ಇನ್ನೊಂದು ಯಾವಾಗ?

ಅಂಕಣ ಭಾವ~ಬಂಧ : ಮಂಗಲಾ ಯಶಸ್ವಿ ಭಟ್.

ನನ್ನ ಹತ್ತಿರದವರ ವಾಟ್ಸಾಪ್ ಗ್ರೂಪ್ ಒಂದಿದೆ. ಆ ಕುಟುಂಬಕ್ಕೆ ಮದುವೆಯಾಗಿ ಬಂದ ಹೆಣ್ಣುಮಕ್ಕಳೂ, ಆ ಮನೆತನದ ಹೆಣ್ಣುಮಕ್ಕಳನ್ನು ಮದುವೆಯಾದ ಹುಡುಗರೂ ಆ ಗುಂಪಿಗೆ ಸೇರ್ಪಡೆಯಾಗುತ್ತಾರೆ. ಒಬ್ಬೊಬ್ಬರ ಆಸಕ್ತಿ ಒಂದೊಂದರಲ್ಲಿ. ಅದು ಸಹಜವೇ. ಹಾಗೆಯೇ ಆಯ್ಕೆ ಮಾಡಿಕೊಂಡ ವೃತ್ತಿಯೂ ಬೇರೆ ಬೇರೆ. ಕೆಲವು ಜನ ವೈದ್ಯರು, ಕೆಲವು ಜನ ಎಂಜಿನೀಯರ್ ಗಳು, ಕೆಲವು ಜನ ಅಧ್ಯಾಪಕರು ಹೀಗೆ ಬೇರೆ ಬೇರೆ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಅಲ್ಲಿ ನಿತ್ಯವೂ ಒಂದಲ್ಲ ಒಂದು ವಿಷಯದ ಬಗ್ಗೆ ಮಾತುಕತೆ ನಡೆದಿರುತ್ತದೆ.

 

ಹೊಸತಾಗಿ ಮಾರ್ಕೆಟ್ಟಿಗೆ ಬಂದ ವಾಹನಗಳು, ಕ್ರಿಕೆಟ್ ಅಥವಾ ಇತರ ಕ್ರೀಡಾಲೋಕದ ಮಾತುಗಳು, ಸಿನೆಮಾಗಳು, ಈಗಿನ ರಾಜಕೀಯ ಬೆಳವಣಿಗೆಗಳು ಹೀಗೆ ಬೇರೆ ಬೇರೆ ಸಂಗತಿಗಳು ನಮ್ಮ ಆ ಗುಂಪಿನ ಚರ್ಚೆಯ ವಿಷಯಗಳು. ಮಾತಿನಲ್ಲಿ ಸ್ವಲ್ಪ ಹಿಂದಿನ ಸಾಲಿನಲ್ಲಿರುವ ನಾನು ಸಾಮಾನ್ಯವಾಗಿ ಆ ಗುಂಪಿನಲ್ಲಿ ಮೂಕಪ್ರೇಕ್ಷಕಿ.

 

ಮೊನ್ನೆ ಆ ಗುಂಪಿನಲ್ಲಿ ತುಂಬಾ ಗಹನವಾದ ವಿಷಯದ ಕುರಿತು, ಗಂಭೀರ ಚರ್ಚೆಯಾಯಿತು. ‘ಒಂದೇ ಮಗು ಸಾಕೇ? ಅಥವಾ ಇನ್ನೊಂದು ಬೇಕೇ?’ ಎಂಬುದು ಆ ದಿನದ ಚರ್ಚೆಯ ವಿಷಯ. ಒಬ್ಬೊಬ್ಬರದ್ದು ಒಂದೊಂದು ಅಭಿಪ್ರಾಯ. ನಾನು ಯಥಾಪ್ರಕಾರ ಮೂಕಪ್ರೇಕ್ಷಕಿ. ಆದರೆ ಏನೋ ವಿಷಯ ಮನಸ್ಸಿನಲ್ಲಿಯೇ ಉಳಿದು ಬರೆಯಬೇಕೆನಿಸಿತು. ಈ ಬರಹದ ವಿಷಯವಾಯಿತು.

 

‘ಎಲ್ಲರೂ ಒಂದೇ ಮಗು ಸಾಕು ಎಂದು ನಿರ್ಧರಿಸಿಬಿಟ್ಟರೆ, ಮುಂದೊಂದು ದಿನ ಸಂಬಂಧಿಕರೇ ಇರುವುದಿಲ್ಲ. ಹಾಗೆ ಸಂಬಂಧಗಳೂ ಉಳಿಯುವುದಿಲ್ಲ’ ಎಂಬ ಅರ್ಥ ಬರುವ ಬರಹವನ್ನು ಒಬ್ಬರು ಯಾವುದೋ ಪತ್ರಿಕೆಯಲ್ಲಿ ಬರೆದಿದ್ದರು. ಈ ಬರಹವೇ ನಮ್ಮ ಗುಂಪಿನಲ್ಲಿ ಎದ್ದ ಚರ್ಚೆಯ ಮೂಲ ಕಾರಣ.

