ದಣಪೆಯೊಳಗಣ ಅಕ್ಷರಮೋಹ

ಅಂಕಣ ದಣಪೆ ದಾಟಿದ ಸಾಲು : ಶುಭಶ್ರೀ ಭಟ್ಟ


ದಣಪೆಯೊಳಗಣ ಅಕ್ಷರಮೋ
ಅವಳು ಕಲಿತಿದ್ದು ಕೇವಲ ನಾಲ್ಕನೇ ತರಗತಿಯಾದರೂ ಅವಳಿಗೆ ಸಿಕ್ಕಾಪಟ್ಟೆ ಅಕ್ಷರಮೋಹ. ಈಗಿನ ಕಾಲದವರಿಗೆ ಹತ್ತರ ತನಕದ ಮಗ್ಗಿಯನ್ನೇ ಸೀದಾ ಹೇಳಲು ಸರಿಯಾಗಿ ಬರದಿರುವಾಗ, ಇಪ್ಪತ್ತರ ತನಕದ ಉಲ್ಟಾ ಮಗ್ಗಿಯ ಜೊತೆಗೆ ರೇಡಿಯೋದಲ್ಲಿ ಬರುತ್ತಿದ್ದ ಹಿಂದಿ ಹಾಡನ್ನು ಬಾಯಿಪಾಠ ಮಾಡುವ ಜಾಣ್ಮೆಯೂ ಆಕೆಗಿತ್ತು. ಎಳೇಪ್ರಾಯದ ಹೂಪಕಳೆಯಂತಹ ಆ ಮನಸ್ಸಿಗೆ ಮದುವೆಯಾದಾಗ ಹದಿನಾರೂ ತುಂಬಿರಲಿಲ್ಲ. ತುಂಬಿ ತುಳುಕುವ ಕುಟುಂಬಕ್ಕೆ ಸೇರಕ್ಕಿ ಒದ್ದೇ ಬಂದಿದ್ದಳು.

ಮದುವೆಯಾಗಿ ನಾಲ್ಕೈದು ವರುಷ ಕಳೆದರೂ ಕಟ್ಟದ ಬಸಿರು, ಮುಸುರೆ ತಿಕ್ಕುವಾಗ ನಿಲ್ಲದ ಬಿಕ್ಕುಸಿರು. ಕೈಹಿಡಿದವ ಪ್ರೀತಿ ಮಾಡುವವನಾದರೂ ಉಳಿದವರಿಂದ ‘ಗೊಡ್ಡಿ’ಯೆಂಬ ಜರಿತ, ಕಂಡಕಂಡವರ ಮೂದಲಿಕೆಯಿಂದ ಸೋತು ಬಳಲಿದ್ದಳು. ಇಪ್ಪತ್ತಕ್ಕೆಲ್ಲಾ ಎಪ್ಪತ್ತರ ಅನುಭವ ಇಣುಕಿದಂತೆಲ್ಲಾ ಮುಗುದೆ ಗಟ್ಟಿಯಾದಳು. ಆ ಸಮಯದಲ್ಲಿ ಅವಳು ಉಸಿರಾಡಿದ್ದೆ ಅಕ್ಷರದಿಂದ. ಮದುವೆ ಮನೆಯಲ್ಲಿ ಬೂಂದಿಲಾಡು ಕಟ್ಟಿಕೊಟ್ಟ ಪೊಟ್ಟಣ, ಆಗಾಗ ಹಂಡೆ ಕಾಯಿಸುವಾಗ ಸಿಗುವ ರದ್ದಿ ದಿನಪತ್ರಿಕೆಗಳ ಅಕ್ಷರಕ್ಷರವನ್ನೂ ಬಿಡದೇ ಓದಿ ತೃಪ್ತಿಪಟ್ಟುಕೊಳ್ಳುತ್ತಿತ್ತು ಆ ಜೀವ. ಬಹುಶಃ ಅವಳಿಂದಲೇ ‘ಅಕ್ಷರ’ವೆಂಬ ವಂಶವಾಹಿನಿ ನಮ್ಮ ಕುಟುಂಬಕ್ಕೆ ವರವಾಗಿ ಬಂತು. ಅವಳಿಂದ ಅಪ್ಪನಿಗೆ, ಅಪ್ಪನಿಂದ ನನಗೆ. ಹೌದು, ಆ ಅಕ್ಷರಪ್ರೇಮಿ, ಅಕ್ಷರಮೋಹಿ ಊರಿಗೆಲ್ಲ ‘ಅಬ್ಬೆ’ಯೆನಿಸಿಕೊಂಡಿದ್ದ ನನ್ನಜ್ಜಿ ಸಾವಿತ್ರಮ್ಮ.

