ನಂತೂರು, ನ.26 : ಪ್ರತಿಯೊಬ್ಬ ವಿದ್ಯಾರ್ಥಿಯೂ ತಮ್ಮ ಗುರಿಯನ್ನು ಸಾಧಿಸಲು ಪ್ರಯತ್ನಿಸಬೇಕು. ಮಧ್ಯಮ ವರ್ಗದ ಕುಟುಂಬದಲ್ಲಿ ಬಂದ ಮಕ್ಕಳಿಗೆ ಎಲ್ಲಾ ಸೌಲಭ್ಯ ಒದಗಿಸಲು ಕಷ್ಟವಾಗುತ್ತದೆ. ಆದರೆ ಉತ್ತಮ ಆಹಾರ ತೆಗೆದುಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು. ಆ ಮೂಲಕ ಕ್ರೀಡಾರಂಗವನ್ನು ಆಯ್ಕೆ ಮಾಡಿ ಸಾಧನೆ ಮಾಡಬಹುದು. ವಿದ್ಯಾರ್ಥಿಗಳಿಗೆ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳು ಅತೀ ಅವಶ್ಯ. ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ಎಲ್ಲಾ ರೀತಿಯಲ್ಲಿ ಪರಿಪೂರ್ಣ ತರಬೇತಿ ಸಿಗುತ್ತಿರುವುದು ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಕಾರಣವಾಗಿದೆ ಎಂದು ಕಾಮನ್ ವೆಲ್ತ್ ಗೇಮ್ಸ್ ಪವರ್ ಲಿಫ್ಟಿಂಗ್ ಚಾಂಪಿಯನ್ ಚಿನ್ನದ ಪದಕ ವಿಜೇತ ಪ್ರದೀಪ್ ಕುಮಾರ್ ಆಚಾರ್ಯ ಹೇಳಿದರು.

ಅವರು ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳ ವತಿಯಿಂದ ನಡೆದ ಕ್ರೀಡಾಕೂಟ ಉದ್ಘಾಟಿಸಿ, ಮಾತನಾಡಿದರು.
ಸಂಸ್ಥೆಯ ಕಾರ್ಯಾಧ್ಯಕ್ಷ ಗಣೇಶಮೋಹನ ಕಾಶಿಮಠ ಅಧ್ಯಕ್ಷತೆ ವಹಿಸಿ, ಮಾತನಾಡಿ, ಸೋಲು ಗೆಲುವನ್ನು ಸಮನಾಗಿ ಸ್ವೀಕರಿಸಬೇಕು. ಕ್ರೀಡಾ ಸ್ಫೂರ್ತಿಯನ್ನು ಪ್ರದರ್ಶಿಸಬೇಕು. ಸಂಸ್ಥೆಯು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಸಮಾನವಾಗಿ ಅವಕಾಶ ಕಲ್ಪಿಸುತ್ತದೆ ಎಂದು ಹೇಳಿದರು.

ವಾಮಂಜೂರು ಅಮೃತೇಶ್ವರ ಆಂಗ್ಲ ಮಾಧ್ಯಮ ಶಾಲೆ ಆಡಳಿತಾಧಿಕಾರಿ ಕೆ.ವಿ.ಶೆಟ್ಟಿ, ಕೊಂಡೆವೂರು ಸದ್ಗುರು ಶ್ರೀ ನಿತ್ಯಾನಂದ ವಿದ್ಯಾ ಪೀಠದ ಆಡಳಿತಾಧಿಕಾರಿ ಡಾ.ಗಿರಿಧರ ರಾವ್ ಎಂ.ಎಸ್., ಸಂಸ್ಥೆಯ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ರಾಜಗೋಪಾಲ್ ಜಿ., ಪ್ರಾಂಶುಪಾಲ ಸಂದೀಪ್ ಆಚಾರ್ಯ ಉಪಸ್ಥಿತರಿದ್ದರು.
ಉಪನ್ಯಾಸಕಿ ಗಾಯತ್ರಿ ಎನ್.ಎಸ್. ಸ್ವಾಗತಿಸಿದರು. ಶಿಕ್ಷಕಿ ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಕಾರ್ತಿಕ್ ಕೃಷ್ಣ ವಂದಿಸಿದರು.

ಸಮಾರೋಪ :
ಸಂಸ್ಥೆಯ ಕಾರ್ಯಾಲಯ ಕಾರ್ಯದರ್ಶಿ ಮೆದು ತಿರುಮಲೇಶ್ವರ ಭಟ್ ಅಧ್ಯಕ್ಷತೆ ವಹಿಸಿದ್ದರು.

ವಾಮಂಜೂರು ಎಸ್.ಡಿ.ಎಂ.ಮಂಗಳಜ್ಯೋತಿ ಇಂಟಿಗ್ರೇಟೆಡ್ ಶಾಲೆ ಆಡಳಿತಾಧಿಕಾರಿ ನರೇಶ್ ಮಲ್ಲಿಗೆಮಾಡು ಅವರು ಮಾತನಾಡಿ, ವಿದ್ಯೆ, ನೆಮ್ಮದಿ, ಸಂತೋಷ ನಮಗೆ ಬೇಕು. ಅದೇ ಜೀವನದ ದಾರಿ. ಗಳಿಸಿದ ಹಣವನ್ನು ಕಸಿಯುವ ಸಾಧ್ಯತೆಯಿದೆ ಅಥವಾ ವ್ಯಯವಾಗುತ್ತದೆ. ವಿದ್ಯೆಯನ್ನು ಯಾರಿಗೂ ಕಸಿಯಲು ಸಾಧ್ಯವಿಲ್ಲ. ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ಸಂಸ್ಕೃತಿ, ಸಂಸ್ಕಾರ, ಉತ್ತಮ ವಾತಾವರಣ ಮತ್ತು ಅದಕ್ಕಿಂತಲೂ ಮಿಗಿಲಾಗಿ ಶ್ರೀಗಳ ಆಶೀರ್ವಾದ ಪಡೆಯಲು ಅವಕಾಶವಿದೆ ಎಂದು ಹೇಳಿದರು. ಪ್ರಾಂಶುಪಾಲ ಸಂದೀಪ್ ಆಚಾರ್ಯ, ದೈಹಿಕ ಶಿಕ್ಷಣ ಶಿಕ್ಷಕ ನಿತಿನ್ ಉಪಸ್ಥಿತರಿದ್ದರು.

ಶಿಕ್ಷಕಿ ಗಾಯತ್ರಿ ಶ್ರೀನಿವಾಸ್ ಸ್ವಾಗತಿಸಿ, ಉಪನ್ಯಾಸಕಿ ಶೋಭಾ ಸಂತೋಷ್ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ನಿತಿನ್ ವಂದಿಸಿದರು. ಬೋಧಕ, ಬೋಧಕೇತರ ವೃಂದದವರು ಸಹಕರಿಸಿದರು. ಸಂಸ್ಥೆಯ ಗೋಶಾಲೆಯಲ್ಲಿರುವ ಗೋವುಗಳಾದ ಶಬಲಾ, ಭದ್ರ, ಬಾಮತಿ, ನಂದೀಶ ಎಂಬ ಹೆಸರಿನಲ್ಲಿ ವಿದ್ಯಾರ್ಥಿಗಳ ನಾಲ್ಕು ತಂಡ ರಚಿಸಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳ ಪಥಸಂಚಲನ, ಪಿರಮಿಡ್ ಆಕರ್ಷಣೀಯವಾಗಿತ್ತು.