ನಾಳೆ ಬಾ

ಅಂಕಣ ಭಾವ~ಬಂಧ : ಮಂಗಲಾ ಯಶಸ್ವಿ ಭಟ್.

ಪ್ರೀತಿಯ ಕಂದನನ್ನು ಗಟ್ಟಿಯಾಗಿ ತಬ್ಬಿಕೊಂಡು ಸವಿನಿದ್ರೆಯಲ್ಲಿದ್ದೆ ಒಂದಿರುಳು. ಯಾರದೋ ಹೆಜ್ಜೆಯ ಸದ್ದು. ಕಣ್ಣು ಬಿಟ್ಟೆ. ಕತ್ತಲು ಕಾಣಿಸಲಿಲ್ಲ. ಪುನಃ ಕಣ್ಮುಚ್ಚಿದೆ. “ಬೇಗ ಏಳು. ಸಮಯವಾಯಿತು, ಬಾ” ಎಂದು ಎಳೆದರು ಯಾರೋ. ಸವಿನಿದ್ರೆಯನ್ನು ಕೆಡಿಸಿದ ಕೋಪ. ಸಿಡಿಮಿಡಿಗೊಳ್ಳುತ್ತಾ “ನೀವಾರು? ಏನು ಬೇಕಿತ್ತು?” ಎಂದೆ. “ನಿನ್ನ ಸಮಯ ಮುಗಿಯಿತು.” ಎನ್ನುತ್ತಾ ಎಳೆದುಕೊಂಡು ಹೊರಟುಬಿಟ್ಟರು. ಗಾಬರಿಯಿಂದ ಗಂಡನಿಗಾಗಿ ಕೈಚಾಚಿದೆ. ಸಿಕ್ಕುತ್ತಿಲ್ಲ. ಜೋರಾಗಿ ಕರೆದೆ. ಅವರಿಗೆ ಕೇಳಿಸುತ್ತಲೇ ಇಲ್ಲ. ಕೊನೆಯ ಸಾರಿ ಮಗನನ್ನು ಮುದ್ದುಗರೆದು ಬರುತ್ತೇನೆ, ಬಿಡಿ ಎಂದೆ. ಕೇಳಲಿಲ್ಲ. ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ. ಮಗನನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಗಂಡನಿಗೆ ಹೇಳಿ ಬರುತ್ತೇನೆ ಎಂದೆ. ಅವರು ಕೇಳಿಸಿಕೊಳ್ಳುತ್ತಲೇ ಇಲ್ಲ. ಒಮ್ಮೆ ನನ್ನ ಅಪ್ಪ-ಅಮ್ಮನಿಗೆ ಫೋನ್ ಮಾಡಿ, ಮಾತಾಡಿ ಬರುತ್ತೇನೆ. ನಿನ್ನೆ ಮಾತನಾಡಲು ಆಗಿರಲೇ ಇಲ್ಲ. ಎಂದು ಕೇಳಿಕೊಂಡೆ. ಉಹೂಂ ಅವರು ಅದಕ್ಕೂ ಕೇಳುತ್ತಿಲ್ಲ. ನೆಂಟರಿಷ್ಟರನ್ನು, ಗೆಳೆಯರನ್ನು ಭೇಟಿಯಾಗಿ ತುಂಬಾ ದಿನಗಳಾದವು. ಒಮ್ಮೆ ಹೋಗಿ ಮಾತನಾಡಿಸಿಕೊಂಡು ಬರುತ್ತೇನೆ ಪ್ಲೀಸ್ ಎಂದು ಬೇಡಿಕೊಂಡೆ. ಕೈಬಿಡಲೇ ಇಲ್ಲ. ಎಳೆದುಕೊಂಡು ಹೋಗುವುದನ್ನು ನಿಲ್ಲಿಸಲೇ ಇಲ್ಲ. ಕರುಣೆಯೇ ಇಲ್ಲದವರು. ಜೋರಾಗಿ ಅಳಬೇಕೆಂದರೂ ಸ್ವರ ಹೊರಡುತ್ತಿಲ್ಲ.

