ಶ್ರೀಮಠದ ಸಮಗ್ರ ರೂಪ ಈ ಜಾಲತಾಣ : ಶ್ರೀಸಂಸ್ಥಾನ

ಮಠ

ಗಿರಿನಗರ: ದೇವರನ್ನು ತೋರಿಸುವುದು ಮಠ, ಶ್ರೀಮಠದ ಸಮಗ್ರ ರೂಪವನ್ನು ತೋರಿಸುವಲ್ಲಿ srisamsthana.org ಜಾಲತಾಣವು ಸಹಕಾರಿಯಾಗಲಿದೆ. ಮಠವು ಸಮಾಜಕ್ಕೆ ಬೆಳಕನ್ನು ಕೊಡಬೇಕು, ಮಠದ ಮೇಲೆ ಬೆಳಕನ್ನು ಚೆಲ್ಲಬೇಕು ಈ ಜಾಲತಾಣ. ಶ್ರೀಮಠವು ಎಲ್ಲರದ್ದೂ, ಜಗತ್ತಿನಲ್ಲಿರುವ ಎಲ್ಲರಿಗೂ ಮಠವು ಲಭ್ಯವಾಗಬೇಕು. ಮಠವು ನಮ್ಮದು ಹೌದು ಆದರೆ ನಮ್ಮದು ಮಾತ್ರವಲ್ಲ ಎಲ್ಲರದ್ದು ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರು ಹೇಳಿದರು.
ಗಿರಿನಗರದ ಶ್ರೀರಾಮಾಶ್ರಮದ ಪುನರ್ವಸುಭವನದಲ್ಲಿ ಭಾನುವಾರ ನಡೆದ srisamsthana.org ಜಾಲತಾಣ ಲೋಕಾರ್ಪಣೆಯ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಆದಿಶಂಕರರು ಮಠವೆಂಬ ದೀಪವನ್ನು ಬೆಳಗಿದ ಜಾಗವಾದ ಗೋಕರ್ಣದ ಅಶೋಕೆಯಲ್ಲಿರುವ ಮಲ್ಲಿಕಾರ್ಜುನ ದೇವಾಲಯದ ಪ್ರತಿಬಿಂಬವನ್ನು ಇಟ್ಟು ದೀಪ ಬೆಳಗಲಾಗಿದೆ ಈ ಜಾಲತಾಣದಿಂದ ಶ್ರೀಮಠವನ್ನು ಜಗತ್ತಿಗೆ ತೋರುವ ಕೆಲಸವನ್ನು ಮಾಡಲಾಗುತ್ತಿದೆ. ಆಧುನಿಕ ಜಗತ್ತಿನ ತಂತ್ರಜ್ಞಾನದಲ್ಲಿ ಅನುಕೂಲಗಳು ತುಂಬ ಇದೆ. ಆದರೆ ವಿವೇಚನಾರಹಿತರಾಗಿ ಬಳಸದೆ ತಂತ್ರಜ್ಞಾನವನ್ನು ನಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಬೇಕು. ಹಲವು ವಿದ್ಯಾರ್ಥಿಗಳಿಗೆ ಕಲಿಯಲು ಆಸಕ್ತಿ ಇದ್ದರು ಅನುಕೂಲ ಆಗುವುದಿಲ್ಲ. ಆದರೆ ಈ ತಂತ್ರಜ್ಞಾನದಿಂದ ಅಪರೂಪದ ವಿದ್ಯೆಗಳನ್ನು ಕಲಿಸಲು, ಕಲಿಯಲು ಸಾಧ್ಯವಾಗಿದೆ ಎಂದರು.
ಲೋಕಾರ್ಪಣೆ ತಾಣ ಲೋಕಾರ್ಪಣೆ ಮಾಡಿದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ(ವಿಟಿಯು) ನಿವೃತ್ತ ಕುಲಪತಿಗಳು ಹಾಗೂ ಎನ್‌ಐಟಿಕೆ ಸುರತ್ಕಲ್‌ನ ಅಧ್ಯಕ್ಷರಾದ ಪ್ರೊ.ಬಲವೀರ ರೆಡ್ಡಿ ಮಾತನಾಡಿ ಶ್ರೀ ಮಠದ ಮಾಹಿತಿ, ಸಂದೇಶವನ್ನು ವಿಶ್ವದೆಲ್ಲೆಡೆ ಪಸರಿಸುವಲ್ಲಿ ಈ ಜಾಲತಾಣದ ಕಾರ್ಯ ಶ್ಲಾಘನೀಯ. ಕೇಂದ್ರ ಸರ್ಕಾರವು ತಂದಿರುವ ನೂತನ ಶಿಕ್ಷಣ ನೀತಿ- ೨೦೧೯ ಬಹಳ ಉತ್ತಮವಾಗಿದೆ. ಇನ್ನು ೧೨ ವರ್ಷಗಳಲ್ಲಿ ಅಫಿಲಿಯೇಶನ್ ವಿಶ್ವವಿದ್ಯಾನಿಲಯಗಳು ಮುಚ್ಚಲಿವೆ. ವಿಶ್ವವಿದ್ಯಾಲಯಗಳಲ್ಲಿ ಗುಣಮಟ್ಟದ ಶಿಕ್ಷಣ ಹಾಗೂ ಸಂಶೋಧನೆ ಬಹಳ ಮುಖ್ಯ. ಸಹಕಾರಿಯಾಗಲಿದೆ. ವಿಶ್ವವಿದ್ಯಾಲಯ ಧನ ಆಯೋಗ(ಯುಜಿಸಿ)ವು ವಿದ್ಯಾರ್ಥಿವೇತನ, ಸಹಾಯಧನಕ್ಕೆ ಮಾತ್ರ ಇದೆ. ಶಾಸನತ್ವದ ಅಧಿಕಾರವಿಲ್ಲ. ವಿಷ್ಣುಗುಪ್ತ ವಿಶ್ವವಿದ್ಯಾಪೀಠ ವಿಶಿಷ್ಟ ವಿಶ್ವವಿದ್ಯಾಲಯವಾಗಿದ್ದು ಇದು ಗೋಕರ್ಣದಲ್ಲಿ ಮಾತ್ರವಲ್ಲದೆ ದೇಶದೆಲ್ಲೆಡೆ ಇದರ ಶಾಖೆ ಹೊಂದುವಂತಾಗಲಿ. ತಂತ್ರಜ್ಞಾನ ಆಧರಿತ ಶಿಕ್ಷಣದಿಂದ ನಮ್ಮ ಸಂಸ್ಕೃತಿಯ ವಿದ್ಯೆಗಳನ್ನು ಪಸರಿಸಲು ಸಾಧ್ಯವಿದೆ ಎಂದು ಹೇಳಿದರು.
