ಮೆದುಳಿನ ಮೇಲೆ ಸಂಗೀತದ ಪರಿಣಾಮಗಳು

ಅಂಕಣ ಸಂಗೀತಸುಧೆ : ಕಾಂಚನ ರೋಹಿಣಿ ಸುಬ್ಬರತ್ನಂ

ದಿನಾಂಕ 17.12.2018ರ ಪ್ರಜಾವಾಣಿ ಪತ್ರಿಕೆಯಲ್ಲಿ ಹೀಗೊಂದು ಸುದ್ದಿ ಪ್ರಕಟವಾಯಿತು. ಸ್ವರಚಿಕಿತ್ಸೆಯಿಂದಾಗಿ, ಕೋಮಾದಿಂದ ಹೊರಬಂದ ಪಶ್ಚಿಮಬಂಗಾಳದ ಯುವತಿ – ಸಂಗೀತಾ ಎನ್ನುವವರ ಜೀವವನ್ನು ಉಳಿಸಿದ ಪಿಟೀಲು ವಾದನ! – ಈಗ ಚಿಕಿತ್ಸೆಯನ್ನು ಪಡೆಯುತ್ತಿರುವ ಸಂಗೀತಾ. ಇದನ್ನು ಎಂ. ಎನ್‌. ಯೋಗೇಶ್‌ ಮಂಡ್ಯ ಪ್ರಕಟಿಸಿದರು. ಈ ಸುದ್ದಿಯು ಪ್ರಜಾವಾಣಿಯಲ್ಲಿ ಮಾತ್ರವಲ್ಲದೆ ದೇಶದಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿಯೂ, ಇನ್ನೂ ಅನೇಕ ವಾರ್ತಾಪತ್ರಿಕೆಗಳಲ್ಲಿಯೂ ಬಹಳವಾಗಿ ಸುತ್ತಿ, ಪ್ರಸಿದ್ಧಿಯನ್ನೂ ಪಡೆಯಿತು.

 

ವಿಷಯವೇನೆಂದರೆ, ಹಿಂದೂಸ್ಥಾನೀ ಸಂಗೀತದಲ್ಲಿ ಅಂತರರಾಷ್ಟ್ರೀಯ ಖ್ಯಾತಿಯ ಪಿಟೀಲುವಾದಕಿಯಾದ ಡಾ. ಎನ್‌. ರಾಜಂ ಅವರ ಪಿಟೀಲುವಾದನದ ನಾದವು ಕೋಮಾ ಸ್ಥಿತಿಯಲ್ಲಿದ್ದ ಸಂಗೀತಾ ಎನ್ನುವ ಯುವತಿಯ ಜೀವವನ್ನು ಉಳಿಸಿದೆ. ಡಾ. ಎನ್. ರಾಜಂರವರು ನುಡಿಸಿದ ದರ್ಬಾರಿಕಾನಡಾ ರಾಗವು ಶಾಂತ ನದಿಯಂತೆ ಹರಿಯುವ  ನಾದವಾಹಿನಿಯಾಗಿ ಮೆದುಳಿಗೆ ಚೈತನ್ಯ ತುಂಬಿದೆಯೆಂದು ಈ ಸುದ್ದಿಯು ಹೇಳುತ್ತದೆ. ಅಲ್ಲದೆ, ಈ ಸುದ್ದಿಯು, ವೈದ್ಯಕೀಯ ವಿಜ್ಞಾನವನ್ನೂ ಮೀರಿದ ಈ ಸಂಗೀತಚಿಕಿತ್ಸೆಯ ವಿಚಾರವು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆಯೆಂದೂ ಹೇಳಿದೆ. ಈ ಚಿಕಿತ್ಸೆಗೆ ಒಳಪಟ್ಟವರು ಪಶ್ಚಿಮಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಹಳ್ಳಿಯೊಂದರ ಸಂಗೀತಾ ದಾಸ್‌. ಆಕೆ ಡೆಂಗ್ಯು ಜ್ವರದಿಂದ ಬಳಲುತ್ತಿದ್ದರು. ನ.7ರಂದು ಕೋಮಾಕ್ಕೆ ಜಾರಿದ್ದರು. ವಿವಿಧೆಡೆ ಚಿಕಿತ್ಸೆ ಕೊಡಿಸಿದರೂ ಗುಣಮುಖರಾಗಲಿಲ್ಲ. 27ರಂದು ಕೋಲ್ಕತ್ತದ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗೆ (ಎಸ್‌. ಎಸ್‌. ಕೆ. ಎಂ.) ದಾಖಲಿಸಲಾಯಿತು. ಮೆದುಳಿನಲ್ಲಿ ರಕ್ತವು ಹೆಪ್ಪುಗಟ್ಟಿ ಪ್ರಜ್ಞಾಹೀನರಾಗಿದ್ದ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿರಲಿಲ್ಲ. ಸಂಗೀತಾರವರಿಗೆ ಚಿಕಿತ್ಸೆಯನ್ನು ನೀಡಿದವರು ವೈದ್ಯರಾದ, ಸ್ವತಃ ಪಿಟೀಲುವಾದಕರಾದ ಎಸ್‌. ಎಸ್‌. ಕೆ. ಎಂ. ಆಸ್ಪತ್ರೆಯ ಸಹಾಯಕ ಪ್ರಾಧ್ಯಾಪಕ ಡಾ. ಸಂದೀಪ್‌ ಕಾರ್‌. ಇವರು ಪಶ್ಚಿಮಬಂಗಾಳ ಆಕಾಶವಾಣಿಯಲ್ಲಿ ಕಲಾವಿದರಾಗಿದ್ದವರು. ಹೃದ್ರೋಗ ಅರಿವಳಿಕೆ ತಜ್ಞರಾದ ಅವರು 2011ರಿಂದಲೂ ಸಂಗೀತ ಚಿಕಿತ್ಸೆಯ ಬಗ್ಗೆ ಸಂಶೋಧನೆಯನ್ನು ನಡೆಸುತ್ತಿದ್ದಾರೆ. ಡಾ. ಸಂದೀಪ್ ಕಾರ್ ಸಂಗೀತಾರವರಿಗೆ ಸ್ವರಚಿಕಿತ್ಸೆಯನ್ನು ನೀಡಲು ನಿರ್ಧರಿಸಿದರು. ಪದ್ಮಭೂಷಣ ಡಾ. ಎನ್‌. ರಾಜಂ ನುಡಿಸಿರುವ 24 ನಿಮಿಷಗಳ ‘ದರ್ಬಾರಿ ಕಾನಡ’ ರಾಗಪ್ರಸ್ತುತಿಯ ರೆಕಾರ್ಡಿಂಗನ್ನು ನಿತ್ಯ ಮೂರು ಬಾರಿ ಕೇಳಿಸಿದರು. ಜೊತೆಗೆ ಔಷಧವನ್ನೂ ಮುಂದುವರಿಸಿದರು. ಈ ಚಿಕಿತ್ಸೆಗೆ ಪ್ರತಿಸ್ಪಂದಿಸಿ ಕೋಮಾದಲ್ಲಿ ಜಾರಿದ್ದ ಸಂಗೀತಾರವರು ಎರಡು ವಾರಗಳಲ್ಲಿ ಕೋಮಾದಿಂದ ಹೊರಬಂದರು.

