ಬೆಳಕಿನೊಳಗೊಂದು ಕತ್ತಲು

ಅಂಕಣ ಇಳೆಯ ಹೊಳೆ : ಕವಿತಾ ಧನಂಜಯ ಜೋಯ್ಸ್

ನಮ್ಮೂರಲ್ಲೊಂದು ಮಾರಿಜಾತ್ರೆ. ಹಳ್ಳಿಯಲ್ಲಿ ಜಾತ್ರೆಯೆಂದರೆ ಅದೇನೋ ಸಂಭ್ರಮ. ಎಲ್ಲರೂ ಒಂದೆಡೆ ಸೇರಿ ಸಂಭ್ರಮಿಸೋ ಕ್ಷಣ. ಹಳೆ ಗೆಳೆಯ ಗೆಳತಿಯರು, ಪರಿಚಿತರು. ಹೀಗೆ ಊರ ಜಾತ್ರೆಯೆಂದರೆ ಒಂಥರ ಹಬ್ಬವೆಂದೇ ಹೇಳಬಹುದು. ಎಲ್ಲೆಡೆ ಬೆಳಕಿನ ಮೆರಗು. ವಿವಿಧ ಬಗೆಯ ಆಟಿಕೆಯ ಅಂಗಡಿ, ಹೂವಿನ ಅಲಂಕಾರಿಕ ಮಳಿಗೆ. ವಿವಿಧ ತಿಂಡಿ ತಿನಿಸುಗಳ ಅಂಗಡಿ. ಬಳೆ ಅಂಗಡಿಗಳಂತೂ ಲೆಕ್ಕವಿಲ್ಲದಷ್ಟು ಬಗೆಯವು. ಪ್ಲಾಸ್ಟಿಕ್ ಆಟಿಕೆ ಅಂಗಡಿ, ವಿವಿಧ ಗಾಜಿನ ಪಾತ್ರೆಯ ಮಳಿಗೆ. ಹೀಗೆ ಹತ್ತು ಹಲವು. ಬಣ್ಣದ ಬಲೂನು ಊದುತ್ತಾ, ಮಾರುತ್ತ ಸಾಗುವ ಹುಡುಗರು, ತೊಟ್ಟಿಲು, ಜೀವದ ಹಂಗು ಬಿಟ್ಟು ಸಾಹಸ ಮಾಡುವ ಬೈಕ್ ರೇಸ್, ಚಿತ್ತ ಚಿತ್ತಾರ ಮೆಹಂದಿ ಬಿಡಿಸೋ ಹುಡುಗ. ಹೀಗೆ ಬಗೆ ಬಗೆಯ ಮನೋರಂಜನೆ ಜಾತ್ರೆಯಲ್ಲಿ.


 
ಎಲ್ಲಿ ನೋಡಿದರೂ ಪರಿಚಿತ ಮುಖವೇ. ಎಲ್ಲರ ಸಂಭ್ರಮದ ಜಾತ್ರೆಯ ಮಜವೇ ಬೇರೆ. ಬಾಲ್ಯದಲ್ಲಿ ಜಾತ್ರೆಯಲ್ಲಿ ಅಮ್ಮ ಕೊಡಿಸಿದ ಬಲೂನು ಹಾರಿಸುತ್ತ, ಪೀಪಿ ಉದುತ್ತಾ, ಬಣ್ಣ ಬಣ್ಣದ ಬಳೆಗಳನ್ನು ಕೊಂಡು, ಬೆಂಡು ಬೆತ್ತಸ ತಿಂತಾ ಜಾತ್ರೆಯನ್ನ ಸವಿಯುತ್ತಿದ್ದ ಸಂಭ್ರಮವೇ ಸಂಭ್ರಮ. ಬೆಳೆದಂತೆ ಆ ಸಂಭ್ರಮವಿಲ್ಲ. ಆದರೆ ಆ ಜಾತ್ರೆಯ ರಂಗಿಗೇನು ಕಮ್ಮಿ ಆಗಿಲ್ಲ. ಅದೇ ಜಿಗಿ ಜಿಗಿ ಬೆಳಕು, ಗಲಾಟೆ ಗೌಜು, ಮೋಜು ಮಸ್ತಿ.
  