ನಾನು ಚಿಕ್ಕವಳಿದ್ದಾಗ ಮಾಡುವ ಅಸಾಧ್ಯ ಕಿತಾಪತಿಯ ತಡೆಯಲು ಅವಳು ಮಾಡಿದ ಉಪಾಯವೇ ಪುಸ್ತಕ. ಓದಿನ ರುಚಿ ಹತ್ತಿಸಿ ‘ಪುಸ್ತಕ ನನ್ನೊಳಗೋ, ನಾ ಪುಸ್ತಕದೊಳಗೋ’ ಎಂಬಂತೆ ಬದುಕಲು ಕಲಿಸಿದ್ದು ನನ್ನಜ್ಜಿ ಮತ್ತು ಅಪ್ಪ. ಆಗೆಲ್ಲ ಶಾಲೆಯ ಪರೀಕ್ಷೆ ಮುಗಿದರೂ ಫಲಿತಾಂಶ ಬರುವ ತನಕ ಮಕ್ಕಳೆಲ್ಲ ಶಾಲೆಗೆ ಹೋಗಲೇಬೇಕಿತ್ತು. ಉಳಿದ ಮಕ್ಕಳೆಲ್ಲ ಕುಂಟಾಬಿಲ್ಲೆ, ಕಣ್ಣಾಮುಚ್ಚೆ, ಬಳೆಯೋಡಾಟ, ಹಾಣಿಗೆಂಡೆ, ಗದ್ನಕಾಯಾಟ, ಕಲ್ಲಾಟ ಅದು ಇದು ಅಂತ ಆಟದಲ್ಲಿ ಕುಣಿಯುತ್ತಿದ್ದರೆ ನಾನೊಬ್ಬಳು ಅಕ್ಕೋರ ಫುಸಲಾಯಿಸಿ ಹೆಡ್ಮಾಸ್ತರರ ಕಪಾಟಿನಲ್ಲಿದ್ದ ಕಥೆಪುಸ್ತಕ ಓದುತ್ತಿದ್ದೆ. ಕನ್ನಗಿ, ಧ್ರುವ, ಬುದ್ಧ, ಸಾವಿತ್ರಿ, ನಳ-ದಮಯಂತಿ ಹೀಗೆ ಹತ್ತು ಹಲವಾರು ಸಣ್ಣಪುಟ್ಟ ಕಥೆಪುಸ್ತಕಗಳನ್ನೆಲ್ಲ ಪಟಪಟನೆ ಓದಿ ಮುಗಿಸಿ, ಮತ್ತಷ್ಟು ಕೊಡಿರೆಂದು ‘ಅಕ್ಷರದಾಹಿ’ಯಂತೆ ಬೇಡಿಕೊಳ್ಳುತ್ತಿದ್ದೆ. ‘ಎಂತಾ ಓದ್ತತೆ ಕೂಸು. ಕಪಾಟೆಲ್ಲ ಖಾಲಿ ಆಗುಕ್ ಬಂದದೆ ಓದಿ. ಹಿಂಗೆಲ್ಲ ಓದ್ಕ ಚಸ್ಮಾ ಬಂದ್ರ್ ನಮ್ಗ್ ಹೇಳ್ಬೇಡಿ ಕಡಿಗೆ’ ಎಂಬ ದೂರು ಮನೆ ತಲುಪಿತ್ತು. ‘ಚಸ್ಮಾ ಬಂದ್ ಕೂಸ್ನಾ ಯಾರ್ ಮದ್ವೆ ಮಾಡ್ಕತ್ತಾ’ ಎಂದು ಕೆಂಗಣ್ಣು ಬೀರುತ್ತಾ ಅಮ್ಮ ಲೊಚಗುಟ್ಟಿದರೆ, ಭೇಷ್ ಎಂದು ಹುರಿದುಂಬಿಸಿದವರು ಅಜ್ಜಿ ಮಾತ್ರ.

