ಕಾಯಿಸಿದ ಅಯ್ಯಪ್ಪ ಕಾಯದಿರುವನೇ

ಅಂಕಣ ಶಬ್ದ~ಶಿಲ್ಪ : ಮಹೇಶ ಎಳ್ಯಡ್ಕ

ದೇಶದಲ್ಲಿ ಸನಾತನ ಧರ್ಮಕೇಂದ್ರಗಳ ಮೇಲೆ ಆಕ್ರಮಣ ಹೊಸದೇನಲ್ಲ. ಘಜ್ನಿ ನಡೆಸಿದ ಸೋಮನಾಥ ದೇವಾಲಯ ಆಕ್ರಮಣದಿಂದ ತೊಡಗಿ, ನಮ್ಮ ಶ್ರೀಮಠದ ಮೇಲಿನ ಆಕ್ರಮಣಗಳವರೆಗೆ ಸಮಾಜದ ಶ್ರದ್ಧಾಬಿಂದುಗಳ ಮೇಲೆ ಅನೇಕ ಆಕ್ರಮಣಗಳು ನಡೆಯುತ್ತಲೇ ಬಂದಿವೆ.

 

ಇದೆಲ್ಲ ಆಕ್ರಮಣಗಳನ್ನೂ ಮೆಟ್ಟಿ, ಎದುರಿಸಿ, ಹೊಳಹಿನೊಂದಿಗೆ ಮತ್ತೆ ಬೆಳೆಯುವ ಶಕ್ತಿ ಸಾಮರ್ಥ್ಯಗಳು ಸನಾತನಧರ್ಮಕ್ಕಷ್ಟೇ ಇರಬಲ್ಲುದು. ಆದರೂ ಆಕ್ರಮಣಗಳನ್ನು ಎದುರಿಸುವ ಕಾಲಘಟ್ಟದಲ್ಲಿ ಸಾಮಾಜಿಕ ಆಂದೋಲನ, ಕ್ರಾಂತಿಯೊಂದರ ಅಗತ್ಯವಿರುತ್ತದೆ ಎಂಬುದನ್ನು ನಮ್ಮ ಮಠದ ಶಿಷ್ಯಸಮಾಜವೂ ಸೇರಿದಂತೆ, ಒಟ್ಟಾರೆ ಸಮಾಜವು ಮನಗಂಡಿದೆ.

 

ಇಂದು, ಅದೇ ರೀತಿಯ ಇನ್ನೊಂದು ಆಂದೋಲನವು ಸಮಾಜದಲ್ಲಿ ವ್ಯಾಪಿಸಿಕೊಂಡಿದೆ. ಕೇರಳದ ಪಂಪಾತೀರದಲ್ಲಿ ಆರಂಭಗೊಂಡ ಆ ಕಿಚ್ಚು ಇದೀಗ ದೇಶವ್ಯಾಪಿಯಾಗಿದೆ.

 

ಈಚಿನ ದಿನಗಳಲ್ಲಿ ದೇಶಾದ್ಯಂತ ಗಮನ ಸೆಳೆದಿರುವ ಸಂಗತಿಗಳಲ್ಲಿ ಶಬರಿಮಲೆಗೆ ಮಹಿಳೆಯರ ಪ್ರವೇಶದ ವಿಚಾರವು ಪ್ರಮುಖವಾಗಿದೆ.

 

ಶಬರಿಮಲೆಯ ಮಣಿಕಂಠ ಕ್ಷೇತ್ರದ ಕಟ್ಟುಪಾಡಿನಂತೆ ಹತ್ತರಿಂದ ಐವತ್ತರ ವಯಸ್ಸಿನ ಮಹಿಳೆಯರಿಗೆ ದೇಗುಲದೊಳಗಿನ ಪ್ರವೇಶ ನಿಷಿದ್ಧ. ಇದು ಅಲ್ಲಿನ ಕ್ಷೇತ್ರನಿಯಮ, ಪದ್ಧತಿ.

