ನಾಳೆಗೊಂಚಂಬ್ ನೀರಿರ್ಲಿ ಗೋವಿಂದ

ಅಂಕಣ ಭಾವ~ಬಂಧ : ಮಂಗಲಾ ಯಶಸ್ವಿ ಭಟ್.

ನನ್ನ ಮಗನ ಶಾಲೆಯ ಬಳಿ ಕೆಲವು ಜೋಪಡಿಗಳಿವೆ. ಎದುರಿಗೆ ಒಂದು ಚಪ್ಪಡಿ ಕಲ್ಲು. ಒಂದು ದಿನ ಅದರ ಮೇಲೆ ಒಂದು ಬಕೆಟ್ ಅಲ್ಲಿ ಅರೆಕೆಂಪು ಬಣ್ಣದ ನೀರು ಇಟ್ಟುಕೊಂಡು, ತುದಿಕಾಲಿನಲ್ಲಿ ಕುಳಿತು ಆಕೆ ಕೈಯಲ್ಲಿ ಚೂರು ಚೂರೇ ನೀರು ಹಾಕುತ್ತಾ, ಮಸಿ ಹಿಡಿದ ಪಾತ್ರೆಯನ್ನು ತಿಕ್ಕುತ್ತಿದ್ದಳು. ಮತ್ತೊಂದು ದಿನ ಹಾಗೆಯೇ ಕೈಯಲ್ಲಿ ಚೂರು ಚೂರೇ ನೀರು ಹಾಕುತ್ತಾ ಬಟ್ಟೆಗಳನ್ನು ತೊಳೆಯುತ್ತಿದ್ದಳು. ಇನ್ನೊಂದು ದಿನ ತನ್ನ ಮಗುವಿನ ಮೈಯನ್ನು ಒಂದೇ ಚಂಬು ನೀರಿನಿಂದ ತೊಳೆದು ಒರೆಸುತ್ತಿದ್ದಳು. ಈ ದೃಶ್ಯಗಳು ಯಾಕೋ ಮನಸ್ಸಿನಿಂದ ಮಾಸದೇ ಹಿಂಸೆ ಕೊಡುತ್ತಿತ್ತು. ಈಕೆ ಒಂದೊಂದು ತೊಟ್ಟು ನೀರಿಗೂ ಆಸೆ ಪಟ್ಟು, ನಾಳೆಗೆ ಉಳಿಸಿಕೊಂಡು, ಅಚ್ಚುಕಟ್ಟಾಗಿ ಬಳಸುತ್ತಿರುವ ಸಮಯದಲ್ಲಿ ಯಾರೋ ಒಬ್ಬ ಪೈಪಿನಲ್ಲಿ ರಭಸವಾಗಿ ನೀರನ್ನು ಬಿಟ್ಟುಕೊಂಡು ದೊಡ್ಡ ಕಾರನ್ನು ಆತ ತೊಳೆಯುತ್ತಿರಬಹುದು. ಯಾರೋ ಒಬ್ಬಳು ನಲ್ಲಿಯಲ್ಲಿ ನೀರು ಬಿಟ್ಟುಕೊಂಡೇ, ಸಿಂಕಿನಲ್ಲಿದ್ದ ಪಾತ್ರೆಗಳನ್ನು ಸೋಪಿನಲ್ಲಿ ತಿಕ್ಕುತ್ತಿರಬಹುದು. ಯಾರದೋ ಮನೆಯ ಬಾತ್ ರೂಮ್ ನಲ್ಲಿ ಸ್ನಾನಕ್ಕೆಂದು ಬಿಟ್ಟ ನೀರು ಬಕೆಟ್ ತುಂಬಿ ಹರಿಯುತ್ತಿರಬಹುದು. ಇನ್ಯಾರದೋ ಮನೆಯಲ್ಲಿ ಕೆಲಸದವಳು ಬಂದು, ತಪ್ಪದೇ ಎರಡು ಬಕೆಟ್ ನೀರು ತಂದು, ಮನೆಯ ಹೊರಗಿನ ಅಂಕಣಕ್ಕೆಲ್ಲ ಸುರಿದು, ಗುಡಿಸಿ, ಉಳಿದ ನೀರನ್ನು ರಸ್ತೆಗೂ ಎರೆದು, ಬಣ್ಣ ಬಣ್ಣದ ರಂಗವಲ್ಲಿ ಹಾಕುತ್ತಿರಬಹುದು. ಇನ್ನೊಬ್ಬ ತಾಯಿ ತನ್ನ ಮಗು ಆಡಿಕೊಳ್ಳಲೆಂದು ಟಬ್ಬಿನ ಪೂರ್ತಿ ನೊರೆ ನೀರು ಹಾಕಿಕೊಟ್ಟು, ವಿಡಿಯೋ ಮಾಡುತ್ತಾ ಇನ್ನಷ್ಟು ನೀರು ಹಾಕುತ್ತಿರಬಹುದು ಎಂದೆನ್ನಿಸಿ, ಯಾಕೋ ಬೇಸರವೆನಿಸುತ್ತಿತ್ತು.

