ಮುಸ್ಸಂಜೆ

ಅಂಕಣ ಸ್ಫಟಿಕ~ಸಲಿಲ : ಮಹೇಶ ಕೋರಿಕ್ಕಾರು

ಅದೊಂದು ಕಡಲ ಕಿನಾರೆ. ಎಡೆಬಿಡದೆ ಬೀಸಿ ಬರುವ ತಂಗಾಳಿ, ಆ ಗಾಳಿಯೊಡನೆ ತೇಲಿ ಸಾಗಿ ಬಾನಂಚಿನಲ್ಲಿ ಮರೆಯಾಗುವ ಪಕ್ಷಿಗಳು, ಮೊರೆಯಿಟ್ಟು ದಡಕ್ಕಪ್ಪಳಿಸುವ ಬೆಳ್ನೊರೆಯ ತೆರೆಗಳು. ಇವೆಲ್ಲದರ ನಡುವೆ ಪಡುವಣ ದಿಕ್ಕಿನಲ್ಲಿ ಕೆಂಪಡರಿ ಕಣ್ಮರೆಯಾಗುವ ಸಂಧ್ಯಾ ಸೂರ್ಯನಂತೆ, ನಿತ್ಯವೂ ಅವರೀರ್ವರೂ ಅಲ್ಲಿ ಬಂದೇ ಬರುವರು. ಭೋರಿಡುವ ತೆರೆಗಳಪ್ಪಳಿಸುವ ಕಾರ್ಗಲ್ಲ ಕಿನಾರೆಯಲ್ಲೊಂದು ಪುಟ್ಟ ದೇಗುಲ. ದೇಗುಲದಿಂದ ಅನತಿ ದೂರದಲ್ಲೊಂದು ಸಕಲ ಸೌಲಭ್ಯಗಳಿರುವ ಹೈಟೆಕ್ ವೃದ್ಧಾಶ್ರಮ. ದೇಗುಲದಲ್ಲಿ ಅಪರಾಹ್ನದ ಮೊದಲ ಗಂಟೆ ಬಾರಿಸುವ ಹೊತ್ತು ಅವರೀರ್ವರೂ ಆ ವೃದ್ಧಾಶ್ರಮದಿಂದ ಹೊರಕ್ಕೆ ಅಡಿಯಿಡುವರು. ಹಾಗೆ ಅಡಿಯಿಟ್ಟರೆ, ದೇವಾಲಯಕ್ಕೊಂದು ಪ್ರದಕ್ಷಿಣೆಗೈದು ಮತ್ತೆ ಕಡಲ ಕಿನಾರೆಯತ್ತ ಇಳಿಯುವುದು ಆ ಎರಡು ಮುದಿ ಜೀವಗಳ ನಿತ್ಯದ ಕಾಯಕ. ಅದೆಷ್ಟೋ ಹೊತ್ತು ಕೈಗೆ ಕೈಬೆಸೆದು ಅತ್ತಿಂದಿತ್ತ ಅಡ್ಡಾಡುವರು ಅವರು. ಬಗ್ಗದ ತಮ್ಮ ಮಂಡಿಯನ್ನು ಅದುಮಿಕೊಳ್ಳುತ್ತಾ ಮತ್ತೆ ಆ ಬಂಡೆ ಕಲ್ಲಿನ ಮೇಲೆ ಸುಮ್ಮನೇ ಕುಳಿತಿರುವರು. ಕೆಲವೊಮ್ಮೆ ಮಾತು, ಕೆಲವೊಮ್ಮೆ ಮೌನ. ಮುಸ್ಸಂಜೆ ಆವರಿಸಿದಂತೆಯೇ ಮೇಲೇರಿ ಬರುವ ತೆರೆಗಳು ತಮ್ಮ ಪಾದವನ್ನು ಸ್ಪರ್ಶಿಸುವವರೆಗೆ ಪಡುವಣ ಆಗಸದಲ್ಲಿ ಸೂರ್ಯನು ಇಳಿದು ಹೋದ ಹಾದಿಯನ್ನೇ ದಿಟ್ಟಿಸುತ್ತಾ ಕೂರುವರು ಅವರು. ಹಾಗೆ ದಿಟ್ಟಿಸುತ್ತಿರಲು ಕೆಲವೊಮ್ಮೆ ಆ ಮೊಗದಲ್ಲಿ ಮಂದಹಾಸ, ಮತ್ತೆ ಕೆಲವೊಮ್ಮೆ ನಿರ್ಲಿಪ್ತತೆ, ಇನ್ನೂ ಕೆಲವೊಮ್ಮೆ ಅಶ್ರುಭಾಷ್ಪ. ಏರಿಳಿವ ತೆರೆಗಳಂತೆಯೇ ಬದಲಾಗುವ ಭಾವಾತಿರೇಕಗಳು ಈರ್ವರ ಮೊಗದಲ್ಲೂ.

