ಕುಮಟಾ: ಜಗತ್ತಿನ ಏಕೈಕ ಗೋ ಬ್ಯಾಂಕ್ ಎನಿಸಿಕೊಂಡಿರುವ ದೇಸೀ ಗೋ ತಳಿಯ ಸಂರಕ್ಷಣೆ ಹಾಗೂ ಸಂವರ್ಧನೆಗೆ ತನ್ನದೇ ಸೇವೆ ಸಲ್ಲಿಸುತ್ತಿರುವ ತಾಲೂಕಿನ ಹೊಸಾಡದ ಅಮೃತಧಾರಾ ಗೋ ಶಾಲೆಯಲ್ಲಿ ಶ್ರೀ ಸಂಸ್ಥಾನದ ದಿವ್ಯ ಆಶೀರ್ವಾದದೊಂದಿಗೆ ನಡೆದ ಗೋ ಪ್ರೇಮಿಗಳ ವಾರ್ಷಿಕ ಗೋ ಸ್ನೇಹಕೂಟ ಹಾಗೂ ಬೆಳದಿಂಗಳೂಟದ ವಿಶೇಷ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿತು.
ಅಮೃತಧಾರಾ ಗೋಶಾಲೆಯ ಗೌರವಾಧ್ಯಕ್ಷರಾದ ಭಾರತೀ ಪಾಟಿಲ್ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಪವಿತ್ರ ಗೋಮೂತ್ರ ಅರ್ಕದಿಂದ ಮಾಡಲ್ಪಟ್ಟ ಗೋ-ನಿರ್ಮಲ (ಫಿನೈಲ್ ಹೌಸ್ ಕ್ಲೀನರ್) ಮತ್ತು ಪವಿತ್ರ ಸಗಣಿಯಿಂದ ಮಾಡಿದ ಗೋಮೇಧ ಬೆರಣಿಯನ್ನು ಲೋಕಾರ್ಪಣೆಮಾಡಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಹಾಜರಿದ್ದ ಯಲ್ಲಾಪುರದ ಸಂಕಲ್ಪ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ ಗೋವಿನ ಕುರಿತಾಗಿ ತುಡಿಯುವ ಜನರನ್ನು ಒಂದೆಡೆ ಸೇರಿಸುವ ಬಹುದೊಡ್ಡ ಕ್ರಾಂತಿ ಪ್ರಾರಂಭವಾದರೆ ಅದು ಹೊಸಾಡದಿಂದಲೇ ಆಗುವಂತೆ ಕಾಣುತ್ತದೆ ಎಂದರು. ಗೋ ಶಾಲೆ ಅದ್ಭುತ ಕಾರ್ಯಮಾಡುತ್ತಿದೆ. ಗೋವಿಗಾಗಿ ಜನರನ್ನು ಪ್ರೇರೇಪಿಸುವ ಬಹುದೊಡ್ಡ ಕ್ರಾಂತಿ ಪ್ರಾರಂಭವಾದರೆ ಅದು ಹೊಸಾಡದ ಗೋ ಶಾಲೆಯಿಂದ ದೇಶಿಯ ಗೋತಳಿಯ ರಕ್ಷಣೆ ಅತ್ಯಗತ್ಯವಾಗಿತ್ತು ಆ ಕೆಲಸ ಮಾಡುತ್ತಿರುವ ಅಮೃತಧಾರಾ ಗೋಬ್ಯಾಂಕ್‌ನ ಕಾರ್ಯ ಶ್ಲಾಘನೀಯವಾದುದು.ಮಠದ ಕಾರ್ಯಕ್ಕೆ ಏನೇ ಅಡೆತಡೆ ಬಂದರೂ ಶ್ರೀರಾಘವೇಶ್ವರ ಭಾರತೀ ಸ್ವಾಮಿಜೀಗಳ ಗೋಶಾಲೆಯ ನಿರ್ವಹಣೆಯ ಕಾರ್ಯ ಸಾಂಗವಾಗಿ ಸಾಗುತ್ತಿರುವದು ಸಂತೋಷಕರವಾದ ವಿಚಾರ. ಶ್ರೀಸ್ವಾಮೀಜಿಯವರ ಭಕ್ತರ ಸಂಘಟನೆಯ ಕಾರ್ಯ ಚಟುವಟಿಕೆಯನ್ನು ವರ್ಣಿಸಲು ಪದಗಳೆ ಇಲ್ಲ ಎಂದರು.