 

ಕೆಲವು ರಾಜ್ಯಗಳಲ್ಲಿ ನೀರಿಗೆ ಬರವಂತೆ. ಹಲವೆಡೆ ಕುಡಿಯಲು ಕೂಡ ನೀರು ಸಿಗುತ್ತಿಲ್ಲವಂತೆ ಎಂಬ ಸಮಾಚಾರಗಳನ್ನು ನಿತ್ಯವೂ ಕೇಳಿದರೂ, ಈ ದೃಶ್ಯ ನನ್ನ ಕಣ್ಣಿಗೆ ಬೀಳುವವರೆಗಗೂ ನಾನು ಅದರೆಡೆ ಅಷ್ಟೇನೂ ಗಮನ ಹರಿಸಿರಲಿಲ್ಲ.  

ನಾನು ನನ್ನ ಮನೆಯಲ್ಲಿ ನೀರನ್ನು ಪೋಲು ಮಾಡುತ್ತಿದ್ದೇನೆಯೇ ಎಂದು ಪ್ರಶ್ನಿಸಿಕೊಂಡು, ನನ್ನ ಲೋಪಗಳನ್ನು ತಿದ್ದಿಕೊಳ್ಳುವ ಪ್ರಯತ್ನ ಮಾಡಲು ಪ್ರಾರಂಭಿಸಿದ್ದ ಸಮಯದಲ್ಲಿಯೇ ಹೀಗೊಂದು ಸಂದರ್ಭ ಒದಗಿಬಂತು. ಸಮಸ್ಯೆಗಳು ನಮ್ಮನ್ನು ಕಾಡಿದಾಗಲೇ ಅಲ್ಲವೇ ಅದು ಸಮಸ್ಯೆಯೆಂದು ಅನ್ನಿಸುವುದು? ಇತ್ತೀಚಿಗೆ ಆಫೀಸಿಗೆ ಹತ್ತಿರವೆಂದು ಒಂದು ಅಪಾರ್ಟ್ಮೆಂಟಿಗೆ ಬಂದೆವು. ಈಗೊಂದು ವಾರದಿಂದ ಎದುರಾಗಿದೆ ನೀರಿನ ಸಮಸ್ಯೆ. ಇನ್ನೂ ಬೇಸಿಗೆ ಶುರುವಾಗುವ ಮೊದಲೇ, ಇಲ್ಲಿಯ ಬೋರ್ ವೆಲ್ ನಲ್ಲಿ ನೀರಿಲ್ಲ. ನಾವಿರುವ ಜಾಗಕ್ಕೆ ಇನ್ನೂ ಕಾವೇರಿ ಬಂದಿಲ್ಲ. ಅದೇನೋ ವಿದ್ಯುತ್ ಸಮಸ್ಯೆಗಳಿಂದ ಟ್ಯಾಂಕರ್ ಗಳು ಕೂಡ ಸಮಯಕ್ಕೆ ಸರಿಯಾಗಿ ಸಿಕ್ಕುತ್ತಿಲ್ಲವಂತೆ. ಮೊದಲಿಂದಲೇ ಒಪ್ಪಂದ ಮಾಡಿಕೊಂಡ ಟ್ಯಾಂಕರ್ ನೀರು ಮಾರಾಟಗಾರರು ಬೇರೆ ವ್ಯವಸ್ಥೆ ಮಾಡಿಕೊಳ್ಳಲು ಅಷ್ಟು ಸುಲಭವಾಗಿ ಬಿಡುತ್ತಿಲ್ಲವಂತೆ. ನಮ್ಮ ಅವಶ್ಯಕತೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಾ ಬಾಯಿಗೆ ಬಂದ ದರವನ್ನು ಹೇಳುತ್ತಿದ್ದಾರಂತೆ. ಈ ಅಂತೆ-ಕಂತೆಗಳು ಏನೇ ಇರಲಿ. ಒಟ್ಟಿನಲ್ಲಿ ವಾರದಿಂದ  ಬೆಳಿಗ್ಗೆ ೧೧ ಘಂಟೆಯಿಂದ ಸಂಜೆ ೭ ಘಂಟೆಯವರೆಗೆ ನೀರಿಲ್ಲ. ಈಗ ಒಂದೊಂದು ಬಿಂದುವಿನ ಮೌಲ್ಯ ಇಲ್ಲಿ ಎಲ್ಲರಿಗೂ ತಿಳಿಯುತ್ತಿದೆ.  ವಾಟರ್ ಪ್ಯೂರಿಫೈಯರ್ ಗಳಿಂದ ಬರುವ Hard Water ಅನ್ನು ಶೇಖರಿಸಿ, ನೆಲ ಒರೆಸಲು, ಬಾತ್ ರೂಮ್ ಕ್ಲೀನ್ ಮಾಡಲು ಉಪಯೋಗ ಮಾಡಬಹುದು. ಸಿಂಕಿನಲ್ಲಿ ನೀರು ಬಿಟ್ಟುಕೊಂಡೇ ಬ್ರಷ್ ಮಾಡಬಾರದು. ಪಾತ್ರೆ ತೊಳೆಯಲು ನಲ್ಲಿಯಲ್ಲಿ ನೀರು ಬಿಡುವ ಬದಲು, ಪಾತ್ರೆಯಲ್ಲಿ ಶೇಖರಿಸಿಕೊಟ್ಟುಕೊಂಡ ನೀರಿನಿಂದ ಮಗ್ ನಿಂದ ನೀರು ಹಾಕಿ ತೊಳೆದರೆ ಕಡಿಮೆ ನೀರು ಸಾಕು. ಅಡುಗೆ ಮನೆಯಲ್ಲಿ ಆದಷ್ಟು ಕಡಿಮೆ ಪಾತ್ರೆಗಳನ್ನು ಬಳಸಬೇಕು. ಒಂದೇ ಬಕೆಟ್ ನೀರಿನಲ್ಲಿ ಸ್ನಾನ ಮಾಡಬೇಕು. ಹೀಗೆ ಒಬ್ಬೊಬ್ಬರು ಒಂದೊಂದು ಉಪಾಯಗಳನ್ನು ಹೇಳುತ್ತಿದ್ದಾರೆ.ನನ್ನನ್ನೂ ಸೇರಿದಂತೆ ಹೆಚ್ಚಿನ ಜನರು ಪಾಲಿಸುತ್ತಿದ್ದಾರೆ ಕೂಡ. ನಮ್ಮಿಂದಲೂ ನೀರಿನ ಸದ್ಬಳಕೆ, ನಿರ್ವಹಣೆ ಸಾಧ್ಯ. ಆದರೆ ಸಮಸ್ಯೆ ನಮಗೆ ಬಂದಾಗ ಮಾತ್ರ ಅಂತ ಆಗಬಾರದು ಅಲ್ಲವೇ? ನಮ್ಮ ಮನೆಗೆ ಬೆಂಕಿ ಬಿದ್ದಾಗ ಬಾವಿ ತೋಡಹೊರಟರೆ ನೀರು ಸಿಕ್ಕೀತೇ?   