 

ಮನೆಯಲ್ಲಿ ಒಂದೇ ಮಗುವಾದರೆ, ಆ ಮಗುವಿಗೆ ಒಂಟಿತನ ಕಾಡುತ್ತದೆ. ಅದಕ್ಕೆ ಯಾವುದೇ ವಸ್ತುಗಳನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳುವುದು ಗೊತ್ತೇ ಇರುವುದಿಲ್ಲ. ತಂದೆ-ತಾಯಿ ಇಲ್ಲವಾದ ಕಾಲಕ್ಕೆ ಕಷ್ಟಕ್ಕೆ ಹೆಗಲು ಕೊಡಲು, ಮಾನಸಿಕವಾಗಿ ಧೈರ್ಯ ತುಂಬಲು ಯಾರೂ ಇರದಂತೆ ಆಗುತ್ತದೆ. – ಎಂಬುದು ಕೆಲವು ಜನರ ಅಭಿಪ್ರಾಯ.

 

ನಮ್ಮ ಬಗ್ಗೆ, ನಮ್ಮ ಕುಟುಂಬದ ಬಗ್ಗೆ ಮಾತ್ರ ಯೋಚಿಸದೇ, ಸಮಾಜದ ಬಗ್ಗೆ ಯೋಚಿಸಬೇಕು. ವಿಶಾಲ ಮನಸ್ಸುಳ್ಳವರಾಗಬೇಕು. ಈಗಾಗಲೇ ಜನಸಂಖ್ಯೆ ಏರಿ ಪ್ರಕೃತಿಯಲ್ಲಿ ಏರುಪೇರು ಉಂಟಾಗಿದೆ. ಅಷ್ಟೇ ಅಲ್ಲದೇ, ಈ ವಿಷಯದಲ್ಲಿ ಬೇರೆಯವರ ಮಾತಿಗೆ, ಪ್ರಶ್ನೆಗಳಿಗೆ ಗಮನ ಕೊಡದೇ, ನಿಜವಾಗಿಯೂ ನಾವು ಪೇರೆಂಟ್ಸ್ ಆಗಲು ತಯಾರಾಗಿದ್ದೇವೆಯೇ ಎಂಬ ಯೋಚನೆ ಅತ್ಯಗತ್ಯ. ಮದುವೆಯಾದ  ಮಾತ್ರಕ್ಕೆ ಮಕ್ಕಳಿರಲೇಬೇಕು ಎಂದೇನೂ ಇಲ್ಲ. – ಎಂದು ಇನ್ನು ಕೆಲವರ ಅಭಿಪ್ರಾಯವಾಗಿತ್ತು.

 

ಹೌದಲ್ಲವೇ? ಮದುವೆಯಾಗಿ ಒಂದು ವರ್ಷದ ಒಳಗೇ, “ತೊಟ್ಟಿಲು ತೂಗೋದು ಯಾವಾಗ?” ಎಂದು ಕೇಳುವ ಸಂಬಂಧಿಕರ ಗುಂಪು ತಯಾರಾಗಿರುತ್ತದೆ. ನಿನ್ನ ವಯಸ್ಸಿನವರಿಗೆಲ್ಲ ಮಗುವಾಗಿ ಎರಡು ವರ್ಷವಾಯಿತು. ನಿನ್ನದು ಯಾವಾಗ? ಎಂಬ ಪ್ರಶ್ನೆ ಕೇಳಿಬರುತ್ತದೆ. ಸರಿ, ಒಂದಾಯಿತು. ಮೊದಲ ಮಗುವಿಗೆ ಎರಡು ವರ್ಷ ಆಗುತ್ತಿದ್ದ ಹಾಗೆ, “ಒಂದೇನಾ? ಇನ್ನೊಂದು ಯಾವಾಗ?” ಎಂಬ ಪ್ರಶ್ನೆ ಶುರು. ಎಲ್ಲಿಯಾದರೂ ಪುಟಾಣಿ ತಮ್ಮನನ್ನೋ  ಅಥವಾ ತಂಗಿಯನ್ನೋ ಆಡಿಸುತ್ತಿರುವ ದೊಡ್ಡ ಮಗುವನ್ನು ಕಂಡಾಗ, ‘ನಮಗೂ ಎರಡಿದ್ದರೆ ಚೆನ್ನ’ ಎಂಬ ಆಲೋಚನೆ ಎಲ್ಲ ದಂಪತಿಗಳಿಗೆ ಬರಬಹುದು. ತಾನು ಒಂಟಿಯಾದಂತೆ ತನ್ನ ಮಗನೂ ಒಂಟಿಯಾಗದೇ ಇರಲಿ ಎಂದು ಯೋಚಿಸಿ, ಎರಡನೇ ಮಗುವಿನ ನಿರ್ಧಾರ ಮಾಡುವ ತಂದೆಯಿರಬಹುದು. “ಅಮ್ಮಾ, ನನ್ನ ಫ್ರೆಂಡ್ ಗೆ ಒಂದು ತಮ್ಮ ಇದಾನೆ. ನನಗೆ ಮಾತ್ರ ಇಲ್ವಾ?” ಎಂಬ ಮಗುವಿನ ಮುಗ್ಧ ಪ್ರಶ್ನೆ ನಮ್ಮ ನಿರ್ಧಾರಕ್ಕೆ ಪುಷ್ಟಿ ಕೊಡಬಹುದು. ಒಟ್ಟಿನಲ್ಲಿ ನಮ್ಮ ಸಮುದಾಯದಲ್ಲಿ ಹಲವು ‘ಪೇರೆಂಟ್ಸ್’ ಅನ್ನು ಕಾಡುವ ವಿಷಯ ಇದಾಗಿದೆ.               

