ತವರಿನ ತೇರು ಎಂಬ ಮಹಾಕಾವ್ಯ

ಅಂಕಣ ದಣಪೆ ದಾಟಿದ ಸಾಲು : ಶುಭಶ್ರೀ ಭಟ್ಟ

ಸಂಕ್ರಾಂತಿ ಕಾಳು ಹಂಚುವ ಸಂಭ್ರಮ ಮುಗಿಯುವುದರೊಳಗೆ ತೇರಿನ ಸಡಗರದ ಗಡಿಬಿಡಿ ಶುರುವಾಗುತ್ತಿತ್ತು. ಸಂಕ್ರಾಂತಿಯ ಮರುದಿನ ಗೋರೆಯ ಸಮೀಪದ ಗೊಜ್ನುಗುಡಿಯ ಗುಡ್ಡದಲ್ಲಿ ನಡೆಯುವ ‘ಜಟಕ’ ದೇವರ ಸಣ್ಣಹಬ್ಬ ನಡೆಯುತ್ತಿತ್ತು. ಒಂದೆರಡು ಬಳೆ ಕುಂಕುಮದಂಗಡಿ, ಪುಗ್ಗೆ-ಪೀಪೀಯ ಹುಡುಗ, ಐಸ್ ಕ್ಯಾಂಡಿಯವರಷ್ಟೇ ಬರುವ ಹಬ್ಬವದು. ಪೂಜೆ ಮಾಡುವಾಗ ಜನರ ಗುಂಪಲ್ಲಿ ಸುಮ್ಮನೆ ಕೈಮುಗಿದು ನಿಂತಿರುವ ಕೆಲವರಿಗೆ ಇದ್ದಕ್ಕಿದ್ದಂತೆ ಮೈಮೇಲೆ ದೇವರು ಬಂದು, ಅವರ ಮನಸ್ಸಲ್ಲಿದ್ದದ್ದೆಲ್ಲ ಕಹಿ ನೀರಾಗಿ ಎರಚಾಡಿ ರಾಡಿಯೆಬ್ಬಿಸಿಬಿಡುತ್ತಿತ್ತು. ಹುಣ್ಣಿಮೆ ಸಮೀಪಿಸುವಾಗ ಇದನ್ನೆಲ್ಲ ನೋಡಿ ಹೆದರಿದರೆ ರಾತ್ರಿಯೆಲ್ಲ ರಗಳೆ ಮಾಡುವರೆಂಬ ಅಚಲ ನಂಬಿಕೆ ಹೊತ್ತ ಅಮ್ಮ ಅಲ್ಲಿಗೆ ನಮ್ಮನ್ನು ಕಳುಹಿಸುತ್ತಲೇ ಇರಲಿಲ್ಲ. ಆ ಹಬ್ಬಕ್ಕೆ ಹೋಗಲೆಂದು ಎರಡು ಪಿರಿಯಡ್ ಮುಂಚಿತವಾಗಿಯೇ ಶಾಲೆಯನ್ನು ಮುಗಿಸುತ್ತಿದ್ದರು. ಉಳಿದವರೊಂದಿಗೆ ನಾವು ಹೋಗ್ತೇವೆ ಎಂದು ಹಠ ಮಾಡಿದಾಗಲೆಲ್ಲ ಅಮ್ಮ ಮೂರು ದಿನಗಳಾದ ಮೇಲೆ ಬರುವ ತೇರನ್ನು ನೆನಪಿಸಿ ಸುಮ್ಮನಿರಿಸುತ್ತಿದ್ದಳು. ತೇರಿನ ಹೆಸರು ಕೇಳಿದರೆ ಮನದಲ್ಲೆಲ್ಲ ಬಣ್ಣದೋಕುಳಿ ಚೆಲ್ಲಿದಂತೆ, ಚುಮುಚುಮು ಚಳಿಗೆ ಬೆಚ್ಚಗಿನ ಚಾದರ ಹೊದೆಸಿದಂತೆ, ತೇರೆಂಬ ಮಹಾಕಾವ್ಯದ ಗುಂಗಿನಲ್ಲಿ ದಿನಹಗಲೂ ಕಳೆಯುತ್ತಿತ್ತು.