 

ಒಟ್ಟಿನಲ್ಲಿ ನನ್ನ ಕನಸು-ಮನಸಿನಲ್ಲಿ ಪೂರಾ ನೀರಿನ ವಿಚಾರವೇ ಸುತ್ತುತ್ತಿರುವುದರಿಂದ ಅದೇ ನೀರು ಈ ಬರವಣಿಗೆಗೆ ಹರಿದು ಬಂತು.     

 

ನಾನು ಹುಟ್ಟಿದ್ದು, ಬೆಳೆದದ್ದು ಮಲೆನಾಡಿನಲ್ಲಿ. ನೀರಿಗೆ ಯಾವತ್ತೂ ಕೊರತೆಯಿರಲಿಲ್ಲ. ದಿನಾ ಸ್ನಾನ ಮಾಡಿಸುವಾಗ ಅಮ್ಮ, “ಕಾಶಿ, ಗಂಗೆ, ಭಾಗೀರಥೀ ಸ್ನಾನ, ನಾಳೆಗೊಂಚಂಬ್ ನೀರಿರ್ಲಿ ಗೋವಿಂದ” ಎಂದು ಹೇಳಿಕೊಡುತ್ತಾ, ಕೊನೆಯ ಬಾರಿ ಒಂದು ಚಂಬು ನೀರು ಸುರಿದು, ಅದರಲ್ಲಿ ಪುನಃ ನೀರು ತುಂಬಿ ಇಡುತ್ತಿದ್ದರು. ಏಕೆಂದು ಅರ್ಥವಾಗದಿದ್ದರೂ, ಅಭ್ಯಾಸವಾಗಿ ಹೋಗಿತ್ತು. ಐದನೇ ತರಗತಿಯಿಂದ ಹತ್ತನೇ ತರಗತಿಯವರೆಗೂ ಗುರುಕುಲದಲ್ಲಿ ವಾಸ ಹಾಗೂ ವಿದ್ಯಾಭ್ಯಾಸ. ಅಲ್ಲಿ ನೀರು ಯಥೇಚ್ಛವಾಗಿ ಇದ್ದರೂ, ನಿತ್ಯಸ್ನಾನಕ್ಕೆ ಎಲ್ಲರಿಗೂ ಒಂದೇ ಬಕೆಟ್ ಬಿಸಿನೀರು. ವಾರಕ್ಕೊಮ್ಮೆ ತಲೆಸ್ನಾನಕ್ಕೆ ಎರಡು ಬಕೆಟ್ ಬಿಸಿನೀರು. ಅದು ಅಲ್ಲಿಯ ನಿಯಮವಾಗಿತ್ತು. ಟೀನೇಜ್ ನಲ್ಲಿ ನಿಯಮಗಳ ಪಾಲನೆ ತುಸು ಕಷ್ಟ ಎನಿಸಿದರೂ, ಕ್ರಮೇಣ ಅದು ಕೂಡ ಅಭ್ಯಾಸವಾಗಿತ್ತು. ಐದನೇ ತರಗತಿಯಿಂದ ಹಳ್ಳಿಯಿಂದ, ಸ್ವಂತ ಮನೆಯಿಂದ ದೂರ, ಹಾಸ್ಟೆಲ್ ಮತ್ತು ಪಿಜಿ ಗಳಲ್ಲಿ ಇದ್ದ ಕಾರಣ, ಸ್ನಾನಕ್ಕೆ, ಬಟ್ಟೆ ತೊಳೆಯಲು ಕಮ್ಮಿ ನೀರು ಬಳಸುವುದು ತಿಳಿದಿತ್ತು. ಆದರೆ ಮದುವೆಯಾಗಿ, ಒಂದು ಮನೆ, ಸಂಸಾರ ಅಂತ ಶುರು ಮಾಡಿದ ಮೇಲೆ ಅಡುಗೆ ಮಾಡಲು, ಪಾತ್ರೆ ತೊಳೆಯಲು, ನೆಲ ಒರೆಸಲು, ಬಟ್ಟೆ ತೊಳೆಯಲು, ಮನೆಯ ಹೊರಗಡೆ ನೀರು ಹಾಕಿ ಗುಡಿಸಲು, ಗಿಡಗಳಿಗೆ ನೀರು ಹಾಕಲು, ಹೀಗೆ ನೀರಿನ ಬಳಕೆ ತುಸು ಜಾಸ್ತಿಯೇ ಆಯಿತು. ನೀರನ್ನು ಅಚ್ಚುಕಟ್ಟಾಗಿಯೇ ಬಳಸುತ್ತೇನೆ ಎಂದರೆ ಸುಳ್ಳಾಗುತ್ತದೆ.      