ಇಂದು ನಿನ್ನೆಯದಲ್ಲ, ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದ ಕ್ರಮವದು.

ಇದನ್ನೇ ಪ್ರಮಾದವೆಂಬಂತೆ ಚಿತ್ರಿಸಿ  ಯಂಗ್ ಲಾಯರ್ಸ್ ಎಸೋಷಿಯೇಶನ್ ಎಂಬೊಂದು ಬುದ್ಧಿಜೀವಿ ವಕೀಲರ ಸಂಘದ ವಿಧರ್ಮೀಯ ಸದಸ್ಯನೊಬ್ಬ ಸರ್ವೋಚ್ಚ ನ್ಯಾಯಾಲಯದಲ್ಲಿ ಮೊರೆ ಕೊರೆದ. ನ್ಯಾಯಾಲಯವೂ ಇದೊಂದು ಅತಿಮುಖ್ಯ ವಿಚಾರವೆಂಬಂತೆ ಪರಿಗಣಿಸಿ, ಐವರ ನ್ಯಾಯಪೀಠವನ್ನು ರಚಿಸಿ ವಿಚಾರಣೆಯನ್ನು ನಡೆಸಿದ್ದು ಗೊತ್ತೇ ಇದೆ.

 

ಜನರ ನಂಬಿಕೆಯ ವಿರುದ್ಧ ವಿಚಾರಣೆ. ಕಟ್ಟುಪಾಡಿನ ವಿರುದ್ಧ ವಿಚಾರಣೆ. ಇದಕ್ಕೆ (ಅ)ನ್ಯಾಯವಾದಿ ಯಾರು? ಮಹಿಳೆಗೆ ಆಗುತ್ತಿರುವ ಅನ್ಯಾಯ, ಅಸಮಾನತೆ ಎಂಬಂತೆ ಚಿತ್ರಿಸಿದ ಆ ವಿಧರ್ಮೀಯ.

 

ತೀರ್ಮಾನಿಸಲು ಐವರು ನ್ಯಾಯಧೀಶರ ತಂಡ. ನಾಲ್ವರು ಪುರುಷರು, ಒಬ್ಬರು ಮಹಿಳಾ ನ್ಯಾಯಮೂರ್ತಿ. ಸುದೀರ್ಘ ವಿಚಾರಣೆಯಲ್ಲಿ ಹೊರಟಿತು ತೀರ್ಪು. ತೀರ್ಪಿನ ಮುನ್ನ ಭಕ್ತಮಹಿಳೆಯರನ್ನು ಸಂಪರ್ಕಿಸಿದ್ದರೇ? ಕ್ಷೇತ್ರದ ತಂತ್ರಿಗಳನ್ನು ಸಂಪರ್ಕಿಸಿದ್ದರೇ? ಆಸ್ತಿಕ ಭಕ್ತವರ್ಗವನ್ನು ಸಂಪರ್ಕಿಸಿದ್ದರೇ?

 

ಯಾವದೂ ಇಲ್ಲ.

ದಕ್ಷಿಣದ ದೇವಾಲಯಗಳ, ಪ್ರಾಕೃತಿಕ ವೈಪರೀತ್ಯಗಳ ಗಂಧವಿಲ್ಲದೇ, ಒಂದು ವರ್ಗದ ನಿಲುವನ್ನು ಮಾತ್ರ ಗಮನಿಸಿಕೊಂಡ ಪುರುಷ ನ್ಯಾಯವಾದಿಗಳು, “ಮಹಿಳೆಯರಿಗೆ ಅನ್ಯಾಯ ನಿಲ್ಲಿಸಲು ಪ್ರವೇಶ ಕೊಡಬೇಕು” ಎಂದು ತೀರ್ಪಿತ್ತರು.