 

‘ತೆರೆದ ಹೃದಯದ ಶಸ್ತ್ರಚಿಕಿತ್ಸೆ ವೇಳೆಯೂ ರಾಗಚಿಕಿತ್ಸೆಯನ್ನು ನೀಡುತ್ತಿದ್ದೆ. ಆದರೆ, ಫಲಿತಾಂಶವು ತಿಳಿಯುತ್ತಿರಲಿಲ್ಲ. ಈಗ ನನ್ನ ಸಂಶೋಧನೆಗೆ ಮೊದಲ ಬಾರಿ ಫಲ ಸಿಕ್ಕಿದೆ. ಇನ್ನು 15 ದಿನಗಳಲ್ಲಿ ಸಂಗೀತಾರವರು ಸಂಪೂರ್ಣ ಗುಣಮುಖರಾಗುವರು’ ಎಂದು ಡಾ. ಸಂದೀಪ್‌ ಕಾರ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.  ಸಂಗೀತಾ ಮೇಲೆ ಪ್ರಯೋಗಿಸಿದ ದರ್ಬಾರಿಕಾನಡ ರಾಗವನ್ನು ಕುರಿತು ಡಾ. ಸಂದೀಪ್ ಕಾರ್ ಹೀಗೆ ಹೇಳಿದ್ದಾರೆ, ಈ ರಾಗವು ‘ಮಾನವೀಯ ಸ್ಪರ್ಶದ ರಾಗ’. ಸಂಗೀತಾ ಕೋಮಾದಿಂದ ಎಚ್ಚರಗೊಂಡದ್ದರಿಂದ ನನ್ನ ಮನಸ್ಸು ಸಂತೋಷದಿಂದ ತುಂಬಿದೆ. ದರ್ಬಾರಿ ಕಾನಡದಲ್ಲಿ ರೋಗ ಗುಣಪಡಿಸುವ ಶಕ್ತಿ ಇರುವುದಂತೂ ಸತ್ಯ.

ಇವಿಷ್ಟೂ ಶ್ರೀ ಯೋಗೀಶ್ ಅವರ ಬರಹದ ವಿಷಯಗಳು.

 


ಇದು ಸಾಧ್ಯವೇ? ಸಂಗೀತವು ಇಷ್ಟು ಮಹತ್ತೇ? ಶಕ್ತಿಶಾಲಿಯೇ? ರಾಗಗಳಿಗೆ ನಿಜಕ್ಕೂ ರೋಗನಿವಾರಕ ಶಕ್ತಿ ಇದೆಯೇ? ಅಕಸ್ಮಾತ್ ರೋಗನಿವಾರಕ ಗುಣವಿದ್ದರೂ ಕೋಮಾದಲ್ಲಿರುವ ವ್ಯಕ್ತಿಗೆ ಸಂಗೀತವು ಕೇಳಲಾರದಲ್ಲ, ಆದರೂ ಗುಣವಾಗುತ್ತದೆಯೇ? ವೈಜ್ಞಾನಿಕ ಸಂಶೋಧನೆಗಳಾಗಿವೆಯೇ? !! ಇತ್ಯಾದಿ ಅನೇಕ ಪ್ರಶ್ನೆಗಳು ಉದ್ಭವಿಸುತ್ತದಲ್ಲವೆ? ಮಹತ್ತು – ಬೃಹತ್ತೂ ಆದ ಈ ವಿಷಯವನ್ನು ಕುರಿತಾಗಿ ನಮ್ಮ ಮುಂದಿರುವ ಈ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಹಿಡಿಯಲು ಯತ್ನಿಸಬಹುದು.


ಮಾನವ ಮಾನಸವಿಕಾಸದಲ್ಲಿ ಭಾಷೆಯ ಉಗಮಕ್ಕಿಂತ ಮೊದಲೇ ನಾದ-ಲಯಗಳ ಸಂಘಟನೆಯು ಕಂಡುಬರುತ್ತದೆಂದು ಮಾನವಶಾಸ್ತ್ರವು ಹೇಳುತ್ತದೆ. ಸಂಗೀತವು ಮಾನವಕುಲದ ಅತ್ಯಂತ ಪ್ರಾಚೀನವೂ ಶಕ್ತಿಶಾಲಿಯೂ ಆದ, ಮಾತಿಗೆ ಹೊರತಾದ ಅನ್ಯ ಸಂಪರ್ಕಸಾಧನವೂ ಅಭಿವ್ಯಕ್ತಿಸಾಧನವೂ ಆಗಿದೆ. ಇತರ ಎಲ್ಲ ಕಲೆಗಳಿಗಿಂತಲೂ ಸಂಗೀತಾನುಭವದಲ್ಲಿ ಅತ್ಯಧಿಕ ಮಂದಿಗಳು ಪಾಲ್ಗೊಳ್ಳುತ್ತಾರೆ. ಆದುದರಿಂದ ಮಾನಸಿಕ ಸತ್ಪರಿಣಾಮಗಳಿಗಾಗಿಯೂ ತನ್ಮೂಲಕ ದೈಹಿಕ ಸತ್ಪರಿಣಾಮಗಳಿಗಾಗಿಯೂ ಸಂಗೀತವನ್ನು ಆಶ್ರಯಿಸುವುದು ಸ್ವಾಭಾವಿಕವೇ ಆಗಿದೆ.

 

