ಹೊಂದಾಣಿಕೆ ಮಾಡದೆ ಜನರ ಒಳಿತಿಗೆ ಕೆಲಸ ಮಾಡಬೇಕು.!

ಸುದ್ದಿ
ಬೆಂಗಳೂರು: ಹೊಂದಾಣಿಕೆ ರಾಜಕೀಯ ಮಾಡದೇ, ಯಾವ ಕೆಲಸವನ್ನು ಮಾಡಿದರೆ ನಾಡಿಗೆ ಒಳಿತಾಗುತ್ತದೆಯೋ ಅಂತಹ ಕೆಲಸಗಳನ್ನು ನಾಯಕರಾದವರು ಮಾಡಬೇಕು. ನಮಗೆ ಕೊಟ್ಟ ಜವಾಬ್ದಾರಿಯಲ್ಲಿ ಅತ್ಯುತ್ತಮ ಕೆಲಸವನ್ನು ನಿರ್ವಹಿಸಿ ಜನಸೇವೆ ಮಾಡಬೇಕು ಎಂದು ಉಪಮುಖ್ಯಮಂತ್ರಿಗಳಾದ ಡಾ. ಅಶ್ವತ್ಥನಾರಾಯಣ ಹೇಳಿದರು.
ಮಲ್ಲೇಶ್ವರದ ಹವ್ಯಕ ಸಭಾಭವನದಲ್ಲಿ ಶ್ರೀಅಖಿಲ ಹವ್ಯಕ ಮಹಾಸಭೆ ಹಾಗೂ ಡಾ. ಅಶ್ವತ್ಥನಾರಾಯಣ್ ಅಭಿಮಾನಿ  ಬಳಗದ ಸನ್ಮಾನವನ್ನು ಹಾಗೂ ಹವ್ಯಕ ಮಹಾಸಭೆಯ ಗೌರವವನ್ನು ಸ್ವೀಕರಿಸಿ ಮಾತನಾಡಿದ ಘನ ಸರ್ಕಾರದ ಉಪಮುಖ್ಯಮಂತ್ರಿಗಳಾದ ಡಾ. ಅಶ್ವತ್ಥನಾರಾಯಣ್ ಅವರು, ನಾವು ನೀಡುತ್ತಿರುವ ಶಿಕ್ಷಣದ ಕಾರಣದಿಂದಾಗಿ ಸಮಾಜದಲ್ಲಿ ಹಲವಾರು ಲೋಪದೋಷಗಳನ್ನು ಕಾಣುತ್ತಿದ್ದೇವೆ. ಇದನ್ನು ಸರಿ ಪಡಿಸಲು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗುತ್ತಿದೆ. ದೈಹಿಕ ಚಟುವಟಿಕೆಗಳು ಇಲ್ಲದಿದ್ದರೆ ಮಾನಸಿಕವಾಗಿ ಹಾಗೂ ಶೈಕ್ಷಣಿಕವಾಗಿ ಬೆಳವಣಿಗೆ ಹೊಂದಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.
ಜನರ ಅಭಿಮಾನಕ್ಕೆ ಕೃತಜ್ಞತೆ ಅರ್ಪಿಸಿದ ಅವರು,ನೀವು ನನ್ನ ಮೇಲೆ ಇಟ್ಟಿರುವ ಪ್ರೀತಿ, ವಿಶ್ವಾಸ, ಗೌರವ ಹಾಗೂ ನಂಬಿಕೆಗೆ ಭಂಗ ಬರದಂತೆ ನಾನು ಕಾರ್ಯನಿರ್ವಹಿಸುತ್ತೇನೆ ಎಂಬ ಭರವಸೆ ನೀಡಿದರು.
ಮೈಸೂರು ಪೇಟ, ಶಾಲು, ಹಾರ ಹಾಗೂ ಮಹಾಸಭೆಯ ಸ್ಮರಣಿಕೆಯನ್ನು ನೀಡಿ  ಉಪಮುಖ್ಯಮಂತ್ರಿಗಳಾದ ಡಾ. ಅಶ್ವತ್ಥನಾರಾಯಣ ಅವರನ್ನು ಸನ್ಮಾನಿಸಲಾಯಿತು.
ಹವ್ಯಕ ಮಹಾಸಭೆಯ ಅಧ್ಯಕ್ಷರಾದ ಡಾ  ಗಿರಿಧರ್ ಕಜೆ ಮಾತನಾಡಿ, ‘ಪಂಚಮಮ್ ಕಾರ್ಯ ಸಿದ್ಧಿಃ’ ಎಂಬ ಮಾತಿದೆ. ಅಶ್ವತ್ಥನಾರಾಯಣ ಅವರು ಕಾರ್ಯಸಿದ್ಧಿ ಪ್ರವೀಣರಾದ್ದರಿಂದ ಅವರಿಗೆ ಐದು ಪ್ರಮುಖ ಖಾತೆಗಳ ನಿರ್ವಹಣೆಯನ್ನು ನೀಡಲಾಗಿದೆ. ಇದು ಅವರ ಕಾರ್ಯಕ್ಷಮತೆಗೆ ಸಾಕ್ಷಿ. ಹವ್ಯಕ ಮಹಾಸಭೆಯ ಹಿತೈಷಿಗಳಾದ ಅವರಿಗೆ ಸಮಾಜದ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಿದರು.