ಈ ಸಂದರ್ಭದಲ್ಲಿ ಮುಖ್ಯ ಆತಿಥ್ಯ ವಹಿಸಿ ಮಾತನಾಡಿದ ಚರ್ಕವರ್ತಿ ಸೂಲಿಬೆಲೆಯವರು, ಗೋಮಾತೆ ನಮ್ಮ ತಾಯಿಯಂತೆ ತಿಳಿಯ ಬೇಕು. ಭಾರತೀಯ ತಳಿಯನ್ನು ರಕ್ಷಿಸುವದು ನಮ್ಮೇಲ್ಲರ ಕರ್ತವ್ಯವಾಗಿದೆ. ನಮ್ಮ ಪೂರ್ವಜರು ಭಾರತೀಯ ಗೋತಳಿಯಿಂದಲೇ ಅನೇಕ ಪ್ರಯೋಜನ ತಿಳಿದಿದ್ದರು ಹೋಗಾಗಿಯೇ ಗೋವಿನ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು ಎಂದರು. ಗೋವನ್ನು ನಾವು ಸಾಕುವುದಲ್ಲ ಗೋವು ನಮ್ಮನ್ನು ಸಾಕುವಂತೆ ಆಗಬೇಕು ಎಂದವರು ಅಭಿಪ್ರಾಯ ವ್ಯಕ್ತಪಡಿಸಿದರು.
ಹೊಸಾಡದ ಗೋಶಾಲೆಗೆ ತೆರಳುವ ರಸ್ತೆಯ ಕಾಂಕ್ರಿಟೀಕರಣಕ್ಕೆ ಅನುದಾನ ಬಿಡುಗಡೆ ಮಾಡಿಸಿದ ಶಾಸಕ ದಿನಕರ ಶೆಟ್ಟಿ ಅವರು ಗೌರವ ಸ್ವೀಕರಿಸಿ ಮಾತನಾಡಿ ಗೋಶಾಲೆಯ ಜೊತೆಗೆ ಹಾಗೂ ಶ್ರೀಗಳ ಜೊತೆಗೆ ಇದ್ದು ಎಲ್ಲಾ ಕಾರ್ಯಗಳಿಗೆ ಸಂಪೂರ್ಣ ಸಹಕಾರ ನೀಡುವದಾಗಿ ತಿಳಿಸಿದರು.
ಎನ್.ಡಿ.ಆರ್ ಮುಖ್ಯಸ್ಥರಾಗಿರುವ ವಿಜ್ಞಾನಿ ಡಾ.ಕೆ.ಪಿ.ರಮೇಶ ಮಲೆನಾಡಿನ ಗಿಡ್ಡಕ್ಕೂ,ಎಮ್ಮೇ,ಜರ್ಸಿ ಜಾನುವಾರುಗಳಿಗೂ ಇರುವ ವ್ಯತ್ಯಾಸ ತಿಳಿಸಿದರು. ಹಾಲು ಕೊಡುವ ಪ್ರಾಣಿಗಳಲ್ಲಿ ಮಲೆನಾಡಿನ ಗಿಡ್ಡದ ಹಾಲು ಆರೋಗ್ಯಕ್ಕೆ ಎಷ್ಟು ಮಹತ್ವವಾಗಿದೆ. ಅನೇಕ ರೋಗಗಳಿಂದ ದೂರವಿರಲು ಈ ಗೋಶಾಲೆಯಲ್ಲಿರುವ ತಳಿ ಹೇಗೆ ಪ್ರಯೋಜನ ಎನ್ನುವದನ್ನು ವಿವರಿಸಿದರು. ಭಾರತೀಯ ಗೋತಳಿಯ ಗೋಮುತ್ರ,ಸಗಣಿಯಿಂದ ಹೇಗೆಲ್ಲ ಪ್ರಯೋಜನವಿದೆ,ಲಾಭದಾಯಕವಾಗಿಯು ಹೇಗೇ ಗೋತಳಿಯನ್ನ ರಕ್ಷಿಸಿ ಪ್ರಯೋಜನ ಪಡೆಯಬಹುದು ಎನ್ನುವದನ್ನು ತಿಳಿಸಿದರು.