ಬಸವನಗುಡಿ ಶಾಸಕ ಎಲ್.ಎ.ರವಿಸುಬ್ರಹ್ಮಣ್ಯ ಮಾತನಾಡಿ ಭಾರತೀಯ ಗೋವುಗಳ ಸಂರಕ್ಷಣೆಯಲ್ಲಿ ತೊಡಗಿರುವ ಮಠವು ಈಗ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಆಧುನಿಕ ವಿದ್ಯೆಗಳನ್ನು ಒಳಗೊಂಡ ೬೪ ಪ್ರಾಚೀನ ವಿದ್ಯೆಗಳ ಕಲಿಯುಕೆಯ ಜತೆಗೆ ಜಾಲತಾಣ ತಂತ್ರಜ್ಞಾನದ ಮೂಲಕ ಜಗತ್ತಿಗೆ ತನ್ನನ್ನು ತೆರೆದುಕೊಳ್ಳುತ್ತಿದೆ ಎಂಬುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಚಲನಚಿತ್ರ ನಟ ಅಜಯ್ ರಾವ್ ಮಾತನಾಡಿ ನಮ್ಮ ಸಂಸ್ಕ್ರತಿ, ವಿಚಾರಗಳನ್ನು ತಂತ್ರಜ್ಞಾನದ ಮೂಲಕ ಎಲ್ಲೆಡೆ ತಿಳಿಸಲು ಸಾಧ್ಯವಾಗಿದೆ. ನಾವು ಹಿಂದೂಗಳು ಎಂದು ಹೇಳಲು ಭಯಪಡಬೇಕಾಗಿಲ್ಲ. ಸಿನಿಮಾಗಳಲ್ಲಿಯೂ ಹಿಂದೂ ದೇವರುಗಳನ್ನು ಹಾಸ್ಯರೂಪದಲ್ಲಿ ತೋರಿಸದೆ ಗೌರವದ ಭಾವನೆಯಲ್ಲಿ ಬಿಂಬಿಸಬೇಕು ಎಂಬುದು ನನ್ನ ಅಭಿಪ್ರಾಯ. ಜತೆಗೆ ನನ್ನ ಸಿನಿಮಾಗಳಲ್ಲಿ ಹಿಂದೂ ವಿಚಾರಧಾರೆಗಳನ್ನು ತೋರಿಸುವುದಕ್ಕೆ ಆದ್ಯತೆ ನೀಡುತ್ತೇನೆ. ಶ್ರೀಮಠದ ಎಲ್ಲ ಕಾರ್ಯಕ್ರಮಗಳಿಗೆ ನನ್ನ ಸಹಕಾರವಿದೆ ಎಂದು ತಿಳಿಸಿದರು.
ಅಖಿಲ ಹವ್ಯಕ ಮಹಾಸಭಾ ಅಧ್ಯಕ್ಷರಾದ ಡಾ.ಗಿರಿಧರ ಕಜೆ ಮಾತನಾಡಿ ಜಗತ್ತು ಇಂದು ಶ್ರೀಮಠದ ಕಾರ್ಯ ಯೋಜನೆಗಳನ್ನು ಕಣ್ತೆರೆದು ನೋಡುವ ದಿನವಾಗಿದೆ. ಶ್ರೀಮಠವು ಎರಡು ದಶಕಗಳಲ್ಲಿ ಮಾಡಿದ ಹಲವು ಕಾರ್ಯಚಟುವಟಿಕೆಗಳನ್ನು ಜಗತ್ತಿಗೆ ತಲುಪಿಸುವ ಉದ್ದೇಶದಿಂದ ಈ ಜಾಲತಾಣವನ್ನು ಲೋಕಾರ್ಪಣೆಗೊಳಿಸಲಾಗಿದೆ. ವಿಷ್ಣುಗುಪ್ತ ವಿಶ್ವವಿದ್ಯಾಪೀಠವು ಕನಸಲ್ಲ ಅದು ಸಂಕಲ್ಪವಾಗಿದೆ. ಸಂಕಲ್ಪ ಎನ್ನುವುದು ಹಗಲಿನಲ್ಲಿ ಆಗುವಂತದ್ದು ಅಂದರೆ ಬೆಳಕು ಇರುವ ಸಮಯ ಅದಕ್ಕೆ ಹೆಚ್ಚಿನ ಮಹತ್ವವಿದೆ. ಸಾವಿರಾರು ತಲೆಮಾರಿಗೆ ಒಮ್ಮೆ ಬರುವಂತಹ ಒಂದು ಪೀಠ ಅಂದರೆ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಎಂದು ಹೇಳಿದರು.
ಕನ್ನಡ ಕೋಗಿಲೆ ಸ್ಪರ್ಧಾ ವಿಜೇತೆ ಅರುಂಧತಿ ವಸಿಷ್ಠ ಹಾಗೂ ಮನೋಜ್ ವಸಿಷ್ಠ ಗಾಯನ ಕಾರ್ಯಕ್ರಮ ನಡೆಸಿದರು. ಗುರುಪ್ರಸಾದ್ ಎಂಬವರು ಸಂಗ್ರಹಿಸಿದ ಹಲವು ಪುಸ್ತಕಗಳನ್ನು ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕೆ ಸಮರ್ಪಿಸಿದರು. ಕಾರ್ಯಕ್ರಮದಲ್ಲಿ ನಿರ್ಮಾಣ ಖಂಡದ ಶ್ರೀಸಂಯೋಜಕ ಜಗದೀಶ ಶರ್ಮಾ, ಜಾಲತಾಣ ವಿಭಾಗದ ಶ್ರೀಸಂಯೋಜಕ ಮಹೇಶ್ ಕೋರಿಕ್ಕಾರ್ ಪ್ರಸ್ತಾವನೆ ಮಾಡಿದರು. ಮೋಹನ್ ಭಾಸ್ಕರ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.

