು ನೀಡಿದ ವಿಚಾರಗಳು ಭಾಗವಹಿಸಿದವರಿಗೆ ಹೊಸ ಚಿಂತನೆಗಳನ್ನು ನೀಡಿದವು.
ಕಾರ್ಯಾಗಾರದಲ್ಲಿ ಪ್ರಶಿಕ್ಷಕರಾಗಿ ಸಂಧ್ಯಾ ಕಾನತ್ತೂರು, ಅರ್ಚನಾ ಕುರುವೇರಿ, ಮುರಳಿ ಕುಕ್ಕುಪ್ಪುಣಿ, ರಮ್ಯಾ ಸುರೇಶ, ಗಾಯತ್ರೀ ಭಾಗವತ, ಡಾ. ಚೈತ್ರಲಕ್ಷೀ ಕೆ., ಸೌಮ್ಯಾ ಚೇತನ ದೊಡ್ಡಮಾಣಿ ಹಾಗೂ ಶಿವರಾಜ ಪೆರ್ಮುಖ ಅವರು ವಿವಿಧ ಅವಧಿಗಳಲ್ಲಿ ಭಾಗವಹಿಸಿದರು. ಅಲ್ಲದೆ, ದಕ್ಷಿಣ ಹಾಗೂ ಉತ್ತರ ಬೆಂಗಳೂರು ಮಂಡಲ ಮತ್ತು ವಿವಿಧ ವಲಯಗಳ ಪದಾಧಿಕಾರಿಗಳು ಸಂಪೂರ್ಣ ಸಹಕಾರ ನೀಡಿ ಕಾರ್ಯಾಗಾರವನ್ನು ಅತ್ಯಂತ ಯಶಸ್ವಿಗೊಳಿಸಿದರು.
ಕಾರ್ಯಾಗಾರಕ್ಕೆ ಮೆರಗು ನೀಡಿ ಮಕ್ಕಳನ್ನು ಪ್ರೋತ್ಸಾಹಿಸಲು ಥಟ್ ಅಂತ ಹೇಳಿ ಮಾದರಿಯ ರಸಪ್ರಶ್ನೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ವಿಜೇತರಿಗೆ ಆಕರ್ಷಕ ಬಹುಮಾನವನ್ನೂ ನೀಡಲಾಯಿತು.
ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಮಹೇಶ ಚಟ್ನಳ್ಳಿ ಅವರು ಮಾತನಾಡಿ, ‘ಸತ್ಪಥ’ ಕಾರ್ಯಾಗಾರವು ಮಕ್ಕಳ ಹಾಗೂ ಪೋಷಕರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗೆ ಪ್ರೇರಣೆಯಾಗಿದ್ದು, ಇಂತಹ ಕಾರ್ಯಾಗಾರಗಳು ಇನ್ನಷ್ಟು ವ್ಯಾಪಕವಾಗಿ ಶಿಷ್ಯ ಸಮೂಹವನ್ನು ತಲುಪುವಂತಾಗಲಿ ಎಂದು ಹಾರೈಸಿದರು. ಶಾಲೆಯ ಪ್ರಾಂಶುಪಾಲರಾದ ವರ್ಷಾ ಅವರು ಉಪಸ್ಥಿತರಿದ್ದರು. ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಪ್ರಮಾಣ ಪತ್ರ ವಿತರಣೆಯೂ ಈ ಸಂದರ್ಭದಲ್ಲಿ ನೀಡಲಾಯಿತು.