 


ತೇರಿನ ಬೆಳಿಗ್ಗೆ ಎಲ್ಲರದ್ದೂ ತಿಂಡಿಯಾದ ಮೇಲೆ ಅಪ್ಪ ಅವರ ಪುಟ್ಟ ಉಳಿತಾಯದಿಂದ, ತೇರಿಗೆಂದೂ ಹೋಗದ ಅಜ್ಜಿಗೆ ‘ತೇರಿನ ದುಡ್ಡು’ ಕೊಡುತ್ತಿದ್ದರು. ಮಗ ಕೊಡುವ ನಾಕು ಕಾಸು ದುಡ್ಡನ್ನೇ ಅಷ್ಟೈಶ್ವರ್ಯವೆಂದು ಕಣ್ಣಲ್ಲಿ ಮಿಂಚು ಹರಿಸುವ ಅಜ್ಜಿಯ ಸಂತಸ ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ. ಹೊಸ ಫ್ರಾಕಿನೊಡನೆ ಬೇಬಿ ಶ್ಯಾಮಿಲಿ ಜುಟ್ಟು ಕಟ್ಟಿಕೊಂಡು ಸಿಂಗಾರಗೊಂಡು ಹೊರಡುವ ಮೊಮ್ಮಕ್ಕಳ ಕೈಯಲ್ಲೊಂದು ರೂಪಾಯಿ ನಾಣ್ಯವನ್ನಿಟ್ಟು ಬೇಕಾದ್ದು ತಿನ್ನಲು ಹೇಳುತ್ತಿದ್ದಳು. ಪ್ರತೀ ಬಾರಿ ನಮ್ಮೊಟ್ಟಿಗೆ ಬರಲು ಒತ್ತಾಯಿಸಿದರೆ ನನಗಾಗುವುದೇ ಇಲ್ಲವೆಂದು ಸಾರಾಸಗಟಾಗಿ ನಿರಾಕರಿಸಿಬಿಡುತ್ತಿದ್ದಳು. ಅಪ್ಪನ ಎಂ.ಎ.ಟಿ. ಗಾಡಿಯನ್ನೇರಿ ನಮ್ಮ ನಾಲ್ವರ ರಥ ಧಾರೇಶ್ವರದತ್ತ ಹೊರಟರೆ, ಗಾಡಿಯ ಅಂಡು ಕಾಣುವವರೆಗೂ ದಣಪೆಯಲ್ಲಿ ನಿಂತು ಕೈಬೀಸುತ್ತಿದ್ದಳು. ಅಜ್ಜಿ ಜೊತೆಗೆ ಬರಲಿಲ್ಲವೆಂದು ಬೇಸರವೆಲ್ಲ ಗಾಡಿ ಧಾರೇಶ್ವರ ಸಮೀಸುವಾಗ ಮರೆತೇ ಹೋಗುತ್ತಿತ್ತು. ತೇರಿನ ಮತ್ತು ನಿಧಾನಕ್ಕೆ ನಮ್ಮನ್ನಾವರಿಸತೊಡಗಿದಾಗ ಇಹಪರ ಮರೆತು ಕನಸಿನ ಲೋಕದಲ್ಲಿ ಹಂಸದಂತೆ ತೇಲುತ್ತಿದ್ದೆವು.

 