 

ನೀರಿನ ವಿಷಯವಾಗಿ, ಜಲ ಸಂಪನ್ಮೂಲದ ನಿರ್ವಹಣೆಯ ಕುರಿತಾಗಿ ಅನೇಕರು ಬರೆದಿದ್ದಾರೆ. ಹಲವರು ಮಾತನಾಡುತ್ತಾರೆ. ನನ್ನ ಸಂಬಂಧಿಕರಾದ ರಾಘವೇಂದ್ರ ಹೆಗಡೆ ಅವರು ಬರೆದ “ನಾಳೆಗೂ ಇರಲಿ ನೀರು” ಎಂಬ ಪುಸ್ತಕವನ್ನು ಇತ್ತೀಚಿಗೆ ಓದಿದ ಕಾರಣ ಈ ಸಂದರ್ಭದಲ್ಲಿ ಅದರ ನೆನಪಾಯಿತು. ಅದು ಸೇತು ಎಂ. ಸಿಗೆಲ್ ಅವರು ಬರೆದ “Let There Be Water” ಎಂಬ ಕೃತಿಯ ಕನ್ನಡ ಅನುವಾದ. ಶೇಕಡ ೬೦ ಕ್ಕೂ ಹೆಚ್ಚು ಪ್ರದೇಶದ ಮರುಭೂಮಿಯನ್ನು ಹೊಂದಿರುವ ಹಾಗೂ ಅತ್ಯಂತ ಕಡಿಮೆ ಪ್ರಮಾಣದ ಮಳೆ ಬೀಳುವ ಪ್ರದೇಶವಾದ ಇಸ್ರೇಲ್ ದೇಶವು ಹೇಗೆ ನೀರಿನ ಸಮಸ್ಯೆಯನ್ನು ಬಗೆಹರಿಸಿಕೊಂಡು, ಸ್ವಾವಲಂಬಿಯಾಗಿ ನಿಂತು, ಈಗ ಇತರ ದೇಶಗಳಿಗೂ ನೀರು ರಫ್ತು ಮಾಡುತ್ತಿದೆ ಎಂಬುದು ಇದರ ವಿಷಯ. ಅಲ್ಲಿ ಎಲ್ಲ ಬೆಳೆಗಳನ್ನೂ ಹನಿ ನೀರಾವರಿ ಪದ್ಧತಿಯಲ್ಲಿಯೇ ಬೆಳೆಯಲಾಗುತ್ತದೆಯಂತೆ. ಆ ಪುಸ್ತಕದಲ್ಲಿ ಇಸ್ರೇಲ್ ನವರು ಬಳಸಿದ ತಂತ್ರಜ್ಞಾನಗಳ ವಿವರಗಳನ್ನೂ, ಅಳವಡಿಸಹೊರಟಾಗ ಪಟ್ಟ ಪಾಡುಗಳನ್ನೂ ಚೆನ್ನಾಗಿ ವಿವರಿಸಿದ್ದಾರೆ. ಹಾಗೆಯೇ ಜಲನಿರ್ವಹಣೆಗೆಂದು ಜಾರಿಗೆ ತಂದ ಅನೇಕ ನಿಯಮಗಳ ಕುರಿತೂ ಬರೆದಿದ್ದಾರೆ. ನಿಜಕ್ಕೂ ನಮ್ಮ ರಾಜಕಾರಣಿಗಳು ಅದನ್ನು ಓದಿ, ಅವರಿಂದ ಕಲಿತು, ಇಲ್ಲಿ ದಿನೇ ದಿನೇ ಹೆಚ್ಚುತ್ತಿರುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲೇಬೇಕಾದ ಅನಿವಾರ್ಯತೆ ಇದೆ.     