ದೈನಂದಿನ ಕೆಲಸದ ಬ್ಲಾಕ್ ಅಂಡ್ ವೈಟ್ ಬದುಕಿಗೆ ಕಲರ್ ಫುಲ್ ಕನಸುಗಳನ್ನು ತರುವ ರಾಯಭಾರಿ ಆ ಜಾತ್ರೆ. ನಮ್ಮದೇ ಊರನ್ನು, ನಾವೇ ದಿನವೂ ಸುತ್ತಾಡಿದ ಬೀದಿಯನ್ನು ಹೊಸ ಹೊಸ ರಂಗಿನೊಂದಿಗೆ ದರ್ಶನ ಮಾಡಿಸುವುದು ಈ ಜಾತ್ರೆಯ ವಿಶೇಷ. ಒಟ್ಟಾರೆ ಜಾತ್ರೆ ಎಂದರೆ ಬದುಕಿನ ಜಂಜಾಟಗಳ ನಡುವಿನ ಸಂಭ್ರಮ.


 ಹೀಗೆ ಜಾತ್ರೆಯೆಲ್ಲ ಸುತ್ತಾಡಿ ಬರುವಾಗ ಅಲ್ಲೊಂದು ಮನ ತಟ್ಟಿದ ದೃಶ್ಯ. ನಾಲ್ಕಾರು ಪುಟ್ಟ ಮಕ್ಕಳು ಕೊಳಚೆ ಮೋರಿಯ ಬದಿಯಲ್ಲಿ ಕುಳಿತು ತಿಂಡಿ ತಿನ್ನುವ ದೃಶ್ಯ. ಅವರೆಲ್ಲ ಆ ಜಾತ್ರೆಯಲ್ಲಿ ಮಳಿಗೆಗಳನ್ನು ಇಟ್ಟ ವ್ಯಾಪಾರಿಗಳ ಮಕ್ಕಳು. ನಮಗೆಲ್ಲ ಬಣ್ಣ ಬಣ್ಣದ ಆಟಿಕೆ  ಮಾರಿ, ಬಣ್ಣ ಬಣ್ಣದ ಜಾತ್ರೆಯ ಮೆರಗು ಹೆಚ್ಚಿಸುವ, ಇಡೀ ದಿನ ಊರಿಂದುರಿಗೆ ಸಾಗಿ ಜಾತ್ರೆಯಲ್ಲೇ ಬದುಕ ಕಟ್ಟಿಕೊಂಡ ಆ ಜನರ ಜೀವನ ಆಲೋಚನೆಗೆ ನಿಲುಕದ್ದು.
 


