ಸಂಗೀತ ಸಾಹಿತ್ಯ ಕಲೆ ಇವುಗಳ ಪ್ರಸ್ತುತತೆ

ಅಂಕಣ ಆ ಕಣ್ಣಿಂದ : ಮೋಹನ ಭಾಸ್ಕರ ಹೆಗಡೆ ಹೆರವಟ್ಟ

ನಮ್ಮ ಭಾರತೀಯ ಪರಂಪರೆಯಲ್ಲಿ ನಾವು ವೇದಗಳಿಗೆ ಯಾವ ಮಹತ್ತ್ವವನ್ನು, ಗೌರವವನ್ನು, ಪೂಜ್ಯ ಭಾವನೆಯನ್ನು ಸಲ್ಲಿಸುತ್ತಾ ಬಂದಿದ್ದೇವೆಯೋ ಅದೇ ರೀತಿ ಸಾಂಸ್ಕಂತಿಕ ವಿಷಯಕ್ಕೂ ಸಲ್ಲಿಸುತ್ತಲೇ ಬಂದಿದ್ದೇವೆ. ಆದುದರಿಂದಲೇ ಭಾರತೀಯ ಪರಂಪರೆಯ ಗುಣಗಳಲ್ಲಿ ಜ್ಞಾನ, ಆ ಜ್ಞಾನದ ಹಲವು ಶಾಖೆಗಳು, ಅವುಗಳನ್ನು ಅಭ್ಯಸಿಸುತ್ತ ಅವುಗಳ ಮೇಲೆ ಸಿದ್ಧಿಯನ್ನು ಗಳಿಸುತ್ತಾ ಸಾಗುವುದು ಶ್ರೇಷ್ಠ ಲಕ್ಷಣಗಳಲ್ಲಿ ಒಂದಾಗಿದೆ. ನಾಲ್ಕು ವೇದಗಳು ಈ ಪ್ರಪಂಚಕ್ಕೆ ನಾವು ನಂಬಿದ ದೈವದಿಂದ ಕೊಡಲ್ಪಟ್ಟ ಮೇಲೆ ಅವುಗಳನ್ನು ಆರಾಧಿಸುವ, ಅವುಗಳ ಮಹತ್ತ್ವವನ್ನು ಅರ್ಥ ಮಾಡಿಕೊಳ್ಳುವ, ಹಾಗೆಯೇ ಅವುಗಳನ್ನು ಅನುಸರಿಸುತ್ತ ಜೀವನ ಕ್ರಮವನ್ನು ನಡೆಸುವ ಒಂದು ಪರಿಪಾಠ ಆರಂಭವಾಯಿತು. ಹಾಗಿದ್ದೂ ಅಲ್ಲೆಲ್ಲಿಯೋ ಒಂದು ಕಡೆ ಮನಸ್ಸಿಗೆ ಬೇಕಾದ ಸಂತೋಷ, ಸಮಾಧಾನ ಸಿಗುತ್ತಿಲ್ಲ ಎನ್ನುವ ಧೋರಣೆ ಹುಲುಮಾನವರಲ್ಲಿ ಬಂದಾಗ ಪುನಃ ಅವರುಗಳು ದೈವದ ಮೊರೆ ಹೋದರು. ಆಗ ಈ ನಾಲ್ಕು ವೇದಗಳ ಸಾರವನ್ನು ಸಂಗ್ರಹಿಸುತ್ತ ಅದನ್ನು ಸರ್ವರಿಗೂ ಅರ್ಥವಾಗುವ ರೀತಿಯಲ್ಲಿ, ಸರ್ವರ ಮನಸ್ಸಿಗೂ ನಾಟುವ ರೀತಿಯಲ್ಲಿ ತಲುಪಿಸಬೇಕಾದ ವಿಧಾನವನ್ನು ಕಂಡುಕೊಳ್ಳಲಾಯಿತು. ಅದನ್ನೇ ‘ಸಾಂಸ್ಕಂತಿಕ’ ಎಂದು ತಿಳಿಯಲಾಯಿತು. ‘ಗಾಂಧರ್ವ ವಿದ್ಯೆ’ ಎಂದು ಅದನ್ನು ಸೂಚಿಸಲಾಯಿತು. ಅದರ ಅಡಿಯಲ್ಲಿ ಹಲವು ಶಾಖೆಗಳನ್ನು ಮಾಡಲಾಯಿತು.