 

“ಅಮ್ಮಾ, ಅಮ್ಮಾ, ಬೆಡ್ ಶೀಟ್ ಹಾಕು” ಎನ್ನುತ್ತಾ ಮಗ ಎಳೆದಾಗ ಧಡಕ್ಕನೇ ಎದ್ದು ಕುಳಿತೆ. ಮೈಯೆಲ್ಲ ಬೆವರು. ಹೆದರಿಕೆಗೆ ಗಡಗಡ ನಡುಕ. ಜೊತೆಗೇ ಓಹ್, ಕನಸಿದು, ನಿಜವಲ್ಲ ಎಂಬ ನಿಟ್ಟುಸಿರು. ಬರುವ ಶ್ಲೋಕವನ್ನೆಲ್ಲ ಒಮ್ಮೆಲೇ ಹೇಳಿಕೊಂಡು, “ಇಷ್ಟು ಬೇಗ ಬರಲಾರೆ. ಕರೆಯಬೇಡ” ಎಂದು ಹೇಳಿ ಮಗನನ್ನು ಗಟ್ಟಿಯಾಗಿ ತಬ್ಬಿಕೊಂಡು ಮಲಗಿದೆ. ಮನದ ತುಂಬೆಲ್ಲ ಆವರಿಸಿತ್ತು ಸಾವಿನ ಭಯ. ಆಗ ಹುಟ್ಟಿದ ವೈರಾಗ್ಯ ಭಾವವೇ ಬರಹವಾಗಿ ಇಳಿಯಿತಿಲ್ಲಿ.     

 

ಮಲಗಿದೋದುಗನ ಕೈಹೊತ್ತಿಗೆಯು ನಿದ್ದೆಯಲಿ ।

ಕಳಚಿ ಬೀಳ್ವುದು; ಪಕ್ವಫಲವಂತು ತರುವಿಂ ॥

ಇಳೆಯ ಸಂಬಂಧಗಳು ಸಂಕಲ್ಪನಿಯಮಗಳು ।

ಸಡಿಲುವುವು ಬಾಳ್ ಮಾಗೆ – ಮಂಕುತಿಮ್ಮ ॥  

 

ಹುಟ್ಟು-ಸಾವುಗಳೆಂಬ ಎರಡು ನಿಗೂಢ ವಿಷಯಗಳು, ನಡುವೆ ಹರಿಯುತ್ತಲಿದೆ ಈ ಜೀವನದಿ ಅನ್ನಿಸಿತು. ಸಾಮಾನ್ಯವಾಗಿ ಹುಟ್ಟು ಸಂಭ್ರಮ. ವಸ್ತು-ವಿಷಯಗಳಿಗೆ, ನಂಟುಗಳಿಗೆ ಅಂಟಿಕೊಂಡು ಬಾಳುತ್ತಿರುವ ಸಾಮಾನ್ಯರಿಗೆ ಸಾವು ಕ್ರೂರಿ. ರಾತ್ರಿ ಮಲಗುವಾಗ ಕೈಯಲ್ಲಿ ಹಿಡಿದ ಪುಸ್ತಕ, ನಿದ್ರೆ ಬಂದಾಗ ಕೈ ಜಾರಿ ಬೀಳುವಂತೆ, ಆ ಸಾವು ಬರುವುದಂತೆ. ಮಾಗಿದ ಹಣ್ಣೊಂದು ಮರದಿಂದ ತೊಟ್ಟು ಕಳಚಿ ಬೀಳುವಂತೆ ಆ ಸಾವು ಬರುವುದಂತೆ.

 