ನಮ್ಮ ಬದುಕಿಗೆ ನಮ್ಮದೇ ಆದ ಚೌಕಟ್ಟು ಇದೆ. ಒಳ್ಳೆಯ ಮನೆ ಇದ್ದರೆ ಸುಖ, ಒಳ್ಳೆಯ ಬಟ್ಟೆ ಇದ್ದರೆ ಖುಷಿ, ಸಮೃದ್ಧ ಊಟವಿದ್ದರೆ ಆತ ಸುಖಿ; ಒಳ್ಳೆಯ ಸಂಸಾರ, ಮಕ್ಕಳು ಹೆಂಡತಿ ಇದ್ದರೆ ನೆಮ್ಮದಿ; ಒಳ್ಳೆಯ ವಿದ್ಯೆ ಸಿಕ್ಕರೆ ಆನಂದ. ಹೀಗೆ ನಮ್ಮ ಬದುಕಿನ ಖುಷಿ, ಸುಖ ಎಲ್ಲದಕ್ಕೂ ಒಂದು ವ್ಯಾಖ್ಯಾನ. ಆದರೆ ಅವರ ಬದುಕೆಗೆಲ್ಲಿಯ ಚೌಕಟ್ಟು? ಹೀಗೆ ಬದುಕಬೇಕೆಂದು ಹೇಳುವ ಮಾರ್ಗದರ್ಶಕರು ಯಾರು?
ಹೋದಲ್ಲೇ ಊರು, ಇದ್ದಲ್ಲೇ ಸೂರು, ತಿಂದದ್ದೇ ಮೃಷ್ಟಾನ್ನ, ಉಟ್ಟದ್ದೇ ಬಟ್ಟೆ, ಇಡೀ ದಿನ ಜಾತ್ರೆಯ ಬೆಳಕಲ್ಲೇ ಇದ್ದರೂ ಅವರ ಬದುಕು ಮಾತ್ರ ಕತ್ತಲೆ. ಹಾಗಂತ ಅವರಿಗೆ ಅದರ ಬಗ್ಗೆ ಯಾವ ಬೇಸರವಿಲ್ಲ. ನಮ್ಮ ನೋಟಕ್ಕೆ ಅವರ ಬಗ್ಗೆ ಅಯ್ಯೋ ಅನ್ನಿಸಿದರೂ ಅವರು ಅವರದ್ದೇ ಆದ ಬದುಕನ್ನು ಖುಷಿಯಲ್ಲೇ ಅವರ ಪಾಡಿಗೆ ನಡೆಸುತ್ತಲೇ ಇದ್ದಾರೆ. ಅದೇ ಅವರ ಜಗತ್ತು. ಬೆಳಕಿನ ಬಣ್ಣದಲ್ಲಿದ್ದು ಬಣ್ಣ ಬಣ್ಣದ ಆಟಿಕೆಗಳ ಮಾರುವ ಜೀವನದೊಳಗೊಂದು ಕಪ್ಪು ಬಣ್ಣ.


ಅವರಿಗೆ ಯಾವ ಬಂಧವಿಲ್ಲ. ಅಂಟಿಲ್ಲದ ಬದುಕು. ಇಂದಿನ ದಿನ ಕಳೆದರೆ ಸಾಕು. ನಾಳೆ ಇನ್ನು ಹೇಗೋ ಸಾಗಿಸಿದರೆ ಆಯ್ತು. ಬದುಕಿನ  ಮೂಲಭೂತ ಅವಶ್ಯಕತೆಗೊಂದಷ್ಟು ಹಣ. ಆ ಹಣದ ದುಡಿಮೆಯ ಜಾಗದಲ್ಲೇ ಆ ದುಡಿಮೆಯಲ್ಲೇ ಒಂದಷ್ಟು ಖುಷಿ. ದಣಿದ ಜೀವಕ್ಕೆ ಮಲಗಿದಲ್ಲೇ ನಿದ್ದೆ. ಅಕ್ಕನಾರೋ, ಅಣ್ಣನಾರೋ. ಹೆಂಡತಿ ಮಕ್ಕಳು ಯಾರೋ. ಎಲ್ಲ ಒಂದೇ ಪಂಗಡ. ಒಂದೇ ಸೂರು. ವ್ಯಾಪರಕ್ಕೆ ಮಾತ್ರ ಬೇರೆ ಬೇರೆ ಮಳಿಗೆ ಅಷ್ಟೇ.

 


ಕುತೂಹಲಕ್ಕೆ ಕೇಳಿದೆ-

‘ನಿಮಗೆಲ್ಲ ಆರೋಗ್ಯ ಸರಿ ಇಲ್ಲ ಅಂದ್ರೆ ಏನ್ ಮಾಡ್ತೀರಾ. ದಿನ ಒಂದೊಂದು ಊರು ತಿರುಗಾಡುತ್ತಾ ಇರ್ತೀರಲಾ ಮಕ್ಕಳು ಹೊಂದಿಕೊಳ್ಳುತ್ತವಾ? ಆರೋಗ್ಯ ಎನ್ ಆಗಲ್ವಾ?’ ಅಂತ.

