ಅಂಬಾಗಿರಿ, ಶಿರಸಿ – ದಿನಾಂಕ 02-05-2019 ಬುಧವಾರದಂದು ಶಿರಸಿ ಅಂಬಾಗಿರಿ ಕಾಳಿಕಾ ಮಠದಲ್ಲಿ ಶ್ರೀಮಠದ ವಿದ್ಯಾರ್ಥಿ ವಾಹಿನಿ ವಿಭಾಗ ನಡೆಸುವ ವಿರಾಮ-ವಿಚಾರ-ವಿಹಾರ ಬೇಸಿಗೆ ಶಿಬಿರದ ಉದ್ಘಾಟನೆ ನಡೆಯಿತು.
ಹವ್ಯಕ ಮಹಾಮಂಡಲದ ಅಧ್ಯಕ್ಷೆ ಶ್ರೀಮತಿ ಈಶ್ವರಿ ಶ್ಯಾಮ ಭಟ್ಟ ಬೇರ್ಕಡವು ದೀಪ ಪ್ರಜ್ವಾಲನೆಯ ಮೂಲಕ ಶಿಬಿರದ ಉದ್ಘಾಟನೆಯನ್ನು ನೆರವೇರಿಸಿದರು. ಅನಂತರ ಮಾತನಾಡಿ ಪ್ರತ್ಯಕ್ಷವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ನಮ್ಮ ಗುರುಗಳು ನಮ್ಮ ಜೊತೆಗಿದ್ದಾರೆ, ನಾವು ಒಳ್ಳೆಯ ಪ್ರಜೆಗಳಾಗಿ ಬಾಳೋಣ, ಅದಕ್ಕೆ ಪೂರಕವಾದ ಅಂಶ ಶ್ರೀ ಗುರುಗಳಿಂದ ದೊರೆಯುತ್ತದೆ, ಕಷ್ಟವೆಂದು ಎನಿಸಿದರೂ ಮುಂದೆ ಜೀವನದಲ್ಲಿ ಎದುರಿಸುವಂತಹ ಶಕ್ತಿ – ಸಾಮರ್ಥ್ಯ ನಮಗೆ ದೊರೆಯುತ್ತದೆ ಎಂದು ಹಾರೈಸಿದರು.
ಅಭ್ಯಾಗತರಾದ ಶ್ರೀ ಪ್ರಮೋದ್ ಪಂಡಿತ್ ಮಾತನಾಡುತ್ತಾ ಸಮಾಜಕ್ಕೆ ಸಂಸ್ಕಾರ ಬೇಕು, ಆ ಸಂಸ್ಕಾರ ಶಿಬಿರದಿಂದ ಸಿಗಲಿದೆ, ಶಿಬಿರದಲ್ಲಿ ಭಾಗಿಗಳಾದ ವಿದ್ಯಾರ್ಥಿಗಳು ಭಾಗ್ಯಶಾಲಿಗಳೆಂದು ಹೇಳಿದರು.