ಯಾವಾಗ? ಎಲ್ಲಿ? ಹೇಗೆ? ಏಕೆ? ಮುಂದೇನು? ಇಂತಹ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಂಡ ಜ್ಞಾನಿಗಳಿರಬಹುದು. ನನ್ನಂತಹ ಸಾಮಾನ್ಯ ಜೀವಿಗೆ ಎಲ್ಲವೂ ಉತ್ತರಗಳಿಲ್ಲದ ಪ್ರಶ್ನೆಯೇ ಅಲ್ಲವೇ? ಕೆಲವರಿಗೆ ಅನಾರೋಗ್ಯದಿಂದ, ಕೆಲವರಿಗೆ ಅಪಘಾತದಿಂದ, ಕೆಲವರಿಗೆ ಸಣ್ಣ ವಯಸ್ಸಿನಲ್ಲಿ, ಕೆಲವರಿಗೆ ನಿದ್ರೆಯಲ್ಲಿ, ಇನ್ನೂ ಕೆಲವರಿಗೆ ಕಾರಣದ ಅರಿವಿಲ್ಲದೆಯೇ ಹೀಗೆ ಎಲ್ಲಿ ಬೇಕಾದರೂ, ಯಾವಾಗ ಬೇಕಾದರೂ ಬರಬಹುದು ಈ ಸಾವು. ಬಹುಶಃ ಹುಟ್ಟಿದ ಕ್ಷಣದಿಂದಲೇ ನಮ್ಮನ್ನು ನೆರಳಾಗಿ ಹಿಂಬಾಲಿಸುತ್ತಲೇ ಇರುತ್ತದೆ ಅನ್ನಿಸುತ್ತೆ.

 

ಹೀಗೊಂದು ಇತಿಹಾಸ:

 

ಕಲಿಯುಗದ ಪ್ರಾರಂಭವಾಗಿತ್ತು. ಶ್ರೀಕೃಷ್ಣನ ಅವತಾರ ಮುಗಿದಿತ್ತು. ಪಾಂಡವರ ಮೊಮ್ಮೊಗನಾದ ಪರೀಕ್ಷಿತ ರಾಜ್ಯಭಾರದ ಹೊರೆ ಹೊತ್ತಿದ್ದ. ಒಮ್ಮೆ ಬೇಟೆಯಾಡಲು ಕಾಡಿಗೆ ಹೋಗಿ, ಬಳಲಿ, ನೀರಿಗಾಗಿ ಬಂದನು ಒಂದು ಋಷ್ಯಾಶ್ರಮದ ಬಳಿ. ಆ ಸಮಯದಲ್ಲಿ ಸಮಾಧಿಸ್ಥನಾಗಿದ್ದರು ಶಮೀಕಮುನಿಗಳು. ಅದನ್ನರಿಯದೇ ನೀರು ಕೇಳಿದರೂ ಕೊಡದ ಮುನಿಗಳ ಮೇಲೆ ಕೋಪ ಬಂತು ಪರೀಕ್ಷಿತನಿಗೆ. ಅಲ್ಲಿಯೇ ಸತ್ತು ಬಿದ್ದಿದ್ದ ಹಾವೊಂದನ್ನು ಅವರ ಕೊರಳಿಗೆ ಹಾಕಿ, ಹೊರತು ಹೋದ. ಅಲ್ಲಿಗೆ ಬಂದ ಮುನಿಗಳ ಮಗ ಶೃಂಗಿ, ಅಪ್ಪನಿಗಾದ ಅವಮಾನವನ್ನು ಸಹಿಸದಾದ. ಅವನೂ ಮಹಾತಪಸ್ವಿಯೇ. ಶಪಿಸಿಯೇ ಬಿಟ್ಟ, “ತಂದೆಯನ್ನು ಅವಮಾನಿಸಿದ ವ್ಯಕ್ತಿ ಇನ್ನೂ ಏಳು ದಿನಗಳೊಳಗೆ ಹಾವು ಕಚ್ಚಿ ಸತ್ತು ಹೋಗಲಿ” ಎಂದು. ಋಷಿವಾಕ್ಯ ಹುಸಿಯಾಗುವುದುಂಟೇ? ತನಗೆ ದೊರಕಿದ ಶಾಪದ ಬಗ್ಗೆ ಅರಿತ ಪರೀಕ್ಷಿತ. ಸಂತೋಷದಿಂದ ಸ್ವೀಕರಿಸಿದ. ಏಳು ದಿನಗಳೂ ಭಾಗವತ ಶ್ರವಣ ಮಾಡಿ, ಕೃತಕೃತ್ಯ ಭಾವದಿಂದ, ಕಾಲನೊಂದಿಗೆ ಹೋದ.

