ಶಿಷ್ಯ ಹಿತಮ್ – ಸುವರ್ಣ ಪಾದುಕೆಯ ಸ್ವರ್ಣಿಮಯಾತ್ರೆ

ಮಠ

 

ಶ್ರೀರಾಮಚಂದ್ರಾಪುರ ಮಠದ ಶಿಷ್ಯತ್ವವನ್ನು ಅಂಗೀಕರಿಸಿದ ಪ್ರತಿಯೊಬ್ಬ ಭಕ್ತನ ಹಿತವನ್ನು ಬಯಸಿ ಅವರ ಹೆಸರು, ನಕ್ಷತ್ರ,.ರಾಶಿಯನ್ನು ಹೇಳಿ, ಸಂಕಲ್ಪ ಮಾಡಿ ಭಗವಂತನಲ್ಲಿ ಸಂಪ್ರಾರ್ಥನೆ ಮಾಡಿ ವಿಹಿತವಾದ ಒಂದು ಉತ್ತಮ ಕರ್ಮವನ್ನು ಮಾಡುವುದು’ ಶಿಷ್ಯ ಹಿತಮ್’ ನ ಉದ್ದೇಶ. ಇದರ ಅಂಗವಾಗಿ ಶ್ರೀಗುರುಪೀಠದ ಆಶೀರ್ವಾದವನ್ನು ಪಡೆದುಕೊಂಡು ಸುವರ್ಣ ಪಾದುಕೆಯು ಶಿಷ್ಯರ ಮನೆ ಮನೆಗಳಿಗೆ ಆಗಮಿಸಲಿದೆ.

‘ ಶ್ರೀಗುರುಗಳು ಶಿಷ್ಯರಿಗೆ ತಾವಾಗಿಯೇ ತಿಳಿದು ಕೊಟ್ಟ ಅನುಗ್ರಹಕ್ಕೆ ತುಂಬಾ ಫಲವಿದೆಯಂತೆ. ಅದೇ ರೀತಿಯಲ್ಲಿ ನಾವು ಕರೆಯದೆ ಗುರುಗಳು ತಾವಾಗಿಯೇ ನಮ್ಮ ಮನೆಗಳಿಗೆ ಬಂದರೆ ಅದುವೇ ಶಿಷ್ಯರ ಪಾಲಿಗೆ ಅತ್ಯಂತ ಸೌಭಾಗ್ಯ. ಅದರಿಂದ ಅನೇಕ ಅದ್ಭುತ ಫಲಗಳು ದೊರಕುತ್ತವೆ ಎಂಬ ನಂಬಿಕೆ, ಶಾಸ್ತ್ರಗಳಲ್ಲಿ ಈ ವಿಚಾರಗಳು ಉಲ್ಲೇಖವಾಗಿವೆ.

ಶ್ರೀಗುರುಪಾದುಕೆಗಳ ಮಹಿಮೆ ಅಪಾರ. ದೌರ್ಭಾಗ್ಯ ಬೆಂಕಿಯಾಗಿ ಬದುಕನ್ನು ಸುಡುತ್ತಿರುವಾಗ ಸೌಭಾಗ್ಯದ ಮಳೆ ಸುರಿಸಿ ಆ ವಿಪತ್ತಿನಿಂದ ಪಾರು ಮಾಡುವ ಮಹತ್ತು ಗುರುಪಾದುಕೆಗಳಿಗಿವೆ. ಬಡವನೊಬ್ಬ ಅದಕ್ಕೆ ಶಿರಬಾಗಿದರೆ ಅವನನ್ನು ಶ್ರೀಮಂತನನ್ನಾಗಿಯೂ, ಮೂಕನೊಬ್ಬ ನಮಸ್ಕರಿಸಿದರೆ ಅವನನ್ನು ಮಾತಿಗೇ ಪ್ರಭುವಾದ ಬೃಹಸ್ಪತಿಯನ್ನಾಗಿಸುವ ಚೈತನ್ಯವಿರುವ ಶ್ರೀಗುರುಪಾದುಕೆಗಳ ಮಹತ್ವ ಸಾಮಾನ್ಯರ ವರ್ಣನೆಗೆ ಮೀರಿ ನಿಂತಿದೆ.

