ಗಿರಿನಗರ: ಶ್ರೀರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳ ರಾಮಾಯಣ ಚಾತುರ್ಮಾಸ್ಯದ ಎರಡನೇ ದಿನವಾದ ಬುಧವಾರ ಗಿರಿನಗರದ ಶ್ರೀ ರಾಮಾಶ್ರಮ ಆವರಣದಲ್ಲಿ ಶ್ರೀ ಪರಿವಾರದವರಿಂದ ಭಿಕ್ಷಾಸೇವೆ, ಕಾಮಧೇನು ಪೂಜೆ, ಶ್ರೀಕರಾರ್ಚಿತ ಪೂಜಾ ಸೇವೆಗಳು ನಡೆದವು.
ಇದೇ ಸಂದರ್ಭದಲ್ಲಿ ಭಾರತೀಪ್ರಕಾಶನ ಹೊರತಂದಿರುವ ಶ್ರೀಲಕ್ಷ್ಮೀನೃಸಿಂಹ ಸ್ತೋತ್ರ ಪುಸ್ತಕ ಬಿಡುಗಡೆ ನಡೆಯಿತು. ಭಿಕ್ಷಾಂಗಸೇವೆ ಅಂಗವಾಗಿ ರಾಮಾಯಣ ರಾಮಾರ್ಪಣ ಕೃತಿಯನ್ನು ಸಮಸ್ತ ಭಕ್ತರಿಗೆ ಉಚಿತವಾಗಿ ವಿತರಿಸಲಾಯಿತು.
ಶ್ರೀಚರಣ ಖಂಡದ ಶ್ರೀಸಂಯೋಜಕ ಸತ್ಯ ಸಿಗಂದೂರು, ಸಂಯೋಜಕ ಸಂತೋಷ್, ಶ್ರೀ ಪರಿವಾರದ ಪ್ರಮುಖರಾದ ಕೆ.ವಿ.ರಮೇಶ್, ಅರವಿಂದ್ ಬಂಗಲಗಲ್ಲು, ವಿನಾಯಕ ಶಾಸ್ತ್ರಿಗಳು, ಸುಬ್ರಾಯ ಅಗ್ನಿಹೋತ್ರಿ, ಗೌತಮ್ ಬಿ. ಕೆ. ಮತ್ತಿತರರು ಉಪಸ್ಥಿತರಿದ್ದರು.
ವಿಶೇಷ ಭೋಜನ ವ್ಯವಸ್ಥೆ :
ಮಠಕ್ಕೆ ಆಗಮಿಸಿದ ಭಕ್ತರಿಗೆ ಬುಧವಾರ ಭೋಜನ ವ್ಯವಸ್ಥೆ ಶ್ರೀಪರಿವಾರದವರ ವತಿಯಿಂದಲೇ ಮಾಡಲಾಗಿತ್ತು. ತರಕಾರಿ ಪಾಯಸ, ಗುಲಾಬ್ ಜಾಮೂನು ಭೋಜನದ ವಿಶೇಷತೆಯಾಗಿತ್ತು.
ಪರಿಸರ ಸ್ನೇಹಿ ವ್ಯವಸ್ಥೆ!
ಮಠದ ಊಟದ ವ್ಯವಸ್ಥೆಯಲ್ಲಿ ಬಾಳೆಎಲೆಯನ್ನು ಬಳಸಿ, ಕಾಗದದ ಲೋಟಗಳಿಗೆ ಮಹತ್ವ ನೀಡುವ ಮೂಲಕ ಪರಿಸರ ಸ್ನೇಹವನ್ನು ಪ್ರದರ್ಶಿಸಲಾಗಿದೆ. ಗುಲಾಬ್ ಜಾಮೂನು ತಿನ್ನಲು ಅಡಿಕೆ ಮರದ ಹಾಳೆಯ ಕಪ್ ಹಾಗೂ ಮರದ ಚಮಚವನ್ನು ನೀಡುವ ಮೂಲಕ ಪ್ಲಾಸ್ಟಿಕ್ ಬಳಕೆಯಿಂದ ದೂರ ಉಳಿಯಲಾಗಿದೆ.