 

ಗಮನಿಸಬೇಕಾದ ಅಂಶವೆಂದರೆ, ಒಬ್ಬರೇ ಒಬ್ಬರು ಮಹಿಳಾ ನ್ಯಾಯಮೂರ್ತಿಗಳಾದ ನ್ಯಾ. ಇಂದು ಮಲ್ಹೋತ್ರಾ ಈ ತೀರ್ಪಿಗೆ ವಿರುದ್ಧವಾಗಿ ತೀರ್ಪಿತ್ತರು. ಆದರೂ ಬಹುಮತದ ಆಧಾರದಲ್ಲಿ ಮಹಿಳಾ ಪ್ರವೇಶ ಕೊಡಬೇಕೆಂಬುದೇ ನಿರ್ಯವಾಯಿತು.

 

ಅಪರಿಪೂರ್ಣ ಚಿಂತನೆಯ ಈ ತೀರ್ಪು ಹಚ್ಚಿದ ಕಿಚ್ಚು ಇದೀಗ ದೇಶವ್ಯಾಪಿಯಾಗಿ ಆವರಿಸಿಕೊಂಡಿದೆ. ಆಸ್ತಿಕವರ್ಗದ ಶಬರಿಗಳು #ಕಾಯಲುಸಿದ್ಧ ಎಂದು ಹೋರಾಡಿದರೆ, ನಾಸ್ತಿಕ/ವಿಧರ್ಮೀಯ ಮಹಿಳಾಮಣಿಗಳು ಹೋಗಲು ಬದ್ಧ ಎಂದು ಗುಟುರು ಹಾಕುತ್ತಿದ್ದಾರೆ.

 

ಅದಲ್ಲದೇ, ದೇಶದೆಲ್ಲೆಡೆ ಸಾವಿರಾರು ಅಯ್ಯಪ್ಪ ದೇವಾಲಯಗಳಿವೆ. ಅವೆಲ್ಲವುಗಳಿಗೆ ಎಲ್ಲ ವಯೋಮಿತಿಯ ಮಹಿಳೆಯರಿಗೆ ಪ್ರವೇಶವಿದೆ. ಶಬರಿಮಲೆಯಲ್ಲಿರುವ ಅಯ್ಯಪ್ಪ ಕ್ಷೇತ್ರಕ್ಕೆ ಹತ್ತರೊಳಗಿನ ಬಾಲವಯಸ್ಸು ಹಾಗೂ ಐವತ್ತರ ಮೇಲಿನ ಬೆಳೆದ ವಯಸ್ಸಿನ   ಮಹಿಳೆಯರು ವ್ರತಧಾರಿಗಳಾಗಿ ಬಂದರೆ ಯಥೋಚಿತ ಪ್ರವೇಶವಿದೆ. ಕೇವಲ ಮಧ್ಯವಯಸ್ಸಿನ ಅಂದರೆ ಹತ್ತು-ಐವತ್ತು ವಯಸ್ಸಿನ ಮಹಿಳೆಯರಿಗೆ ಮಾತ್ರ ಶಬರಿಯಾಗುವ ಅನಿವಾರ್ಯತೆ.

 

ಇದು ಕೇವಲ ನಂಬಿಕೆಯ ಪ್ರಶ್ನೆ. ಇಲ್ಲಿ ಲಿಂಗತಾರತಮ್ಯದ ಮಾತೇ ಬರುವುದಿಲ್ಲ. ಅಯ್ಯಪ್ಪ ಎಂಬ ದೇವಚಿಂತನೆಯೂ ನಂಬಿಕೆ. ಈ ಕಟ್ಟಳೆಗಳೂ ನಂಬಿಕೆ. ನಂಬುವ ಆಸ್ತಿಕರಿಗಷ್ಟೇ ಇರುವ ದೇವಾಲಯವದು. ಸನಾತನ ದೇವರಲ್ಲಿ ನಂಬಿಕೆಯೇ ಇರದ ನಾಸ್ತಿಕ/ವಿಧರ್ಮೀಯರಿಗೆ ಅಯ್ಯಪ್ಪನ ಗುಡಿಯೊಳಗೇನು ಕೆಲಸ? ನಂಬುವರಿಗಾಗಿ ಬಿಟ್ಟುಬಿಡಿ, ಈ ನಂಬಿಕೆಯ ತಾಣವನ್ನು. ಅಯ್ಯಪ್ಪನಿಗೆ ಒಂಬುವ ಕಾನೂನು ಅಯ್ಯಪ್ಪನ ತಾಣದಲ್ಲಿರಲಿ. ಅದನ್ನು ಧಿಕ್ಕರಿಸುವವರಿಗೆ ಶಬರಿಮಲೆಯಲ್ಲಿ ಏನು ಕೆಲಸ?

