ಮೊಬೈಲ್ ಮಾಯೆಯ ಜಾಗದಲ್ಲಿ ಮಠ ಪ್ರವೇಶ ಮಾಡಲಿ – ಶ್ರೀಸಂಸ್ಥಾನ : ಇಂದಿನ ಗುರುಗಳೂ ಆದಿಶಂಕರರು – ವಿದ್ವಾನ್ ಉಮಾಕಾಂತ  ಭಟ್

ಉಪಾಸನೆ

ಬೆಂಗಳೂರು: ಪೂರ್ವಾಚಾರ್ಯರಾದ ಶ್ರೀರಾಘವೇಂದ್ರಭಾರತೀ ಮಹಾಸ್ವಾಮಿಗಳು ವಿದ್ಯಾಪ್ರೀತರಾಗಿದ್ದರು. ವೇದ, ವೇದಾಂಗಗಳಲ್ಲಿ ಅತಿಶಯವಾದ ಆಸಕ್ತಿಯನ್ನು ಹೊಂದಿದವರಾಗಿದ್ದರು. ಹಾಗಾಗಿ ಪ್ರತಿವರ್ಷ ಅವರ ಆರಾಧನೆಯ ಪುಣ್ಯದಿನದಂದು ನಾಡಿನ ಶ್ರೇಷ್ಠ ವಿದ್ವಾಂಸರೊಬ್ಬರಿಗೆ ಪುರಸ್ಕಾರ ನೀಡಿ ‘ದೊಡ್ಡ ಗುರುಗಳನ್ನು’ ನೆನಪಿಸಿಕೊಳ್ಳುವ ಕಾರ್ಯ ನಡೆಯುತ್ತಿದೆ ಎಂದು ಶ್ರೀಸಂಸ್ಥಾನದವರು ಹೇಳಿದರು.

 

ಗಿರಿನಗರದ ಶ್ರೀರಾಮಾಶ್ರಮದಲ್ಲಿ ನಡೆದ ಬ್ರಹ್ಮೈಕ್ಯ ಜಗದ್ಗುರುಶಂಕರಾಚಾರ್ಯ ಶ್ರೀಶ್ರೀ ರಾಘವೇಂದ್ರಭಾರತೀ ಮಹಾಸ್ವಾಮಿಗಳ ಆರಾಧನಾ ಮಹೋತ್ಸವದಲ್ಲಿ ದಿವ್ಯಸಾನ್ನಿಧ್ಯವಹಿಸಿ, ಕೆರೆಕೈ ಉಮಾಕಾಂತ ಭಟ್ಟರಿಗೆ ‘ಪಾಂಡಿತ್ಯ ಪುರಸ್ಕಾರ’ವನ್ನು ಅನುಗ್ರಹಿಸಿ ಮಾತನಾಡಿದ ಶ್ರೀಸಂಸ್ಥಾನದವರು, ವಿದ್ವಾನ್ ಉಮಾಕಾಂತ ಭಟ್ಟರು ಮೈಸೂರಿನ ರಾಮಭದ್ರಾಚಾರ್ಯರಲ್ಲಿ ಸಂಪೂರ್ಣ ಅಭ್ಯಾಸವನ್ನು ಮಾಡಿದವರು. ನಾವು ಕೂಡ ಸಂನ್ಯಾಸಾನಂತರ ರಾಮಭದ್ರಾಚಾರ್ಯರಲ್ಲಿ ಅಭ್ಯಾಸ ಮಾಡಿರುವುದಾಗಿದೆ. ಕೀರ್ತಿಶೇಷರಾದ ರಾಮಭದ್ರಾಚಾರ್ಯರಿಂದ ಸಂಪೂರ್ಣವಾಗಿ ಕರಗತ ಮಾಡಿಕೊಂಡ ಹಿರಿಮೆ ಉಮಾಕಾಂತ ಭಟ್ಟರದ್ದು. ಅವರಿಂದ ಸಮಾಜಕ್ಕೆ ಇನ್ನಷ್ಟು ಸೇವೆ ಸಿಗುವಂತಾಗಲಿ ಎಂದು ಆಶಿಸಿದರು.

