ಕತ್ತಲಿನ ಪ್ರಶ್ನೆಗೆ ಬೆಳಕಿನ ಉತ್ತರ

ಅಂಕಣ ಚಿತ್ತ~ಭಿತ್ತಿ : ಡಾ. ಸುವರ್ಣಿನೀ ಕೊಣಲೆ

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಒಂದು ಸಂದೇಶ ಹೀಗಿದೆ:

80-90ರ ದಶಕದ ಮಕ್ಕಳು ಅದೃಷ್ಟವಂತರು. ನಾವು ರಸ್ತೆಯಲ್ಲಿ ಆಡುತ್ತಿದ್ದೆವು. ನಮಗೆ google ಇಲ್ಲದೆಯೇ ಪ್ರಾಜೆಕ್ಟ್ ರೆಡಿ ಮಾಡುವುದು ಗೊತ್ತಿತ್ತು. ನಾವು ಈಗಿನ ಮಕ್ಕಳಂತೆ cell phone, tabಗಳಿಗೆ ಅಂಟಿಕೊಂಡಿರಲಿಲ್ಲ. ನಾವು ಹಳ್ಳಿಗಳಲ್ಲಿ ಬೆಳೆದೆವು. ನಾವು ಮಣ್ಣಿನಲ್ಲಿ ಆಡಿದೆವು. ಈಗಿನ ಮಕ್ಕಳಿಗೆ ಇದೆಲ್ಲ ಅವಕಾಶ ಇಲ್ಲ. ಹೀಗೇ ಏನೋ ಒಂದಷ್ಟು ಉದಾಹರಣೆಗಳು.


ನಾವು 80-90ರ ದಶಕದಲ್ಲಿ ಕಳೆದ ಬಾಲ್ಯದ ನೆನಪುಗಳು ಮಧುರವೇ. ಆದರೆ ಇಂದಿನವರ ಬಾಲ್ಯ ಚೆನ್ನಾಗಿಲ್ಲ ಎಂಬುದಾಗಿ ನಾವೇ ಷರಾ ಬರೆದುಬಿಡುವುದೇಕೆ? ನಾವು ಕಂಡದ್ದನ್ನು, ಅನುಭವಿಸಿದ್ದನ್ನು ಮಾತ್ರ ನಾವು ಹೇಳಬಲ್ಲೆವೇ ಹೊರತು ಇನ್ನೊಬ್ಬರ ಅನುಭವವನ್ನಲ್ಲ. ಅಂದಿದ್ದುದು ಇಂದಿಲ್ಲ ಎನ್ನುವುದು ನಿಜವೇ. ಅದೇ ರೀತಿ ಇಂದಿರುವುದು ಅಂದಿರಲಿಲ್ಲ ಅನ್ನುವುದೂ ಅಷ್ಟೇ ಸತ್ಯ. ಎರಡು ತಲೆಮಾರು ಹಿಂದೆ ಏಳೆಂಟು ಮೈಲುಗಳಷ್ಟು ನಡೆದು ಶಾಲೆಗೆ ಹೋಗುತ್ತಿದ್ದರು. ಹಾಗೆ ಊರಿನ ಮಕ್ಕಳೆಲ್ಲ ಒಟ್ಟಾಗಿ ನಡೆದುಕೊಂಡು ಹೋಗುವ ಸಮಯದಲ್ಲಿ ಮಾಡುತ್ತಿದ್ದ ಕೀಟಲೆಗಳು ಆಡುತ್ತಿದ್ದ ಆಟಗಳು ನಮಗೆ ಅಚ್ಚರಿ ಮೂಡಿಸುತ್ತವೆ. ಅಂತಹ ಅವಕಾಶ ನಮಗಿರಲಿಲ್ಲ ಎಂದು ದುಃಖಿಸಬೇಕೇ? ಶಾಲೆಗಾಗಿ ಹತ್ತಾರು ಮೈಲು ನಡೆಯುವ ಕಷ್ಟವೂ ನಮಗಿರಲಿಲ್ಲ ಎನ್ನುವುದನ್ನುನಮಗೆ ಹೆಚ್ಚು ಸಮಾಧಾನವನ್ನು ಕೊಡುತ್ತದೆ. ಹಾಗೆ ಒಂದನ್ನು ಕಳೆದುಕೊಂಡೆವು ಎನ್ನುವಾಗ ಇನ್ನೊಂದನ್ನು ಪಡೆದುಕೊಂಡಿದ್ದೆವು. ಅದೇ ಈಗಿನ ಹೊಸ ಪೀಳಿಗೆಗೂ ಅನ್ವಯ. ತಲೆಮಾರಿನಿಂದ ತಲೆಮಾರಿಗೆ ಬದಲಾವಣೆಗಳು ಸಹಜ. ಅದು ಬಳಸುವ ವಸ್ತುಗಳಲ್ಲಿರಲಿ, ಇರುವ ಸೌಲಭ್ಯಗಳಲ್ಲಿರಲಿ, ವಿದ್ಯಾಭ್ಯಾಸ ಅಥವಾ ಉದ್ಯೋಗಾವಕಾಶಗಳೇ ಆಗಿರಲಿ.

