ಒಮ್ಮೆ ಒಬ್ಬ ವ್ಯಕ್ತಿ ಒಂದು ದೊಡ್ಡ ಪರ್ವತವನ್ನು ಏರಲು ಹೊರಟಿದ್ದ. ಅವನೊಂದಿಗೆ ಇನ್ನೂ ಕೆಲವು ವ್ಯಕ್ತಿಗಳಿದ್ದರು. ಆದರೆ ಅವನು ತಾನೇ ಮೊದಲು ಏರಬೇಕೆಂದು ತ್ವರಿತವಾಗಿ ಮುಂದುವರಿಯುತ್ತಿರುತ್ತಾನೆ. ಅಲ್ಲಿ ಮಂಜು ಮುಸುಕಿದ ವಾತಾವಾರಣ; ಹಿಮಾಚ್ಛಾದಿತ. ಆ ಪರ್ವತದಲ್ಲಿ ಉಸಿರಾಡುವುದೇ ಕಷ್ಟವಾಗುತ್ತದೆ. ನಡೆಯಲಾಗದೇ ಅವನು ಕೆಳಗೆ ಬೀಳುತ್ತಾನೆ. ಅವನು ನಡುವಿಗೆ ಹಗ್ಗ ಕಟ್ಟಿಕೊಂಡಿದ್ದರಿಂದ ಪ್ರಪಾತಕ್ಕೆ ಬೀಳದೇ ಮಧ್ಯದಲ್ಲಿಯೇ ತೇಲಾಡುತ್ತಿರುತ್ತಾನೆ.
ಆ ಸಮಯದಲ್ಲಿ ಅವನು ಭಗವಂತನನ್ನು- ‘ಹೇಗಾದರೂ ನನ್ನನ್ನು ಕಾಪಾಡು!’ ಎಂದು ಬೇಡಿಕೊಳ್ಳುತ್ತಾನೆ.
ಆಗ ಆಕಾಶದಲ್ಲಿ ಒಂದು ಧ್ವನಿ- ‘ನೀನು ಸೊಂಟಕ್ಕೆ ಕಟ್ಟಿದ ಹಗ್ಗ ಬಿಚ್ಚಿಬಿಡು’ ಎಂದು ಕೇಳಿಸುತ್ತದೆ.
ಆದರೆ ಅವನಿಗೆ ಆ ಮಾತಿನಲ್ಲಿ ವಿಶ್ವಾಸವಿಲ್ಲದೇ ಹಗ್ಗ ಬಿಚ್ಚುವುದಿಲ್ಲ.
ಹೀಗೆ ಸ್ವಲ್ಪ ಸಮಯ ಕಳೆಯಲು ಉಸಿರಾಟದ ತೊಂದರೆಯಿಂದ ಅವನು ಅಲ್ಲಿಯೇ ಬಿದ್ದು ಸಾಯುತ್ತಾನೆ. ಅವನ ಸ್ನೇಹಿತರು ಬಂದು ನೋಡಿದಾಗ ಅವನು ಬಿದ್ದಲ್ಲಿಂದ ಸ್ವಲ್ಪ ಕೆಳಗೆ ಸಮತಟ್ಟಾದ ಸ್ಥಳವಿರುತ್ತದೆ. ಮಂಜು ಮುಸುಕಿದ್ದರಿಂದ ಅದು ಅವನಿಗೆ ಕಾಣಿಸುತ್ತಿರಲಿಲ್ಲ. ಅವನು ವಿಶ್ವಾಸವಿಟ್ಟು ಸೊಂಟದ ಪಟ್ಟಿ ಬಿಚ್ಚಿದ್ದರೆ ಉಳಿದುಕೊಳ್ಳುತ್ತಿದ್ದ.
ಇದರ ನೀತಿಯೆಂದರೆ ವಿಶ್ವಾಸದಲ್ಲಿ ಶ್ವಾಸವಿದೆ. ನಾವು ಭಗವಂತನಲ್ಲಿ ವಿಶ್ವಾಸವಿಟ್ಟು ನಮ್ಮನ್ನು ಸಮರ್ಪಣೆ ಮಾಡಿಕೊಂಡಾಗ ಅದ್ಭುತವಾದದ್ದು ಫಲಿಸಬಹುದು. ಅದೇ ರೀತಿ ನಮ್ಮ ಸುತ್ತಮುತ್ತಲಿನ ಜನರಲ್ಲೂ ವಿಶ್ವಾಸವಿಡದಿದ್ದರೆ, ಎಲ್ಲರನ್ನೂ ಅನುಮಾನಿಸುತ್ತಾ ಹೋದರೆ ನಮಗೆ ಏನನ್ನೂ ಮಾಡಲು ಸಾಧ್ಯವಿಲ್ಲ. ವಿಶ್ವಾಸದಲ್ಲಿಯೇ ನಮ್ಮ ಬದುಕಿದೆ.