ತೇರಿಗೆ ಬಂದವರು ತನ್ನನ್ನು ಮನೆಗೆ ಖಂಡಿತವಾಗಿಯೂ ಕೊಂಡೊಯ್ಯುತ್ತಾರೆಂಬ ನಂಬಿಕೆಯ ಬಿಂಕದಲ್ಲಿ ಗೋಪುರಾಕಾರವಾಗಿ ನಿಂತ ಕುಂಕುಮ ರಾಶಿ, ಕೈಗಳ ಭೇದವಿಲ್ಲದೆ ಎಲ್ಲರಿಗೂ ಸಮಾನವಾದ ಸೌಂದರ್ಯ ತುಂಬಲು ಕಾದಿರುವ ಬಳೆಯಂಗಡಿ ಸಾಲು, ಮಕ್ಕಳಿಗೆಂದೇ ಬರುವ ಪೀಪೀ ಪುಗ್ಗಿ ಗಿಲಿಗಿಚ್ಚಿಗಳು, ತರಾವರಿ ಆಟದ ಸಾಮಾನುಗಳು, ನೆಂಟರಿಗೆಂದೇ ಕಾದಿರುವ ಬೆಂಡು-ಬತ್ತಾಸಿನ ಮಿಠಾಯಿ ಮಾರುವ ಪಡಸಾಲರು, ತಂಪಲ್ಲೂ ತಂಪನ್ನೀಯುವ ಐಸ್ ಕ್ರೀಮ್ ಗಾಡಿಗಳು, ದೇವರಿಗೆ ಹಣ್ಕಾಯಿ ಮಾರುವವರು, ತೇರಿಗೆಸೆಯಲು ಬಾಳೆಹಣ್ಣು ಹಂಚುವವರು, ನಾಕೈದು ಮಂಡಲಿಯ ಯಕ್ಷಗಾನ, ಪೋಸ್ಟರ್ ಮಾರುವ ಅಜ್ಜ, ಕಥೆ ಪುಸ್ತಕ ಬಿಟ್ಟು ಉಳಿದವನ್ನು ಮಾರುವ ಹುಡುಗ, ಕಾಡುವ ಹುಡುಗರನ್ನು ಮತ್ತಷ್ಟು ಕಾಡಿಸಲು ಮೆರೆದಾಡುವ ಹುಡುಗಿಯರು, ಕಾಣದಿರುವ ಹುಡುಗಿಗೆ ಗಾಳ ಹಾಕಿ ಮೀನುಗಾರರಾಗುವ ಹುಡುಗರು, ಮೊದಲ ತೇರು ತೋರಿಸಲು ಮಕ್ಕಳನ್ನು ಹೊತ್ತ ಹೆಣ್ಮಕ್ಕಳು, ನೆಂಟರು ಮತ್ತವರಿಷ್ಟರಿಂದ ತುಂಬಿ ತುಳುಕುವ ಈ ತೇರು ಪೇಟೆಯ ಗಮ್ಮತ್ತನ್ನು ಅನುಭವಿಸಿ ದಶಕಗಳೇ ಕಳೆದಿತ್ತು. ಓದು, ಉದ್ಯೋಗ, ಸಂಸಾರದ ಗೌಜಿಯಲ್ಲಿ ಕಳೆದುಕೊಂಡ ತೇರಿನ ಸಂಭ್ರಮನ್ನು ಮತ್ತೆ ಸವಿಯುವ ಅವಕಾಶ ಸಿಕ್ಕಿತ್ತು. ದಶಕಗಳಲ್ಲಿ ತೇರಿನ ಚಿತ್ರಣವೂ ಬಹಳ ಬದಲಾಯಿಸಿತ್ತು.

 