 

ಆ ಪುಸ್ತಕದ ವಿಮರ್ಶೆ ಈ ಬರಹದ ಉದ್ದೇಶವಲ್ಲ. ಅಲ್ಲಿ ವಿವರಿಸುವ ತಂತ್ರಜ್ಞಾನ, ಜಲವಿಜ್ಞಾನ ಮುಂತಾದ ವಿಷಯಗಳಲ್ಲಿ ನನ್ನ ಜ್ಞಾನ ಶೂನ್ಯ. ಆದರೆ ಅದನ್ನು ಓದಿದಾಗ, “ನಿಜವಾಗಿ ನೀರಿನ ಮಹತ್ವವನ್ನು ಕಲಿಯಲು ಭಾರತ ಇಸ್ರೇಲಿಗೆ ಹೋಗಬೇಕೇ?” ಎಂಬ ಪ್ರಶ್ನೆ ಕಾಡಿದ್ದು ಸತ್ಯ. ಇಸ್ರೇಲಿನಲ್ಲಿ ಬಳಸಿದ ಮಾರ್ಗೋಪಾಯಗಳನ್ನು ನಾವು ಕಲಿಯುವುದು, ಅಳವಡಿಸಿಕೊಳ್ಳುವುದು ಖಂಡಿತಾ ತಪ್ಪಲ್ಲ.  “ಆ ನೋ ಭದ್ರಾಃ ಕ್ರತವೋ ಯಂತು ವಿಶ್ವತಃ” ಎಂದರೆ, ವಿಶ್ವದೆಲ್ಲೆಡೆಯಿಂದ ಒಳಿತು ನಮ್ಮೆಡೆಗೆ ಹರಿದು ಬರಲಿ ಎಂಬ ಆರ್ಯೋಕ್ತಿಯನ್ನು ನಂಬಿಕೊಂಡ ದೇಶ ನಮ್ಮದು. ಒಳಿತು ಸದಾ ಅನುಕರಣಯೋಗ್ಯವೇ ಸರಿ. ಆದರೆ ಇಲ್ಲಿಯ ನೈಜ ಇತಿಹಾಸವನ್ನೂ ಒಮ್ಮೆ ತಿರುಗಿ ನೋಡಬಹುದಲ್ಲವೇ? ಜಾಗತಿಕ ರೇಸ್ ನಲ್ಲಿ ಮುನ್ನುಗ್ಗಿ, ಓಡಿ ಗೆಲ್ಲುವ ಗಡಿಬಿಡಿಯಲ್ಲಿ ಎಷ್ಟೋ ಅಂಶಗಳನ್ನು ಹಿಂದೆಯೇ ಮರೆತು ಬಂದಿರಬಹುದಲ್ಲವೇ?     

 