 

ರಾಜ್ಯ ಸರ್ಕಾರದ ಕೃಪಾಪೋಷಿತ ನಾಟಕೀಯ ಸನ್ನಿವೇಶಗಳಲ್ಲಿ ಕೆಲವು ಕ್ರಾಂತಿಕಾರಿ ಕಾಮ್ರೇಡುಗಳು ಪ್ರವೇಶಿಸಿದ್ದರೆಂದು ವರದಿಯಾಗಿವೆ. ಇಷ್ಟಕ್ಕೂ ಇವರ ಸಾಧನೆಗಳೇನು?

ಹದಿನೆಂಟು ಮೆಟ್ಟಿಲನ್ನೇರಿ ಅಯ್ಯಪ್ಪನ ಸಾನ್ನಿಧ್ಯ ದರ್ಶನವು ಸಿಕ್ಕಿ, ಅದರಿಂದ ಮನಸ್ಸು ತೃಪ್ತಿಯನ್ನು ಕಾಣಬೇಕಾದರೆ ಆ ಕ್ಷೇತ್ರದ ಪದ್ಧತಿಯಂತೆ ನಡೆದುಕೊಂಡಿರಬೇಕು. ಅದಲ್ಲದೇ ಯೇನಕೇನ ಪ್ರಕಾರೇಣ ಹೋಗಿಯೇ ಸಿದ್ಧ ಎಂದು ಭಕ್ತರ ಮತ್ತು ಸ್ವತಃ ಅಯ್ಯಪ್ಪನ ವಿರೋಧ ಕಟ್ಟಿಕೊಂಡರೆ ಯಾವ ಸಿದ್ಧಿಯೂ ಪುರುಷಾರ್ಥವೂ ಸಿಗಲಾರದು.

 

ಮಹಿಷಿಯೂ ಹೆಣ್ಣು, ಶಬರಿಯೂ ಹೆಣ್ಣು. ಅಹಂಕಾರಿಯಾದ ಮಹಿಷಿ, ತಪ್ಪು ಹಾದಿ ಹಿಡಿದುದರಿಂದ ಅಯ್ಯಪ್ಪನ ಬಾಣದೇಟಿಗೆ ಹತಳಾದಳು. ಅಚಲ ಭಕ್ತಿಯಿಂದ ಕಾದು, ಕಾದು ಕುಳಿತ ಶಬರಿಯನ್ನು ಮರ್ಯಾದಾಪುರುಷೋತ್ತಮ ಹರಸಿ, ಕಾದ. ಅಯ್ಯಪ್ಪನ ಇಷ್ಟಕ್ಕೆ ವಿರುದ್ಧ ನಡೆದು, ಮಹಿಷಿಯಾಗುವಿರೋ? ದೇವರ ಅನುಗ್ರಹಕ್ಕಾಗಿ ಕಾದ ಶಬರಿಯಾಗುವಿರೋ?

ಆಯ್ಕೆ ಆಸ್ತಿಕ ವರ್ಗದ್ದು.