ಸಂಗೀತಕ್ಕೆ ರೋಗಚಿಕಿತ್ಸಕ ಶಕ್ತಿಯಿದೆಯೆಂಬ ನಂಬುಗೆಯು ಈಜಿಪ್ಟ್, ಚೀನಾ, ಗ್ರೀಸ್, ಥ್ರೇಸ್, ಬ್ಯಾಬಿಲೋನಿಯಾ, ಅರೇಬಿಯ ಮತ್ತು ಭಾರತದೇಶಗಳಲ್ಲಿ ಬಹಳ ಪುರಾತನ ಕಾಲದಿಂದಲೂ ಇದೆ. ಇದಕ್ಕೆ ಸಂಬಂಧಿಸಿದಂತೆ ಅನೇಕ ದಂತಕಥೆಗಳೂ ಐತಿಹಾಸಿಕ ಸಂಗತಿಗಳೂ ಈ ದೇಶಗಳಲ್ಲಿ ಇವೆ. ಪ್ರಾಚೀನ ಭಾರತೀಯ ಆಯುರ್ವೇದಾಚಾರ್ಯನಾದ ಚರಕನು ಮಾನವನು ದೇಹ, ಇಂದ್ರಿಯಗಳು, ಪ್ರಜ್ಞೆ ಮತ್ತು ಆತ್ಮಗಳ ಸಂಯೋಗದಿಂದ ಆಗಿರುವ ಸಂಘಾತವೆನ್ನುತ್ತಾನೆ. ಈ ಕಲ್ಪನೆಯಲ್ಲಿ ದೈಹಿಕ ಚಿಕಿತ್ಸೆ ಮತ್ತು ಮಾನಸಿಕ ಚಿಕಿತ್ಸೆಗಳೆರಡಕ್ಕೂ ಅವಿನಾಸಂಬಂಧವು ಗಾಢವಾಗಿರುವುದು ಇಂಗಿತಗೊಂಡಿದೆ. ಇದಕ್ಕೆ ಪ್ರತಿಯಾಗಿ ಮಾನವನಿಗೂ ವಿಶ್ವಕ್ಕೂ ನಡುವೆ ಇರುವ ಸಮರಸಭಾವವನ್ನು ಸಂಗೀತವೂ ಕಾವ್ಯವೂ ದೀಪನಗೊಳಿಸುತ್ತದೆಂಬದನ್ನು ಅರ್ಫ್ಯೂಸನು ತನ್ನ ರೋಗನಿರೋಧಕ ಹಾಗೂ ರೋಗಚಿಕಿತ್ಸಕ ವೈದ್ಯದಿಂದ ತೋರಿಸಿಕೊಟ್ಟ  ತತ್ತ್ವವನ್ನು ಆರ್ಫಿಸಂ ಎಂದೇ ಕರೆಯಲಾಯಿತು. ಇದನ್ನು ಪೈಥಾಗೊರಸ್ಸನು ಊರ್ಜಿತಗೊಳಿಸಿದನು. ಈಸ್ಕಲೆಪಿಯಾಡಿಸ್, ಸೆಲ್ಸಸ್, ಹಿಪ್ಪೊಕ್ರೆಟಿಸ್ ಮುಂತಾದವರು ದೈಹಿಕ ಹಾಗೂ ಮಾನಸಿಕ ವೇದನೆಗಳನ್ನು ಗುಣಪಡಿಸಲು ಸಂಗೀತವನ್ನು ಉಪಯೋಗಿಸುತ್ತಿದ್ದರೆಂದು ನಂಬಲಾಗಿದೆ. ಅರಬ್ ದೇಶದಲ್ಲಿ 9-12 ನೆಯ ಶತಮಾನಗಳಲ್ಲಿ ಸಂಗೀತ ಚಿಕಿತ್ಸೆಯು ಬಹಳ ಪ್ರೌಢಾವಸ್ಥೆಯನ್ನು ಮುಟ್ಟಿತು. ಕ್ರೈಸ್ತೀಯ ಯೂರೋಪಿಗಿಂತ ಕನಿಷ್ಠಪಕ್ಷ ನಾಲ್ಕು ಶತಮಾನಗಳಿಗಿಂತ ಮುಂಚೆಯೇ ಸಂಗೀತಚಿಕಿತ್ಸಾವಿಧಾನಗಳನ್ನೊಳಗೊಂಡ ಮಾನಸಸ್ವಾಸ್ಥ್ಯಚಿಕಿತ್ಸೆಯ ಆಸ್ಪತ್ರೆಗಳನ್ನು ಅಲ್ಲಿ ಸ್ಥಾಪಿಸಲಾಗಿತ್ತು.


ಭಾರತದಲ್ಲಿ, ಸಂಗೀತನೃತ್ಯಗಳು ಆರೋಗ್ಯವನ್ನು ಹೆಚ್ಚಿಸುವುದರಲ್ಲಿ ಪ್ರಯೋಜನಕರವಾದ ಪ್ರಭಾವವನ್ನು ಬೀರುತ್ತದೆ ಎಂಬ ನಂಬಿಕೆಗಳಿದ್ದುದನ್ನು ವಾಲ್ಮೀಕಿರಾಮಾಯಣದಲ್ಲಿ ಇರುವ ಯುದ್ಧಭೂಮಿ, ಸೇನೆಯ ಮುನ್ನಡೆ, ಖಿನ್ನತೆಯ ನಿವಾರಣೆ ಮೊದಲಾದುವುಗಳಲ್ಲಿ ಸಂಗೀತದ ಉಪಯೋಗಗಳಿದ್ದುದಾಗಿ ಉಲ್ಲೇಖಗಳು ತಿಳಿಸುತ್ತವೆ. ನಂದಿಕೇಶ್ವರನು ತನ್ನ ಅಭಿನಯದರ್ಪಣದಲ್ಲಿ ‘ದುಃಖಾರ್ತಿಶೋಕನಿರ್ವೇದಖೇದವಿಚ್ಛೇದಕಾರಣಮ್’ ಎಂದು ಸಂಗೀತ (=ಗೀತವಾದ್ಯನರ್ತನಗಳು) ವನ್ನು ಪ್ರಶಂಸಿಸಿದ್ದಾನೆ. ಶಾರ್ಙ್ಗದೇವ, ಜಗದೇಕಮಲ್ಲ, ಹಾಗೂ ಇವರನ್ನು ಅನುಸರಿಸಿ ಪಿಂಡೋತ್ಪತ್ತಿಯಲ್ಲಿಯೇ ನಾದೋತ್ಪತ್ತಿಯುಂಟಾಗುತ್ತದೆಂದು ಹೇಳಿದ ಎಲ್ಲ ಸಂಗೀತಶಾಸ್ತ್ರಜ್ಞರೂ ತೊಟ್ಟಿಲ ಮಗುವಿನಿಂದ ಹಿಡಿದು ಪ್ರಾಣಿಗಳವರೆಗೆ ಎಲ್ಲರ ಮನಸ್ಸನ್ನೂ ಸಂಗೀತವು ಪ್ರಭಾವಗೊಳಿಸುತ್ತದೆಂದು ಹೇಳಿದ್ದಾರೆ. ಸಂಗೀತವನ್ನು ಕೇಳುವಾಗ ಉಂಟಾಗುವ ಆನಂದದ ತುರಿಯಾವಸ್ಥೆಯಲ್ಲಿ, ಮನಸ್ಸಿನ ಮಲಪೂರಿತವಾದ ಅನುಭವಾಂಶಗಳು ವಿರೇಚನಹೊಂದಿ, ವ್ಯಕ್ತಿಯ ಮಾನಸಿಕ ಸಮತೋಲನವನ್ನೂ ಮನಃಸ್ವಾಸ್ಥ್ಯ ಸಮೃದ್ಧಿಯನ್ನೂ, ಆಂತರಂಗಿಕ ಶಕ್ತಿಗಳ, ಸಂಪನ್ಮೂಲಗಳ ಸಂಚಯನವನ್ನೂ ಉಂಟುಮಾಡುತ್ತದೆ. ಆದುದರಿಂದ ಸಂಗೀತವು ಸೌಂದರ್ಯಾಸ್ವಾದ ಸಾಧನವೂ ಹೌದು, ಮಾನಸಿಕ ವಿರೇಚಕವೂ ಹೌದು. ಮಾನಸಿಕ ಚಿಕಿತ್ಸಾ ಉಪಾಯವೂ ಹೌದು ಎಂದು ರಾ. ಸತ್ಯನಾರಾಯಣರವರು ಹೇಳುತ್ತಾರೆ.