 

ಹವ್ಯಕ ಮಹಾಮಂಡಲದಿಂದ ತಯಾರಿಸಿ, ಲೋಕಾರ್ಪಣೆಯಾದ ‘ಶಿಷ್ಯಬಂಧ’ ತಂತ್ರಾಶದ ಕುರಿತು ಮಾತನಾಡಿ, ಮೊಬೈಲ್ ಎಂಬುದು ಮಾಯೆಯ ದ್ವಾರ, ಇಂದು ಮೊಬೈಲ್ ಮೂಲಕ ಪಾಶ್ಚಿಮಾತ್ಯ ಸಂಸ್ಕೃತಿ ನಮ್ಮನ್ನು ಆವರಿಸುವಂತೆ ಮಾಡುತ್ತಿದೆ. ಆದರೆ ಮಾಯೆಯ ಜಾಗದಲ್ಲಿ ಮಠ ಪ್ರವೇಶ ಮಾಡಿ ಒಳಿತಿನೆಡೆಗೆ ಜನರನ್ನು ಕರೆದೊಯ್ಯುವಂತಾಗಲಿ ಎಂದರು.

 

ಈಗಿನ ಶ್ರೀಗಳೂ ಆದಿಶಂಕರರು
‘ಶ್ರೀರಾಘವೇಂದ್ರಭಾರತೀ ಪಾಂಡಿತ್ಯ ಪುರಸ್ಕಾರ’ ಸ್ವೀಕರಿಸಿ ಮಾತನಾಡಿದ ವಿದ್ವಾನ್ ಉಮಾಕಾಂತ ಭಟ್ಟರು, ಭಾರತೀಯ ಸಂಸ್ಕೃತಿಯಲ್ಲಿ ಅರಿವಿನ ದಾರಿ ತೋರಿದವರು ಶಂಕರಾಚಾರ್ಯರು. ಅವಿಶ್ವಾಸದ ಲೋಕದಲ್ಲಿ ನಂಬಿಕೆಯ ಜಗತ್ತನ್ನು ಕಟ್ಟಿಕೊಟ್ಟವರು ಆದಿಗುರು ಶಂಕರರು. ಸಂಸಾರಸಾಗರದಲ್ಲಿ ಆ ರಾಮನನ್ನು ಹುಡುಕಲು ಮಾರ್ಗ ಹಾಗೂ ದ್ವಾರ ಎರಡೂ ಗುರುವೇ ಆಗಿದ್ದಾರೆ. ಇದನ್ನು ಭಾರತದ ಮತ್ತೆಲ್ಲೋ ಹುಡುಕಬೇಕಾಗಿಲ್ಲ. ಗುರುವಿರುವ ಕ್ಷೇತ್ರವೇ ಹರಿದ್ವಾರ, ಪೂಜ್ಯ ಶ್ರೀಗುರುಗಳಿರುವ ಈ ಗಿರಿನಗರವೇ ಪುಣ್ಯಕ್ಷೇತ್ರ ಎಂದು ಅಭಿಪ್ರಾಯಪಟ್ಟರು.

 

ವಿಚಾರಕ್ಷೇತ್ರದಲ್ಲಿ ಇರುವ ಭಯೋತ್ಪಾದಕರು ಈಗಿರುವವರಿಗೆ ಶತಮಾನಗಳ ಹಿಂದೆ ಇದ್ದ ಶಂಕರರ ಹೆಸರನ್ನು ಏಕೆ ಹೇಳುತ್ತೀರಿ? ಎಂದು ಪ್ರಶ್ನಿಸಬಹುದು. ಅದರೆ ಅದಕ್ಕೆ ಉತ್ತರ ಇದೆ. ಪರಂಪರೆಯಲ್ಲಿ ಬಂದಿರುವ ಈಗಿನ ಪೀಠಾಧಿಪತಿಗಳೂ ಕೂಡ ಆದಿಶಂಕರರೇ ಆಗಿರುತ್ತಾರೆ. ಪೀಠದಲ್ಲಿ ಇರುವ ಪೀಠಾಧಿಪತಿಗಳು ಆಧಾರಪೀಠವಾಗಿ ಇರುತ್ತಾರೆ. ಪೀಠಾಧಿಪತಿಗಳು ಇಲ್ಲದೇ ಇದ್ದರೆ ಅದು ಪೀಠವೇ ಅಲ್ಲ. ಪೀಠದಲ್ಲಿ ಇರುವವರು ಕೇವಲ ವ್ಯಕ್ತಿಯಾಗಿರುವುದಿಲ್ಲ ಅವರು ಪರಂಪರೆಯ ಶಕ್ತಿಯಾಗಿರುತ್ತಾರೆ. ಹಾಗಾಗಿಯೇ ‘ಅವಿಚ್ಛಿನ್ನ ಪರಂಪರಾಪ್ರಾಪ್ತ, ವಿಖ್ಯಾತ ವ್ಯಾಖ್ಯಾನ ಸಿಂಹಸನಾಧೀಶ್ವರ’ ಎಂಬಿತ್ಯಾದಿ ಬಿರುದಾವಳಿಗಳು ಇಲ್ಲಿಯ ಗುರುಪರಂಪರೆಗಿದೆ ಎಂದರು.