ಕಡಲಾಳದಲ್ಲಿಳಿದು ಮರೆಯಾಗುವ ಮುನ್ನ ಪ್ರಕಾಶಿಸುವ ಆ ಸೂರ್ಯನಂತೆಯೇ ಬೆಳಗಿದ್ದ ಕಾಲವೊಂದಿತ್ತು ಅವರೀರ್ವರಿಗೂ. ನನಗಿಂತ ಎತ್ತರದಲ್ಲಿ ಇನ್ನು ಯಾರಿಹರು? ನಾವು ಏರಿದ ಎತ್ತರವನ್ನು ಇನ್ಯಾರು ಏರಬಲ್ಲರು? ಎನ್ನುವಂತೆ ಅಂಬರದ ತುತ್ತತುದಿಯಲ್ಲಿಯೇ ಆ ಜೋಡಿಗಳು ಮೆರೆದಿದ್ದ ಯೌವ್ವನ ಕಾಲವದು.

 

ಸಾಧಾರಣ ಕೃಷಿ ಕುಟುಂಬದಲ್ಲಿ ಜನಿಸಿದರೂ, ಸ್ವಂತ ಸಾಧನೆಯಿಂದಲೇ ಓದಿ ಪದವಿಗಳ ಮೇಲೆ ಪದವಿಯನ್ನು ಪಡೆದಿದ್ದರು ಆ ಮುತ್ತಾತ. ತಮ್ಮ ಅಂತಸ್ತಿಗೊಪ್ಪುವ ಒಬ್ಬ ಹುಡುಗಿಯನ್ನೇ ಆರಿಸಿ, ಕುಟುಂಬದ ವಿರೋಧವನ್ನೂ ಧಿಕ್ಕರಿಸಿ ಮದುವೆಯಾಗಿದ್ದರು ಅವರು. ತಮ್ಮ ಜೀವಿತಾವಧಿಯಲ್ಲಿ ಅವರು ಅನುಭವಿಸದ ಸುಖ ಸಂಪತ್ತುಗಳಿಲ್ಲ, ಪಡೆಯದ ಗೌರವಗಳಿಲ್ಲ, ಗಳಿಸದ ಸ್ವಾಧೀನಗಳಿಲ್ಲ. ತಮ್ಮ ಬಳಿಯಿರುವ ಹಣ, ಪದವಿ, ಸ್ವಾಧೀನಗಳಿಗೆ ಪಡೆಯಲಾಗದ್ದು ಈ ಲೋಕದಲ್ಲಿ ಯಾವುದೂ ಇಲ್ಲವೆಂಬ ಹಮ್ಮಿನಿಂದಲೇ ಜೀವಿಸಿದವರು ಅವರೀರ್ವರೂ.

 

ಒಂದು ಕೈಯಲ್ಲಿ ತನ್ನ ಮಂಡಿಯನ್ನು ನೇವರಿಸಿಕೊಳ್ಳುತ್ತಾ, ಇನ್ನೊಂದು ಕೈಯನ್ನು ತನ್ನ ಸಂಗಾತಿಯ ತೊಡೆಯ ಮೇಲಿರಿಸಿ ಹದವಾಗಿ ತಟ್ಟಿ, ಸೂರ್ಯನು ಅಸ್ತಮಿಸಿದ ದಿಕ್ಕನ್ನೇ ದಿಟ್ಟಿಸುತ್ತಾ ಆ ಮುತ್ತಜ್ಜಿ ಉಸುರಿದರು, “ಇಲ್ಲಿ ಅಸ್ತಮಿಸಿದ ಆ ಸೂರ್ಯ ಈಗ ಕಡಲಿನಾಚೆ ಎದ್ದಿರಬೇಕಲ್ಲಾ?”