ಅದಕ್ಕವರು-

‘ಅಯ್ಯೋ ಬಿಡಮ್ಮ, ಅವು ನಮ್ಮ ಹಾಂಗೆ ಇರ್ತವೆ. ನಮಗೇನ್ ಆಗತ್ತೆ, ನಾವು ಹುಟ್ಟಿದಾಗಿಂದ ಹಿಂಗೆ ಬದುಕಿದವರು. ಇರೋ ಊರಲ್ಲೇ ದಾವಖಾನೆಗೆ ಹೋಗೋದು. ಏನೋ ಒಂದಷ್ಟು ಗುಳಿಗೆ ನುಂಗೋದು. ಬದುಕಿದ್ರೆ ಮುಂದೆ ಹೋಗೋದು. ಸತ್ರೆ ಅಲ್ಲೇ ಮಣ್ಣಗೋದು’ ಅಂದ್ರು.

ಹಿಂಗೂ ಬದುಕು ಸಾಗಿಸುತ್ತಾರ ಅನ್ನಿಸಿದ್ದು ನಿಜ.
  


ಹಿಂದಿನ ನೆನಪಲ್ಲಿ ಕೊರಗೋದಿಲ್ಲ. ನಾಳೆ ಬಗ್ಗೆ ಯೋಚಿಸೋದು ಇಲ್ಲ. ಇಂದು ಹೇಗೆ ಬರತ್ತೋ ಹಾಗೆ. ಅವರ ಜೀವನಕ್ರಮ ಸರೀಯೋ ತಪ್ಪೋ ವಿಮರ್ಶೆಯಲ್ಲ. ಹೀಗೊಂದು ಬದುಕು ನಮಗೆ ಅಯ್ಯೋ ಪಾಪ ಅನ್ನಿಸಿದರೆ ಅವರಿಗೆ ಅದೇ ಬೇಸರವಿಲ್ಲದ ಬದುಕು. ನಮಗೆ ಕತ್ತಲೆ ಅನ್ನಿಸಿದ್ದು ಅವರಿಗೆ ಕತ್ತಲೆಯೋ, ಬೆಳಕೋ ಅಂತೂ ಜೀವನ ನಡೀತಾ ಇದೆ ಅನ್ನೋ ಭಾವ. ಬೆಳಕಿನ ಲೋಕದಲ್ಲೊಂದು ಕತ್ತಲೆಯ ಬದುಕಿನ ಅನಾವರಣ.
  


ಹೀಗೆ ನಮ್ಮನ್ನು, ನಮ್ಮ ಜೊತೆ ಇರುವ ನಮ್ಮದೇ ಊರನ್ನು , ಕೇರಿಯನ್ನು, ಬಣ್ಣ ಬಣ್ಣದ ಹೊಸ ಅವತಾರದಲ್ಲಿ ಕಾಣುವಂತೆ ಮಾಡುವ, ಬೆರಗನ್ನು ಉಂಟುಮಾಡುವ, ಜಾತ್ರೆಯ ಮಂದಿಗೆ ಶರಣು. ಇರುವ ನೋವುಗಳಿಗೆ ಬಣ್ಣ ಬಳಿದು ನಲಿವಿನ ಕ್ಷಣಗಳಂತೆ ನಮ್ಮನ್ನು ಬಣ್ಣದ ಲೋಕಕ್ಕೆ ಒಯ್ಯುವ ಜಾತ್ರೆಯನ್ನು ಆನಂದಿಸೋಣ. ಪ್ರತಿ ವರುಷವು ಮದುವಣಗಿತ್ತೆಯಂತೆ  ನಮ್ಮೂರನ್ನು ಶೃಂಗರಿಸುವ ಜಾತ್ರೆಗೆ ಈ ಬಾರಿಯ ವಿದಾಯ. ಮುಂದಿನ ಬಾರಿಗೆ ಸ್ವಾಗತ.

 

Leave a Reply

Your email address will not be published. Required fields are marked *