 

ಒಟ್ಟಾರೆಯಾಗಿ ಇಂದಿನ ಕಾಲಘಟ್ಟದಲ್ಲಿ ಪ್ರಚಾರಪ್ರಿಯರಿಗೆ ಸನಾತನ ಧರ್ಮಕೇಂದ್ರಗಳ ಮೇಲೆ ಧಾಳಿ ಬಹಳ ಸುಲಭಗುರಿಯಾಗಿದೆ. ನಮ್ಮ ಮಠಕ್ಕೂ ಇದೇ ಸಮಸ್ಯೆ, ಶಬರಿಮಲೆಗೂ ಇದೇ ಸಮಸ್ಯೆ.

 

ಆಸ್ತಿಕ ಭಕ್ತರು ಶಬರಿಗಳನ್ನು, ಮಹಿಷಿಗಳನ್ನು ಪರಾಂಬರಿಸಿ ಕಂಡುಕೊಳ್ಳಬೇಕು. ಹಿಂದಿನವರು ಉಳಿಸಿಕೊಟ್ಟ ಪರಂಪರೆಯನ್ನು ಮುಂದಿನವರಿಗೆ ತಲುಪಿಸಬೇಕು.

 

ಅಯ್ಯಪ್ಪ ವ್ರತದ ಕುರಿತು:

 

ಶಬರಿಮಲೆಯೆಂಬುದು ಪ್ರವಾಸೀ ತಾಣವಲ್ಲ. ಅದೊಂದು ತೀರ್ಥಕ್ಷೇತ್ರ.

ಅಲ್ಲಿಗೆ ನಡಕೊಳ್ಳುವವರು ನಲುವತ್ತೆಂಟು ದಿನದ ಕಠಿಣ ವ್ರತವನ್ನು ಕೈಗೊಳ್ಳುತ್ತಾರೆ.

ಬ್ರಾಹ್ಮೀಮಹೂರ್ತದಲ್ಲೆದ್ದು ಡಿಸೆಂಬರಿನ ಕೊರೆವ ಚಳಿಯಲ್ಲಿ, ಧನುರ್ಮಾಸದಲ್ಲಿ – ತಣ್ಣೀರು ಸ್ನಾನ, ಅದಾಗಿ ಅಯ್ಯಪ್ಪ ನಾಮಸ್ಮರಣೆಯೊಂದಿಗೆ ಸಮೀಪದ ದೇವಾಲಯ, ದೈವಸ್ಥಾನ ಅಥವಾ  ಭಜನಾಮಂದಿರದಲ್ಲಿ ಘಂಟೆಗಳ ಕಾಲ ಭಜನೆ ಅಥವಾ ಸ್ತೋತ್ರಪಠಣ. ಅದಾಗಿ ಮಂಗಳಾರತಿ. ತರುವಾಯ ಬೆಳಗ್ಗಿನ ನೈವೇದ್ಯ ಸ್ವೀಕಾರ – ಸಾತ್ತ್ವಿಕ ಆಹಾರ. ಪುನಃ ಮಧ್ಯಾಹ್ನ ಇದೇ ರೀತಿ ಆವರ್ತನ. ಶರಣು ಕೀರ್ತನೆ, ಭಜನೆ, ಆರತಿ,  ನೈವೇದ್ಯ ಸ್ವೀಕಾರ. ಮಧ್ಯಾಹ್ನಾನಂತರ ನಿದ್ರೆ ನಿಷಿದ್ಧ. ಸಾಯಂಕಲ ಪುನಃ ಸ್ನಾನ, ಶರಣು ಕೀರ್ತನೆ, ಭಜನೆ, ಪೂಜೆ, ಆರತಿ, ನೈವೇದ್ಯ. ಕಟ್ಟುನಿಟ್ಟಾದ ಬ್ರಹ್ಮಚರ್ಯ. ರಾತ್ರಿ ನಿದ್ದೆ – ಸರಳ ಚಾಪೆಯಲ್ಲಿ. ಮೃದು ಹಾಸಿಗೆ ನಿಷಿದ್ಧ. ಪಾದರಕ್ಷೆ ನಿಷಿದ್ಧ. ಕ್ಷೌರ ನಿಷಿದ್ಧ. ಮಾಂಸಾಹಾರ ನಿಷಿದ್ಧ. ಹತ್ತಿ ಬಟ್ಟೆಯ ಕಪ್ಪು ಯಾ ಕೆಂಪು ಸರಳ ಉಡುಪು. ಇದಿಷ್ಟು ನಿಷೇಧಗಳ ನಡುವೆ ಏಕಾಗ್ರತೆಯಿಂದ ಅಯ್ಯಪ್ಪನ ನಾಮಜಪ – ನಲುವತ್ತೆಂಟು ದಿನಗಳ ಕಾಲ.