ಜೀವಿಯನ್ನು ಕಾಡುವ ಅರಿಷಡ್ವರ್ಗಗಳೆಂಬ ವಿಷ ಸರ್ಪಗಳ ಹಿಡಿತದಿಂದ ಗರುಡನಂತೆ ಪಾರುಮಾಡಿ, ಸತ್ಯ ಮಿಥ್ಯೆ, ಶಾಶ್ವತ ನಶ್ವರ, ಅರಿವು, ವಿವೇಕಗಳ ಬಗ್ಗೆ ಆತ್ಮಜ್ಞಾನ ನೀಡಿ ಜ್ಞಾನದ ಕಣ್ಣುಗಳನ್ನು ತೆರೆಯಿಸುವ ಶ್ರೀಗುರುಪಾದುಕೆಗಳನ್ನು ಆಶ್ರಯಿಸಿದರೆ ಮನಸ್ಸು ಶುದ್ಧವಾಗಿ, ಸಂಸಾರವೆಂಬ ಸಾಗರವನ್ನು ಸುಲಭವಾಗಿ ದಾಟಬಹುದು.

ಶ್ರೀರಾಮಚಂದ್ರಾಪುರ ಮಠದ ಅವಿಚ್ಛಿನ್ನ ಗುರು ಪರಂಪರೆಯ ಸಮಸ್ತ ಯತಿವರೇಣ್ಯರ ಪ್ರಾತಿನಿಧ್ಯ ಸ್ವರೂಪವಾದ ಸುವರ್ಣ ಪಾದುಕೆಗಳು ಗುರುಪೀಠದ ಆಶೀರ್ವಾದವನ್ನು ಹೊತ್ತುಕೊಂಡು, ಶಿಷ್ಯ ಭಕ್ತರನ್ನು ಅನುಗ್ರಹಿಸಲು ಪ್ರತಿಮನೆಗಳಿಗೂ ಹೋಗಬೇಕು ಎಂಬುದು ಶ್ರೀಸಂಸ್ಥಾನದವರ ಆಶಯ.

ವಿಜಯದಶಮಿಯ ಶುಭಾವಸರದಲ್ಲಿ ಶ್ರೀಸಂಸ್ಥಾನದವರ ದಿವ್ಯ ಉಪಸ್ಥಿತಿಯಲ್ಲಿ ೧೦೮ ಶಂಖನಾದ ಹಾಗೂ ೧೦೮ ಮುತ್ತಿನಾರತಿಯನ್ನು ಬೆಳಗಿ, ಶಾಸನತಂತ್ರದ ಪ್ರಮುಖರು ಮಹಾಮಂಡಲದ ಪ್ರಮುಖರ ಭುಜಗಳಿಗೆ ಸುವರ್ಣ ಪಾದುಕೆಯ ಪಲ್ಲಕಿಯನ್ನು ಹಸ್ತಾಂತರಿಸುವ ಮೂಲಕ, ರಾಜ್ಯ, ಹೊರರಾಜ್ಯಗಳ ವ್ಯಾಪ್ತಿಯಲ್ಲಿ ಶಿಷ್ಯ ಹಿತಕ್ಕಾಗಿ ಪ್ರತಿ ಶಿಷ್ಯ ಭಕ್ತರ ಮನೆ ಮನೆಗಳಿಗೆ ತೆರಳಿ ಪೂಜೆ ಸ್ವೀಕರಿಸಲಿರುವ ಸುವರ್ಣ ಪಾದುಕಾ ಯಾತ್ರೆಗೆ ವಿಶೇಷವಾದ ರೀತಿಯಲ್ಲಿ ಚಾಲನೆ ನೀಡಲಾಯಿತು. ವಿವಿಧ ಮಂಡಲಗಳ, ವಲಯ, ಘಟಕಗಳ ಪ್ರತಿಯೋರ್ವ ಶಿಷ್ಯ ಭಕ್ತರ ಮನೆಗೂ ಈ ಸುವರ್ಣ ಪಾದುಕೆಗಳು ಆಗಮಿಸಲಿವೆ.

ಶಿಷ್ಯಹಿತಮ್ ಯೋಜನೆಯ ಸ್ವರ್ಣಿಮ ಯಾತ್ರೆಯಾಗಿ ಸುವರ್ಣ ಪಾದುಕೆಗಳು ನಮ್ಮಲ್ಲಿಗೆ ಆಗಮಿಸುವಾಗ ಶ್ರೀಗುರುಗಳು ಚಿತ್ತೈಸಿದಷ್ಟೇ ಶ್ರದ್ಧಾ ಭಕ್ತಿಗಳಿಂದ ಸ್ವಾಗತಿಸಲು ಸಿದ್ಧರಾಗೋಣ. ಪೂಜ್ಯ ಭಾವನೆಯಿಂದ ಪೂಜಿಸಲ್ಲಿಸಿ ಸಾರ್ಥಕತೆ ಪಡೆಯೋಣ.

Leave a Reply

Your email address will not be published. Required fields are marked *