ನೀರಿಗೆ ಸಂಸ್ಕೃತದಲ್ಲಿ “ಜೀವನಂ” ಎಂದು ಕರೆಯುತ್ತಾರೆ.  ಸಂಸ್ಕೃತವೇ ಸಂಸ್ಕೃತಿಯಾಗಿದ್ದ ದೇಶವಿದು. ವಿಶ್ವದ ಸೃಷ್ಟಿಗೆ, ಜೀವಿಯ ಸೃಷ್ಟಿಗೆ ಮೂಲವಸ್ತುಗಳಾದ ಐದು ತತ್ತ್ವಗಳು ಅಥವಾ ಪಂಚಭೂತಗಳಲ್ಲಿ ಒಂದು ನೀರು ಎಂದು ಭಾವಿಸಿದ ದೇಶ ನಮ್ಮದು. ಗಂಗೆ, ಯಮುನೆ, ಗೋದಾವರಿ, ಸರಸ್ವತೀ, ನರ್ಮದೆ, ಸಿಂಧು, ಕಾವೇರಿ ಹೀಗೆ ಎಲ್ಲ ನದಿಗಳನ್ನೂ ತಾಯಿಯಂತೆ ಇಂದಿಗೂ ಪೂಜಿಸುವ ದೇಶವಿದು. “ಹುಯ್ಯೋ ಹುಯ್ಯೋ ಮಳೆರಾಯ”, “ಮಳೆ ಬಂತು ಮಳೆ” ಎಂಬ ಹಾಡುಗಳನ್ನು ಮೊಮ್ಮೊಕ್ಕಳಿಗೆ ಕಲಿಸಿ ಸಂಭ್ರಮಿಸುವ ಅಜ್ಜ-ಅಜ್ಜಿಯರು ಇರುವ ದೇಶವಿದು.  ಪ್ರಾಚೀನ ಕಾಲದ ಯಾವುದೇ ನಾಗರಿಕತೆಯನ್ನು ತಿಳಿಯಲು ಹೊರಟರೆ ನಮಗೆ ಕಾಣುವ ಒಂದು ಅಂಶವೆಂದರೆ ಎಲ್ಲ ನಾಗರಿಕತೆಗಳು ಪ೦‌ಚಭೂತಗಳಲ್ಲೊಂದಾದ ನೀರನ್ನೊಳಗೊಂಡಿವೆ ಹಾಗೂ ಹೆಚ್ಚಾಗಿ ನದಿ ತಟದಲ್ಲಿ ಬೆಳವಣಿಗೆ ಕಂಡಿದೆ. ಹಾಗೆಯೇ ನೀರಿನ ನಿರ್ವಹಣೆ ಅತ್ಯಂತ ಪ್ರಮುಖ ಅಂಶವಾಗಿತ್ತು ಎಂಬುದೂ ತಿಳಿಯುತ್ತದೆ. ಇಂದಿಗೂ ಹಳ್ಳಿಗಳಲ್ಲಿ ಇರುವ ಕೆರೆಯ ನೀರು ಒಬ್ಬನ ಸ್ವತ್ತಾಗಿರದೇ, ಊರವರೆಲ್ಲರ ಬಳಕೆಗೂ, ಎಲ್ಲರ ತೋಟಕ್ಕೂ ಸಿಗುತ್ತದೆ. ಪ್ರತಿಯೊಬ್ಬರ ಮನೆಯಲ್ಲಿಯೂ ಬಾವಿಯು ಇರುತ್ತದೆ ನಿಜ. ಆದರೆ ಆ ಬಾವಿಯ ನೀರನ್ನು ಹಣಕ್ಕೆ ಮಾರುವುದಿಲ್ಲ. ಇನ್ನೂ ಹಳ್ಳಿಯ ಹಲವು ಮನೆಗಳಲ್ಲಿ ಮುಸುರೆಗುಂಡಿ ಅಂತ ಒಂದು ಜಾಗವಿರುತ್ತದೆ. ಅಲ್ಲಿ ಸಾಮಾನ್ಯವಾಗಿ ದೊಡ್ಡ ಟ್ಯಾಂಕ್ ನಲ್ಲಿ ನೀರು. ಪಾತ್ರೆಗಳನ್ನೆಲ್ಲ ತಿಕ್ಕಿದ ಮೇಲೆ, ಚಂಬಿನಲ್ಲಿ ಸ್ವಲ್ಪ ಸ್ವಲ್ಪವೇ ನೀರು ತೆಗೆದುಕೊಂಡು, ಪಾತ್ರೆಗಳನ್ನು ತೊಳೆಯುತ್ತಾರೆ. ಪಾತ್ರೆ ತೊಳೆದ ನೀರು ತೆಂಗಿನ ಮರದ ಬುಡಕ್ಕೋ, ತೋಟಕ್ಕೋ ಹರಿದುಹೋಗುತ್ತದೆ. ಮಳೆ ನೀರು ಮತ್ತು  ಅಕಸ್ಮಾತಾಗಿ ಪೋಲಾಗಿ ಹೋದ ನೀರು ಭೂಮಿಯನ್ನೇ ಸೇರುವುದರಿಂದ ಪ್ರತ್ಯೇಕವಾಗಿ “Rain water harvesting” ಬೇಕಾಗುವುದಿಲ್ಲ.

 