 


ಇತ್ತೀಚೆಗೆ ಹೆಚ್ಚು ಕೇಳಿ ಬರುತ್ತಿರುವ ಇನ್ನೊಂದು ಸಮಸ್ಯೆ ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿರುವುದು. ಈ ವಿಚಾರ ಅದೆಷ್ಟು ಬಾರಿ ಚರ್ಚೆಗೆ ಒಳಪಟ್ಟಿದೆಯೋ ಗೊತ್ತಿಲ್ಲ. ಆದರೆ ಅದರಿಂದ ಪರಿಹಾರವಂತೂ ಸಿಕ್ಕಿಲ್ಲ. ಸಮಸ್ಯೆ ಅನಿಸಿಕೊಳ್ಳುತ್ತಿರುವ ವಿಷಯದಲ್ಲಿ ವಾಸ್ತವವಾಗಿ ಇರುವ ಸಮಸ್ಯೆಯಾದರೂ ಏನು? ಮಕ್ಕಳು ಓದಿ ಹೊರಗೆಲ್ಲೋ ಉದ್ಯೋಗದಲ್ಲಿರುವುದು ತಪ್ಪೇ? ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಜೀವನೋಪಾಯ ಅರಸಿ ಊರು ಬಿಟ್ಟು ಹೋಗುವುದು ಸಹಜವೇ ಹೌದಲ್ಲ. ಅದನ್ನು ತಪ್ಪು ಎನ್ನಲಾದೀತೇ? ಅಜ್ಜ ಮುತ್ತಜ್ಜಂದಿರು ಮಾಡಿದ ಕೃಷಿಯಲ್ಲಿ ತಾನಾಗಿಯೇ ಆಸಕ್ತಿ ಹುಟ್ಟಬೇಕು. ಇಲ್ಲವಾದರೆ ಅದು ಅನಿವಾರ್ಯ ಎನಿಸಿಕೊಳ್ಳಬೇಕು. ಇದೆರಡು ಆಗದಿದ್ದಾಗ ಆತ ತನ್ನ ಆಸಕ್ತಿಯ ಇನ್ನಾವುದೋ ಕ್ಷೇತ್ರದತ್ತ ನಡೆಯುತ್ತಾನೆ. ಮಗನನ್ನು ಇಂಜಿನಿಯರಿಂಗ್ ಓದಿಸಿದ ತಂದೆ ತಾಯಿಗಳು ಮಗ ಅಡಿಕೆ ಮರದ ಬುಡದಲ್ಲಿ ಬದುಕು ಕಳೆಯಲಿ ಎಂಬ ನಿರೀಕ್ಷೆ ಇಟ್ಟುಕೊಳ್ಳಬಾರದು. ಅಷ್ಟಾಗಿಯೂ ಇಂಜಿನಿಯರಿಂಗ್ ಕಲಿತವ ತಾನಾಗಿಯೇ ಕೃಷಿಗಿಳಿದರೆ ಸಂತೋಷ. ಓದು ಅನ್ನುವುದು ಕೇವಲ ಉದ್ಯೋಗಕ್ಕಾಗಿ ಅಲ್ಲ. ಅದು ಬದುಕಿಗಾಗಿ, ತಿಳಿವಳಿಕೆಗಾಗಿ.
ನಗರದಲ್ಲಿ ಹುಟ್ಟಿ ಬೆಳೆದ ಯುವಕ ಯುವತಿಯರು ಹಳ್ಳಿಯಲ್ಲಿ ಕೈ ಕೆಸರಾಗಿಸಿಕೊಳ್ಳುತ್ತಿರುವುದೂ ಇತ್ತೀಚೆಗೆ ಅಪರೂಪವಲ್ಲ. ಈ ವಿಚಾರವನ್ನೂ ನಾವು ಗಣನೆಗೆ ತೆಗೆದುಕೊಳ್ಳಲೇಬೇಕು ಇಲ್ಲಿ.  


