ಮಠದ ಮೂಲ ಕಥೆ – ಮೂಲ ಮಠದ ಕಥೆ – ೪ : ಮಹೇಶ ಎಳ್ಯಡ್ಕ

ಲೇಖನ

ಮೂವತ್ತೈದನೆಯ ಪೀಠಾಚಾರ್ಯರಾದ  ಶ್ರೀಶ್ರೀರಾಘವೇಂದ್ರಭಾರತೀ ಮಹಾಸ್ವಾಮಿಗಳವರು ತಮ್ಮ ಜೀವನಪರ್ಯಂತ ಮಠೋದ್ಧಾರಕಾರ್ಯದಲ್ಲಿ ಶ್ರಮಿಸಿದರು. ಅಪ್ಸರಕೊಂಡ, ತೀರ್ಥಹಳ್ಳಿ, ಪೆರಾಜೆ-ಮಾಣಿ ಮಠಗಳನ್ನು ಕಟ್ಟಿ ಬೆಳೆಸಿದರು.  ಧರ್ಮಶ್ರದ್ಧೆಯನ್ನು ಪುನರುತ್ಥಾನಗೈದರು.

ಧ್ಯಾನಾಸಕ್ತರಾಗಿದ್ದಾಗಅಂತಃಸ್ಫುರಣೆಯೊಂದು ಅವರಿಗೆ ಹೀಗಂದಿತು,

 

ಅಶೋಕೇ ನಾಮಕೇ ಸ್ಥಾನೇ ಶಂಕರಾರ್ಯಸುನಿರ್ಮಿತೇ ।

ಮಠೇ ಗೋಕರ್ಣನಿಕಟೇ ಮಲ್ಲಿಕಾರ್ಜುನಶೋಭಿತೇ ॥

 

‘ಗೋಕರ್ಣ ಬಳಿಯ ಅಶೋಕೆಯೆಂಬ ಮಲ್ಲಿಕಾರ್ಜುನನ ಪುಣ್ಯಸ್ಥಳದಲ್ಲಿ, ಶಂಕರರಿಂದ ನಿರ್ಮಿಸಲ್ಪಟ್ಟ ಮಠವಹುದು’ ಎಂಬುದಾಗಿ. ಇದು, ಸುಮಾರು ಐದಾರು ದಶಕದ ಹಿಂದಿನ ಕತೆ. ಶ್ರೀಶ್ರೀಗಳಿಗೆ ಈ ಬಗ್ಗೆ ಮುಂದಡಿಯಿಡಲು ಸಮಯ ಕೂಡಿಬಂದಿರಲಿಲ್ಲ. ಆದರೆ ಈ ಮಹತ್ಕಾರ್ಯವು ರಾಮಾನುಗ್ರಹಕ್ಕೆ ಕಾಯುತ್ತಿತ್ತು.

 

ಶ್ರೀರಮಣಮಹರ್ಷಿಗಳ ಶಿಷ್ಯರಾಗಿದ್ದು, ಮುಂದೆ ಸ್ವಪ್ರಭೆ, ಸ್ವತೇಜಸ್ಸಿನಿಂದ ದೈವಸಾಕ್ಷಾತ್ಕಾರಗೊಂಡು, ನಕ್ಷತ್ರದಂತೆ ಪ್ರಭೆಯಾದವರು ಮಹರ್ಷಿ ದೈವರಾತರು. ಇವರನ್ನು ಮಂತ್ರದ್ರಷ್ಟಾರರೆಂದೂ, ಖ್ಯಾತ ವೇದಾಂತಿಯೆಂದೂ ಗುರುತಿಸುತ್ತಾರೆ. ಇವರು ಗೋಕರ್ಣದ ಬಳಿ ಅಶೋಕೆಯೆಂಬ ಅಮೂಲ್ಯ ಜಾಗವನ್ನು ಕಂಡುಕೊಂಡರು. ಇತರರಿಗೆ ಪಾಳುಕೊಂಪೆಯಂತೆ ಕಂಡರೂ, ಮಹರ್ಷಿಗಳಿಗೆ ಅದೇನೋ ಸೆಳೆತವಿತ್ತು. ನಿತ್ಯ ಅಗ್ನಿಕಾರ್ಯ, ಗೋಶಾಲೆ, ವೇದಪಾಠಶಾಲೆಯು ಅವರಿಂದ ನಡೆಸಲ್ಪಟ್ಟಿತು. ವೈದಿಕ ಪರಂಪರೆಯು ಆ ಮಣ್ಣಿನಲ್ಲಿ ವೃದ್ಧಿಸಿತು. ಇದೂ ದೈವನಿಯಮವಿದ್ದೀತು.