ಅಷ್ಟೇಕೆ? ಕೆಂಪೇಗೌಡರ ಕನಸಿನ ಕೂಸಾದ ಬೆಂಗಳೂರಿನಲ್ಲಿಯೂ ಮೊದಲು ಲೆಕ್ಕಕ್ಕೆ ಸಿಗದಷ್ಟು ಕೆರೆಗಳು ಇದ್ದವಂತೆ. ಮನುಷ್ಯನ ಬೆನ್ನೇರಿ ಕೂತ ಹಣದ ದಾಹ, ಬೆಂಗಳೂರೇ ಬತ್ತುವಂತೆ ಮಾಡಿದೆ ಅನ್ನಿಸುತ್ತದೆ. ನಗರದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯೂ ನೀರಿನ ಪರದಾಟಕ್ಕೆ ಒಂದು ಕಾರಣವಿರಬಹುದು. ಬೆಂಗಳೂರು ನಗರ ಬೆಳೆಯುತ್ತಾ ಹೋದಂತೆ ಕಾವೇರಿಯ ನೀರು ಸಾಲದೇ ಈಗ ಶರಾವತಿಯ ನೀರನ್ನು ಇಲ್ಲಿಗೆ ತರುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆಯಂತೆ. ಕರಾವಳಿ ಪ್ರದೇಶದಲ್ಲಿ ಸಮುದ್ರದ ನೀರನ್ನು ಸಿಹಿನೀರಾಗಿ ಪರಿವರ್ತಿಸಬಹುದೆಂಬ ಮಾತುಗಳೂ ಕೇಳಿಸುತ್ತಿವೆ. ಎಲ್ಲ ಪ್ರತಿಷ್ಠಿತ ಐಟಿ, ಬಿಟಿ ಕಂಪೆನಿಗಳು ಕೇವಲ ಬೆಂಗಳೂರಿನಲ್ಲಿ ಇವೆ. ಉದ್ಯೋಗಾವಕಾಶ ಇಲ್ಲಿ ಅತಿ ಹೆಚ್ಚು. ಹಾಗಾಗಿ ಅನೇಕ ಕುಟುಂಬಗಳು ಅದೆಷ್ಟೆಷ್ಟೋ ದೂರದಿಂದ ಬಂದು ಹೊಟ್ಟೆಪಾಡಿಗಾಗಿ ಅನಿವಾರ್ಯವಾಗಿ ಇಲ್ಲಿದ್ದಾರೆ. ಇಲ್ಲಿ ಮೊದಲಿದ್ದ ಮರಗಳು, ಕೆರೆಗಳು ಮಾಯ. ಎಲ್ಲಿ ನೋಡಿದರಲ್ಲಿ ಗಗನದೆತ್ತರಕ್ಕೆ ಏರುತ್ತಿರುವ ಅಪಾರ್ಟ್ಮೆಂಟ್ ಗಳು, ಕಟ್ಟಡಗಳು. ಆಗ ನೀರಿನ ಅವಶ್ಯಕತೆಯೂ ಹೆಚ್ಚು. ಅದರಿಂದಾಗಿ ಸಾಲುಮರಗಳ ಬದಲು ಸಾಲು ಸಾಲು ಬೋರ್ ವೆಲ್ ಗಳು. ಜನರನ್ನು ಇಲ್ಲಿ ಮಾತ್ರ ತುಂಬಿಸಿ, ಎಲ್ಲೆಲ್ಲಿಂದಲೋ ನೀರನ್ನು ಇಲ್ಲಿಗೆ ತರುವ ಹರಸಾಹಸ ಮಾಡುವ ಬದಲು ಎಲ್ಲ ಪ್ರಮುಖ ಜಿಲ್ಲೆಗಳಲ್ಲಿ ಉದ್ಯೋಗಾವಕಾಶಗಳನ್ನು ಕಲ್ಪಿಸಿದರೆ ಎಲ್ಲ ರೀತಿಯಿಂದಲೂ ಒಳಿತಲ್ಲವೇ ಎಂಬುದು ತಮ್ಮ ಊರಿನ ಬಳಿ ಯಾವುದೇ ಉದ್ಯೋಗಾವಕಾಶವಿಲ್ಲದೇ ಬೆಂಗಳೂರಿಗೆ ಬಂದಿರುವ ಅನೇಕರ ಅಭಿಪ್ರಾಯ. ಈಗ ಬಹುತೇಕ ಎಲ್ಲ ದೊಡ್ಡ ದೊಡ್ಡ ಕಟ್ಟಡಗಳಲ್ಲಿ “ಚರಂಡಿ ಸಂಸ್ಕರಣ ಘಟಕ (STP)” ವನ್ನು ಅಳವಡಿಸಿ ಸಂಸ್ಕರಿಸಿದ ನೀರನ್ನು ಶೌಚಾಲಯಗಳಲ್ಲಿ Flush ಮಾಡಲು ಉಪಯೋಗಿಸುತ್ತಿರುವುದೂ,  ಪ್ರಸ್ತುತ ಕಟ್ಟಿಸುವ ಎಲ್ಲ ಮನೆಗಳಿಗೂ “Rain water harvesting” ಕಡ್ಡಾಯ ಮಾಡಿದ್ದೂ ಒಳ್ಳೆಯ ಬೆಳವಣಿಗೆಗಳೇ. ಆದರೆ ಬೆಂಗಳೂರಿನಲ್ಲಿ ಜೀವನ ನಡೆಸುತ್ತಿರುವ ಪ್ರತಿಯೊಬ್ಬನೂ “ಅಯ್ಯೋ, ಪರಿಸ್ಥಿತಿ ಹೀಗೇ ಮುಂದುವರಿದರೆ, ಇನ್ನೂ ೧೦ ವರ್ಷ ಕಳೆದಾಗ ಕುಡಿಯಲು ಸಹ ನೀರಿರುವುದಿಲ್ಲ” ಎಂಬ ಭಯದಿಂದಲೇ ಬದುಕುತ್ತಿರುವುದು ಕೂಡ ಸುಳ್ಳಲ್ಲ.

