ಭಾರತೀಯ ಸಂಸ್ಕೃತಿ ಪರಂಪರೆಯ ವರ್ಧಂತಿಗೆ ಶ್ರಮಿಸೋಣ: ರಾಘವೇಶ್ವರಶ್ರೀ

ಸುದ್ದಿ

ಬೆಂಗಳೂರು: ಶ್ರೀಶಂಕರ ಪೀಠದ ಸಂಕಲ್ಪ- ಧ್ಯೇಯಕ್ಕೆ ಬದ್ಧರಾಗುವುದೇ ನಿಜವಾದ ಸೇವೆ. ವರ್ಧಂತಿ ಉತ್ಸವದ ಈ ಸಂದರ್ಭದಲ್ಲಿ ಭಾರತೀಯ ಪರಂಪರೆ- ಸಂಸ್ಕೃತಿ, ಧರ್ಮದ ವರ್ಧಂತಿಗೆ ಪಣ ತೊಡೋಣ ಎಂದು ರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿ ಕರೆ ನೀಡಿದರು.

 

ಗಿರಿನಗರದ ಶ್ರೀರಾಮಾಶ್ರಮದಲ್ಲಿ ಶುಕ್ರವಾರ (ಜುಲೈ ೧೯) ನಡೆದ ಶ್ರೀಗಳ ವರ್ಧಂತ್ಯುತ್ಸವ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

 

ಶ್ರೀಗುರುಗಳ, ಪೀಠದ ಸೇವೆಯಿಂದ ನಿಮಗೆ ಸಂತಸ, ಸಾರ್ಥಕತೆ ಸಿಗುವುದಾದರೆ ಇನ್ನಷ್ಟು ಸೇವೆ ಮಾಡಿ; ಒಂದು ದಿನ ಸಂಭ್ರಮಿಸಿ, ಬಳಿಕ ಧ್ಯೇಯ ಮರೆತರೆ ಅದಕ್ಕೆ ಅರ್ಥ ಇಲ್ಲ. ಪೀಠದ ಸಂಕಲ್ಪ, ಧ್ಯೇಯಕ್ಕೆ ಬದ್ಧರಾಗುವುದು ನಿಜವಾದ ಸೇವೆ. ವಿಶ್ವದ ಏಕೈಕ ಗೋಸ್ವರ್ಗ, ೧೩೦೦ ವರ್ಷದ ಶಂಕರ ಪರಂಪರೆಗೇ ಗೌರವ ತರುವಂಥ ವಿಷ್ಣುಗುಪ್ತ ವಿಶ್ವವಿದ್ಯಾಪೀಠದಂಥ ಸಾರ್ಥಕ ಕಾರ‍್ಯಗಳಿಗೆ ಕೈಜೋಡಿಸುವ ಮೂಲಕ ಸಮಾಜವನ್ನು ನಂದನವನವನ್ನಾಗಿ ಪರಿವರ್ತಿಸೋಣ ಎಂದು ಸಲಹೆ ಮಾಡಿದರು.

 

ನಮ್ಮ ಪೀಠ ಸಮಾಜದ ಶ್ರೇಯಸ್ಸಿಗೆ ದೊಡ್ಡ ದ್ವಾರವಾಗಿ ಪರಿಣಮಿಸಲಿ. ಪೀಠದ ಮೂಲಕ ಅನೇಕಾನೇಕ ಮಹತ್ಕಾರ್ಯಗಳು ನಡೆದರೆ ಅದೇ ಉತ್ಸವ, ಅದೇ ಸಂಭ್ರಮ ಎಂದು ಅಭಿಪ್ರಾಯಪಟ್ಟರು. ನಾವು ಅಂದುಕೊಂಡ ರೀತಿಯಲ್ಲಿ ವಿಷ್ಣುಗುಪ್ತ ವಿವಿಪೀಠ ಲೋಕಾರ್ಪಣೆ ಮಾಡಲು ಸಂಕಲ್ಪಬದ್ಧರಾಗೋಣ ಎಂದರು.

 

ವರ್ಧಂತಿ ಎಂದರೆ ವೃದ್ಧಿ- ವಿಕಾಸವನ್ನು ಸೂಚಿಸುವ ಪದ; ಪ್ರತಿ ವರ್ಷ ದಾಟಿದಾಗಲೂ ವೃದ್ಧಿ- ಬೆಳವಣಿಗೆಗಳು ಆಗಬೇಕು. ಇಲ್ಲದಿದ್ದರೆ ಅದು ವ್ಯರ್ಥ. ಆದರೆ ನಮಗೆ ಎಲ್ಲ ದಿನದಂತೆ ಒಂದು ದಿನ. ಭೂಮಿಗೆ ಬಂದ ಕಾರ್ಯವನ್ನು ನೆನಪಿಗೆ ತಂದುಕೊಳ್ಳುವ ದಿನ. ನಾವು ಮಾಡಬೇಕಾದ ಕಾರ್ಯದ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳುವುದು ನೈಜ ಆಚರಣೆ ಎಂದು ಬಣ್ಣಿಸಿದರು.

ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಾಲಯದ ಧರ್ಮದರ್ಶಿಗಳಾದ ಭೀಮೇಶ್ವರ ಜೋಶಿ ದಂಪತಿಗಳು ಶ್ರೀಗುರುಭಿಕ್ಷಾಸೇವೆ ಮತ್ತು ಅಕ್ಕಿಯಿಂದ ತುಲಾಭಾರ ಸೇವೆ ನೆರವೇರಿಸಿದರು. ಅಕ್ಕಿ ಅನ್ನಪೂರ್ಣೇಶ್ವರಿಯ ಪ್ರಸಾದದ ಸಂಕೇತ. ಅದರಿಂದ ತುಲಾಭಾರ ನೆರವೇರಿಸುವುದು ಎಂದರೆ, ಅನ್ನಪೂರ್ಣೇಶ್ವರಿ ಸಂತೃಪ್ತಳಾಗಿ ಶ್ರೀಪೀಠವನ್ನು ಮೇಲೆತ್ತುವ ಸಂಕೇತ ಎಂದು ಅವರು ಅಭಿಪ್ರಾಯಪಟ್ಟರು.

 

ಧಾರ್ಮಿಕ ಕಾರ್ಯಕ್ರಮ:

ವರ್ಧಂತ್ಯುತ್ಸವ ಅಂಗವಾಗಿ ಬೆಳಿಗ್ಗೆ ಅರುಣ ಹೋಮ, ೪೮ ಅರುಣ ನಮಸ್ಕಾರ, ಮಾತೆಯರಿಂದ ಮಂಗಳಾರತಿ, ರಾಜರಾಜೇಶ್ವರಿಗೆ ಬಾಗಿನ ಅರ್ಪಣೆ, ಅಷ್ಟೋತ್ತರ ಶತಕುಂಭ ಗಂಗಾಭಿಷೇಕ, ಶ್ರೀರಾಮದೇವರಿಗೆ ಅಷ್ಟಾವಧಾನ ಸೇವೆ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಭಕ್ತರು ಶ್ರೀಪೀಠಕ್ಕೆ ನೀಡಿದ ರಜತ ಪೀಠಾರೋಹಣ ಕೂಡಾ ಈ ಸಂದರ್ಭದಲ್ಲಿ ನೆರವೇರಿತು.

Author Details


Srimukha

Leave a Reply

Your email address will not be published. Required fields are marked *