ಪಾಶ್ಚಿಮಾತ್ಯ ದೇಶಗಳಲ್ಲಿ ಸಂಗೀತ ಚಿಕಿತ್ಸೆಯು ಚೆನ್ನಾಗಿಯೇ ಊರ್ಜಿತದಲ್ಲಿದೆ. ಇಂಗ್ಲೆಂಡ್, ಯೂರೋಪ್, ಅಮೆರಿಕದ ಸಂಯುಕ್ತ ಸಂಸ್ಥಾನಗಳು ಮತ್ತು ಕೆನಡಾಗಳಲ್ಲಿ ನೂರಾರು ಸಂಗೀತಚಿಕಿತ್ಸಾಕೇಂದ್ರಗಳಿದ್ದು ಅನೇಕ ತಜ್ಞ ವೈದ್ಯರುಗಳೂ ಇದ್ದಾರೆ. ಈ ವಿಷಯಕವಾದ ಅಂತರರಾಷ್ಟ್ರೀಯ ಮಟ್ಟದ ಸಮ್ಮೇಳನ, ಸೆಮಿನಾರ್ ಗಳೂ ನಡೆಯುತ್ತಲೇ ಇರುತ್ತವೆ. ವಿಶೇಷ ಬುಲೆಟಿನ್, ಮಾನೋಗ್ರಾಫ್, ಮತ್ತಿತರ ಗ್ರಂಥಗಳು, ನಿಯತಕಾಲಿಕೆಗಳು, ಇತ್ಯಾದಿ ಪ್ರಕಟಣೆಗಳು ನಿಯತಕಾಲಿಕವಾಗಿ ಹೊರಬೀಳುತ್ತಲೇ ಇರುತ್ತವೆ.  ಡಾ. ಬೆಖಿನ್ಸ್ಕಿ, ಡಾ. ಎವಿಂಗ್, ಡಾ. ಹರ್ಬರ್ಟ್ ಡಿಕ್ಸನ್, ಸೋವಿಯಟ್ ನ ಡಾ.ಡೊಗಿಯಲ್ ಮುಂತಾದ ವೈದ್ಯರುಗಳು ತಮ್ಮ ಸಂಶೋಧನೆಗಳಿಂದ ಸಂಗೀತವು ಮನುಷ್ಯನ ಮೇಲೆ ಉಂಟುಮಾಡುವ ಅನೇಕ ಸತ್ಪರಿಣಾಮಗಳನ್ನು ಹೇಳಿದ್ದಾರೆ. ಆದರೆ, ಮಾತುಗಳ ಮತ್ತು ಗಮಕ – ಸ್ವರಾಲಂಕರಣಗಳ ಮೂಲಕ ರಸವನ್ನು ಪ್ರೇರೇಪಿಸಿ ಮಾನಸಿಕ ವಿರೇಚನಗೊಳಿಸುವುದರಲ್ಲಿ ಪಾಶ್ಚಾತ್ಯರ ಸಂಗೀತವು ಭಾರತೀಯ ಸಂಗೀತಕ್ಕೆ ಸಾಟಿಯಿಲ್ಲವಾದರೂ ಭಾರತದಲ್ಲಿ ಈ ದಿಸೆಯಲ್ಲಿ ಸರಿಯಾದ, ಪ್ರಾಮಾಣಿಕವಾದ ಪ್ರಯತ್ನಗಳು ಸಾಕಷ್ಟು ಆಗುತ್ತಿಲ್ಲ.


ಸಂಗೀತ ಚಿಕಿತ್ಸೆಯ ಮೂಲೋದ್ದೇಶವಾದರೂ ಅಸ್ವಸ್ಥನ ಮನಸ್ಸು ದೇಹಗಳನ್ನು ಅವಿಭಾಜ್ಯವಾದ ಒಂದೇ ಸಂಘಾತವೆಂದು ಭಾವಿಸಿ ಮನಸ್ಸಿನಲ್ಲಿ ಹುಟ್ಟುವ ವಿಕಾರ, ಒತ್ತಡ, ಬಿಗುಹು ಮುಂತಾದವುಗಳನ್ನೂ ಓರೆಕೋರೆಗಳನ್ನು ಕಳೆದು ಆರೋಗ್ಯ ಸ್ಥಿತಿಯನ್ನು ತಂದುಕೊಡುವುದು. ಇದು ಯಾವುದೇ ಆಸ್ಪತ್ರೆ ಅಥವಾ ಚಿಕಿತ್ಸಾ ಕೇಂದ್ರಗಳಲ್ಲಿ ಯಶಸ್ವಿಯಾಗಬೇಕಾದರೆ ನಾಲ್ಕು ಸಂಗತಿಗಳನ್ನು ಸಾಧಿಸಬೇಕು ಎಂದು ರಾ. ಸತ್ಯನಾರಾಯಣರವರು ಹೇಳಿದ್ದಾರೆ.

ಅವು —

 

  1. ಅವುಗಳಲ್ಲಿರುವ ಔಪಚಾರಿಕ, ಅಹಿತಕರ ವಾತಾವರಣವನ್ನು ಹೋಗಲಾಡಿಸುವುದು ಒಂದೇ ರೀತಿಯಿರುವ ಅದೆತನವನ್ನೂ, ನಿತ್ಯಗಟ್ಟಲೆಯ ನಿಯತಿಯನ್ನೂ ನಿವಾರಿಸಿ ಅನೌಪಚಾರಿಕ, ವ್ಯಕ್ತಿನಿಷ್ಠಪರಿಸರವನ್ನು ನಿರ್ಮಿಸುವುದು.

 

  1. ಮಾನಸಿಕ ರೋಗಿಗಳಿಗೆ ಮೂಲಕಾರಣವಾದ ರಸ – ಸಂವೇದನೆಗಳ ಅವ್ಯವಸ್ಥೆಯ ವಿಕೋಪ, ಚಿತ್ತಕ್ಷೋಭೆಗಳು ಅತಿಯಾಗದಂತೆ ಎಚ್ಚರವಹಿಸುವುದು.