ಗೋಶಾಲೆಯಲ್ಲಿ ಗೋ ಸೇವೆ ಸಲ್ಲಿಸಿದ ಕಾರ್ಯಕರ್ತರಿಗೆ, ದಾನಿಗಳಿಗೆ ಗೌರವಾರ್ಪಣೆ ಮಾಡಲಾಯಿತು. ಲಾಸಾ ಸೂಪರ್ ಜೆನಿರಿಕ್ಸ್ ಮುಂಬೈ ಇದರ ನಿರ್ದೇಶಕ ಎಸ್.ಜಿ.ಹೆಗಡೆಯವರ ಪರವಾಗಿ ಅವರ ತಂದೆ ತಾಯಿಯವರಿಗೆ ಹಾಗೂ ಹೈಕೋರ್ಟ ವಕೀಲರು ಹಾಗೂ ಗೋಪಾಲಕರಾದ ಡಾ. ವಿಷ್ಣು ಹೆಗಡೆ ಕಡ್ನೀರು, ಮತ್ತು ಗೋ ಶಾಲೆಗೆ ಅಪಾರ ಸಹಕಾರ ನೀಡಿದ ಆರ್.ಜಿ. ಭಟ್ಟ ಬಗ್ಗೋಣ ಇವರಿಗೆ ಗೌರವ ಸಮರ್ಪಣೆ ನಡೆಯಿತು.
ಮೂರೂರಿನ ಪ್ರಗತಿವಿದ್ಯಾಲಯ ಹಾಗೂ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಶ್ರೀ ಸುಧೀರ ಹೆಗಡೆ ಕಾನ್ಮೂಲೆ ಬಾನ್ಸುರಿ ವಾದನ ಹಾಗೂ ರೇಷ್ಮಾ ಭಟ್ಟರವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಗೋಶಾಲೆಯ ಅಧ್ಯಕ್ಷ ಮುರಲೀಧರ ಪ್ರಭು ಎಲ್ಲರನ್ನೂ ಸ್ವಾಗತಿಸಿದರು. ಕೋಶಾಧ್ಯಕ್ಷರಾದ ಸುಬ್ರಾಯ ಭಟ್ಟ ವರದಿ ವಾಚಿಸಿದರು. ಕಾರ್ಯದರ್ಶಿ ಎಂ.ಕೆ.ಹೆಗಡೆ ಸರ್ವರನ್ನೂ ವಂದಿಸಿದರು. ಸಂಘಟನಾ ಖಂಡದ ಶ್ರೀ ಸಂಯೋಜಕ ಮಂಜುನಾಥ ಭಟ್ಟ ಸುವರ್ಣಗದ್ದೆ, ಮಹಾ ಮಂಡಲದ ಅಧ್ಯಕ್ಷರಾದ ಆರ್.ಎಸ್. ಹೆಗಡೆ ಹರಿಗೆ, ಹೋ ಸಂಧ್ಯಾ ಸಮಿತಿಯ ಅಧ್ಯಕ್ಷರಾದ ಜಿ.ಆರ್ ಉಗ್ರು ಅರುಣ ಹೆಗಡೆ ಹಾಗೂ ಗಣೇಶ ಜೋಶಿ ಕಾರ್ಯಕ್ರಮ ನಿರೂಪಿಸಿದರು.
ಸುಮಾರು ೪.೫೦೦ ಜನರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಬೆಳದಿಂಗಳೂಟದ ವ್ಯವಸ್ಥೆ ಮಾಡಲಾಗಿತ್ತು. ಬೆಳದಿಂಗಳ ಊಟದ ಖರ್ಚನ್ನು ಪ್ರಮುಖರು ವಹಿಸಿಕೊಳ್ಳುವ ಮೂಲಕ ಗೋ ಶಾಲೆಯ ಹಣವನ್ನು ಊಟಕ್ಕಾಗಿ ವ್ಯಯಿಸದೆ ಅದನ್ನು ಗೋವಿಗೇ ನೀಡುವ ಅಪೂರ್ವ ಕಲ್ಪನೆ ನೀಡುವ ಮೂಲಕ ಗೋ ಸಂಧ್ಯಾ ಯಶಸ್ವಿಯಾಗಿ ಸಂಪನ್ನವಾಯಿತು.