ಗಿರಿನಗರ: ಕಾರ್ಯ ಸಾಧನೆಯನ್ನು ವಿಧಿ ಯಾವ ರೂಪದಲ್ಲಾದರೂ ಮಾಡಿಯೇ ಮಾಡುತ್ತದೆ. ಬಲ ಸಜ್ಜನರ ರಕ್ಷಣೆಗೆ ಹೊರತು, ದುರುಪಯೋಗಕ್ಕಲ್ಲ ಎಂಬುದನ್ನು ಪ್ರತಿಯೊಬ್ಬರು ತಿಳಿಯಬೇಕು ಎಂದು ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಹೇಳಿದರು.
ಗಿರಿನಗರ ಶ್ರೀರಾಮಾಶ್ರಮದಲ್ಲಿ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸಂಕಲ್ಪದಲ್ಲಿ ನಡೆಯುತ್ತಿರುವ ಧಾರಾರಾಮಾಯಣ ಪ್ರವಚನ ಮಾಲಿಕೆಯ ಹದಿನೆಂಟನೇ ದಿನ ಆಶೀರ್ವಚನ ನೀಡಿದರು.
ಸಲ್ಲದ ಆಸೆ ಹುಟ್ಟಿಕೊಂಡಾಗ ಒಡಕು ನಿಶ್ವಿತ. ಆರಂಭಿಸಿದ ಕೆಲಸವನ್ನು ತುದಿ ಮುಟ್ಟಿಸುವ ಜವಾಬ್ದಾರಿ ಪ್ರತಿಯೊಬ್ಬರಿಗೂ ಇರುತ್ತದೆ. ಗೋವಿನ ಬಗ್ಗೆ ಸಲ್ಲದ ಆಸೆ ಪಟ್ಟರೂ, ಭವಿಷ್ಯದಲ್ಲಿ ಅದರ ಫಲ ಶುಭವಾಗುತ್ತದೆ. ಅತೀ ಸಿದ್ಧತೆ ಅಪಾಯಕ್ಕೆ ಕಾರಣವಾಗುತ್ತದೆ ಎಂದು ತಿಳಿಸಿದರು.
ವಸಿಷ್ಠರ ಆಶ್ರಮದಲ್ಲಿ ಕೌಶಿಕ ಕಾಮಧೇನುವಿಗಾಗಿ ಹೋರಾಟ ಮಾಡಿ ಸೋತು ಹಿಮಾಲಯದ ಕಡೆಗೆ ಹೋಗಿ ಶಿವನನ್ನು ಧ್ಯಾನಿಸಿ ಸಕಲ ಶಸ್ತ್ರಗಳನ್ನು ವರವಾಗಿ ಪಡೆಯುತ್ತಾನೆ. ಇದನ್ನೆಲ್ಲಾ ಪಡೆದುಕೊಂಡು ವಶಿಷ್ಠ ಮೇಲೆಯೇ ಪ್ರಯೋಗಕ್ಕೆ ಮುಂದಾಗಿ, ವಶಿಷ್ಠರ ಬ್ರಹ್ಮ ದಂಡದಲ್ಲಿ ಎಲ್ಲಾ ಅಸ್ತ್ರಗಳನ್ನು ವಿಲೀನವಾಯಿತು. ಕೌಶಿಕನಿಗೆ ಬ್ರಹ್ಮರ್ಷಿ ಆಗುವ ಬಯಕೆ ಉಂಟಾಗುತ್ತದೆ. ತ್ರಿಶಂಕು ಸ್ವರ್ಗ ನಿರ್ಮಾಣವಾಯಿತು. ಕೌಶಿಕನಿಗೆ ವಿವಿಧ ರೀತಿಯಲ್ಲಿ ತಪಸ್ಸು ಭಂಗವಾಗುತ್ತದೆ. ಕೊನೆಗೂ ಸಾಧನೆಯ ಫಲವಾಗಿ ವಶಿಷ್ಠರೇ ಕೌಶಿಕನಿಗೆ ಬ್ರಹ್ಮರ್ಷಿ ಎಂದು ಕರೆದು, ಇಬ್ಬರು ಆತ್ಮೀಯರಾದರು. ಲೋಕ ಸಂಚರಿಸಿದ ವಿಶ್ವಾಮಿತ್ರರು ಗಾಯತ್ರಿಯನ್ನು ಲೋಕಕ್ಕೆ ನೀಡುವಂತಾಯಿತು ಎಂದು ಶತಾನಂದರು ರಾಮನಿಗೆ ಕಥೆಯನ್ನು ಹೇಳಿದರು ಎಂಬ ಸಮಗ್ರ ಚಿತ್ರಣವನ್ನು ಪ್ರವಚನದಲ್ಲಿ ವಿವರಿಸಿದರು.
ಧರ್ಮಕರ್ಮ ಖಂಡದ ಶ್ರೀಸಂಯೋಜಕ ರಾಮಕೃಷ್ಣ ಕೂಟೇಲು ಪ್ರಸ್ತಾವನೆಗೈದರು. ವಿನಾಯಕ ಎನ್ ಭಟ್ ಕಾರ್ಯಕ್ರಮ ನಿರೂಪಿಸಿದರು.