 

  1. ರೋಗಿಯ ಮನಸ್ಸು ಅಂತರ್ಮುಖವಾಗದಂತೆ ನೋಡಿಕೊಳ್ಳುವುದು, ರೋಗಿಯು ಸ್ವಮಗ್ನವಾದರೆ, ತನ್ನ ರೋಗದ ವರ್ಣನೆಗಳಲ್ಲಿ ತೊಡಗಿದರೆ ರೋಗಿಯನ್ನು ಅವುಗಳಿಂದ ವಿಮುಖಗೊಳಿಸುವುದು ಇತ್ಯಾದಿ.  ಇವೆಲ್ಲಕ್ಕೂ ಸಂಗೀತವು ಪ್ರಯೋಜಕ ಅನುಕೂಲಕರ, ಸುಲಭಸಾಧ್ಯ, ಆಕರ್ಷಕ, ಸರ್ವಗ್ರಾಹ್ಯ.

 

  1. ಸಂಗೀತದಿಂದಾಗಿ ಮಾದಕದ್ರವ್ಯ ಚಟ, ವಿಪರೀತ ಪ್ರವೃತ್ತಿ, ಅತಿರೇಕದ ಆವೇಗ, ಸ್ಕಿಜ್ಸೋಫ್ರೇನಿಯಾ, ಮೆಲಂಕಲಿಯ, ಫೋಬಿಯಾ, ಮೇನಿಕ್ ಡಿಪ್ರೆಷನ್, ಸೈಕ್ಲೋಥೈಮಿಯಾ (ಹುಣ್ಣಿಮೆ ಮತ್ತು ಅಮಾವಾಸ್ಯೆಗಳಲ್ಲಿ ಉನ್ಮಾದವು ಪರಾಕಾಷ್ಠೆಗೆ ಏರುವುದು, ನಿಯತಾವೃತಿಯ ನರದೌರ್ಬಲ್ಯ ಮುಂತಾದ ವಾಸಿಯಾಗದ ಅನೇಕ ರೋಗಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ.



ಇದು ನಿಜವೇ? ಮಿದುಳಿನ ಮೇಲೆ ಸಂಗೀತದಿಂದ ಉಂಟಾಗುವ ಪರಿಣಾಮವಾದರೂ ಹೇಗೆ? —

 

ಮಾಂಟ್ರಿಯಲ್ ನ ಮ್ಯಾಕ್ ಗಿಲ್ ವಿಶ್ವವಿದ್ಯಾಲಯದ ಪ್ರಯೋಗಾಲಯವನ್ನು ನಡೆಸುವ ಸಂಗೀತಮನಃಶಾಸ್ತ್ರಜ್ಞರಾದ ಡಾ.ಡೇನಿಯಲ್ ಲೆಟ್ವಿನ್  ಸಂಗೀತದ ಗ್ರಹಿಕೆ, ಅರಿವು ಹಾಗೂ ಪರಿಣತಿಯ ಬಗ್ಗೆ ಸಂಶೋಧನೆಗಳನ್ನು ನಡೆಸುತ್ತಿದ್ದು ಒಬ್ಬರು ಅಥವಾ ಜೊತೆಯಾಗಿ ಅಥವಾ ಸಮೂಹದಲ್ಲಿ ಸಂಗೀತವನ್ನು ಹಾಡಿದರೆ ಅಥವಾ ವಾದ್ಯಗಳಲ್ಲಿ ನುಡಿಸುವಾಗ ಅಥವಾ ಕೇಳುವಾಗ ಉಂಟಾಗುವ ಪರಿಣಾಮಗಳನ್ನು ಕುರಿತು ಹೀಗೆಂದಿದ್ದಾರೆ :

 


 ‘Music is involved in every region of the brain scientists have mapped so far. Music is processed in the emotional part of the brain. It stays deep in our long-term memory. Research shows that listening to music releases certain chemicals in the brain. Dopamine, a ‘feel-good hormone’ is released every time you listen to music you like. Listening to music with someone else can also release prolactin, a hormone that bonds people together. And if you sing together? You release oxytocin, which causes feelings of trust. Oxytocin is the ‘cuddle hormone’.The testing applies to more than just endorphins and music. Preliminary studies have shown that music listening and performing modulate levels of serotonin, epinephrine, dopamine, oxytocin, and prolactin. Music can reliably induce feelings of pleasure, and indeed, people consistently rank music as among the top ten things in their lives that bring pleasure, above money, food, and art. — ಎಂದು ತಮ್ಮ ಲೇಖನಗಳಲ್ಲಿಯೂ ಸಂದರ್ಶನಗಳಲ್ಲಿಯೂ ಹೇಳಿದ್ದಲ್ಲದೆ ತಮ್ಮ ಜೀವನದಲ್ಲಿಯೇ ನಡೆದ ಘಟನೆಗಳ, ಸಂದರ್ಭಗಳ ಉದಾಹರಣೆಗಳನ್ನು ನೀಡಿದ್ದಾರೆ.

 

ಮ್ಯಾಕ್ ಗಿಲ್ ವಿಶ್ವವಿದ್ಯಾಲಯದಲ್ಲಿ ಅನೇಕಾನೇಕ MRI, PET ಗಳಂತಹ Scan ಗಳನ್ನು ಇನ್ನೂರೈವತ್ತಕ್ಕೂ ಹೆಚ್ಚು ಜನಗಳ ಮೇಲೆ ಏಕಕಾಲದಲ್ಲಿ ವಿವಿಧ ರೀತಿಗಳಲ್ಲಿ ಸಂಗೀತವನ್ನು ಪ್ರಯೋಗಿಸಿ, ಜನರು ಅವರಿಗೆ ಇಷ್ಟವಾಗುವಂತಹ ಸುಶ್ರಾವ್ಯ ಸಂಗೀತವನ್ನು ಕೇಳಿದಾಗ ಮಿದುಳಿನಲ್ಲಿ ಡೊಪಮೈನ್ ಪ್ರಸರಣವು ಹೆಚ್ಚು ಉಂಟಾಗುತ್ತದೆಂದೂ, ಕೇಳುವಿಕೆಯಿಂದ ಮಿದುಳಿನಲ್ಲಿ ರಕ್ತಪರಿಚಲನೆಯು ಉತ್ತಮವಾಗಿ ಉಂಟಾಗುತ್ತದೆಂದೂ ಜ್ಸಟೋರ್ರೆ, ಹಾಲ್ಪೆರ್ನ್, ಪೆರ್ರಿ, ಮೆಯರ್ ಮತ್ತು ಇವಾನ್ ಮುಂತಾದ ಸಂಶೋಧಕರು 1996ನೆಯ ಇಸವಿಯಲ್ಲಿಯೂ, ಆನಂತರವೂ  ಸಂಶೋಧಿಸಿ ಲೇಖನಗಳನ್ನು ಬರೆದಿದ್ದಾರೆ. ಬಾರ್ರಿ ಗೋಲ್ಡ್ ಸ್ಟೈನ್ ರವರು ಹೀಗೆ ಹೇಳಿದ್ದಾರೆ –

“The field of music and neuroscience is greatly expanding and is indicating many beneficial ways music can engage and change the brain. Let’s discuss how music affects the brain and mood by engaging emotion, memory, learning and neuroplasticity, and attention. In looking at the many ways that music engages the brain, we can begin to understand how creating a consistent musical program can target and enhance certain brain functions.”  