 

ಮುಂದೆ “ಇದು ಶ್ರೀಮಠಕ್ಕೆ ಸಂಬಂಧಿಸಿದ ಜಾಗ, ಮಠದವರು ಕೇಳಿದಲ್ಲಿ ಒಪ್ಪಿಸುವುದು” ಎಂದು ತಮ್ಮ ಮೂವರು ಮಕ್ಕಳಿಗೆ ನಿರ್ದೇಶಿಸಿದ್ದರಂತೆ. “ತೀರ್ಥರೂಪ ದೈವರಾತರಿಗೆ ದೇವಸ್ಫುರಣೆಯಿಂದಲೇ ಈ ಸತ್ಯವು ಕಂಡುದಾಗಿತ್ತು” ಎಂದು ಈ ವಿಷಯವನ್ನು ಅವರ ಸತ್ಪುತ್ರ, ನಮ್ಮ ಹೆಮ್ಮೆಯ ದೇವಶ್ರವ ಶರ್ಮರು ಈಗಲೂ ಅಭಿಮಾನದಿಂದ ಹೇಳುತ್ತಾರೆ. ಶಂಕರರ ಭೂಮಿಯು ದೈವರಾತರ ಮೂಲಕ ಸುರಕ್ಷಿತವಾಗಿ ತೆಗೆದಿರಿಸಲ್ಪಟ್ಟುದಾಗಿರಬಹುದೇನೋ!

 

ಎಲ್ಲವೂ ಶಂಕರರ ಮಾಯೆ.

 

ಹಿರಿಯರು ಯೋಜಿಸಿದ ಕಾರ್ಯವನ್ನು ಅನುಷ್ಠಾನಗೊಳಿಸುವುದು ಮುಂದಿನವರ ಪ್ರಥಮ ಪ್ರಾಶಸ್ತ್ಯವಾಗಿದೆ. ಗೃಹಸ್ಥ ಪರಂಪರೆಯಲ್ಲಿ ಮಾತ್ರವಲ್ಲ, ಸಂನ್ಯಸ್ತ ಪರಂಪರೆಯಲ್ಲೂ ಇದು ನಿಜವೇ. ಅದರಲ್ಲೂ ಅವಿಚ್ಛಿನ್ನ ಪರಂಪರೆಯಾದರೆ ಖಂಡಿತವಾಗಿಯೂ ಸತ್ಯ. ಪೀಠಾಚಾರ್ಯರು ಬದಲಾದರೂ, ಅದೇ ಶಂಕರಾಚಾರ್ಯರ ಪ್ರತಿರೂಪವಲ್ಲವೇ ಅಲ್ಲಿರುವುದು? ಅದೇ ಪೀಠ, ಅದೇ ಆಚಾರ್ಯಶಕ್ತಿ, ಕೇವಲ ಅಭಿನಾಮ ಮತ್ತು ಕಾಲಾವಧಿ ಮಾತ್ರ ಬೇರೆಯಷ್ಟೆ. ಪರಂಪರೆಯೆಂದರೆ ಅದೇ ತಾನೇ?