 

‘ಮಕ್ಕಳಿರಲವ್ವಾ ಮನೆ ತುಂಬಾ’ ಎಂಬುದು ಈಗ ಹಳೆ ಕಾಲದವರ ಮಾತಾಗಿದೆ.  ಮನೆ ತುಂಬಾ ಅಲ್ಲದಿದ್ದರೂ, ‘ನಾವಿಬ್ಬರು, ನಮಗಿಬ್ಬರು’ ಎಂದು ಯೋಚಿಸುವ ಪೀಳಿಗೆಯನ್ನೂ ದಾಟಿ ಮುಂದೆ ಬಂದಿದ್ದೇವೆ. ಜೀವನ ನಡೆಸಲು ಮದುವೆ ಅನಿವಾರ್ಯವಲ್ಲ ಎಂಬ ಭಾವವೂ ಹಲವರಲ್ಲಿ ಇದೆ. ಈಗ ಆ ಕಾಲದಂತೆ ಅವಿಭಕ್ತ ಕುಟುಂಬಗಳು ಇಲ್ಲ. ಎಲ್ಲ ಕುಟುಂಬಗಳೂ ಒಡೆದು ಹಂಚಿಹೋಗಿವೆ. ನಗರವಾಸಿಗಳ ಸಂಖ್ಯೆ ಜಾಸ್ತಿ. ವಯಸ್ಸಾದ ತಂದೆ-ತಾಯಿಯರು ಊರಲ್ಲಿ ಅಥವಾ ವೃದ್ಧಾಶ್ರಮದಲ್ಲಿ. ಹೆಂಗಸರೂ ಕೂಡ ಚೆನ್ನಾಗಿ ಓದಿಕೊಂಡು, ಗಂಡಸಿನ ಸಮಕ್ಕೆ ನಿಂತು, ದುಡಿಯುತ್ತಾರೆ. ಮನೆಯಲ್ಲಿ ಮಗುವನ್ನು ನೋಡಿಕೊಳ್ಳಲು ಯಾರೂ ಹಿರಿಯರು ಇಲ್ಲ. ಆದರೆ ಈಗ ಅದಕ್ಕೂ ಉಪಾಯಗಳಿವೆ. ಮನೆಯಲ್ಲಿಯೇ ಇದ್ದು ಮಕ್ಕಳನ್ನು ನೋಡಿಕೊಳ್ಳಲು ಜನ ಸಿಗುತ್ತಾರೆ. ಹಣವೊಂದು ನಾವು ಕೊಟ್ಟರಾಯಿತು. ಆರು ತಿಂಗಳ ಮಗುವನ್ನು ಆಯಾ ಕೈಯಲ್ಲಿ ಕೊಟ್ಟು, ಹೋಗಬಹುದು. ಡೇಕೇರಲ್ಲಿ ಬಿಡಬಹುದು. ಊರಿನಲ್ಲಿರುವ ಅಜ್ಜ-ಅಜ್ಜಿಯೊಡನೆ ಬಿಡಬಹುದು. ಈಗ ಕೆಲವು ಕಂಪೆನಿಗಳಲ್ಲಿಯೇ ಮಕ್ಕಳನ್ನು ನೋಡಿಕೊಳ್ಳುವ ವ್ಯವಸ್ಥೆಯೂ ಇದೆಯಂತೆ. ನಮ್ಮ ಮುತ್ತಜ್ಜ, ಅಜ್ಜನ ಕಾಲದಲ್ಲಿ ಎಲ್ಲರೂ ಈಗಿನ ಕಾಲಕ್ಕೆ ಹೋಲಿಸಿದರೆ ಬಡವರೇ. ಆದರೆ ಆಗಿನ ಖರ್ಚುಗಳೂ ತುಂಬಾ ಕಡಿಮೆ. ಆಗೆಲ್ಲ ವಿದ್ಯೆಯನ್ನು ಹಣಕ್ಕೆ ಮಾರುತ್ತಿರಲಿಲ್ಲ. ಈಗ ಎಲ್ಲರೂ ಹಣವಂತರೇ. ಆದರೆ ಅದಕ್ಕೆ ತಕ್ಕಂತೆ ಖರ್ಚುಗಳೂ ಹೆಚ್ಚು. ಈಗ ಬೆಂಗಳೂರಿನಂತಹ ನಗರದಲ್ಲಿ ಮಗುವನ್ನು ಪ್ರೀ-ನರ್ಸರಿಗೆ ಸೇರಿಸಲು ಕಡಿಮೆಯೆಂದರೆ ಒಂದು ಲಕ್ಷ ಬೇಕು. ಇನ್ನು ಎರಡಾದರೆ ನಮ್ಮಂತಹ ‘Lower Middle Class’ ಜನರಿಗೆ ಕಷ್ಟ ಎಂದು ಯೋಚಿಸಬಹುದು. ಆದರೆ ಹುಡುಕಿದರೆ ಈ ಸಮಸ್ಯೆಗೂ ಪರಿಹಾರಗಳಿರಬಹುದು. ಒಟ್ಟಿನಲ್ಲಿ ನಮ್ಮ ಮನಸ್ಸಿಗೆ ಬೇಕು ಎಂದು ಅನ್ನಿಸಿದರೆ, ಯಾವುದೂ ಸಮಸ್ಯೆಗಳಾಗಿ ಕಾಣುವುದಿಲ್ಲವೇನೋ ಅನ್ನಿಸುತ್ತದೆ.  