 

ಇದಕ್ಕೆ ಅವರು ನಾಲ್ಕು ಕಾರಣಗಳನ್ನು ನೀಡಿದ್ದಾರೆ.

 

  1. ಭಾವನಾತ್ಮಕ ಸಂಬಂಧ – ಇದಕ್ಕೆ ಉದಾಹರಣೆಯೆಂದರೆ ತಾಯಿಯು ಮಗುವಿಗೆ ಲಾಲಿ ಗೀತಗಳನ್ನು ಹಾಡುವ ಸಂದರ್ಭ. 2.ಸ್ಮರಣಶಕ್ತಿ – ಸದಾ
  2. ಸಂಗೀತವು ಉಂಟುಮಾಡುವ ನರಗಳ ಮೇಲಿನ ಪರಿಣಾಮಗಳು
  3. ಕಲಿಯುವಿಕೆ ಮತ್ತು ನ್ಯೂರೋಪ್ಲಾಸ್ಟಿ. ನ್ಯೂರೋಪ್ಲಾಸ್ಟಿಸಿಟಿ (ನರರೋಗಸ್ಥಿತಿ)ಯು ಗಾಯಗೊಂಡ ಮಿದುಳಿನ ನ್ಯೂರಾನ್ (ನರಗಳ ಅಂಗಾಂಶ)ಗಳು ಗುಣವಾಗಿ, ಸರಿಯಾಗಿ ಕಾರ್ಯವನ್ನು ನಿರ್ವಹಿಸುವ ಬೇರೆ ದಾರಿಗಳನ್ನು ಕಂಡುಕೊಳ್ಳುವ ಶಕ್ತಿಯನ್ನು ಮಾಧುರ್ಯವಾದ ಸಂಗೀತವು ಆಶ್ಚರ್ಯಕರವಾಗಿ ನೀಡುತ್ತದೆ.
  4. ಧ್ಯಾನ ಹಾಗೂ ಏಕಾಗ್ರತೆ – ನಿಶ್ಶಬ್ದಕ್ಕಿಂತಲೂ ಸಂಗೀತ ಮಾಧುರ್ಯವು ಏಕಾಗ್ರತೆಯನ್ನುಂಟುಮಾಡಲು ಹೆಚ್ಚು ಪ್ರಭಾವಶಾಲಿಯಾಗಿದೆ. ಶಾಂತವಾದ ಮಧುರವಾದ ಗೀತವಾದನನರ್ತನಗಳನ್ನೂ, ಕಾವ್ಯಗಳನ್ನೂ, ವ್ಯಕ್ತಿಗಳು ತಾವೇ ರಚಿಸಿ ಮಾಡುವುದರಿಂದಲೂ, ಕೇಳಿ – ನೋಡುವುದರಿಂದಲೂ, ಮೆದುಳಿನಲ್ಲಿ ಮೇಲೆ ಹೇಳಿದ ಸಹಜವಾದ ರಾಸಾಯನಿಕ ಕ್ರಿಯೆಗಳು ನಡೆಯುತ್ತದೆಂದೂ, ಪ್ರಕೃತಿದತ್ತವಾದ ಆ ರಾಸಾಯನಿಕ ವಸ್ತುಗಳು ಬಿಡುಗಡೆಯಾಗುತ್ತವೆಂದೂ, ಇವು ಏಕ ಅಥವಾ  ಸಮೂಹವಾಗಿಯೂ ವ್ಯಕ್ತಿಗಳ ಮೇಲೆ ಸತ್ಪರಿಣಾಮಗಳನ್ನು ಉಂಟು ಮಾಡುತ್ತದೆಂದೂ ಅವುಗಳ ಬೀಟಾ, ಆಲ್ಫಾ, ಥೀಟಾ, ಡೆಲ್ಟಾ ಅಲೆಗಳ ಮಾಪನಗಳನ್ನು ಮಾಡಿ, ಪ್ರಸಿದ್ಧ ಡ್ರಂವಾದಕ ಮಿಕ್ಕಿ ಹಾರ್ಟ್, ಡಾ. ಆದಂ ಗಜ್ಸಲೈ, ಡಾ. ಡೇನಿಯಲ್ ಅಮನ್, ಡಾ. ಜೋ ಡಿಸ್ಪೆನ್ಜ್ಸಾ ಮುಂತಾದವರು ಏಕವಾಗಿಯೂ, ಪರಸ್ಪರ ಸಹಭಾಗಿತ್ವದಲ್ಲಿಯೂ ಸಂಶೋಧಿಸಿ ಹೇಳಿದ್ದಾರೆ.

 

ಈ ಎಲ್ಲ ಸಂಗತಿಗಳೂ ಕೇಳಲೂ ನೋಡಲೂ ಶಕ್ತರಾದವರಿಗೆ ಮಾತ್ರ ಸಂಗೀತದಿಂದ ಇಷ್ಟೆಲ್ಲ ಸಾಧ್ಯವಾಗುವುದೆಂದೇನೋ ಸ್ಪಷ್ಟವಾಗಿ ಅರಿವಾಯಿತು. ಆದರೆ ಕೋಮಾದಲ್ಲಿ ಇರುವವರು ಕೇಳಲೂ ನೋಡಲೂ ಅಶಕ್ಯರಲ್ಲವೆ! ಅವರೂ ಸಂಗೀತವನ್ನು ‘ಕೇಳಿ’ ಕೋಮಾದಿಂದ ಹೊರಬರಲು ಸಾಧ್ಯವೇ ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ.

 