 

ಇದೊಂದು ಹಾಸ್ಯಕಥೆ:

 

ಪ್ರಸಿದ್ಧ ಜೋಯೀಸರೊಬ್ಬರು “ಆಯಸ್ಸು ಮುಗಿದಿದೆ. ಇನ್ನೆರಡು ದಿನದಲ್ಲಿ ನೀನು ಹಲಸಿನ ಮರದಿಂದ ಬಿದ್ದು ಸಾಯುತ್ತೀಯೆ. ತಪ್ಪಿಸಲು ಸಾಧ್ಯವೇ ಇಲ್ಲ” ಎಂದರವನಿಗೆ. ಅವನಿಗೆ ಭಯ ಶುರುವಾಯಿತು. ಯೋಚಿಸಿ ಉಪಾಯ ಹುಡುಕಿದ. ಇನ್ನು ಮುಂದೆ ಮನೆಯಿಂದ ಹೊರಗೆ ಹೋಗುವುದೇ ಇಲ್ಲ. ಮನೆಯೊಳಗೇ ಇದ್ದರೆ ಸಾವು ನನ್ನನ್ನು ಸಮೀಪಿಸದು ಎಂಬ ನಿರ್ಧಾರಕ್ಕೆ ಬಂದ. ಒಂದು ದಿನ ಕಳೆಯಿತು. ಎರಡನೇ ದಿನ ರಾತ್ರಿ ಊಟ ಮಾಡುತ್ತಿದ್ದ ವೇಳೆಯಲ್ಲಿ ಕುಳಿತ ಮಣೆಯಿಂದ ಕೆಳಗೆ ಬಿದ್ದು ಸತ್ತು ಹೋದ. ಹಲಸಿನ ಮರದಿಂದ ತಯಾರಿಸಿದ ಮಣೆಯಾಗಿತ್ತದು.   

 

ಮೇಲಿನ ಘಟನೆಯನ್ನೂ, ಕಥೆಯನ್ನೂ ಕುರಿತು ಚಿಂತನೆ ನಡೆಸಿದಾಗ ಅನ್ನಿಸಿದ್ದು. ಕಾಲ ಯಾರನ್ನೂ ಬಿಡುವುದಿಲ್ಲ. ಹುಟ್ಟಿದವರೆಲ್ಲ ಒಂದಲ್ಲೊಂದು ದಿನ ಹೋಗಲೇ ಬೇಕು. ಆದರೆ ಪರೀಕ್ಷಿತನಿಗೆ ತನ್ನ ಮರಣದ ದಿನದ ಅರಿವಿತ್ತು. ಆದರೆ ಆ ಭಾಗ್ಯ ಎಲ್ಲರಿಗೂ ದೊರಕುವುದಿಲ್ಲ. ಅಥವಾ ಅದನ್ನು ಭಾಗ್ಯವೆಂದುಕೊಂಡು ಆ ದಿನಗಳನ್ನು ಸದುಪಯೋಗ ಮಾಡಿಕೊಳ್ಳುವ ಸಾಮರ್ಥ್ಯ ನಮಗಿದೆಯೇ ಎಂಬುದು ಕೂಡ ಯೋಚಿಸುವ ವಿಚಾರವೇ. ಹಾಂ. ಮೃತ್ಯುವನ್ನು ಅರಿತ ಅನೇಕ ಜ್ಞಾನಿಗಳು ಇರಬಹುದು. ಮೃತ್ಯುವನ್ನೇ ಗೆದ್ದ ಮಾರ್ಕಂಡೇಯನಿದ್ದಾನೆ. ಯಮನನ್ನು ಗೆದ್ದು, ಪತಿಯ ಪ್ರಾಣವನ್ನು ಹಿಂದೆ ತಂದ ಸಾವಿತ್ರಿಯ ಕಥೆಯನ್ನು ಕೇಳಿರುತ್ತೇವೆ. ಈ ಪ್ರಪಂಚದಲ್ಲಿ ಕಾಲನನ್ನು ಸೋಲಿಸಿ ಬದುಕಿದ ಜನರು ಅಥವಾ ಬಂದ ಕಾಲನನ್ನು ಬರಮಾಡಿ ಅಪ್ಪಿಕೊಂಡವರು ಕೇವಲ ಬೆರಳೆಣಿಕೆಯಷ್ಟು.        