 

ಯಾವುದೇ ವಿಷಯಗಳಾಗಲೀ, ಅದಕ್ಕೆ ಅನೇಕ ಮುಖಗಳು. ಮನುಷ್ಯನ ಮನಸ್ಥಿತಿ, ದೃಷಿಕೋನಗಳಿಗೆ ತಕ್ಕಂತೆ ಬದಲಾಗುತ್ತದೆ. ಹಾಗೆಯೇ ಈ ವಿಷಯ ಕೂಡ.

 

ಇತ್ತೀಚೆಗೆ ಒಂದು ಪೋಸ್ಟ್ ನೋಡಿದೆ. #StopMakingBabies ಎಂಬ ಹ್ಯಾಶ್ ಟ್ಯಾಗ್. ಹೊಸ ರೀತಿಯ ಒಂದು ಪ್ರತಿಭಟನೆ! ಈಗ ಸಣ್ಣ ಪ್ರಮಾಣದಲ್ಲಿ ನಡೆಯುವ ಇಂತಹ  ಪ್ರತಿಭಟನೆಗಳು, ಮುಂದೊಂದು ದಿನ ಇಂತಹುದೇ ಮನಸ್ಥಿತಿಯ ಅನೇಕರು ಆಡಳಿತಕ್ಕೆ ಬಂದರೆ ಈ ನಿಯಮವನ್ನು ಕಡ್ಡಾಯವಾಗಿ ಜಾರಿಗೆ ತಂದರೂ ತರಬಹುದು. ಮುಗ್ಧ ಮಕ್ಕಳೇ ಇಲ್ಲದ, ಕೇವಲ ಸ್ವಾರ್ಥಿಗಳೂ, ಬುದ್ಧಿಜೀವಿಗಳೂ ತುಂಬಿದ ಭಾರತದ ಕಲ್ಪನೆಯೇ ನನಗೆ ಯಾಕೋ ಭಯ ತರಿಸುತ್ತಿದೆ. ಅದರ ಬದಲು #StopUsingPlastic,  #StartSavingNature ಅಥವಾ #StartSavingCulture ಎನ್ನುವಂತಹ ಆಂದೋಲನಗಳ ಪ್ರಾರಂಭ ಹೆಚ್ಚು ಸೂಕ್ತ ಎಂದು ನನಗೆ ಅನ್ನಿಸಿತು.