ಅಂಬಾಗಿರಿ ರಾಮಕೃಷ್ಣ ಕಾಳಿಕಾ ಮಠದ ಅಧ್ಯಕ್ಷರೂ, ಅಂಬಾಗಿರಿ ವಲಯಾಧ್ಯಕ್ಷರೂ ಆದ ಶ್ರಿ ವಿ.ಎಂ. ಹೆಗಡೆಯವರು ಶುಭ ಹಾರೈಸಿದರು. ಪ್ರಶಿಕ್ಷಕರಾಗಿ ಬಂದ ವೇ.ಮೂ ಶ್ರೀನಿವಾಸ ಭಟ್ಟ, ಸಿದ್ಧಾಪುರ ಮಂಡಲದ ದಿಗ್ದರ್ಶಕರಾದ ಶ್ರೀ ಲಕ್ಷ್ಮೀನಾರಾಯಣ ಭಟ್ಟ, ಕಾರ್ಯದರ್ಶಿ ಶ್ರೀ ದತ್ತಾತ್ರೇಯ ಹೆಗಡೆ, ಮಾತೃ ಪ್ರಧಾನೆ ವೀಣಾ ಭಟ್ಟ, ಮುಳ್ಳೇರಿಯಾ ಮಂಡಲದ ಮಾತೃ ಪ್ರಧಾನೆ ಕುಸುಮಾ ಪೆರ್ಮುಖ, ಅಂಬಾಗಿರಿ ವಲಯದ ಮಾತೃ ಪ್ರಧಾನೆ ಸಾವಿತ್ರಿ, ಮುಳ್ಳೇರಿಯಾ ಮಂಡಲದ ವಿದ್ಯಾರ್ಥಿ ವಾಹಿನಿ ಪ್ರಧಾನ ಕೇಶವ ಪ್ರಸಾದ ಎಡೆಕ್ಕಾನ, ದಕ್ಷಿಣಬೆಂಗಳೂರು ಮಂಡಲದ ವಿದ್ಯಾರ್ಥಿವಾಹಿನೀ ಪ್ರಧಾನೆ ಅಶ್ವಿನಿ ಅರವಿಂದ ಉಪಸ್ಥಿತರಿದ್ದರು.
ಮಹಾಮಂಡಲದ ವಿದ್ಯಾರ್ಥಿವಾಹಿನೀ ಪ್ರಧಾನ ಎಸ್.ಜಿ ಭಟ್ ಕಬ್ಬಿನಗದ್ದೆ ಕಾರ್ಯಕ್ರಮ ನಿರೂಪಿಸಿದರು. ಶಿಬಿರಾರ್ಥಿ ಕು.ಪ್ರಿಯಾಂಕಾ ಕೋರಿಕ್ಕಾರು ಪ್ರಾರ್ಥನೆಗೈದರು. ಬೆಂಗಳೂರು ಉತ್ತರ ಮಂಡಲದ ವಿದ್ಯಾರ್ಥಿ ವಾಹಿನಿ ಪ್ರಧಾನ ಸಂಧ್ಯಾ ಕಾನತ್ತೂರು ವಂದನಾರ್ಪಣೆ ಸಲ್ಲಿಸಿದರು.
95 ಜನ ಶಿಬಿರಾರ್ಥಿಗಳಿಗೆ ವೇ| ಮೂ| ಶ್ರೀನಿವಾಸ ಭಟ್ಟರವರಿಂದ ಸಂಧ್ಯಾವಂದನೆ, ಅನುಷ್ಠಾನ, ಉಪಾಸನೆಗಳ ಮಹತ್ವ ಎಂಬ ವಿಷಯದ ಉಪನ್ಯಾಸದೊಂದಿಗೆ ಮುಂದಿನ 6 ದಿನಗಳ ಶಿಬಿರಕ್ಕೆ ಚಾಲನೆ ನೀಡಲಾಯಿತು.
ಮಧ್ಯಾಹ್ನದ ಅನಂತರ ನಾಟಕದಲ್ಲಿ ಆಸಕ್ತಿಯಿರುವ ಮಕ್ಕಳಿಗೆ ಡಾ| ಗಜಾನನ ಶರ್ಮಾ, ಶ್ರೀ ದೇವೇಂದ್ರ ಬಿಳಿಯೂರು, ಶ್ರೀ ಶ್ರೀಕಾಂತ್ ಕಾಳಮಂಜಿ ಇವರಿಂದ ನಾಟಕ ತರಬೇತಿ ನೀಡಿದರು. ಕೋಲಾಟದಲ್ಲಿ ಆಸಕ್ತ ಮಕ್ಕಳಿಗೆ ಅಶ್ವಿನಿ ಅರವಿಂದ ಮತ್ತು ಅರ್ಚನಾ ವೇಣುಗೋಪಾಲ ತರಬೇತಿ ನೀಡಿದರು. ಕರಕುಶಲದಲ್ಲಿ ಆಸಕ್ತ ಮಕ್ಕಳಿಗೆ ಸ್ವಾತಿ ಭಾಗವತ್ ತರಬೇತಿ ನೀಡಿದರು.