 

ಯಾಕೋ ಈ ಸಾವು ಕ್ರೂರಿ ಎಂಬ ವಿಚಾರವೇ ತಲೆಯಲ್ಲಿ ಗಿರಗಿಟ್ಲೆ ಹೊಡೆಯುತ್ತಿದ್ದ ಸಂದರ್ಭದಲ್ಲಿಯೇ, ಸಾವಿನ ಭಯದ ಕುರಿತು ಗುರುವಾಣಿಯೊಂದನ್ನು ಕೇಳಿದೆ. “ನೀವು ಕೆಲಸದ ನಿಮಿತ್ತ ಬೇರೆ ಯಾವುದೋ ನಗರಕ್ಕೆ ಹೋಗಿದ್ದೀರಿ ಎಂದುಕೊಳ್ಳಿ. ಹಿಂತಿರುಗಲು ರೈಲಿನಲ್ಲಿ ಸೀಟು ಬುಕ್ ಮಾಡಿಸಿ ಆಗಿದೆ. ನೀವು ಬಂದ ಕೆಲಸವನ್ನು ಬೇಗ ಬೇಗ ಮುಗಿಸಿಕೊಂಡರೆ ರೈಲು ಹೊರಡುವ ಒಂದು ಘಂಟೆ ಮೊದಲೇ ಬಂದು ಕಾಯುತ್ತೀರಿ. ಆದರೆ ನಗರದ ಇತರ ಆಕರ್ಷಣೆಗಳಿಗೊಳಗಾಗಿ ಬಂದ ಕೆಲಸವನ್ನು ಮರೆತು ಕಾಲಹರಣ ಮಾಡಿದರೆ, ಆ ಸಮಯ ಬಂದಂತೆ ಉದ್ವೇಗ, ಭಯ, ಚಿಂತೆ ಕಾಡತೊಡಗುತ್ತದೆ. ಹಾಗೆಯೇ ಈ ಭೂಮಿಗೆ ಬಂದ ಮೇಲೆ, ನಿಜವಾಗಿಯೂ ಮಾಡಬೇಕಾದ ಕೆಲಸಗಳನ್ನು ಮಾಡಿ ಮುಗಿಸಿದವನು ಮಾತ್ರ ಸಾವನ್ನು ಅತಿಥಿಯಂತೆ ಬರಮಾಡಿಕೊಳ್ಳುತ್ತಾನೆ. ಅದೇ ಮಾಡಬೇಕಾದ್ದನ್ನು ಮಾಡದೇ, ದಕ್ಕಿದ ಕಾಲವನ್ನೆಲ್ಲ ವ್ಯರ್ಥ ಮಾಡಿದವರಿಗೆ ಮಾತ್ರ ಸಾವೆಂದರೆ ಭಯ. ಮಾಡಬೇಕಾದ ಕೆಲಸ ಯಾವುದೆಂದು ಅಂತರಾತ್ಮಕ್ಕೆ ಗೊತ್ತಿರುತ್ತದೆ.” ಎಂದು. ಹೌದಲ್ಲವೇ ಎನ್ನಿಸಿತು. ಸಾವಿನ ಬಳಿ ನಾಳೆ ಬಾ ಎಂದು ಹೇಳಿ ಕಳುಹಿಸಲು ಸಾಧ್ಯವೇ ಇಲ್ಲ. ಯಾವಾಗ ಬಂದರೂ ಬಾಗಿಲು ತೆರೆದು ಬರಮಾಡಿಕೊಳ್ಳಲು ಸಿದ್ಧರಿರಬೇಕು. ಆ ಕರೆ ಯಾವುದೇ ಕ್ಷಣದಲ್ಲಿ ನಮಗೂ ಬರಬಹುದು ಅಥವಾ ನಮ್ಮವರಿಗೂ ಬರಬಹುದು.

 

ವಾಸಾಂಸಿ ಜೀರ್ಣಾನಿ ಯಥಾ ವಿಹಾಯ
ನವಾನಿ ಗೃಹ್ಣಾತಿ ನರೋsಪರಾಣಿ ।
ತಥಾ ಶರೀರಾಣಿ ವಿಹಾಯ ಜೀರ್ಣಾ
ನ್ಯನ್ಯಾನಿ ಸಂಯಾತಿ ನವಾನಿ ದೇಹೀ॥  

 

ಎಂಬ ಶ್ರೀಕೃಷ್ಣನ ವಾಣಿ ಸರಿಯಾಗಿ ಅರ್ಥವಾದಾಗ ಸಾವಿನ ನೋವು, ಸಾವಿನ ಭಯ ದೂರವಾಗಬಹುದು.  