 

ಮದುವೆಯಾದವರಿಗೆಲ್ಲ ಮಗು ಬೇಕೇ? ಒಂದು ಸಾಕೇ? ಎರಡು ಬೇಕೇ? ಇವೆಲ್ಲ ಅವರವರಿಗೆ ಬಿಟ್ಟ ವಿಚಾರಗಳು ಎಂದು ಮೇಲ್ನೋಟಕ್ಕೆ ಅನ್ನಿಸುತ್ತದೆ. ಈಗಿನ ವಿಜ್ಞಾನ, ಈಗಿನ ಸಮಾಜ, ಈಗಿನ ಪೀಳಿಗೆಯ ಜನರ ಅಭಿಪ್ರಾಯಗಳು ಏನೇ ಇರಲಿ. ಒಮ್ಮೆ ನಮ್ಮ ಸನಾತನ ಸಂಸ್ಕೃತಿ ಈ ಕುರಿತು ಏನು ಹೇಳಿದೆ? ಜ್ಞಾನಿಗಳು, ದಾರ್ಶನಿಕರು ಇದರ ಬಗ್ಗೆ ಏನು ಹೇಳಿದ್ದಾರೆ? ಎಂದು ಯೋಚಿಸಬೇಕೆನಿಸಿತು.

 

‘ಸಂಯಮೋ ಕುಲರಕ್ಷಾ ಚ ಸುಪ್ರಜೋತ್ಪಾದನಂ ತಥಾ ।

ಪ್ರೇಮೈಕ್ಯಂ ಭಗವದ್ಭಕ್ತಿರ್ವಿವಾಹೇ ಪಂಚಹೇತವಃ ।।

 

ಎಂದು ಒಬ್ಬ ಜ್ಞಾನಿಗಳು ಹೇಳಿದ್ದಾರೆ. ಎಂದರೆ, ‘ಸಂಯಮ, ಪರಂಪರಾಗತ ಮರ್ಯಾದೆಗಳನ್ನು ಗೌರವಿಸುತ್ತಾ ಕುಲದ ರಕ್ಷಣೆ, ಪರಸ್ಪರ ಪ್ರೇಮ, ಉತ್ತಮ ಪ್ರಜೋತ್ಪಾದನೆ, ಸದಾ ಪರಮಾತ್ಮನಲ್ಲಿ ಭಕ್ತಿ ಹೀಗೆ ವಿವಾಹಕ್ಕೆ ಐದು ಪ್ರಮುಖ ಕಾರಣಗಳು’ ಎಂದರ್ಥವಂತೆ. ಸಪ್ತಪದಿಯಲ್ಲೊಂದು ಹೆಜ್ಜೆಯನ್ನು ಉತ್ತಮ ಸಂತಾನಕ್ಕೆಂದು ತುಳಿಯುತ್ತಾರೆ. ಈಗಿನ ಪೀಳಿಗೆಯ ಕೆಲವರಿಗೆ ಸನಾತನ ಸಿದ್ಧಾಂತಗಳನ್ನು ತಿಳಿದುಕೊಳ್ಳುವ ಆಸಕ್ತಿ ಹೆಚ್ಚಾಗಿ ಇರುವುದಿಲ್ಲ. ಆಸಕ್ತಿಯುಳ್ಳವರಿಗೆ ತಿಳಿಸಿ ಹೇಳುವ ಜನರು ಸಿಗುವುದೂ ಕಡಿಮೆ. ಆಚರಣೆಗಳೆಲ್ಲವೂ ಕೇವಲ ಶಾಸ್ತ್ರಕ್ಕೋಸ್ಕರ ಎಂದು ಮಾಡುವವರ ಸಂಖ್ಯೆ, ಎಲ್ಲವೂ ಮೂಢನಂಬಿಕೆಗಳು ಎಂದು ತಳ್ಳಿಹಾಕುವವರೂ ಇದ್ದಾರೆ.    

 

