ನಕ್ಷತ್ರಗಳ ಕಥೆ

ಅಂಕಣ ಸ್ಫಟಿಕ~ಸಲಿಲ : ಮಹೇಶ ಕೋರಿಕ್ಕಾರು

ಕಿಟಕಿಯಾಚೆ ಆಗಸದಲ್ಲಿ ಮಿನುಗುವ ಕೋಟಿ ನಕ್ಷತ್ರಗಳನ್ನು ನೋಡುತ್ತಾ ಮಗುವೊಂದು ತಾಯಿಯಲ್ಲಿ ಪ್ರಶ್ನಿಸುತ್ತಿತ್ತು, “ಅಮ್ಮಾ, ನಕ್ಷತ್ರಗಳೇಕೆ ಮಿನುಗುತ್ತವೆ?” ತಾಯಿ ಉತ್ತರಿಸಿದಳು, “ಮಗನೇ, ನಕ್ಷತ್ರಗಳು ಮಿನುಗುವುದಿಲ್ಲ. ಅವು ನಿರಂತರವಾಗಿ ನಾನಾ ಬಗೆಯ ಕಿರಣಗಳನ್ನು ಹೊರಡಿಸುತ್ತಲೇ ಇರುತ್ತವೆ‌. ಆ ಕಿರಣಗಳು ಭೂಮಿಯ ಗುರುತ್ವಾಕರ್ಷಣ ಮಂಡಲವನ್ನು ಪ್ರವೇಶಿಸುವಾಗ ಛಿದ್ರವಾಗುತ್ತವೆ. ಆ ರೀತಿಯಲ್ಲಿ ಕಿರಣಗಳು ಛಿದ್ರವಾಗುವುದರಿಂದಲೇ ನಮ್ಮ ಕಣ್ಣಿಗದು ಮಿನುಗಿದಂತೆ ಗೋಚರಿಸುತ್ತದೆ.”

 


“ನಕ್ಷತ್ರಗಳೇಕೆ ಕಿರಣಗಳನ್ನು ಹೊರಡಿಸುತ್ತವೆ?” ಮತ್ತೆ ಕುತೂಹಲದಿಂದಲೇ ಪ್ರಶ್ನಿಸಿತು ಮಗು.
ತಾಯಿ ತಾಳ್ಮೆಯಿಂದಲೇ ಉತ್ತರಿಸಿದಳು. “ಮಗೂ ಈ ಪ್ರಪಂಚದಲ್ಲಿರುವ ಪ್ರತಿಯೊಂದು ವಸ್ತುವಿನಲ್ಲೂ ಒಂದು ರೀತಿಯ ಶಕ್ತಿ ಅಡಕವಾಗಿರುತ್ತದೆ. ಅದು ಶಾಖವಾಗಿ, ಸೆಳೆತವಾಗಿ, ಬೆಳಕಾಗಿ, ವೇಗವಾಗಿ, ಗುರುತ್ವಾಕರ್ಷಣೆಯಾಗಿ ಒಂದೊಂದು ವಸ್ತುವಿನಲ್ಲೂ ಒಂದೊಂದು ರೀತಿಯಲ್ಲಿ ವ್ಯಕ್ತವಾಗುತ್ತದೆ. ನಕ್ಷತ್ರಗಳೆಂದರೆ ಬಾಹ್ಯಾಕಾಶದಲ್ಲಿರುವ ಧೂಳಿನ ಕಣಗಳು, ಇತರ ಕಾಯಗಳಿಂದ ಸಿಡಿದು ದೂರಾದ ತುಣುಕುಗಳು ಪರಸ್ಪರ ಸೆಳೆತದಿಂದ ಒಂದುಗೂಡಿದ ಪುಂಜರೂಪವಾಗಿದೆ. ಆ ಕಣಗಳ ಪರಸ್ಪರ ಸೆಳೆತದಿಂದಾಗಿ ಉದ್ಭವಿಸುವ ಚೈತನ್ಯವೇ ವಿವಿಧ ರೀತಿಯ ಕಿರಣಗಳಾಗಿ ನಕ್ಷತ್ರಗಳಲ್ಲಿ ಪ್ರಕಟಗೊಳ್ಳುತ್ತವೆ.”

 


“ಹಾಗಾದರೆ ಅಮ್ಮಾ, ಈ ನಕ್ಷತ್ರಗಳಿಗೆ ಸಾವಿಲ್ಲವೇ?” ಮತ್ತೆ ಕುತೂಹಲದಿಂದಲೇ ಪ್ರಶ್ನಿಸಿತು ಮಗು.
“ನಕ್ಷತ್ರಗಳೂ ಸಾಯುತ್ತವೆ ಮಗನೇ. ತಮ್ಮ ಸುತ್ತಲಿನ ಕಣಗಳನ್ನು ಆಕರ್ಷಿಸುತ್ತಾ ಲಕ್ಷಾಂತರ ವರ್ಷಗಳ ಕಾಲ ಅವು ಬೆಳೆಯುತ್ತಲೇ ಹೋಗುತ್ತವೆ. ಕೊನೆಗೊಂದು ದಿನ, ಅದಾವುದೋ ಸೆಳೆತಕ್ಕೆ ಒಳಗಾಗಿ ಒಂದಾಗಿ ಸೇರಿಕೊಂಡ ಸಕಲ ಕಣಗಳೂ ಬೇರ್ಪಟ್ಟು ಹೋಗುತ್ತವೆ. ಅದರೊಂದಿಗೆ ಆ ನಕ್ಷತ್ರದ ಆಯುಸ್ಸೂ ಅಂತ್ಯವಾಗುತ್ತದೆ. ಹಾಗೆ ನೋಡಿದರೆ ನಕ್ಷತ್ರಗಳೇನು, ಈ ಜಗತ್ತಿನಲ್ಲಿ ನಮ್ಮ ಕಣ್ಣಿಗೆ ಗೋಚರಿಸುವ ಯಾವ ವಸ್ತುವೂ ಶಾಶ್ವತವಲ್ಲ. ಎಲ್ಲದಕ್ಕೂ ಸಾವಿದೆ.”