ಅವರ ಮನದಾಳದ ಇಂಗಿತವನ್ನು ಅರ್ಥೈಸಿಕೊಂಡಂತೆ ದೀರ್ಘ ನಿಟ್ಟುಸಿರಿಟ್ಟರು ಮುತ್ತಾತ. ಅಷ್ಟರಲ್ಲಿ ಪಕ್ಕದಲ್ಲಿಯೇ ಏರಿ ಬಂದ ದೊಡ್ಡದಾದೊಂದು ತೆರೆಯು ಅವರೀರ್ವರ ಪಾದವನ್ನು ಮೆಲ್ಲನೆ ಮುತ್ತಿಕ್ಕಿ ಇಳಿದು ಹೋಯಿತು. ಶುಷ್ಕ ನಗು ನಕ್ಕ ತಾತ ನುಡಿಯತೊಡಗಿದರು, “ನೋಡು.. ಕಡಲಿನಾಚೆಯ ದೇಶದಲ್ಲೀಗ ಬೆಳಗಾಗಿರಬೇಕು. ಇಂದು ನಿನ್ನ ಜನ್ಮದಿನವಲ್ಲವೇ? ಮಕ್ಕಳು ನಿನ್ನನ್ನೇ ನೆನೆಯುತ್ತಿರಬೇಕು. ಅದಕ್ಕೇ ನೋಡು, ಈ ತೆರೆಗಳು ಹೇಗೆ ಏರಿಬಂದು ನಿನ್ನ ಕಾಲ್ತೊಳೆಯುತ್ತಿವೆ ಅಲ್ಲವೇ?” ಆ ಮಾತುಗಳು ತನ್ನ ಸಾಂತ್ವನಕ್ಕಾಗಿ ಎಂದು ಗೊತ್ತಿದ್ದರೂ, ಅದರಲ್ಲಿಯ ಭಾವವನ್ನು ಅನುಭವಿಸಿದ ಮುತ್ತಜ್ಜಿಯ ಸುಕ್ಕುಗಟ್ಟಿದ ಮೊಗವು ಒಂದು ಕ್ಷಣ ಅರಳಿನಿಂತಿತು. ಆದರೆ, ವಾಸ್ತವವು ಖಂಡಿತಾ ಹಾಗಿರಲಾರದೆಂದರಿತ ಮುತ್ತಜ್ಜಿಯ ಕಣ್ಣು ಮರುಕ್ಷಣದಲ್ಲಿ ತೇವಗೊಂಡಿತು. ಏರಿ ಬಂದ ತೆರೆಗಳ ಜೊತೆ ಲೀನಗೊಂಡ ಅವರೀರ್ವರ ಅಶ್ರುಭಾಷ್ಪವು ಆ ಕಡಲಿನಲ್ಲೊಂದು ಬಿಂದುವಾಗಿ ಸೇರಿಹೋಯಿತು.

ದೂರದಲ್ಲೆಲ್ಲೋ ನಿಂತ ಕೋಸ್ಟ್ ಗಾರ್ಡ್ ಸೀಟಿ ಹೊಡೆಯುತ್ತಿದ್ದನು. ಮುತ್ತಜ್ಜಿಯ ಬೆನ್ನು ತಟ್ಟಿ ಎಬ್ಬಿಸಿದರು ಮುತ್ತಾತ. ಒಬ್ಬರ ಕಣ್ಣೀರನ್ನು ಇನ್ನೊಬ್ಬರು ಒರೆಸುತ್ತ, ಒಬ್ಬರಿಗೊಬ್ಬರು ಆತುಕೊಂಡ ಆ ಮುದಿಜೀವಗಳು ಮತ್ತೆ ತಮ್ಮ ವೃದ್ಧಾಶ್ರಮದತ್ತ ಪಾದ ಬೆಳೆಸಿದರು. ಮುಸ್ಸಂಜೆಯ ಆ ಕತ್ತಲಿನಲ್ಲಿ ಲೀನವಾದರು.

 

ಫಕ್ಕನೇ ಏರಿ ಬಂದು ಆವರಿಸಿದ ತೆರೆಯೊಂದು ಅವರು ಕುಳಿತಿದ್ದ ಬಂಡೆಕಲ್ಲನ್ನು ತಬ್ಬಿ ನಿಂತು, ಅದರ ಕಿವಿಯಲ್ಲಿ ಹೀಗೆ ಉಸುರುತ್ತಿತ್ತು, ”ನೋಡಿದೆಯಾ ಕಲ್ಲೇ ಮಾನವನ ಕಥೆಯ? ಜೀವನದ ಸಂಧ್ಯಾ ಕಾಲದಲ್ಲಿ ಅವನು ಬಯಸುವುದು ಒಂದಷ್ಟು ಮಮತೆ, ಸಾಂಗತ್ಯ, ಸಂಬಂಧಗಳನ್ನೇ ಹೊರತು, ಜೀವನದುದ್ದಕ್ಕೂ ಕೂಡಿಟ್ಟ ಸಂಪತ್ತನ್ನಲ್ಲ. ಸಂಪತ್ತು, ಅಂತಸ್ತುಗಳ ಜೊತೆ ಜೊತೆಗೆ ತಾನು ಕೂಡಿಡಲೇ ಬೇಕಾದ ಮೌಲ್ಯಗಳನ್ನು ಅವನು ಎಂದಿಗೂ ಮರೆಯಬಾರದು.”

 

ಅಷ್ಟು ಹೇಳಿದ ತೆರೆಯು ಜಾರಿ ಇಳಿದು, ಸಾಗರ ಮಧ್ಯೆ ಮರೆಯಾಯಿತು. ಕಲ್ಲು, ಕಲ್ಲಾಗಿಯೇ ನಿಂತು ರಾತ್ರಿ ಕತ್ತಲಿನಲ್ಲಿ ಒಂದಾಯಿತು.

Author Details


Srimukha

Leave a Reply

Your email address will not be published. Required fields are marked *