ಪ್ರತಿವಾರ ಬರುತ್ತಿದ್ದ ಸುಧಾ, ತರಂಗಗಳಲ್ಲಿನ ಮಕ್ಕಳ ಕಥೆಯನ್ನಷ್ಟೇ ಓದಬೇಕೆಂಬುದು ನನ್ನಮ್ಮ ಮಾಡಿದ ಮಳ್ಳು ನಿಯಮಗಳಲ್ಲಿ ಒಂದಾಗಿತ್ತು. ಆದರೆ ಒಳ್ಳೆಯ ಕಥೆಗಳಿದ್ದರೆ ಅಮ್ಮನ ಕಣ್ತಪ್ಪಿಸಿ ಅಜ್ಜಿಯೇ ಓದಿಸುತ್ತಿದ್ದಳು. ಶಾಲೆಯ ಪುಸ್ತಕದಲ್ಲಿ ಕಥೆ ಪುಸ್ತಕವನ್ನಿಟ್ಟು ಓದುವುದನ್ನು ನೋಡಿದಾಗಲೆಲ್ಲಾ ‘ಪೋಕ್ರಿಶಾ..’ ಎಂದು ರಾಗವಾಗಿ ಕರೆದು ಶತ ತುಂಟಿಯಂತೆ ನಗುತ್ತಾ ಬೆನ್ನಿಗೆ ಗುದ್ದಿ ಹೋಗುತ್ತಿದ್ದಳು. ಆದರೆ ಹದ್ದಿನ ಕಣ್ಣಿನ ಅಮ್ಮನಿಗೆ ಕಥೆ ಪುಸ್ತಕ ಓದುವ ವಿಷಯ ತಿಳಿದು ದಾಸ್ವಾಳ ಶೆಳೆ ತರುವುದರೊಳಗೆ, ಗುಡುಗುಡನೆ ನನ್ನ ಕಿವಿಯಲ್ಲಿ ಗುಸುಗುಟ್ಟಿ ನಾನು ತಪ್ಪಿಸಿಕೊಳ್ಳುವಂತೆ ಮಾಡಿ ಅಮ್ಮನ ಬಳಿ ತಾನು ಬೈಸಿಕೊಂಡು ಗೊಳ್ಳೆಂದು ನಕ್ಕುಬಿಡುತ್ತಿದ್ದಳು. ನಾನು ಓದುತ್ತಿದ್ದರೆ ಅವಳಿಗೆ ತಾನೇ ಓದಿದಂತಹ ಖುಷಿ. ಅವಳು ನನಗಿತ್ತ ಉತ್ತೇಜನವೇ ಓದನ್ನು ನಾನು ಹಚ್ಚಿಕೊಂಡು ಮೆಚ್ಚಿಕೊಳ್ಳುವಂತೆ ಮಾಡಿದ್ದು. ಪಿಯುಸಿಯಲ್ಲಿದ್ದಾಗ ‘ಪ್ರಿಯಾಂಕ’ ಪತ್ರಿಕೆಯಲ್ಲಿ ನನ್ನ ಮೊದಲ ಕಥೆ ಪ್ರಕಟವಾಗಿತ್ತು. ಆಗ ನಮ್ಮೆಲ್ಲರಿಗಿಂತ ಖುಷಿಪಟ್ಟಿದ್ದು ಅಜ್ಜಿ. ಅವಳಿಗದಾಗಲೇ ಅರಳುಮರುಳು ಶುರುವಾಗಿತ್ತು, ಹೇಳಿದ್ದನ್ನೇ ನೂರು ಸಲ ಹೇಳಿದವರ ಬಳಿಯೇ ಹೇಳುತ್ತಿದ್ದಳು. ದಣಪೆಕಟ್ಟೆಯಲ್ಲಿ ಕುಳಿತು ದಾರಿಯಲ್ಲಿ ಹೋಗಿ ಬರುವವರನ್ನೆಲ್ಲ ಕರೆದು ಮಾತನಾಡಿಸಿ ಕೊನೆಗೆ ನನ್ನ ಕಥೆಯ ಬಗ್ಗೆ ಪ್ರವರ ಹೇಳಿ ಕಳಿಸುತ್ತಿದ್ದಳಂತೆ. ಪದೇ ಪದೇ ಕೇಳಿಸಿಕೊಂಡವರೆಲ್ಲ ಅಜ್ಜಿಯ ಕುರುಡುಪ್ರೇಮವೆಂದು ಮೂಗು ಮುರಿಯುತ್ತಿದ್ದರಾ? ನೋಡಿಲ್ಲ. ಆದರೆ ನನಗೆ ಮಾತ್ರ ದಣಪೆಯನ್ನೂ ದಾಟದ ಅವಳ ಭಾವನೆಗಳ ಸಾಲುಗಳಿಗಿನ್ನು ಬಿಡುಗಡೆ ಸಿಗಬಹುದೆಂಬ ಆಶಾಕಿರಣ ಅವಳಲ್ಲಿ ಬೆಳಗಿದ್ದು ಕಾಣುತ್ತಿತ್ತು.