 

ಪರಂಪರೆಯಲ್ಲಿ ಯಾರಿದ್ದರೂ ಅವರು ಶಂಕರಾಚಾರ್ಯರೇ ಆಗಿರುತ್ತಾರೆ. ಪೀಠದ ಬಗ್ಗೆ, ಪೀಠದಲ್ಲಿ ಆಧಾರವಾಗಿರುವ ಪೀಠಾಧಿಪತಿಗಳ ಬಗ್ಗೆ ಕೀಳಾಗಿ ಮಾತಾಡುವುದು ಸಲ್ಲ.  ಅದು ನಮ್ಮ ಸಂಸ್ಕಾರವವನ್ನು ತೋರಿಸುತ್ತದೆ ಎಂದು ಸ್ಪಷ್ಟವಾದ ನುಡಿಗಳಲ್ಲಿ ಶಂಕರ ಗುರುಪರಂಪರೆಯ ಕುರಿತಾಗಿ ತಿಳಿಸಿದರು.

 

ಇದಕ್ಕೂ ಮೊದಲು ಬೆಳಗ್ಗೆ ಮಠೀಯ ಪದ್ಧತಿಯಂತೆ ತೀರ್ಥರಾಜ ಪೂಜೆ ಸೇರಿದಂತೆ ಧಾರ್ಮಿಕ ವಿಧಿವಿಧಾನಗಳ ಮೂಲಕ ಪೂರ್ವಾಚಾರ್ಯರ ಆರಾಧನೆ ನಡೆಯಿತು. ಅನಂತರ ನಡೆದ ಸಭೆಯಲ್ಲಿ ವಿದ್ವಾನ್ ರಾಘವೇಂದ್ರ ಭಟ್ ಕ್ಯಾದಗಿ ಪೂರ್ವಾಚಾರ್ಯರ ಕುರಿತಾದ ‘ಪ್ರಣತಿ ಪಂಚಕ’ ಎಂಬ ವಿದ್ವತ್ಪೂರ್ಣ ಪಂಚಕವನ್ನು ಧರ್ಮಸಭೆಯಲ್ಲಿ ವಾಚಿಸಿ, ಶೀಗುರುಗಳಿಗೆ ಅರ್ಪಿಸಿದರು. ಹಿಂದಿನ ಗುರುಗಳ ಕಾಲದಲ್ಲಿ ಸೇವೆಸಲ್ಲಿಸಿದ ಅನೇಕರು ಹಾಗೂ ಭಕ್ತರು ವಿಶೇಷವಾದ ಸೇವೆಯನ್ನು ಸಮಾಧಿ ಮಂದಿರದಲ್ಲಿ ನಡೆಸಿ, ಶ್ರೀಪರಂಪರಾನುಗ್ರಹಕ್ಕೆ ಭಾಜನರಾದರು. ಹವ್ಯಕ ಮಹಾಮಂಡಲದಿಂದ ತಯಾರಿಸಿದ ‘ಶಿಷ್ಯಬಂಧ’ ತಂತ್ರಾಶವನ್ನು ಮಠದ ಸಮ್ಮುಖ ಸರ್ವಾಧಿಕಾರಿಗಳಾದ ತಿಮ್ಮಪ್ಪಯ್ಯ ಮಡಿಯಾಲ್ (ನಿವೃತ್ತ ಐ. ಪಿ. ಎಸ್.)  ಲೋಕಾರ್ಪಣೆ ಮಾಡಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಜಿ. ಭಟ್, ಮಹಾಮಂಡಲದ ಅಧ್ಯಕ್ಷರಾದ ಶ್ರೀಮತಿ ಈಶ್ವರೀ ಬೇರ್ಕಡವು, ಶ್ರೀ ಮಧುಸೂದನ್ ಅಡಿಗ, ಶ್ರೀ ಮೋಹನ್ ಭಾಸ್ಕರ ಹೆಗಡೆ, ಶ್ರೀ ರಮೇಶ್ ಹೆಗಡೆ ಕೊರಮಂಗಲ, ಶ್ರೀ ವಾದಿರಾಜ್ ಸಾಮಗ, ಶ್ರೀ ಆರ್. ಎಸ್. ಹೆಗಡೆ ಹರಗಿ ಸೇರಿದಂತೆ ಪ್ರಮುಖರು ಹಾಗೂ ವಿವಿಧ ಭಾಗಗಳಿಂದ ಆಗಮಿಸಿದ್ದ ಶಿಷ್ಯಭಕ್ತರು ಉಪಸ್ಥಿತರಿದ್ದರು.

 

Author Details


Srimukha

Leave a Reply

Your email address will not be published. Required fields are marked *