ಒಂದು ಕುಟುಂಬದ ದೃಷ್ಟಿಯಿಂದ ಮಾತ್ರ ನೋಡಿದರೆ ಸಮಸ್ಯೆ ಇರುವುದು ನಿಜವಾದರೂ ಸಮಾಜವನ್ನು ಸಮಗ್ರವಾಗಿ ನೋಡಿದಾಗ ಒಂದಷ್ಟು ಕುಟುಂಬಗಳು ಕೃಷಿಯನ್ನು ಬಿಟ್ಟಿರುವಾಗ ಇನ್ನೊಂದಷ್ಟು ಹೊಸಬರು ಕೃಷಿಗಿಳಿದಿದ್ದಾರೆ. ಹೀಗೆ ಎಷ್ಟು ಜನ ಹಳ್ಳಿಯಿಂದ ನಗರಕ್ಕೆ ಬರುತ್ತಾರೆ ಅಥವಾ ಎಷ್ಟು ಜನ ನಗರದಿಂದ ಹಳ್ಳಿಗೆ ಹೋಗುತ್ತಾರೆ ಅನ್ನುವ ಲೆಕ್ಕಾಚಾರವನ್ನೂ ಮೀರಿದ ವಿಷಯವೊಂದಿದೆ ಇಲ್ಲಿ. ಅದು ಬದಲಾವಣೆ.