ತೇರಿನ ಖರ್ಚಿಗೆಂದು ಅಪ್ಪ ಕೊಡುವ ದುಡ್ಡನ್ನು ತೆಗೆದುಕೊಂಡು ಬೊಚ್ಚುಬಾಯಗಲಿಸಿ ಗಲಗಲಿಸುವ ಜೀವ ನಮ್ಮೊಡನೆ ಇರಲಿಲ್ಲ. ಅವಳ ನೆನಪಲ್ಲಿ ಮನಸ್ಸೆಲ್ಲ ಒದ್ದೆ ಮಾಡಿಕೊಂಡು, ತೇರು ಪೇಟೆಗೆ ಹೋದರೆ ಮುಂಚಿನ ಕಳೆಯಿರಲಿಲ್ಲ ಅಲ್ಲಿಯೂ. ದಾರಿಯುದ್ದಕ್ಕೂ ಕಣ್ಸೆಳೆಯುವ ಕುಂಕುಮದ ಸೌಂದರ್ಯ ಕಣ್ಮರೆಯಾಗಿತ್ತು. ಬಾಯಿ ನೋವಾಗುವಂತೆ ಒಟಗುಡುತ್ತಾ ಚಟಚಟನೆ ಹಳೆ ಬಳೆ ಒಡೆಯುತ್ತಾ ಹೊಸ ಬಳೆ ಹಾಕುವ ಬಳೆಗಾರ ಹೆಂಗಸರು ಎಲ್ಲೋ ಒಂದಿಬ್ಬರಿದ್ದರು. ಬಳೆ ಹಾಕಿಕೊಳ್ಳುವ ಸಡಗರ, ಬಿಂಗ್ಲಾಟಿ ಸರ ಕೊಳ್ಳುವ ಸಂಭ್ರಮವೂ ಕಾಣಸಿಗಲಿಲ್ಲ. ಪುಗ್ಗೆಯ ಜಾಗವನ್ನಾಗಲೇ ಹೈಡ್ರೋಜನ್ ಬಲೂನ್ ಆಕ್ರಮಿಸಿತ್ತು. ಮಿರ್ಚಿ ಬಜ್ಜಿ ಮಾಡುವ ಅಂಗಡಿಯಲ್ಲಿ ಈಗ ಪಾನಿಪೂರಿ, ಪಾವುಭಾಜಿಗಳ ಘಮಲು ಹರಡಿಕೊಂಡಿತ್ತು. ಪೀಪೀ ಗಿಲಗಿಚ್ಚಿಯನ್ನಂತೂ ಮೂಸುವವರೇ ಇರಲಿಲ್ಲ. ಬೊಂಬಾಯಿ ಮಿಠಾಯಿ ಮಾರುವವನ ಸುಳಿವೂ ಸಿಗಲಿಲ್ಲ. ಅಚ್ಚಕನ್ನಡದ ಕರಾವಳಿ ಕಂಪಿನ ಭಾಷೆಯ ನಡುನಡುವೆ ಹಿಂದಿಯ ಘಾಟು ಸೇರಿ ಕಸಿವಿಸಿಯಾಯ್ತು. ಆದರೆ ತೇರು ಎಳೆಯುವಾಗಲಿನ ಭಾವ, ಭಕುತಿ, ಖುಶಿ, ರಥಕ್ಕೆಸೆಯುವ ಬಾಳೆಹಣ್ಣಿಂದ ತಪ್ಪಿಸಿಕೊಳ್ಳುವ ಭರಾಟೆ, ರಥದಿಂದೆಸೆಯುವ ನಾಣ್ಯಕ್ಕಾಗಿನ ಪೈಪೋಟಿ, ತೇರೆಳೆಯುವವರ ಉತ್ಸಾಹ ಮಾತ್ರ ಹಾಗೆಯೇ ಇತ್ತು.

 

ಹಳೆಯ ನೆನಪುಗಳ ಗೌಜಿಯಲ್ಲಿ ಅನೇಕಾನೇಕ ಬದಲಾವಣೆಯನ್ನು ಸಹಿಸಲಸಾಧ್ಯವೆಂಬ ಭಾವದಲಿ ತೊಳಲಾಡುತ್ತ ಮನೆಗೆ ಹಿಂತಿರುಗಿದೆ. ಕಾಲವುರುಳಿ, ಸಮಯವದೆಷ್ಟು ಸರಿದರೂ ನಾನಂತೂ ಬದಲಾಗದೇ ಉಳಿದಿದ್ದೇನೆಂಬ ನಂಬಿಕೆ ಹುಟ್ಟಿಸಲು ದಣಪೆ ಬಾಗಿಲ ತನಕ ಹಿಂಬಾಲಿಸಿ ಬಂದ ಚಂದಿರನ ಕಂಡು ಅತೃಪ್ತ ಮನಕ್ಕೊಂದು ಬೆಚ್ಚನೆಯ ಭಾವವಾರಿಸಿತು. ದಶಕಗಳ ಅನಂತರ ನೋಡಿದ ತವರಿನ ತೇರು, ರಥಬೀದಿ, ಅಜ್ಜಿಯ ನೆನಪುಗಳ ಚಾದರದೊಳಗೆ ತೊಯ್ದಾಡುತ್ತಾ ಮನಸ್ಸು ಮುಲುಗುತ್ತಿದ್ದರೆ, ತೇರೆಂಬ ಮಹಾಕಾವ್ಯ ಆಟದ ಸಾಮಾನುಗಳನ್ನು ಕಂಡು ಕೀಕ್ ಎನ್ನುವ ಮಗುವಿನ ನಗುವಿನೊಳಗೆ ಬೆರೆತು ನಲಿಯುತ್ತಿತ್ತು.

 

Author Details


Srimukha

Leave a Reply

Your email address will not be published. Required fields are marked *