ಶ್ರೀಮಠದ ಯೋಜನೆಗೆ ಬೆಂಬಲವಿದೆ: ಡಿಸಿಎಂ ಅಶ್ವತ್ಥನಾರಾಯಣ
ಶ್ರೀರಾಘವೇಶ್ವರ ಸ್ವಾಮೀಜಿ ಅವರ ಭಾರತೀಯ ಗೋ ತಳಿಯ ಸಂರಕ್ಷಣೆ ಯೋಜನೆ ಸೇರಿದಂತೆ ಶ್ರೀಮಠದ ಹಲವು ಕಾರ್ಯಕ್ರಮಗಳಲ್ಲಿ ಈ ಹಿಂದೆ ಭಾಗವಹಿಸಿದ್ದೆ. ಈಗ ಮತ್ತೊಂದು ಐತಿಹಾಸಿಕ ಮಹತ್ಕಾರ್ಯವಾದ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ನಿರ್ಮಾಣವು ಭಾರತೀಯರಿಗೆ ಸಂದ ಗೌರವ. ಇದಕ್ಕೆ ಎಲ್ಲ ರೀತಿಯ ಸಹಕಾರ, ಬೆಂಬಲ ನೀಡುತ್ತೇವೆ. ಅನ್ಯ ಕಾರ್ಯಕ್ರಮದ ನಿಮಿತ್ತ ಜಾಲತಾಣ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಆಗಮಿಸಲು ಆಗುತ್ತಿಲ್ಲ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಧ್ವನಿ ಸಂದೇಶ ನೀಡಿದರು.

Author Details


Srimukha

Leave a Reply

Your email address will not be published. Required fields are marked *