ಕೊಲಾಡ: ಹವ್ಯಕ ಮಹಾಮಂಡಲಾಂತರ್ಗತ ಭಾರತ ಮಂಡಲ – ಮುಂಬಯಿ ವಲಯದ ರಾಯಗಡ ಜಿಲ್ಲೆಯ ಕೊಲಾಡಿನಲ್ಲಿರುವ ಅಮೃತಧಾರಾ ಗೋಶಾಲೆಯ ಪರಿಸರದಲ್ಲಿ ಪರಮಪೂಜ್ಯ ಶ್ರೀಸಂಸ್ಥಾನದವರ ಆಶೀರ್ವಾದದಿಂದ ಪ್ರತಿ ವರ್ಷದಂತೆ ಈ ವರ್ಷವೂ ವನಮಹೋತ್ಸವವನ್ನು ನಿಜ ಜ್ಯೇಷ್ಠ ಕೃಷ್ಣ ಪಂಚಮಿಯಂದು (05-07-2026) ನಡೆಯಿತು. ಈ ಸಂದರ್ಭದಲ್ಲಿ ಮುಂಬೈ ವೆಲ್ಫೇರ್ ಟ್ರಸ್ಟಿನ ಅಧ್ಯಕ್ಷ ವಿಷ್ಣು ಭಾಗವತ, ಮುಂಬೈ ವಲಯದ ಅಧ್ಯಕ್ಷ ಗಣಪತಿ ಹೆಗಡೆ, ಕಾರ್ಯದರ್ಶಿ ಯು. ಟಿ. ಕೃಷ್ಣಮೂರ್ತಿ, ಮಾರಾಷ್ಟ್ರ ಪ್ರತಿಷ್ಠಾನದ ಅಧ್ಯಕ್ಷ ಕೃಷ್ಣ ಭಟ್, ಕಾರ್ಯದರ್ಶಿ ಜ್ಯೋತಿ ಅನಂತ ಭಟ್, ಖಜಾಂಚಿ ಈಶ್ವರಿ ಭಟ್, ಗೋಸೇವಾ ಗತಿವಿಧಿಯ ಕರ್ನಾಟಕ ಉತ್ತರ ಪ್ರಾಂತ ಸಂಯೋಜಕ ದತ್ತಾತ್ರೇಯ ಭಟ್ಟ ಉಪಸ್ಥಿತರಿದ್ದರು.


ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಲ್ಲೂ ಮುಂಬೈ ಮಹಾನಗರದಿಂದ ನೂರಕ್ಕೂ ಅಧಿಕ ಸಂಖ್ಯೆಯಲ್ಲಿ ಆಗಮಿಸಿದ್ದ ಗೋಭಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮುಂಬಯಿ – ಡೊಂಬಿವಲಿ ವಲಯಗಳ ಸಮಿತಿಯ ಹಲವಾರು ಸದಸ್ಯರು ಮತ್ತು ಮಹಾರಾಷ್ಟ್ರದ ಎಲ್ಲೆಡೆಯಿಂದ ಹಾಗೆಯೇ ಕೊಲಾಡ ಅರಣ್ಯ ವಿಭಾಗದ ಸನ್ಮೇಘ ಸಂಜಯ ಭಗತ ವನರಕ್ಷಕ, ಸುನೀತಾ ವಡಜೆ ವನರಕ್ಷಕ ಅಧಿಕಾರಿಗಳು, ಸತತವಾಗಿ ಸುರಿಯುತ್ತಿರುವ ಮಳೆಯಲ್ಲಿಯೂ ಅನೇಕ ಜಾತಿಯ ಸಸ್ಯಗಳನ್ನು ಅಮೃತಧಾರಾ ಗೋಶಾಲೆಯ ಪರಿಸರದಲ್ಲಿ ಮತ್ತು ಅದರ ಪಕ್ಕದಲ್ಲೇ ಇದ್ದ ವನದಲ್ಲಿ ನೆಡುವ ಮೂಲಕ ವನಮಹೋತ್ಸವವನ್ನು ಉತ್ಸಾಹದಿಂದ ಆಚರಿಸಿದರು.
ಅದರ ಅನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ವಿವಿಧ ರೀತಿಯಲ್ಲಿ ಗೋಸೇವೆಗೆ ಧನ ಸಹಾಯ ಮಾಡಿದ ದಾನಿಗಳನ್ನು ಸನ್ಮಾನಿಸಲಾಯಿತು. ಮಾರಾಷ್ಟ್ರ ಪ್ರತಿಷ್ಠಾನದ ಅಧ್ಯಕ್ಷ ಕೃಷ್ಣ ಭಟ್ಟ ಗುಡ್ಡೇಬಾಳ ಅವರು ತಮ್ಮ ಪ್ರಾಸ್ತಾವಿಕೆಯಲ್ಲಿ ಗೋಶಾಲೆ ನಿರ್ಮಾಣ ಮಾಡುವುದರ ಹಿಂದೆ ಇದ್ದ ಪ್ರೇರಣೆ, ಉದ್ದೇಶ ಹಾಗೆಯೇ ಭವಿಷ್ಯದಲ್ಲಿ ಮಾಡುವ ಕಾರ್ಯಗಳ ಬಗ್ಗೆ ಮಾಹಿತಿ ನೀಡುವ ಮೂಲಕ, ಯುವಪೀಳಿಗೆಯ ತರುಣರು ಮುಂದೆ ಬಂದು ಈ ಕೆಲಸವನ್ನು ಮುಂದುವರಿಸಬೇಕೆಂದು ಆಹ್ವಾನಿಸಿದರು. ಇದೇ ಸಂದರ್ಭದಲ್ಲಿ ಗೋಸೇವಾ ಗತಿವಿಧಿಯ ಕರ್ನಾಟಕ ಉತ್ತರ ಪ್ರಾಂತ ಸಂಯೋಜಕ ದತ್ತಾತ್ರೇಯ ಭಟ್ಟ ಅವರು ಗೋವಿನ ಮತ್ತು ಗವ್ಯೋತ್ಪನ್ನ ವಸ್ತುಗಳ ಮಹತ್ತ್ವದ ಕುರಿತು ಮಾತನಾಡಿದರು. ಸುಲಭವಾಗಿ ಪಂಚಗವ್ಯ ತಯಾರಿಸುವ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.