ಅಂದರೆ, ಮಕರ ಸಂಕ್ರಮಣಕ್ಕೆ ಶಬರಿಮಲೆ ಭೇಟಿಯ ಯೋಜನೆಗೆ ಸರಿಸುಮಾರು ನವೆಂಬರಿನಲ್ಲಿ ಆರಂಭವಾಗುತ್ತದೆ ಈ ವ್ರತ.  ಹತ್ತು ಹದಿನಾರು ಮೈಲಿಗಳ ನಡಿಗೆ ಕೊನೆಯಲ್ಲಿ ಹದಿನೆಂಟು ಮೆಟ್ಟಿಲುಗಳನ್ನೇರಿ, ಅಯ್ಯಪ್ಪನನ್ನು ಕಂಡು ವ್ರತ ಉದ್ಯಾಪನ.

 

ಈ ವ್ರತ ಕಾಠಿಣ್ಯವನ್ನು ಗಮನಿಸಿಕೊಳ್ಳಿ. ಸಂಸಾರಿಯಾಗಿರುವ, ಮನೆ ಹೊರೆಯುವ ಮಹಿಳೆಯರಿಗೆ ವಿಶೇಷ ವಿಶ್ರಾಂತಿ ಅಗತ್ಯವಿರುತ್ತದೆ. ಬಹಿಷ್ಠೆಯಾಗುವ ಮಹಿಳೆಗೂ ದೇಹ ಸುಧಾರಿಸಿಕೊಳ್ಳಲು ವಿಶ್ರಾಂತಿ ಅತ್ಯಗತ್ಯ. ಹಾಗಾಗಿಯೇ ಈ ವ್ರತವು ಕಷ್ಟವೆಂಬುದನ್ನು ಅರಿತ ಹಿರಿಯರು ಮಹಿಳೆಗೆ ವಿನಾಯಿತಿ ಕೊಟ್ಟಿರಬೇಕು. ಅದಲ್ಲದೇ, ಶಬರಿಮಲೆಯ ಪ್ರಾಕೃತಿಕ ಪರಿಸರವನ್ನು ಪರಿಗಣಿಸಿದರೆ, ಮಹಿಳೆಯರಿಗೆ ಭಾರದ ಇರುಮುಡಿ ಹೊತ್ತು ನಡೆಯುವುದು ಕಷ್ಟ.

 

ಅದಕ್ಕಾಗಿಯೇ, ಆಜನ್ಮಬ್ರಹ್ಮಚಾರಿ ಅಯ್ಯಪ್ಪನ ಕೋರಿಕೆಯಂತೆ ಶಬರಿಮಲೆಗೆ ಆ ವಯೋಮಾನದ ಮಹಿಳೆಯರು ಬರಬಾರದು ಎಂಬ ದಂತಕತೆ ಮಲೆಯಾಳ ದೇಶದಲ್ಲಿ ಸೃಷ್ಟಿಯಾಗಿರಬೇಕು.

 

Author Details


Srimukha

Leave a Reply

Your email address will not be published. Required fields are marked *