ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಯೋಗೋತ್ಸವ

ಶಿಕ್ಷಣ

ಬದಿಯಡ್ಕ: ಜೂ.21 : ಶಾಲಾ ಪ್ರಾರಂಭದಿಂದಲೇ ಯೋಗಶಿಕ್ಷಣವನ್ನು ಪಠ್ಯದ ಭಾಗವಾಗಿ ಅಳವಡಿಸಿಕೊಂಡಿರುವ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಯೋಗದಿನಾಚರಣೆಯಂದು ೧ನೆಯ ತರಗತಿಯಿಂದ ೧೦ನೆಯ ತರಗತಿಯ ತನಕದ ಎಲ್ಲಾ ವಿದ್ಯಾರ್ಥಿಗಳೂ ಸಾಂಘಿಕವಾಗಿ ಹಾಗೂ ವಿಭಾಗಶಃ ಯೋಗದ ವಿವಿಧ ಆಸನಗಳನ್ನು ಪ್ರದರ್ಶಿಸಿದರು. ಈ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದ ಮುಖ್ಯ ಅಭ್ಯಾಗತರಾಗಿ ಆಗಮಿಸಿದ ನಿವೃತ್ತ ಪ್ರಾಂಶುಪಾಲರಾದ ಡಾ. ಬೇ.ಸೀ.ಗೋಪಾಲಕೃಷ್ಣ ಯೋಗದ ಕುರಿತು ಮಾತನಾಡುತ್ತಾ ಇತ್ತೀಚಿನ ದಿನಗಳಲ್ಲಿ ಯೋಗವು ಜನಜನಿತವಾಗುತ್ತಿದೆ. ಇಲ್ಲಿನ ವಿದ್ಯಾರ್ಥಿಗಳು ನೀಡಿದ ಉತ್ತಮ ಪ್ರದರ್ಶನವನ್ನು ನೋಡಿ ನನಗೂ ನಿಮ್ಮೊಂದಿಗೆ ಜತೆಗೂಡುವ ಹಂಬಲವುಂಟಾಗುತ್ತಿದೆ. ಚಿಕ್ಕಂದಿನಲ್ಲಿ ನಮಗೆ ಈ ಭಾಗ್ಯವಿರಲಿಲ್ಲ. ಶಿಕ್ಷಣದ ಒಂದು ಅಂಗವಾಗಿ ಯೋಗವನ್ನು ಇಲ್ಲಿ ಕಲಿಸುತ್ತಿರುವುದು ಶ್ಲಾಘನೀಯ ವಿಚಾರವಾಗಿದೆ. ಈ ಪ್ರಕ್ರಿಯೆ ನಿರಂತರವಾಗಿ ಮುಂದುವರಿದು ಅನೇಕ ಯೋಗಪಟುಗಳು ಹೊರಹೊಮ್ಮಲಿ ಎಂದು ಹೇಳಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಶ್ರೀ ಗಣೇಶ್ ಪೈ ಅಧ್ಯಕ್ಷತೆ ವಹಿಸಿದ್ದರು. ಪ್ರಾಥಮಿಕ ಯೋಗ ಅಧ್ಯಾಪಿಕೆ ಶ್ರೀಮತಿ ರಾಜೇಶ್ವರಿ, ಹಿರಿಯ ಪ್ರಾಥಮಿಕ ವಿಭಾಗದ ಅಧ್ಯಾಪಕ ಶ್ರೀ ವಿನಯ ಪಾಲ್ ಹಾಗೂ ಪ್ರೌಢ ವಿಭಾಗದ ಅಧ್ಯಾಪಿಕೆ ಶ್ರೀಮತಿ ಮಮತಾಸಾವಿತ್ರಿ ಕಾರ್ಯಕ್ರಮಕ್ಕೆ ನೇತೃತ್ವ ವಹಿಸಿದರು. ೯ನೆಯ ತರಗತಿಯ ಕು. ಅನನ್ಯಾ ಪೆರ್ಮುಖ ಸ್ವಾಗತಿಸಿ, ಕು. ಅವ್ಯಯಸುಧಾ ಸಿ.ಎಚ್. ವಂದಿಸಿದರು.

 

Leave a Reply

Your email address will not be published. Required fields are marked *