 

ಸಾವನ್ನು ಅರ್ಥ ಮಾಡಿಕೊಂಡರೂ, ಮಾಡಿಕೊಳ್ಳದಿದ್ದರೂ ಅದರಿಂದ ತಪ್ಪಿಸಿಕೊಳ್ಳಲಂತೂ ಸಾಧ್ಯವೇ ಇಲ್ಲ. ಹಾಗದರೆ ಏನು ಮಾಡಬಹುದು? ಸಿಕ್ಕಿದ ಬದುಕನ್ನು ಸಿಕ್ಕಿದಷ್ಟೇ ಸಮಯಕ್ಕಾಗಿ ಪ್ರೀತಿಸಬೇಕು. ಸಮಯವೇ ನಿಜವಾದ ಸಂಪತ್ತು. ಅದರ ಸದ್ವಿನಿಯೋಗವಾಗಬೇಕು. “ನಾಳೆ ಮಾಡುವ ಕೆಲಸ ಇಂದೇ ಮಾಡು. ಇಂದು ಮಾಡುವುದನ್ನು ಈಗಲೇ ಮಾಡು” ಎಂಬ ಗಾದೆಯನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕು. ನಮ್ಮ ನಿಲ್ದಾಣ ಬರುವವರೆಗೂ, ಒಟ್ಟಿಗಿದ್ದವರೊಂದಿಗೆ ಸಂತೋಷದಿಂದ ಬೆರೆತು, ಇತರರಿಗೆ ನಮ್ಮಿಂದ ನೋವಾಗದಂತೆ, ಸಹಾಯವಾಗುವಂತೆ ಬದುಕಬೇಕು. ಒಂದು ವೇಳೆ ಒಟ್ಟಿಗಿದ್ದವರು ಮಧ್ಯದಲ್ಲಿಯೇ ಇಳಿದು ಹೋದರೆ, ಖುಷಿಯಿಂದ ಬೀಳ್ಕೊಡಬೇಕು. ನಮ್ಮ ನಿಲ್ದಾಣ ಬಂದ ಕೂಡಲೇ ನಗುತ್ತಾ ಇಳಿದು ಹೋಗಬೇಕು. ಪ್ರಯಾಣದ ವೇಳೆ ನಮ್ಮಿಂದ ಒಟ್ಟಿಗಿದ್ದವರಿಗೆ ಸಹಾಯವಾಗಿದ್ದರೆ ಅಥವಾ ನಮ್ಮಿಂದಾಗಿ ಇತರರ ಜೀವನದಲ್ಲಿ ನಗುವೊಂದು ಮೂಡಿದ್ದರೆ, ನಮ್ಮುಸಿರು ನಿಂತಿದ್ದರೂ, ಅವರೊಳಗೆ ನಮ್ಮ ನೆನಪು ಉಸಿರಾಡುತ್ತಿರುತ್ತದೆ.

 

ಕೊನೆಹನಿ: ಇಷ್ಟೆಲ್ಲ ವಿಚಾರ ವಿಮರ್ಶೆಗಳ ಮಂಥನ ಮಸ್ತಿಷ್ಕದಲ್ಲಿ ನಡೆಯುತ್ತಿದ್ದರೂ, ಮನಸ್ಸು ಮಾತ್ರ, “ನನ್ನವರಿಗೋಸ್ಕರ ಬರಬೇಡ. ಬರುವುದಾದರೆ ನನಗಾಗಿ ಬಾ.  ಇಷ್ಟು ಬೇಗ ಬರಬೇಡ. ಇಂದಂತೂ ಬೇಡಲೇ ಬೇಡ. ನಾಳೆ ಬಾ. ಇನ್ನೂ ಅನೇಕ ಕೆಲಸಗಳು ಬಾಕಿ ಇವೆ” ಎಂದು ಕಾಲನನ್ನು ಬೇಡಿಕೊಳ್ಳುತ್ತಿತ್ತು.

Leave a Reply

Your email address will not be published. Required fields are marked *