ಅನಂತರದ ದಿನಗಳಲ್ಲಿ ಹಲವಾರು ಕಥೆಗಳು, ಲೇಖನಗಳೆಲ್ಲ ವಿವಿಧ ಪತ್ರಿಕೆಯಲ್ಲಿ ಪ್ರಕಟಗೊಂಡವು. ಆದರೆ ಅದನ್ನೆಲ್ಲ ಓದಲು ಅವಳಿಂದಾಗಲೇ ಇಲ್ಲ. ವೃದ್ಧಾಪ್ಯದ ಮರುಳುತನ ಜಾಸ್ತಿಯಾಗಿ ಶಿಶುವಿನಂತಾಡುತ್ತಿದ್ದ ಅವಳಿಗೆ ಓದುವುದಿರಲಿ ಕೇಳಿಸಿಕೊಳ್ಳುವ ಮನಸ್ಸೂ ಇರಲಿಲ್ಲ. ಅಕ್ಷರದಲ್ಲೇ ತನ್ನ ಜೀವನದ ನೆಮ್ಮದಿ ಕಂಡುಕೊಂಡವಳು ಕೊನೆಕ್ಷಣಕ್ಕೆ ಅಕ್ಷರವನ್ನೇ ಮರೆತದ್ದು ಅರಗಿಸಿಕೊಳ್ಳಲು ನನ್ನಿಂದಾಗಲೇ ಇಲ್ಲ. ಅವಳಿಲ್ಲದ ವರುಷ ಅವಳ ನೆನಪಿನಿಂದ ತಪ್ಪಿಸಿಕೊಳ್ಳಲು ಲೈಬ್ರರಿಯಲ್ಲಿ ಕುಳಿತು ಹುಚ್ಚಿಯಂತೆ ಪುಟ ತಿರುವಿದ್ದಿದೆ. ರಾಮಕೃಷ್ಣಾಶ್ರಮದ ಪ್ರಾಂಗಣದಲ್ಲಿ ಕುಳಿತು ಕಂಡಿದ್ದೆಲ್ಲ ಗೀಚಿದ್ದಿದೆ. ಅಪರಾತ್ರಿಯಲ್ಲಿ ಉಕ್ಕಿ ಬರುವ ಬಿಕ್ಕನ್ನು ಅಡಗಿಸಲು ಗುಮ್ಮನಂತೆ ಪಿಜಿಯ ಮೆಟ್ಟಿಲ ಬಳಿ ಕುಳಿತು ಓದಿದ್ದೂ ಇದೆ.

ನನ್ನ ಪ್ರತಿ ಅಕ್ಷರದ ಉಸಿರಲ್ಲೂ ಅವಳ ಬಿಸುಪಿದೆ, ಅವಳು ಪಿಸುಗುಟ್ಟಿದ ಗುಟ್ಟಿದೆ. ನಾನು ಗೀಚಿದ್ದೆಲ್ಲ ನಿಮ್ಮ ಮೂಲಕ ಓದುತ್ತಾಳೆಂಬ ನಂಬಿಕೆಯಿದೆ. ಈಗ ‘ಅಂಕಣ’ದ ಅಂಗಳಕ್ಕೆ ಹೆಜ್ಜೆಯಿಟ್ಟಿರುವೆ, ಅನುಭವವಿಲ್ಲ, ಗಳಿಸಬೇಕಿದೆ. ಈ ಕ್ಷಣ ಮಾತ್ರ ತೀವ್ರವಾಗಿ ಅನಿಸುತ್ತಿದೆ ಅವಳಿರಬೇಕಿತ್ತು ಇಂದು, ‘ದಣಪೆ ದಾಟಿದ ಸಾಲು’ಗಳ ಓದಲು, ಕಾಣಲು, ಸಂಭ್ರಮಿಸಲು.

Author Details


Srimukha

Leave a Reply

Your email address will not be published. Required fields are marked *