ನಮ್ಮ ಸಂಸ್ಕೃತಿಯಲ್ಲಿ ವಿವಾಹಜೀವನದ ಮುಖ್ಯ ಉದ್ದೇಶಗಳಲ್ಲೊಂದು ‘ಸತ್ಪ್ರಜಾ ಸಂತಾನ’ ಎಂಬುದು ನಿಜ. ಆದರೆ ಮದುವೆಯಾದವರಿಗೆಲ್ಲ ಸತ್ಪ್ರಜೆಗಳೇ ಹುಟ್ಟಿದ್ದಾರಾ ಎಂಬುದು ಕೂಡ ಯೋಚಿಸುವ ವಿಷಯವೇ. ‘ಆರತಿಗೊಬ್ಬ ಮಗಳು, ಕೀರ್ತಿಗೊಬ್ಬ ಮಗ’ ಎಂಬುದೊಂದು ಹಳೆಯ ಗಾದೆಮಾತು. ಆದರೆ ಹುಟ್ಟಿದ ಮಕ್ಕಳು ಅಪಕೀರ್ತಿಯನ್ನುಂಟು ಮಾಡುವವನೂ ಆಗಿರಬಹುದು. ಅಥವಾ ಆಡುತ್ತಾ, ಆಟಿಕೆಗಳನ್ನೂ, ತಿನಿಸುಗಳನ್ನೂ ಹಂಚಿಕೊಂಡು ಬೆಳೆದ ಸ್ವಂತ ಸೋದರರು ಆಸ್ತಿಯ ವಿಚಾರಕ್ಕೋ ಅಥವಾ ಬೇರೆ ಯಾವುದೋ ಚಿಕ್ಕ ಕಾರಣಗಳಿಂದ ಜಗಳಾವಾಡಿ, ದೂರಾದ ಉದಾಹರಣೆಗಳೂ ನಮ್ಮ ಸಮಾಜದಲ್ಲಿ ಸಿಗಬಹುದು. ಎಲ್ಲರೂ ರಾಮ-ಲಕ್ಷ್ಮಣರಾಗಲು ಸಾಧ್ಯವೇ? ‘ಹುಟ್ಟುತ್ತಾ ಅಣ್ಣ-ತಮ್ಮಂದಿರು, ಬೆಳೆಯುತ್ತಾ ದಾಯಾದಿಗಳು’ ಎಂದು ಮತ್ತೊಂದು ಗಾದೆಯೂ ಈ ಕಾರಣದಿಂದಲೇ ಹುಟ್ಟಿರಬಹುದು. ಇದನ್ನೆಲ್ಲ ನೋಡಿದವರು ತುಂಬಾ ಮಕ್ಕಳು ಬೇಡಪ್ಪ. ಒಬ್ಬ ಅಥವಾ ಒಬ್ಬಳು ಸಾಕು. ಎಲ್ಲವೂ ಸರಿಯಾಗಿ ಇರುತ್ತದೆ ಎಂದು ಅಂದುಕೊಂಡರೆ ಅದೂ ಪೂರ್ತಿ ಸರಿಯಲ್ಲ.   

 

ತಂದೆಮಕ್ಕಳಿಗೆ ಹದಗೆಟ್ಟುದನು ಕಾಣೆಯಾ?

ಹೊಂದಿರುವರವರ್ ಅಹಂತೆಯು ಮೊಳೆಯುವನಕ ।

ತಂದೆಯಾರ್ ಮಕ್ಕಳಾರ್ ನಾನೆಂಬುದೆದ್ದುನಿಲೆ?

ಬಂಧ ಮುರಿವುದು ಬಳಿಕ – ಮಂಕುತಿಮ್ಮ ।।

 

ಎಂದಿದ್ದಾರೆ ಕಗ್ಗದ ಕವಿ. ಎಷ್ಟೋ ಬಾರಿ ತಂದೆ-ತಾಯಿಯೊಡನೆ ಯಾವುದೋ ವಿಷಯಕ್ಕೆ ಹೊಂದಾಣಿಕೆಯಾಗದೇ ಸಂಬಂಧಗಳನ್ನು ಕಡಿದುಕೊಂಡ ಮಕ್ಕಳೂ ಇರಬಹುದು. ಮದುವೆಯಾದ ಮೇಲೆ ಅತ್ತೆ-ಮಾವನೊಂದಿಗೆ ಹೊಂದಾಣಿಕೆ ಬಾರದೆ ಬೇರೆ ಮನೆ ಮಾಡಿಕೊಂಡವರಿರಬಹುದು.  ಅಹಂಕಾರದ ಮೊಳಕೆಯೊಡೆದಾಗ ಸಂಬಂಧಗಳೂ ಒಡೆದುಹೋಗುವುದು.

 