 

ಇವೆಲ್ಲಾ ಏನೇ ಇರಲಿ, ಆದರೆ ಈಗ ನಾನೊಬ್ಬ ಸಾಮಾನ್ಯ ಪ್ರಜೆಯಾಗಿ ಏನು ಮಾಡಬಹುದು ಎಂದು ಪ್ರಶ್ನಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಪ್ರತಿಯೊಬ್ಬರಿಗೂ ಖಂಡಿತವಾಗಿಯೂ ಇದೆ. ಸರ್ಕಾರದ ನಿಯಮಗಳು ಏನೇ ಇರಲಿ, ವ್ಯವಸ್ಥೆಗಳು ಹೇಗೇ ಇರಲಿ ನಮ್ಮ ಮನಸ್ಸು ವಿಶಾಲವಾಗಬೇಕಿದೆ. ನೀರು, ವಿದ್ಯುತ್ ಹಾಗೂ ಇತರೆ ಸಂಪನ್ಮೂಲಗಳ ಮಿತವ್ಯಯ ಎಲ್ಲರ ಕರ್ತವ್ಯವಾಗಿದೆ. ನೀರಿಗೆ ಹಣ ಕೊಡುತ್ತೇನೆ. ಹಾಗಾಗಿ ಖರ್ಚು ಮಾಡುವುದೂ ನನ್ನ ಇಷ್ಟ ಎಂಬ ಅಹಂಕಾರ ಮುಂದುವರಿದರೆ, ಹಣದ ಮಳೆ ಸುರಿಸಿದರೂ ನೀರು ಎಲ್ಲಿಯೂ ಸಿಕ್ಕದ ಪರಿಸ್ಥಿತಿ ಬಂದೀತು. ಇಸ್ರೇಲ್ ನಲ್ಲಿ ಮಳೆ ನೀರನ್ನು ಒಬ್ಬ ವ್ಯಕ್ತಿ ಶೇಖರಿಸಿ ಇಟ್ಟಿಕೊಳ್ಳುವುದು ಅಪರಾಧಾವಂತೆ. ನಮ್ಮ ದೇಶದಲ್ಲಿ ಕೂಡ ನಿಯಮಗಳು ಬರಲೇಬೇಕು ಅಂತ ಇಲ್ಲ. ನೀರು ನನ್ನೊಬ್ಬನ ಆಸ್ತಿ ಎಂಬ ಭಾವ ಮನುಷ್ಯನ ಮನಸ್ಸಿನಿಂದ ಹೋದರೆ ಸಾಕು.  

 

ಸ್ವಾರ್ಥ ಮನೋಭಾವ ಇಲ್ಲವಾಗಬೇಕಿದೆ. ವ್ಯವಸ್ಥೆಗಿಂತ ಮುಖ್ಯ ಮನುಷ್ಯನ ಮನಸ್ಥಿತಿ ಅಲ್ಲವೇ?  ಮನಸ್ಥಿತಿಯನ್ನು ಮೊದಲು ಬದಲಿಸಿಕೊಳ್ಳಬೇಕಿದೆ. ಮುಂದಿನ ಪೀಳಿಗೆಗೆ ನೀರಿನ ಮಹತ್ವವನ್ನು ತಿಳಿಸಬೇಕಿದೆ. ನೀರುಳಿಸುವ ಉಪಾಯಗಳನ್ನು ನಾವು ರೂಢಿಸಿಕೊಂಡು, ಮಕ್ಕಳಿಗೆ ಈಗಿನಿಂದಲೇ ಕಲಿಸಬೇಕಿದೆ. ಜಲ ನಿರ್ವಹಣೆ ಮನೆಯೊಳಗಿಂದ ಪ್ರಾರಂಭವಾಗಬೇಕಿದೆ. ಪರಿಸರ ಸಂರಕ್ಷಣೆಯಲ್ಲಿ ಎಲ್ಲರೂ ಕೈಜೋಡಿಸಬೇಕಿದೆ. ಪ್ರಕೃತಿಯಲ್ಲಿ ಹಸಿರೇ ನಮಗೆ ಉಸಿರು ತಾನೇ?         

 

ಕೊನೆಹನಿ: ನಾನು ಚೆಲ್ಲದೇ ಉಳಿಸುವ ಒಂದೊಂದು ಹನಿಯೂ ಯಾರೋ ಒಬ್ಬರ ದಾಹ ನೀಗುವ ಬೊಗಸೆ ನೀರಾಗಬಹುದು. ಈಗ ಎಚ್ಚೆತ್ತುಕೊಳ್ಳದಿದ್ದರೆ “ನೀರು”ಮರುಭೂಮಿಯಲ್ಲಿನ ಮರೀಚಿಕೆಯಾದೀತು. ನಾಳೆಗೊಂದು ಚೊಂಬು ನೀರಿರಲಿ. ಜೀವನದಿ ಬತ್ತದಿರಲಿ.  

 

Author Details


Srimukha

Leave a Reply

Your email address will not be published. Required fields are marked *