ಈ ನಿಟ್ಟಿನಲ್ಲಿ ವಿಜ್ಞಾನಿಗಳಿಗೆ ನಿಶ್ಚಿತವಾಗಿ ತೀರ್ಮಾನಕ್ಕೆ ಬರಲು ಸಾಧ್ಯವಾಗದಿದ್ದರೂ ಅನೇಕಾನೇಕ ಸಂಶೋಧನೆಗಳೂ ಪ್ರಯೋಗಗಳೂ ನಡೆದು ಬ್ರಾಹ್ಯಪ್ರಜ್ಞೆಯಿಲ್ಲದೆ ಕೋಮಾದಲ್ಲಿದ್ದ ಮೆದುಳು ಸಹ ಮೊದಲೇ ಬಹಳಷ್ಟು ಕೇಳಿ ಅಭ್ಯಾಸವಿದ್ದ, ಮಧುರವಾದ ಸಂಗೀತಕ್ಕೆ ಪ್ರತಿಸ್ಪಂದಿಸುತ್ತದೆಂದು ಪತ್ತೆಹಚ್ಚಿದ್ದಾರೆ. ಮೆದುಳಿನ ಈ ಶಕ್ತಿಯ ಕಾರಣವನ್ನು ಕುರಿತಾಗಿ ವಿಜ್ಞಾನಿಗಳು ಇನ್ನೂ ಕಾರಣಗಳನ್ನು ನೀಡಲಾಗದೆ ಸಂದಿಗ್ಧ ಸ್ಥಿತಿಯಲ್ಲಿ ಇದ್ದಾರೆ. ಅಲೆಕ್ಸಾಂಡ್ರಾ ಒಸ್ಸಾಲ ಎನ್ನುವ ಮಿದುಳು ಸಂಕೇತ ಭೇದಕಿಯು (=ಬ್ರೈನ್ ಡಿಕೊಡರ್) 2012ನೆಯ ಇಸವಿಯಲ್ಲಿ ಏಳು ವರ್ಷ ವಯಸ್ಸಿನ ಚಾರ್ಲೊಟ್ ನೀವಿ ಎನ್ನುವ ಹುಡುಗಿಯೊಬ್ಬಳು ತನ್ನ ನಿದ್ರೆಯಲ್ಲಿ ಆದ ಮಿದುಳಿನ ರಕ್ತಸ್ರಾವದಿಂದ ಕೋಮಾ ಸ್ಥಿತಿಗೆ ಹೋಗಿ ವೈದ್ಯರುಗಳು ಶಸ್ತ್ರ ಚಿಕಿತ್ಸೆಯನ್ನು ಮಾಡಿದರೂ ಅನೇಕ ಬಾರಿ ಮೂರ್ಛಾವಸ್ಥೆಯ ಕೈಕಾಲು ಸೆಳವಿಗೆ ಕೋಮಾದಲ್ಲಿಯೇ ತುತ್ತಾದಳು. ಆಕೆಯ ತಾಯಿಯು ಶುಶ್ರೂಷೆಯ ಸಮಯದಲ್ಲಿ ರೇಡಿಯೋವನ್ನು ಕೇಳುವಾಗ ತಾವಿಬ್ಬರೂ ಸೇರಿ ಹಾಡುತ್ತಿದ್ದ ಹಾಡೊಂದು ಬಂದದ್ದನ್ನು ಕೇಳುತ್ತ ತಾನೂ ಗುನುಗಿದಾಗ, ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿದ್ದ ಮಗಳು ಮುಗುಳ್ನಗೆ ಬೀರಿದ್ದನ್ನು ನೋಡಿ ವೈದ್ಯರೆಲ್ಲ ಅಚ್ಚರಿಯನ್ನು ಪಟ್ಟರು. ಅನಂತರ ಎರಡು ದಿನಗಳಲ್ಲಿ ಚಾರ್ಲೊಟ್ ಸಂಪೂರ್ಣ ಎಚ್ಚರವಾಗಿ ಆರೋಗ್ಯದ ಹಾದಿಯನ್ನು ಹಿಡಿದ್ದನ್ನು ತಮ್ಮ ಸಂಶೋಧನೆಯ ಅನುಭವಗಳಲ್ಲಿ ಒಸ್ಸಾಲರವರು ತಿಳಿಸಿದ್ದಾರೆ.

 

ಆಕೆಯೂ ಅನೇಕ ವೈದ್ಯರೂ ನಡೆಸಿದ ಬಗ್ಗೆ ಸಂಶೋಧನೆಗಳನ್ನು ಕುರಿತು ಅಲೆಗ್ಜಾಂಡರ್ರ ಒಸ್ಸಾಲರವರು ಹೀಗೆ ಬರೆದಿದ್ದಾರೆ:

 

“But as unique as Charlotte’s experience was, there is some evidence that music might reach some patients. For one study, the researchers played music to 13 patients, who were all in comas for different reasons. For half the patients, the researchers played an excerpt of their preferred music; the other half listened to continuous background noise. Then, while measuring the electrical charge in the patients’ brains with an electroencephalograph (EEG), the researchers called the patient’s name. The patients who had listened to music first had much more electrical activity in their brains than those who had listened to noise, indicating that the music was perhaps stimulating the brain in a way other types of sounds couldn’t. Those with traumatic brain injuries showed the most dramatic response.

‘These findings demonstrate for the first time that music has a beneficial effect on cognitive processes of patients with disorders of consciousness,’ the study authors wrote.


ಭಾರತೀಯರಲ್ಲಿ, ಕುಂಡಲಿನೀ ಯೋಗಪಟುವಾಗಿದ್ದ ಭಗವಾನ್ ಶ್ರೀ ಶಾರ್ಙ್ಗದೇವನು ತನ್ನ ಸಂಗೀತರತ್ನಾಕರದ ಮೊದಲನೆಯ ಸ್ವರಾಧ್ಯಾಯದ ಎರಡನೆಯ ಪಿಂಡೋತ್ಪತ್ತಿ ಪ್ರಕರಣದಲ್ಲಿಯೂ ಈಗ ದೊರೆಯದಿರುವ, ಆಧ್ಯಾತ್ಮವಿವೇಕವೆಂಬ ಯೋಗಶಾಸ್ತ್ರಗ್ರಂಥದಲ್ಲಿಯೂ, ಕುಂಡಲಿನೀ ಶಕ್ತಿಯ, ಮಾನವ ದೇಹದ ಷಟ್ಚಕ್ರಗಳೂ ನಾಡೀ ಚಕ್ರಗಳೂ, ಆಹತ ಹಾಗೂ ಅನಾಹತನಾದಯೋಗಗಳಿಂದಾಗುವ ನಾದಯೋಗದ ಪರಿಣಾಮಗಳನ್ನು ವಿವರಪೂರ್ಣವಾಗಿ ವಿವರಿಸಿದ್ದಾನೆ. ಕ್ರಿ. ಶ. 1577ರಲ್ಲಿ ಬಂಗಾಲದ ಪ್ರಸಿದ್ಧ ತಾಂತ್ರಿಕಗುರು ಪೂರ್ಣಾನಂದ ಯತಿಯು ತನ್ನ ಶ್ರೀತತ್ತ್ವಚಿಂತಾಮಣಿಯ ಆರನೆಯ ಪಟಲವಾದ ಷಟ್ಚಕ್ರದೀಪಿಕೆಯಲ್ಲಿ ಆದರಪುರಃಸ್ಸರವಾಗಿ ಇವುಗಳನ್ನು ಉದ್ಧರಿಸಿಕೊಂಡಿದ್ದಾನೆ. ಈ ಗ್ರಂಥವು ತಂತ್ರಶಾಸ್ತ್ರದಲ್ಲಿ ಪ್ರಾಮಾಣಿಕವೆಂದು ಗೌರವಿಸಲ್ಪಟ್ಟಿದೆ. ಸಂಗೀತಶಾಸ್ತ್ರಜ್ಞರಾದ ರಾ. ಸತ್ಯನಾರಾಯಣರವರು ಶಾರ್ಙ್ಗದೇವನ ಗ್ರಂಥಕ್ಕೆ ಬರೆದ ತಮ್ಮ ‘ನಿಃಶಂಕಹೃದಯ’ವೆಂಬ ವ್ಯಾಖ್ಯಾನದಲ್ಲಿಯೂ, ಅವರದೇ ಆದ ಶ್ರೀವಿದ್ಯಾಷೋಡಶಿಕಾ ಗ್ರಂಥದ ಚಿತ್ಕಲಾ – 3ನೆಯದರಲ್ಲಿ ‘ಕುಂಡಲಿನೀ ಶಕ್ತಿ ಮತ್ತು ನಾದಯೋಗ : ಒಂದು ಸ್ಥೂಲ ಪರಿಚಯ’ ಎಂಬ ಭಾಗದಲ್ಲಿಯೂ ಚಕ್ರಗಳು, ಅವುಗಳ ಯೋಗಸಾಧನೆಯಿಂದ ದೇಹ ಹಾಗೂ ಮೆದುಳಿನ ಮೇಲೆ ಆಗುವ ಪರಿಣಾಮಗಳು ಇತ್ಯಾದಿಗಳನ್ನು ವೈಜ್ಞಾನಿಕವಾಗಿ, ವಿವರವಾಗಿ ಬರೆದಿದ್ದಾರೆ. ಬಹಳ ದೀರ್ಘವಾದ್ದರಿಂದ ಅವನ್ನು ಇಲ್ಲಿ ಹೇಳುವುದು ಅಶಕ್ಯವಾಗಿದೆ. ಆದರೆ ಯೋಗಶಾಸ್ತ್ರ ಹಾಗೂ ತಂತ್ರಶಾಸ್ತ್ರಗಳಲ್ಲಿ ಹೇಳುವ, ಮಾನವದೇಹದಲ್ಲಿರುವ ಚಕ್ರಗಳು ಮೆದುಳಿನ ಈ ಶಕ್ತಿಗೆ ಕಾರಣವಾಗಿದೆ ಎಂಬ ಮುಖ್ಯಾಂಶವನ್ನು ಹೇಳಬಹುದು.