ಇನ್ನು ದೇಶದ ಜನಸಂಖ್ಯೆ ಜಾಸ್ತಿಯಾಗುತ್ತಿದೆ, ಪ್ರಕೃತಿಯಲ್ಲಿ ಏರುಪೇರು ಉಂಟಾಗಿದೆ ಎಂಬುದೊಂದು ತುಂಬಾ ಸೂಕ್ಷ್ಮವಾದ ವಿಚಾರ. ಒಬ್ಬನೇ ಒಬ್ಬನಾಗಿ ಇದ್ದ ಆ ಮೂಲಪುರುಷನಿಗೆ ಬಹುವಾಗಬೇಕು ಎಂದೆನಿಸಿತಂತೆ. ಅಲ್ಲಿಂದ ಶುರುವಾಗಿದ್ದು ಈ ಸೃಷ್ಟಿಕಾರ್ಯ. ವಿಕಸನ ಜಗದ ನಿಯಮವಲ್ಲವೇ? ಸತ್ ಸಂತಾನವೂ ಒಂದು ರೀತಿಯಲ್ಲಿ ಸೃಷ್ಟಿಯ ವಿಕಾಸವೇ ಅಲ್ಲವೇ? ಸೃಷ್ಟೀಶನು ಸೃಷ್ಟಿಗೆ ಸಮತೋಲನವನ್ನು ಕಾಪಾಡಿಕೊಳ್ಳುವ ಶಕ್ತಿಯನ್ನೂ ಕೊಟ್ಟಿರಬಹುದಲ್ಲವೇ? ಇದನ್ನೇ ‘ತೊಟ್ಟಿಲುಗಳೆಷ್ಟೋ ಮಸಣಗಳಷ್ಟು ಧರೆಯೊಳಗೆ’ ಎಂದು ಕವಿ ಹೇಳಿದ್ದಾಗಿರಬಹುದು. ಏರುಪೇರಿಗೆ ಜನಸಂಖ್ಯೆ ಮಾತ್ರ ಕಾರಣವಲ್ಲ ಅನ್ನಿಸುತ್ತದೆ. ಜನರೊಳಗೆ ತುಂಬಿಕೊಂಡ ಸ್ವಾರ್ಥವೂ ಕಾರಣವೇ. ಸೃಷ್ಟಿಯ ನಿಯಮಗಳನ್ನು ಅರಿತು, ಸೃಷ್ಟಿ ನಮಗೆ ಕೊಟ್ಟಿದ್ದನ್ನು ಗೌರವಿಸಿ, ಭೂಮಿಯ ರಕ್ತವನ್ನು ಹೀರದೇ, ಸಮಾಜಕ್ಕೆ ಏನಾದರೂ ತಿರುಗಿ ಕೊಡಲು ಪ್ರತಿಯೊಬ್ಬ ಪ್ರಜೆಯೂ ಕಲಿಯಬೇಕು. ಆಗ ಒಂದಾಗಲೀ, ಎರಡಾಗಲೀ ಅಥವಾ ಅದಕ್ಕೂ ಹೆಚ್ಚಾಗಲೀ, ಸಂತಾನಗಳನ್ನು ಉತ್ತಮರನ್ನಾಗಿ ಮಾಡಿದಾಗ ನಮ್ಮನ್ನೆಲ್ಲ ಹೊತ್ತ ಭೂಮಿತಾಯಿ ಹರ್ಷಿಸಬಹುದು.   

 

ಮನಸ್ಸು-ಬುದ್ಧಿ ಈ ವಿಷಯದ ಕುರಿತು ಯೋಚಿಸುತ್ತಿದ್ದಾಗ, ಪೂಜ್ಯ ಡಾ. ಕೆ. ಎಲ್. ಶಂಕರನಾರಾಯಣ ಜೋಯಿಸ್ ಅವರು ತಮ್ಮ ಒಂದು ಉಪನ್ಯಾಸದಲ್ಲಿ ಕರ್ಮಫಲ, ಕರ್ಮಯೋಗದ ಬಗ್ಗೆ ವಿವರಿಸುತ್ತಾ, “ನಾವು ಮಾಡಿದ ಕರ್ಮಗಳಲ್ಲಿ ಅತಿ ಬಲಿಷ್ಠವಾದ ಕರ್ಮದಿಂದ, ಮುಂದಿನ ಜನ್ಮದ ನಿರ್ಧಾರವಾಗುತ್ತದೆ. ಆ ಕರ್ಮದ ಫಲ ಅನುಭವಿಸಲು ಯೋಗ್ಯವಾದ ಎಲ್ಲ ವ್ಯಕ್ತಿಗಳು, ವಿಷಯಗಳು ಒಂದಾಗಿ ಬರುತ್ತಾರೆ. ಹಾಗಾಗಿ, ಹುಟ್ಟುವ ಸ್ಥಳ, ಹುಟ್ಟುವ ಮನೆ, ತಂದೆ-ತಾಯಿ ಎಲ್ಲವೂ ಪೂರ್ವದಲ್ಲಿಯೇ ನಿರ್ಣಯವಾಗಿರುತ್ತದೆ” ಎಂದಿದ್ದು ನೆನಪಾಯಿತು.