ಇಂದಿನ ದಿನಮಾನದಲ್ಲಿ ಜನರಿಗೆ ಉಚಿತವಾಗಿ ಸೇವೆಗಳನ್ನು ನೀಡಿ; ಚುನಾವಣೆ ಗೆಲ್ಲುವ ಕಾರ್ಯ ಮಾಡುವುದನ್ನು ನೋಡುತ್ತೇವೆ. ಆದರೆ ಅಶ್ವತ್ಥನಾರಾಯಣ್ ಅವರು ನಿಜವಾದ ಜನಹಿತಕಾರ್ಯಗಳನ್ನು ಮಾಡುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಅಶ್ವತ್ಥನಾರಾಯಣ್ ಅವರ ತಂದೆ ಶಿಕ್ಷಕರಾಗಿದ್ದರು, ಇದೀಗ ಅಶ್ವತ್ಥನಾರಾಯಣ್ ಅವರು ಉನ್ನತ ಶಿಕ್ಷಣ ಸಚಿವರಾಗಿದ್ದಾರೆ ಎಂಬುದು ಸಂತಸದ ವಿಚಾರ. ಪ್ರಜ್ಞಾವಂತರ ಮತಕ್ಷೇತ್ರವಾದ ಮಲ್ಲೇಶ್ವರದಲ್ಲಿ ಮೂರು ಬಾರಿ ಶಾಸಕರಾಗಿ, ಕಿರಿ ವಯಸ್ಸಿನಲ್ಲಿ ಘನ ಸರ್ಕಾರದ ಉಪಮುಖ್ಯಮಂತ್ರಿಯಾಗಿರುವುದು ಅವರ ಕಾರ್ಯಕ್ಷಮತೆಗೆ ಸಾಕ್ಷಿ. ‘ಇನ್ನೋವೇಟಿವ್’ ಜನಹಿತ ಕೆಲಸಗಳನ್ನು ಮಾಡುವುದಕ್ಕೆ ಶ್ರೀಯುತರು ಹೆಸರುವಾಸಿ. ಅವರು ನಮ್ಮ ಶಾಸಕರು ಎಂದು ಕೊಳ್ಳಲು ನಮಗೆ ಹೆಮ್ಮೆಯಾಗುತ್ತದೆ ಎಂದು ಉದ್ಯಮಿ ಹಾಗೂ ಮಹಾಸಭೆಯ ನಿರ್ದೇಶಕರಾದ ಎನ್ ಆರ್ ಹೆಗಡೆ ರಾಘೋಣ ಅಭಿನಂದನಾ ನುಡಿಗಳನ್ನಾಡಿದರು.
ಕಾಡುಮಲ್ಲೇಶ್ವರ ವಾರ್ಡ್ ಬಿಬಿಎಂಪಿ ಸದಸ್ಯರಾದ ಮಂಜುನಾಥ ರಾಜು ಮಾತನಾಡಿ, ಜನರಿಗೆ ಕೇವಲ ಮೂಲಭೂತ ಸೌಕರ್ಯ ಒದಗಿಸುವುದಲ್ಲದೇ ಸಂಘ ಸಂಸ್ಥೆಗಳಿಗೆ, ಸಾಂಸ್ಕೃತಿಕ ಕಾರ್ಯಗಳಿಗೆ ಅಶ್ವತ್ಥನಾರಾಯಣ ಅವರು ನೀಡುತ್ತಿರುವ ಸಹಕಾರ ಸ್ಮರಣೀಯ. ಇವರು ಇನ್ನು ಹೆಚ್ಚಿನ ಜವಾಬ್ದಾರಿಗಳನ್ನು ನಿರ್ವಹಿಸಿ; ನಾಡಿನ ಜನತೆಗೆ ಇನ್ನಷ್ಟು ಕೆಲಸವನ್ನು ಮಾಡುವಂತಾಗಲಿ ಎಂದು ಹಾರೈಸಿದರು.
ಹವ್ಯಕ ಮಹಾಸಭೆಯ ಪ್ರಧಾನ ಕಾರ್ಯದರ್ಶಿ ಸಿಎ ವೇಣುವಿಘ್ನೇಶ್ ಸ್ವಾಗತ ಕೋರಿದರು. ಮಹಾಸಭೆಯ ಉಪಾಧ್ಯಕ್ಷರಾದ ಶ್ರೀಧರ್ ಭಟ್ ಕೆಕ್ಕಾರು,ಕೋಶಾಧಿಕಾರಿಗಳಾದ ಕೃಷ್ಣಮೂರ್ತಿ ಭಟ್ ಯಲಹಂಕ, ಕಾರ್ಯದರ್ಶಿ ಪ್ರಶಾಂತ್ ಭಟ್ ಮಳವಲ್ಲಿ, ಸಾಲೆಕೊಪ್ಪ ಶ್ರೀಧರ್ ಭಟ್,  ಡಾ. ಅಶ್ವತ್ಥನಾರಾಯಣ್ ಅಭಿಮಾನಿ  ಬಳಗದ ರಾಮಣ್ಣ, ಯುವರಾಜ್ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *