ಉರುವಾಲು: ಇಲ್ಲಿನ ಶ್ರೀಭಾರತೀವಿದ್ಯಾಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ನವೆಂಬರ್ ೧ ರಂದು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಆಂಗ್ಲಮಾಧ್ಯಮ ಶಾಲೆಯ ಜಂಟಿ ಆಶ್ರಯದಲ್ಲಿ ನಡೆದ ರಾಜ್ಯೋತ್ಸವಕ್ಕೆ ವಿದ್ಯಾರ್ಥಿಗಳು ನಾಡಗೀತೆ ಹಾಡುವ ಮೂಲಕ ಚಾಲನೆ ನೀಡಿದರು.
ರಾಜ್ಯೋತ್ಸವದ ಆಚರಣೆಗೆ ಮೂಲಕಾರಣವಾದ ಕನ್ನಡ ಏಕೀಕರಣದ ಕುರಿತು, ವಿದ್ಯಾಸಂಸ್ಥೆಯ ಮುಖ್ಯಶಿಕ್ಷಕಿ ಶ್ರೀಮತಿ ಜಯಲಕ್ಷ್ಮೀ, ಸಹಶಿಕ್ಷಕರಾದ ಶ್ರೀಮತಿ ಕಮರುನ್ನೀಸಾ, ಶ್ರೀ ಲಕ್ಷ್ಮಣ ಗೌಡ ಅವರು ವಿವರಿಸಿದರು.
ಶಾಲಾಸಂಸತ್ತಿನ ವಿರೋಧ ಪಕ್ಷದ ನಾಯಕ ಕಾರ್ತೀಕ್ ರಾಜ್ಯೋತ್ಸವದ ಮಹತ್ತ್ವ ತಿಳಿಸಿದರು. ಅಲ್ಲದೇ ಉಭಯ ಶಾಲೆಗಳ ಮಕ್ಕಳು ಕನ್ನಡ ನಾಡಿನ ನೆಲ-ಜಲದ ಮಹತ್ತ್ವ ಸಾರುವ ಸುಂದರ ಗೀತೆಗಳನ್ನು ಪ್ರಸ್ತುತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಯುತ ಶಂಕರ ನಾರಾಯಣ ಭಟ್ಟರು, ನಾವು ಪ್ರತಿನಿತ್ಯ ಬಳಸುವ ಭಾಷೆಯಲ್ಲಿನ ಕ್ಲಿಷ್ಟಕರ ಶಬ್ದಗಳ ಅರ್ಥ, ಪದಬಳಕೆ ಹಾಗೂ ಭಾಷೆಯ ಬಳಕೆಯ ಕುರಿತು ಮಕ್ಕಳೊಂದಿಗೆ ಸಂವಾದ ನಡೆಸಿದರು. ಅಲ್ಲದೇ ಕನ್ನಡವನ್ನು ಉಳಿಸಿ ಕರ್ನಾಟಕವನ್ನು ಬೆಳೆಸಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದ ಗಣ್ಯರನ್ನು ವಿದ್ಯಾರ್ಥಿ ಚಿತ್ತರಂಜನ್ ಸ್ವಾಗತಿಸಿದರೆ, ಕುಮಾರಿ ಚೈತನ್ಯ ವಂದಿಸಿದರು. ಕುಮಾರಿ ಪ್ರಾರ್ಥನಾ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾಲಯದ ಶಿಕ್ಷಕ-ಶಿಕ್ಷಕಿಯರು ಹಾಗೂ ನೂರಾರು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.