 

ಸೂಕ್ಷ್ಮವಾಗಿ ಯೋಚಿಸಿದರೆ ಹೌದಲ್ಲವೇ ಎನ್ನಿಸಿತು. ಒಬ್ಬೊಬ್ಬರಿಗೆ ಮಕ್ಕಳ ಯೋಗವೇ ಇರುವುದಿಲ್ಲ. ಯೋಗವೇ ಇಲ್ಲವೆಂದು ಅಂದುಕೊಂಡವರಿಗೂ ತುಂಬಾ ವಯಸ್ಸಾದ ಮೇಲೆ ಮಗುವಿನ ಭಾಗ್ಯ ಸಿಕ್ಕಿದ್ದೂ ಇದೆ.  ಎರಡನೇ ಮಗು ಬೇಕೆಂದು ಆಸೆ ಪಟ್ಟಾಗ ಅವಳಿ ಅಥವಾ ತ್ರಿವಳಿ ಜನಿಸಿ, ಒಂದರಿಂದ ಮೂರು, ನಾಲ್ಕು ಮಕ್ಕಳಾದ ಉದಾಹರಣೆಗಳೂ ಇವೆ. ಹೆಣ್ಣು ಬೇಕೆಂದು ಆಶಿಸುವವರಿಗೆ ಗಂಡೇ ಹುಟ್ಟುವ ಸಾಧ್ಯತೆಗಳಿವೆ. ಒಂದಾದರೂ ಗಂಡು ಬೇಕಿತ್ತು ಎಂದು ಕೊರಗುವ ಹೆಣ್ಣುಮಕ್ಕಳ ತಂದೆ-ತಾಯಿಗಳಿರಬಹುದು. ಹುಟ್ಟಿದ ಶಿಶುಗಳು ಕಣ್ಣು ಬಿಡುವ ಮೊದಲೇ ಕಳೆದುಕೊಂಡ ನಿದರ್ಶನಗಳಿವೆ. ಹೀಗೆ ಮಕ್ಕಳ ವಿಚಾರದಲ್ಲಿ ನಾವು ಅಂದುಕೊಂಡದ್ದಕ್ಕೆ, ಆಸೆ ಪಟ್ಟಿದ್ದಕ್ಕೆ ವಿರುದ್ಧವಾಗಿ ನಡೆದ ಸಂಗತಿಗಳು ಅನೇಕ. ಪಟ್ಟಿ ಮಾಡುತ್ತಾ ಹೋದರೆ ನಮ್ಮ ಸುತ್ತಮುತ್ತಲೂ ಇಂತಹ ಹಲವು ಪುರಾವೆಗಳಿವೆ.

 

ನನ್ನ ನೆಚ್ಚಿನ ಕವಿ, ಡಿ.ವಿ.ಜಿ‌.ಯವರು ಆ ಗುಟ್ಟನ್ನು ಎಷ್ಟು ಚೆನ್ನಾಗಿ ಒಂದು ಕಗ್ಗದಲ್ಲಿ ವಿವರಿಸಿದ್ದಾರೆ ನೋಡಿ,

 

ಅರಿ ಮಿತ್ರ ಸತಿ ಪುತ್ರ ಬಳಗವದೆಲ್ಲ ।

ಕರುಮದವತಾರಗಳೊ, ಋಣಲತೆಯ ಚಿಗುರೋ ॥

ಕುರಿಯನಾಗಿಸಿ ನಿನ್ನ ಕಾಪಿಡುವ ಸಂಸಾರ ।

ವುರಿಮಾರಿಯಾದೀತೊ – ಮಂಕುತಿಮ್ಮ  ।।

 

ಕೊನೆಹನಿ: ಇಲ್ಲಿ ಯಾರ ಅಭಿಪ್ರಾಯಗಳೂ ತಪ್ಪಲ್ಲ. ಅನ್ಯರ ಮೇಲೆ ಅಭಿಪ್ರಾಯದ ಹೇರಿಕೆ ತಪ್ಪು ಅಷ್ಟೇ. ಆಯಾ ಸಮಯದಲ್ಲಿ ನಮ್ಮ ಮನೋಸ್ಥಿತಿ, ನಮ್ಮ ಜೀವನದ ಅನುಭವಗಳು ನಾವು ತೆಗೆದುಕೊಳ್ಳುವ ಎಲ್ಲ ರೀತಿಯ ನಿರ್ಧಾರಗಳಿಗೆ ಕಾರಣವಾಗುತ್ತವೆ. ಜೊತೆಗೆ ಪೂರ್ವನಿರ್ಧಾರಿತವಾದ ಕರ್ಮಫಲಗಳು ನಮ್ಮ ನಿರ್ಧಾರಕ್ಕೆ ಪೂರಕವಾಗಿರಲೂಬಹುದು. ಅಥವಾ ನಿರ್ಧಾರಗಳನ್ನು ಬದಲಿಸಲೂಬಹುದು. ಒಟ್ಟಿನಲ್ಲಿ ಋಣಾನುಬಂಧರೂಪದಿಂದ ಪಶು, ಪತ್ನಿ, ಆಲಯ ಮತ್ತು ಸುತರು. ಋಣಭಾರವಿಳಿದ ಮೇಲೆ ಎಲ್ಲರೂ ಮುಕ್ತರು.       

 

Author Details


Srimukha

Leave a Reply

Your email address will not be published. Required fields are marked *