ತ್ರಿಶೂರು: ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಗುರುವಾಯೂರು ಕ್ಷೇತ್ರಕ್ಕೆ ಚಿತ್ತೈಸಿ ಶ್ರೀಕೃಷ್ಣ ದರ್ಶನ ಮಾಡಿದರು. ಶ್ರೀಕೃಷ್ಣ ಸನ್ನಿಧಾನಕ್ಕೆ ಶುದ್ಧ ನವನೀತದಿಂದ ಪರಮಪೂಜ್ಯ ಶ್ರೀಸಂಸ್ಥಾನದವರ ತುಲಾಭಾರದ ಸೇವೆ ನಡೆಯಿತು.
ನವನೀತಪ್ರಿಯ ಶ್ರೀಕೃಷ್ಣನೆದುರಿನಲ್ಲಿ ನವನೀತದೊಂದಿಗೆ ಶ್ರೀಗುರುಗಳ ತುಲಾಭಾರ ಎಂಬ ಸಂಕಲ್ಪವನ್ನೀಡೇರಿಸುವ ಸಲುವಾಗಿ ಗೋಕರ್ಣ ಮಂಡಲಾದ್ಯಂತ ಮನೆಮನೆಗಳಿಂದ ನವನೀತ ಸಂಗ್ರಹವೆಂಬ ಗುರುಸೇವಾ ಕೈಂಕರ್ಯಕ್ಕೆ ನಿರೀಕ್ಷೆಗೂ ಮೀರಿದ ಫಲವೇ ದೊರಕಿತು.
ವಿಶ್ವಗುರುವೆನಿಸಿದ ದೇವನ ಸನ್ನಿಧಿಯಾದ ಗುರುವಾಯೂರಿನ ಪುಣ್ಯಕ್ಷೇತ್ರದಲ್ಲಿ ಜಗದ್ಗುರು ಶ್ರೀಸಂಸ್ಥಾನದವರ ತುಲಾಭಾರವೆಂದು ಸಂಕಲ್ಪವನ್ನರಿತಾಗ ೧೦೦ ಕಿಲೋ ಬೆಣ್ಣೆ ಸಂಗ್ರಹವಾಗಬೇಕು ಎಂಬುದು ಕಾರ್ಯಕರ್ತರ ಆಶಯವಾಗಿತ್ತು. ಅದಕ್ಕೆ ಶುದ್ಧ ದೇಶೀ ತಳಿಯ ಹಸುವಿನ ಬೆಣ್ಣೆಯನ್ನು, ಭಕ್ತರ ಮನೆಯಿಂದ ಮತ್ತು ನಮ್ಮದೇ ಗೋಶಾಲೆಗಳಿಂದ ಸಂಗ್ರಹವಾಗುವಂತಾದರೆ ಉತ್ತಮ ಎಂಬ ಭಾವದಲ್ಲಿ ಗುರುಗಳನ್ನು ನೆನೆದು ಹೊರಟ ಕಾರ್ಯಕರ್ತರು ಸಂಗ್ರಹಿಸಿದ್ದು ೧೫೦ ಕಿಲೋ ಬೆಣ್ಣೆ!
ಹಲವು ಕಡೆಗಳಲ್ಲಿ ಸಾಂಪ್ರದಾಯಿಕವಾಗಿ ಕಡೆಗೋಲಿನಲ್ಲಿ ಮೊಸರು ಕಡೆದು ಬೆಣ್ಣೆ ತೆಗೆಯಲಾಯಿತು. ಗೋಶಾಲೆಗಳೂ ತಮ್ಮ ಕೊಡುಗೆಯನ್ನು ನೀಡಿದುವು. ಈ ಸೇವೆಗಾಗಿ ಕೇವಲ ೫ ದಿವಸಗಳ ಬೆಣ್ಣೆಯನ್ನು ಪಡೆಯಲಾಗಿದೆ. ಇಂತು ಬೇರೆ ಬೇರೆ ಕೇಂದ್ರಗಳಲ್ಲಿ ಬೆಣ್ಣೆಯನ್ನು ಇಡುವಂತೆ ಮಾಡಿ ಸಂರಕ್ಷಿಸಿ, ಸೇವಾಕರ್ತರು ಅಲ್ಲಿಂದ ಸಂಗ್ರಹಿಸಿ ಯಥಾಸ್ಥಾನಕ್ಕೆ ಯಥಾಕಾಲಕ್ಕೆ ತಲುಪಿಸಿ ಧನ್ಯರಾದರು.
ನಂಬಿದವರ ಪಾಲಿಗೆ ನವನೀತಮೃದುಹೃದಯರಾಗಿ ಸಮಸ್ತ ಸಮಾಜವನ್ನೇ ಕಾಯುವ ಶ್ರೀಸಂಸ್ಥಾನದವರ ಅನುಗ್ರಹವೊಂದಿರಲು ಯಾವುದೂ ಅಸಾಧ್ಯವಲ್ಲ ಎಂಬುದನ್ನು ಪುನಃ ಈ ಅಭಿಯಾನವು ತೋರಿಸಿಕೊಟ್ಟಿತು.