ಬದಿಯಡ್ಕ ಜು. 1 : ಬದಿಯಡ್ಕದ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಮಂಗಳವಾರ ರಂಗಚಿನ್ನಾರಿ ಕಾಸರಗೋಡು ಸಾಮಾಜಿಕ, ಸಾಂಸ್ಕೃತಿಕ ಸಂಸ್ಥೆ ಹಮ್ಮಿಕೊಂಡ ಶಿಕ್ಷಣಕ್ಕಾಗಿ ನೃತ್ಯ `ತಕಜಣುತಾ’ ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀಗಣೇಶ ಪೈ ಮಾತನಾಡಿದರು. ರಂಗಚಿನ್ನಾರಿಯ ನಿರ್ದೇಶಕ ಶ್ರೀ ಕಾಸರಗೋಡು ಚಿನ್ನಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಭಾರತೀಯ ಪರಂಪರೆಯನ್ನು ಎತ್ತಿಹಿಡಿಯುವ ಸಲುವಾಗಿ ಶಿಕ್ಷಣಕ್ಕಾಗಿ ನೃತ್ಯ ಎಂಬ ಹೊಸ ಅಭಿಯಾನ ಆರಂಭಿಸಿದ್ದು, ಭಾರತೀಯ ನೃತ್ಯ ಪ್ರಕಾರಗಳಿಗೆ ಬಳಸುವ ಹಸ್ತಮುದ್ರೆಗಳ ಬಗ್ಗೆ ಮುಂದಿನ ಜನಾಂಗಕ್ಕೆ ತಿಳಿವಳಿಕೆ, ಮಾಹಿತಿ ನೀಡುವ ಉದ್ದೇಶವಿದೆ ಎಂದರು. ಆಕಾಶವಾಣಿ ಹಾಗೂ ದೂರದರ್ಶನ ಕಲಾವಿದೆ ವಿದುಷಿ ಮಂಜುಳಾ ಸುಬ್ರಹ್ಮಣ್ಯ ಅವರು ಮಾತನಾಡಿ ಭರತನಾಟ್ಯದ ಆಸಕ್ತಿ ಕುದುರಿಸುವ ಮನೋಧರ್ಮವನ್ನು ಅರಿಯುವ, ಮುದ್ರೆಗಳ ಜತೆ ಮಿಡಿಯುವ ಪ್ರಾಥಮಿಕ ತರಬೇತಿಯನ್ನು ಮಕ್ಕಳಿಗೆ ನೀಡುತ್ತಾ ಒಂದು ದೇವಸ್ಥಾನದ ಒಳಗೆ ಹೋಗಿ ಪ್ರಾರ್ಥನೆ ಮಾಡಿ ಸುತ್ತುಹಾಕಿ ಮತ್ತೆ ಹೊರಗೆ ಬಂದಾಗ ಸಿಗುವ ಸಂತೃಪ್ತ ಭಾವ ಭರತನಾಟ್ಯದಿಂದ ಸಿಗುತ್ತದೆ ಎಂದರು. ಶಾಲಾ ವ್ಯವಸ್ಥಾಪಕ ಶ್ರೀ ಜಯಪ್ರಕಾಶ ಪಜಿಲ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ, ಕವಿ ಸಾಹಿತಿ ಶ್ರೀ ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಅಧ್ಯಾಪಕ ವೃಂದ ಹಾಗೂ ಪಾಲಕರು ಉಪಸ್ಥಿತರಿದ್ದರು. , ಏಳನೆಯ ತರಗತಿಯ ವಿದ್ಯಾರ್ಥಿಗಳಾದ ಕು. ಸ್ಮೃತಿಮಾಲಾ ಸ್ವಾಗತಿಸಿ, ಕು. ಕೃಪಾ ರೈ ವಂದಿಸಿದರು. ಕು.ಆಶ್ಲೇಷ್ ನಿರೂಪಿಸಿದರು.