ಸುಳ್ಯ : ಸುಳ್ಯ ಹವ್ಯಕ ವಲಯದ ವತಿಯಿಂದ ಸಂಪಾಜೆಯ ಜೇಡ್ಲದಲ್ಲಿರುವ ಶ್ರೀಮಠದ ಗೋಶಾಲೆಯಲ್ಲಿ ನವೆಂಬರ್ 09ರಂದು ಶೃದ್ಧಾಭಕ್ತಿಯಿಂದ ಗೋಪೂಜೆ ನೆರವೇರಿಸಲಾಯಿತು.
ಗೋಪೂಜೆ ಸಂದರ್ಭದಲ್ಲಿಯೇ ಮಾತೆಯರು ಕುಂಕುಮಾರ್ಚನೆ ಗೈಯ್ದರು. ಅಲ್ಲದೇ ಸುಳ್ಯ ವಲಯ ವೈದಿಕ-ಸಂಸ್ಕಾರ ವಿಭಾಗದ ವತಿಯಿಂದ 114ನೇ ವೇದವಾಹಿನಿ ಪಾರಾಯಣವನ್ನೂ ಕೈಗೊಳ್ಳಲಾಯಿತು. ವೈದಿಕರಾದ ಎತ್ತುಕಲ್ಲು ಶ್ರೀ ನಾರಾಯಣ ಭಟ್, ಅರಂಬೂರು ಶ್ರೀ ಕೃಷ್ಣ ಭಟ್, ಶ್ರೀ ವಿಶ್ವಕೀರ್ತಿ ಜೋಯಿಸರು, ಶ್ರೀ ವೆಂಕಟೇಶ ಶಾಸ್ತ್ರೀ ಪಾರಾಯಣ ಹಾಗೂ ಇತರ ಧಾರ್ಮಿಕ ವಿಧಿವಿಧಾನ ನಡೆಸಿಕೊಟ್ಟರು.
ವಲಯದ ಅಧ್ಯಕ್ಷರಾದ ಶ್ರೀ ಸುಬ್ರಹ್ಮಣ್ಯ ಭಟ್, ಉಪಾಧ್ಯಕ್ಷ ಶ್ರೀ ವಿಷ್ಣುಕಿರಣ ಭಟ್, ಕೋಶಾಧಿಕಾರಿ ಶ್ರೀ ಈಶ್ವರ ಕುಮಾರ ಭಟ್, ಕುಂಬೆತ್ತಿವನ ಶ್ರೀ ಶಿವರಾಮ ಭಟ್, ಉಬರಡ್ಕ ಶ್ರೀ ಸುಧೀರ ಭಟ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕುಂಕುಮಾರ್ಚನೆ ಸೇರಿದಂತೆ ನಡೆದ ಧಾರ್ಮಿಕ ಕಾರ್ಯಗಳಿಂದ ಸಂತುಷ್ಟರಾದ,
ಶ್ರೀಮಠಕ್ಕೆ ಗೋಶಾಲೆ ಸಮರ್ಪಿಸಿದ ಶ್ರೀ ವೆಂಕಟರಮಣಯ್ಯನವರು ಭಾವುಕರಾಗಿ ಆನಂದಬಾಷ್ಪ ಸುರಿಸಿದರು. ಕುಂಕುಮಾರ್ಚನೆಯಿಂದ ಈ ಮನೆಗೆ ಹತ್ತು ವರ್ಷದ ಅನಂತರ ಜೀವಕಳೆ ಬಂತು ಎಂದು ಸಂತಸದಿಂದ ನುಡಿದರು. ಒಟ್ಟಿನಲ್ಲಿ ದೀಪಾವಳಿ ವೇಳೆ ನಡೆದ ಗೋಪೂಜೆ ಎಲ್ಲರ ಭಕ್ತಿಗೆ ಸಾಕ್ಷಿಯಾಯಿತು.