 

ಅನ್ವೇಷಣೆ:

ಹಾಗಾಗಿ, ಹಿಂದಿನ ಅದೆಷ್ಟೋ ಶಂಕರಾಚಾರ್ಯರು ಸಾಧಿಸುವ ಚಿಂತನೆಯಲ್ಲಿದ್ದ, ಸಾಧಿಸಲ್ಪಡದ ಒಂದು ಅಮೋಘ ಕಾರ್ಯವು ಮೂವತ್ತಾರನೆಯ ಶಂಕರರಿಂದ, ನಮ್ಮ ಪ್ರೀತಿಯ ಸಂಸ್ಥಾನದವರಿಂದ ಅನುಷ್ಠಾನಗೊಳಿಸಲ್ಪಡುತ್ತಿದೆ.

 

ಅದೇ, ಮೂಲಮಠದ ಪುನಃಸೃಷ್ಟಿ.

 

ಪೀಠಕ್ಕೆ ಬಂದ ಸಮಯದಿಂದಲೂ  ಈ ಬಗ್ಗೆ ಆಳವಾದ ಆಸ್ಥೆ ನಮ್ಮ ಸಂಸ್ಥಾನದವರಿಗಿತ್ತು. ಅಶೋಕೆಯ ಪುನಃಸ್ಥಾಪನೆಯ ಕುರಿತು ಸ್ವಚಿಂತನೆಯ ಮೂಲ ಮೂಲಸ್ವರೂಪ ಕಂಡುಕೊಂಡು, ದೈವಜ್ಞರ ಮೂಲಕ ನಿಖರಗೊಳಿಸಿಕೊಂಡರು. ಒಂದು ಸುದಿನ ಸ್ವತಃ ಅಶೋಕೆಗೆ ಚಿತ್ತೈಸಿದರು. ಗೋಕರ್ಣದಿಂದ ತಮ್ಮ ಅಂತಃಸ್ಫುರಣೆ ಸೂಚಿಸಿದೆಡೆಗೆ ಸಪರಿವಾರ ಸಾಗಿ, ಶ್ರೀಶ್ರೀಗಳವರು ಪಾದುಕೆಯನ್ನು ಮೆಟ್ಟಿ ನಡೆನಡೆದು ತಲುಪಿದ್ದು ಅದೇ ಅಶೋಕೆಗೆ.

 

ಸಹಸ್ರಮಾನಕ್ಕಿಂತಲೂ ಹಿಂದೆ ಆಚಾರ್ಯ ಶಂಕರರು ಸ್ಥಾಪಿಸಿದ ಮಠದ ಪರಂಪರೆಯ ಯತಿಶಕ್ತಿಯು ತನ್ನ ಮೂಲವನ್ನು ಅರಸುತ್ತಾ ಅಶೋಕೆಯನ್ನು ತಲುಪಿದ ಪುಣ್ಯ ಸುಮಹೂರ್ತವದು. ಅಂದು ಆದಿಶಂಕರರನ್ನು ಸ್ವಾಗತಿಸಿದ್ದ ಅದೇ ಶುಭ್ರಗಾಳಿ, ಅದೇ ತಿಳಿನೀರು, ವಾತಾವರಣ, ಅದೇ ಆದಿಕಿರಾತ ಮಲ್ಲಿಕಾರ್ಜುನ, ಅದೇ ಪ್ರಶಾಂತ ಪರಿಸರವು ಮೂವತ್ತಾರನೆಯ ಶಂಕರರನ್ನು ಸ್ವಾಗತಿಸಿದ್ದವು.

 

ಮಹರ್ಷಿ ದೈವರಾತರ ಕುಟುಂಬಸ್ಥರು ಈ ಶುಭಗಳಿಗೆಯ ಪ್ರತೀಕ್ಷೆಯಲ್ಲಿದ್ದರೋ ಎಂಬಂತೆ ಫಲವನ್ನಿಟ್ಟು ಆಶೀರ್ವಾದ ಬೇಡಿದರು.  ಶಂಕರರು ನಡೆದ ಮಣ್ಣಿನಲ್ಲಿ ಶ್ರೀಗಳವರು ನಡೆದಾಡಿದರು.

 

Author Details


Srimukha

Leave a Reply

Your email address will not be published. Required fields are marked *