ಭಾರತೀಯ ಸಂಗೀತಪದ್ಧತಿಯಲ್ಲಿ ಅಸಂಖ್ಯಾತ ರಾಗಗಳು ದರ್ಬಾರಿಕಾನಡಾ ರಾಗದಷ್ಟೇ ಶಕ್ತಿಶಾಲಿಯಾಗಿದೆ. ಆದ್ದರಿಂದ ಒಂದೇ ರಾಗಕ್ಕೆ ಮಾತ್ರ ಈ ಯೋಗ್ಯತೆಯನ್ನು ಆರೋಪಿಸುವುದಾಗಲೀ, ಈ ಏಕರಾಗವನ್ನೇ ಮುಂದೆ ಇದೇ ಕಾರಣಕ್ಕಾಗಿ ಬಳಸುವುದಾಗಲೀ ಸಲ್ಲದು. ಹಾಗೆ ಮಾಡಿದಲ್ಲಿ ವಿಫಲವಾಗುವ ಸಂದರ್ಭಗಳೂ ಹೆಚ್ಚಾದೀತು! ಏಕೆಂದರೆ ಯಾವುದೇ ಭಾರತೀಯ ಸಂಗೀತಪದ್ಧತಿಯ ರಾಗಕ್ಕಾಗಲಿ ಅನೇಕ ರಸಗಳನ್ನು ಪ್ರಚೋದಿಸುವ ಶಕ್ತಿಯು ಅವುಗಳಿಗೆ ಪ್ರಯೋಗಿಸಲ್ಪಡುವ ಗಮಕದಿಂದಾಗಿ ಉಂಟಾಗುತ್ತದೆ. ಈ ಗಮಕಗುಣದಿಂದಾಗಿಯೂ ಊರ್ಧ್ವಮುಖ ಸ್ವರಶ್ರೇಣಿಯಿಂದಾಗಿಯೂ ರಾಗಬಾಹುಳ್ಯವು ಭಾರತದಲ್ಲಿ ಇರುವಷ್ಟು ವಿಶ್ವದಲ್ಲಿ ಬೇರೆಲ್ಲಿಯೂ ಇಲ್ಲ ಮಾತ್ರವಲ್ಲ, ಇರುವ ಸಂಗೀತಪದ್ಧತಿಗಳಿಗಿಂತಲೂ ಭಾರತೀಯ ಸಂಗೀತಪದ್ಧತಿಯು ವೈಜ್ಞಾನಿಕವಾಗಿ ಬಹಳ ಮುಂದುವರಿದಿದ್ದು ಯಾವುದೇ ಸಂಗೀತಪದ್ಧತಿಯು ತಮ್ಮ ಶೈಲಿಗಳಿಂದಾಗಿ ಮುಂಬರುವ ದಿನಗಳಲ್ಲಿಯೂ ಅಷ್ಟು ಶೀಘ್ರವಾಗಿ ಮುಂದುವರೆಯುವ ಸಂಭವವೂ ಕಾಣುವುದಿಲ್ಲ. ಆದುದರಿಂದ ಈ ನಿಟ್ಟಿನಲ್ಲಿ ಆಸಕ್ತಿಯಿರುವ ವೈದ್ಯರು ತಾವೂ ಮುಂಬರುವ ದಿನಗಳಲ್ಲಿ ಸಂಗೀತಚಿಕಿತ್ಸೆಯನ್ನು ನಡೆಸುವ ಸಂದರ್ಭದಲ್ಲಿ ಕೆಲವು ರಾಗಗಳನ್ನು ಮಾತ್ರ ಅವಲಂಬಿಸದೆ, ರೋಗಿಯು ಆಸೆಯಿಂದ ಕೇಳುತ್ತಿದ್ದ, ಅಭ್ಯಾಸದಲ್ಲಿದ್ದ ಸಂಗೀತ, ರಾಗ, ಹಾಡುಗಳತ್ತ ಗಮನಹರಿಸಿ ಪ್ರಯೋಗಿಸಿದಲ್ಲಿ, ಅವರ ಯತ್ನದಲ್ಲಿ ಹೆಚ್ಚು ಸಫಲವಾಗುವುದರಲ್ಲಿ ಸಂಶಯವಿಲ್ಲ. ಏಕೆಂದರೆ ಸಂಗೀತವು ಮೊತ್ತಮೊದಲು ಮೆದುಳಿನ ನೆನಪಿನ ಗ್ರಂಥಿಗಳನ್ನು ಪ್ರಚೋದಿಸಿ ಆ ಭಾಗಗಳನ್ನು ಸಕ್ರಿಯವಾಗಿಸುವ ಹಾದಿಯನ್ನು ಹಿಡಿಯುತ್ತದೆಂಬುದನ್ನು ಮರೆಯಬಾರದು

Leave a Reply

Your email address will not be published. Required fields are marked *