 


“ಅಮ್ಮಾ, ಹಾಗಾದರೆ ಮತ್ತೆ ಹೊಸ ನಕ್ಷತ್ರವು ಹೇಗೆ ಹುಟ್ಟಿಕೊಳ್ಳುತ್ತದೆ?” ಕುತೂಹಲವನ್ನು ತಾಳಲಾರದೇ ಪ್ರಶ್ನಿಸಿಯೇ ಬಿಟ್ಟಿತು ಮಗು.

 


“ಮಗನೇ, ಸಿಡಿದು ದೂರಾಗಿ ಹೋದ ಕಣಗಳಿವೆಯಲ್ಲವೇ? ಆ ಕಣಗಳು ಒಂದು ಮೋಡದಂತೆ ಬಾಹ್ಯಾಕಾಶದಲ್ಲಿ ಸುತ್ತುತ್ತಲೇ ಇರುತ್ತವೆ. ಹಾಗೆ ಸುತ್ತುತ್ತಾ ಸುತ್ತುತ್ತಾ ಯಾವುದೋ ಒಂದು ಭಾಗದಲ್ಲಿ ಮತ್ತೆ ಪುಂಜವಾಗಿ ಒಟ್ಟು ಸೇರುತ್ತವೆ. ಆ ಪುಂಜವೇ ಹೊಸದೊಂದು ಪುಟ್ಟ ನಕ್ಷತ್ರವಾಗಿ ರೂಪುಗೊಳ್ಳುತ್ತದೆ. ಮತ್ತೆ ಬೆಳೆಯುತ್ತಲೇ, ಬೆಳಗುತ್ತಲೇ ಹೋಗುತ್ತದೆ.”

 


ಹಿಂದೆಂದೋ ಅಮ್ಮ ಹೇಳಿದ ಭಗವದ್ಗೀತೆಯ ಕಥೆಯನ್ನು ನೆನಪಿಸಿಕೊಂಡಿತು ಮಗು. ಮತ್ತೆ ತನ್ನ ಅಮ್ಮನಲ್ಲಿ ಪ್ರಶ್ನಿಸಿತು. ”ಹುಟ್ಟಿದ ವ್ಯಕ್ತಿಯೂ ಸಾಯುತ್ತಾನೆ, ಮತ್ತೆ ಅವನದೇ ಚೈತನ್ಯವು ಇನ್ನೊಂದು ರೂಪದಲ್ಲಿ ಇನ್ನೆಲ್ಲೋ ಹುಟ್ಟಿ ಹೊಸ ಜನ್ಮವಾಗುತ್ತದೆ ಎಂದು ನೀನೇ ಹೇಳಿರುವೆಯಲ್ಲಾ. ನಕ್ಷತ್ರಗಳೂ ಹಾಗೆಯೇನಮ್ಮಾ?”

 


ಈಗ ಅಮ್ಮನ ಬಳಿ ಉತ್ತರವಿರಲಿಲ್ಲ. ದೀರ್ಘವಾಗಿ ಯೋಚಿಸಿದರೆ ಹೌದೆನ್ನಿಸಿತು ಅವಳಿಗೆ. ಅವಳು ಮತ್ತೆ ತನ್ನ ಕಂದನ ನೆತ್ತಿಯನ್ನು ನೇವರಿಸುತ್ತಾ ನುಡಿದಳು, ”ಹೌದು ಮಗನೇ, ಪ್ರತಿಯೊಂದು ಚರಾಚರಗಳಿಗೂ ಹುಟ್ಟು ಸಾವುಗಳಿವೆ. ಅದರೊಳಗಿರುವ ಚೈತನ್ಯಕ್ಕೆ ಮಾತ್ರ ಸಾವಿಲ್ಲ. ಅದು ನಿರಂತರವಾಗಿ ಹೊಸ ರೂಪವನ್ನು ಪಡೆಯುತ್ತಾ ಹೊಸ ಅವತಾರಗಳಲ್ಲಿ ಕಾಣಿಸುತ್ತಲೇ ಇರುತ್ತದೆ. ಹೊಸ ಸೃಷ್ಟಿಗೆ ನಾಂದಿ ಹಾಡುತ್ತಲೇ ಇರುತ್ತದೆ. ಈ ವಿಶ್ವವನ್ನು ನಿಯಂತ್ರಿಸುತ್ತಲೇ ಇರುತ್ತದೆ. ಆ ಚೈತನ್ಯವನ್ನೇ ನಾವು ದೇವರೆಂದು ಕರೆಯುತ್ತೇವೆ ಮಗನೇ.”

 


ಮಗುವಿನೊಂದಿಗೆ ಮಾತನಾಡುತ್ತಾ ಅಮ್ಮ ಯೋಚನೆಗೆ ಜಾರಿದರೆ ಮಗುವು ನಿದ್ರೆಗೆ ಜಾರಿತ್ತು. ಹದವಾಗಿ ಹೊದಿಕೆಯೆಳೆದು ಅವನ ಹಾಲುಗೆನ್ನೆಗೊಂದು ಮುತ್ತಿಕ್ಕಿದ ಅಮ್ಮ ಅಲ್ಲಿಂದ ಎದ್ದು ನಡೆದಳು.

Leave a Reply

Your email address will not be published. Required fields are marked *