ಶ್ರೀರಾಮಾಶ್ರಮದಲ್ಲಿ ಬೆಣ್ಣೆ ಸವಿದರಾ ಕೃಷ್ಣ – ರಾಧೆಯರು ?

ಸುದ್ದಿ

ಬೆಂಗಳೂರು: ಗಿರಿನಗರದ ಶ್ರೀರಾಮಾಶ್ರಮದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ವೈವಿಧ್ಯಮಯವಾದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

 

ಶ್ರೀರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಉಪಸ್ಥಿತಿಯಲ್ಲಿ ಜರುಗಿದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮಗಳಲ್ಲಿ ಬೆಳಗ್ಗೆ ಕೃಷ್ಣ-ರಾಧೆ ವೇಷಭೂಷಣ ತೊಟ್ಟು ಬಂದ ಪುಟಾಣಿಗಳಿಗೆ ಕೃಷ್ಣನ ಕುರಿತಾದ ರಸಪ್ರಶ್ನೆಗಳನ್ನು ಕೇಳಲಾಯಿತು. ಆ ಬಳಿಕ ಯಶೋಧೆ ಮಾತೆಯರು ಕೃಷ್ಣನನ್ನು ಮಡಿಲಲ್ಲಿ ಕೂರಿಸಿಕೊಂಡು ಮೊಸರನ್ನು ಕಡೆದು ಬೆಣ್ಣೆ ತೆಗೆದ ಸಂದರ್ಭವು ಸಂತಸವನ್ನು ಹೆಚ್ಚಿಸಿತು. ಈ ಬೆಣ್ಣೆಯನ್ನು ಕೃಷ್ಣ-ರಾಧೆ ವೇಷ ತೊಟ್ಟ ಮಕ್ಕಳಿಗೆ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಪ್ರಸಾದವಾಗಿ ಹಂಚಿದರು.

 

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪುಷ್ಕರ ತಂಡದ ಪುಟಾಣಿಗಳು ವಿಶಿಷ್ಟ ತಾಳಗಳ ವಿನ್ಯಾಸ ಹಾಗೂ ತಬಲಾಗಳ ವಾದ್ಯ ಜತೆಗೆ ಕೊಳಲು, ಹಾರ್ಮೋನಿಯಂ ಮೂಲಕ ಶ್ರೀಕೃಷ್ಣ, ರಾಮ ಕೀರ್ತನೆಗಳನ್ನು ಪ್ರಸ್ತುತಪಡಿಸಿದರು.

 

ಹಗ್ಗಜಗ್ಗಾಟ ಪೈಪೋಟಿ: ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕವಾಗಿ ಆಯೋಜಿಸಿದ್ದ ಹಗ್ಗಜಗ್ಗಾಟ ಸ್ಪರ್ಧೆಯ ಸಮಬಲದ ಪೈಪೋಟಿಯು ನೆರೆದಿದ್ದವರಲ್ಲಿ ಕುತೂಹಲ ಹೆಚ್ಚು ಮಾಡಿತ್ತು. ಮಕ್ಕಳಿಗೆ ಜಿಗಿದು ಹಿಡಿಯುವ ಬಾಳೆಹಣ್ಣಿನ ಗೊನೆ ಸ್ಪರ್ಧೆ, ಕಣ್ಣಿಗೆ ಬಟ್ಟೆ ಕಟ್ಟಿ ಮಡಿಕೆ ಒಡೆಯುವ ಸ್ಪರ್ಧೆಯು ಆಕರ್ಷಕವಾಗಿತ್ತು.

 

ಕೃಷ್ಣ ಜನ್ಮೋತ್ಸವ: ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಅವರಿಂದ ನಡೆದ ವಿಶೇಷ ಶ್ರೀಕರಾರ್ಚಿತ ಪೂಜೆಯ ಬಳಿಕ ನಡುರಾತ್ರಿ ಶ್ರೀಕೃಷ್ಣನ ಜನ್ಮ ಮೂಹೂರ್ತದಲ್ಲಿ ಬಾಲಕೃಷ್ಣನ ಮೂರ್ತಿಯನ್ನು ತೊಟ್ಟಿಲಲ್ಲಿ ಮಲಗಿಸಿ ತೂಗುವ ವಿಶೇಷ ಕಾರ್ಯಕ್ರಮವನ್ನು ಸೇರಿದ್ದ ಭಕ್ತರು ಸ್ವತಃ ತೊಟ್ಟಿಲನ್ನು ತೂಗಿ ಈ ಕ್ಷಣವನ್ನು ಕಣ್ತುಂಬಿಕೊಂಡರು.

Author Details


Srimukha

Leave a Reply

Your email address will not be published. Required fields are marked *