The only constant thing in the universe is change.
ಜಗತ್ತಿನಲ್ಲಿ ನಿರಂತರವಾದುದು ಏನಾದರೊಂದು ಇದ್ದರೆ ಅದು ಬದಲಾವಣೆಯಂತೆ. ಅದು ವಾಸ್ತವವೂ ಹೌದು. ನಾವು ಹುಟ್ಟಿದಂದಿನಿಂದ ಬದಲಾಗುತ್ತಲೇ ಇದೆ ನಮ್ಮ ದೇಹ, ಮನಸ್ಸು, ಪರಿಸರ, ಸಂಬಂಧಗಳು. ಶಿಶುವಾಗಿದ್ದವ ಮುದುಕನಾಗುವುದು. ಬೀಜ ಮೊಳಕೆಯೊಡೆದು ಮರವಾಗುವುದು. ಬೇಸಿಗೆ ಕಳೆದು ಮಳೆ ಸುರಿದು ಚಳಿ ಆವರಿಸುವುದು. ಸೂರ್ಯ ಹುಟ್ಟಿ ಮುಳುಗುವುದು. ಎಲ್ಲವೂ. ನಮಗೆ ತಿಳಿದಿರುವ ಪ್ರತಿಯೊಂದೂ ಬದಲಾವಣೆಯ ಪ್ರಕ್ರಿಯೆಗೆ ಒಳಪಟ್ಟಿರುವಂಥದ್ದೇ. ಅದು ನಡೆಯುತ್ತಲೇ ಇದೆ. ಅದು ಬೇಕೇ ಬೇಡವೇ ಎಂದು ನಮ್ಮನ್ನು ಯಾರೂ ಕೇಳಿಲ್ಲ. ಅಭಿಪ್ರಾಯ ಹೇಳುವ ಅವಕಾಶವೂ ನಮಗಿಲ್ಲ. ಮತ್ತದರ ಅಗತ್ಯವೂ ಇಲ್ಲ. ಬದಲಾವಣೆ ನಿರಂತರ. ಅದು ನಿಲ್ಲುವುದಿಲ್ಲ. ನಾವು ಮಾತ್ರ ನಮ್ಮ ನಮ್ಮ ಕಾಲಗಳಲ್ಲಿ ನಿಂತಿದ್ದೇವೆ. ನಿಂತ ನೀರಾಗಿದೆ ಮನಸ್ಸು. ಹರಿಯುತ್ತಿರುವ ಹೊರ ಜಗತ್ತಿನೊಂದಿಗೆ ಅದು ಒಗ್ಗಿಕೊಳ್ಳುತ್ತಿಲ್ಲ. ಹಳ್ಳಿಯಿಂದ ನಗರಕ್ಕೋ ನಗರದಿಂದ ಹಳ್ಳಿಗೋ‌ ಜನ ಸಂಚರಿಸುವುದು ನಿರಂತರ ನಡೆಯುವ ಪ್ರಕ್ರಿಯೆ. ಆದರೆ ಅದನ್ನು ನಾವು ಒಪ್ಪಿಕೊಳ್ಳುತ್ತಿಲ್ಲ. ಬದಲಾವಣೆಯ ಸಹಜ ಸಂಘರ್ಷಗಳು, ಘರ್ಷಣೆಗಳು ನಮಗೆ ದೊಡ್ಡದೆನಿಸುತ್ತಿವೆ. ವ್ಯಕ್ತಿಯಾಗಿ ನೋಡುವಾಗ ಅದು ದೊಡ್ಡದೇ. ಆದರೆ ಸಮಷ್ಟಿಯಾಗಿ ಅಲ್ಲ. ಸೃಷ್ಟಿಗೆ ಸಹಜವಾದದ್ದನ್ನೇ ಸೃಷ್ಟಿ ಮುಂದುವರಿಸಿಕೊಂಡು ಹೋಗುವುದನ್ನು ನಾವು ಒಪ್ಪಿಕೊಳ್ಳುತ್ತಿಲ್ಲ. ಬದಲಿಗೆ ಆರೋಪಿಸುತ್ತಿದ್ದೇವೆ. ಈ ಕಾಲಘಟ್ಟದಲ್ಲಿ ನಮ್ಮ ಹಲವು ಸೋಲುಗಳಿಗೆ ಕಾರಣ ಈ ಬದಲಾವಣೆಯೇ ಎಂದು ನಾವು ತೀರ್ಮಾನಿಸಿಬಿಟ್ಟಿದ್ದೇವೆ. ಮೇಲ್ನೋಟಕ್ಕೆ ಹಾಗೆ ಕಾಣುವುದೂ ಹೌದು. ಆದರೆ ಕಾರಣ ಅದಲ್ಲ. ಈ ಬದಲಾವಣೆಗಳು ಒಳಿತುಕೆಡುಕುಗಳನ್ನು ಒಂದೇ ತಟ್ಟೆಯಲ್ಲಿ ನಮ್ಮೆದುರು ಇಡುತ್ತವೆ. ಒಂದಕ್ಕೊಂದು free offer ಇರುವಂತೆ. ಅದನ್ನು ಬಿಟ್ಟು ಇದಿಲ್ಲ. ಅದು ಹೇಗೆಂದರೆ ಔಷಧಿಗಳ side effectನಂತೆ. Side effect ಇಲ್ಲವೆಂದಾದರೆ ಅದಕ್ಕೆ effect ಕೂಡ ಇಲ್ಲ ಎಂದೇ ಅರ್ಥ! ಅಮೃತದೊಂದಿಗೇ ಬಂದದ್ದಲ್ಲವೇ ಹಾಲಾಹಲ? ಆದರೆ ಅವುಗಳನ್ನು ನಿಭಾಯಿಸುವುದು ನಮಗೆ ತಿಳಿದಿರಬೇಕು. ಹಂಸ ಹಾಲು ಮಾತ್ರ ಕುಡಿಯುವಂತೆ ಒಳಿತನ್ನಷ್ಟನ್ನೇ ಸ್ವೀಕರಿಸಿ ಕೆಡುಕನ್ನು ಬಿಟ್ಟು ಸಾಗಬೇಕಿದೆ.

 

ಈ ಕಲೆ ನಮ್ಮ ಪೂರ್ವಜರಿಗೆ ಕರಗತವಾಗಿತ್ತು. ಅದು ದೀಪ ಹಚ್ಚುವ ಕಲೆ. ಬೆಳಕು ಬೀರುವ ಕಲೆ. ನಾವದನ್ನು ಕಂಡುಕೊಳ್ಳಬೇಕಿದೆ. ಬೆಳಕಿನಲ್ಲಿ ನಿರಂತರ ಬದಲಾಗುವ ಬದುಕನ್ನು ಕಟ್ಟಿಕೊಳ್ಳಬೇಕಿದೆ.

Author Details


Srimukha

Leave a Reply

Your email address will not be published. Required fields are marked *