ಮನಸ್ಸಿಗೆ ಪೂರಕವಾದ ವಿಷಯಗಳು. ಅದರಲ್ಲಿ ಈ ಎಲ್ಲ ಕಲೆಗಳು ಮೇಳವಿಸಿಕೊಂಡವು. ಸಂಗೀತ, ಸಾಹಿತ್ಯ, ನೃತ್ಯ ಇವುಗಳೆಲ್ಲವೂ ಬಂದವು. ಇವು ಬಂದಾಗ ಸಾಕ್ಷಾತ್ ಶಿವನೇ ಅಭಿನಯವನ್ನು, ನೃತ್ಯವನ್ನು ಒಳಗೊಂಡ ತನ್ನ ಸ್ಪೂರ್ತಿಯಿಂದ ಆರಾಧಿಸಿದ, ತಾನು ಲೋಕಕ್ಕೆ ಕೊಟ್ಟ ಒಂದು ನೃತ್ಯ ಪ್ರಕಾರವನ್ನು ತೋರಿಸಿಕೊಟ್ಟ. ಅದನ್ನು ಅವನು ಮುನಿಗಳಲ್ಲಿ ಒಬ್ಬನಾದ ‘ತಂಡು’ವಿಗೆ ಹೇಳಿಕೊಟ್ಟ. ಅವನು ಅದನ್ನು ಕರಗತ ಮಾಡಿಕೊಂಡು ಬೇಕಾದಂತೆ ಅದನ್ನು ಪರಿಷ್ಕರಿಸಿಕೊಂಡು ಲೋಕಕ್ಕೆ ಕೊಟ್ಟ. ಆದುದರಿಂದ ಆ ನೃತ್ಯ ಅದು ‘ತಾಂಡವ’ ಅಂತ ಎನಿಸಿಕೊಂಡಿತು. ಇದು ಪುರುಷ ಪ್ರಧಾನವಾದ ಅಂಗವೈಭವಗಳನ್ನು ಅಂಗ ಅಭಿನಯಗಳನ್ನು ಒಳಗೊಂಡಿತು. ಅದನ್ನು ನೋಡುತ್ತ ಪ್ರೇರಿತಳಾದ ಶಿವನ ಅರ್ಧಾಂಗಿ, ಅರ್ಧಶರೀರಿಯೇ ಆದ ಪಾರ್ವತಿದೇವಿ ಈ ನೃತ್ಯದಲ್ಲಿ ಕಂಡ ಭಾವಗಳನ್ನು ವಿಸ್ತರಿಸಿ ಪರಿವರ್ತನೆಗೊಳಿಸಿ ಅದನ್ನು ಮೋಹಕವಾದ ಕೋಮಲವಾದ ರೂಪುಗಳಲ್ಲಿ ಕೊಟ್ಟಳು. ಅದನ್ನು ‘ಲಾಸ್ಯ’ ಎಂದು ಕರೆದರು. ಹೀಗೆ ಬಹುಮುಖ್ಯವಾದ ಎರಡು ಪ್ರಕಾರಗಳು ಸಿದ್ಧಗೊಂಡವು.

ಈ ರೀತಿಯಲ್ಲಿ ಸಿದ್ಧಗೊಂಡ ನೃತ್ಯದ ಪ್ರಕಾರಗಳು ಮುಂದೆ ಆವಿಷ್ಕಾರಗೊಳ್ಳುತ್ತ ಅದು ಬೇರೆ ಬೇರೆ ಸ್ವರೂಪಗಳನ್ನು ತಳೆಯುತ್ತ, ಕಾಲಾಂತರದಲ್ಲಿ ವೈವಿಧ್ಯಮಯವಾದಂತಹ ಪ್ರಕಾರಗಳಾಗಿ ರೂಪುಗೊಂಡವು. ಒಂದು ನೃತ್ಯ ಪದ್ಧತಿಯಲ್ಲಿ ಇರಬೇಕಾದಂತಹ ಎಲ್ಲ ವಿಚಾರಗಳನ್ನು ಅವು ಒಳಗೊಳ್ಳುತ್ತ, ಅದು ಪರಿವರ್ತನೆಗೊಳ್ಳುತ್ತ ಪರಿಷ್ಕಾರಗೊಳ್ಳುತ್ತ ಸಾಗಿಬಂದಿದೆ. ತುಂಬ ಹಿಂದಿನಿಂದ ಇಂದಿನವರೆಗೂ ಅದರ ಪರಮೋದ್ದೇಶ ಏನು ಅಂತ ಕೇಳಿದರೆ ಮುದವನ್ನು ನೀಡುವಂತಹದು, ಆನಂದವನ್ನು ನೀಡುವಂತಹದ್ದು ಎಂದೇ ಆಗಿ ಉಳಿದಿದೆ. ಹಾಗೆ ಆನಂದವನ್ನು ನೀಡುವಾಗ ಅದು ಅದಕ್ಕೆ ಬೇಕಾದಂತಹ ರಸಗಳನ್ನು ಒಳಗೊಳ್ಳುವಂತಹ ಪ್ರಕ್ರಿಯೆಯನ್ನು ಗಮನಿಸಬೇಕಾಗಿದೆ. ಅಂತಹ ನೃತ್ಯ ಪದ್ಧತಿ ಅಂತಹ ಕಲಾಮಾಧ್ಯಮ ರಸನಿಷ್ಠವಾಗಿ ರಸಗಳನ್ನು ಪೋಷಿಸದೇ ಇದ್ದರೆ ಅದು ಆತ್ಯಂತಿಕವಾದ ಸಂತೋಷವನ್ನು ನೀಡಲಾರದು ಎನ್ನುವುದು ಸ್ಪಷ್ಟವಾಗಿದೆ. ಸಂತೋಷ, ಆಕ್ರೋಶ, ಕರುಣೆ, ಭೀಭತ್ಸ, ಶಾಂತ ಹೀಗೆ ಮೊದಲಾದ ನವರಸಗಳನ್ನು ಅವುಗಳು ತೋರಿಸುವಂತಿರಬೇಕು. ಒಂದೊಂದು ಪ್ರದರ್ಶನದಲ್ಲಿ ಎಲ್ಲವೂ ಒಳಗೊಂಡಿರಬೇಕು ಅಂತೇನಿಲ್ಲ. ಮುಖ್ಯವಾದ ಕೆಲವು ರಸಗಳನ್ನು ತೋರಿಸುವ ಕಾಲಘಟ್ಟವನ್ನು ನಾವು ಗಮನಿಸುತ್ತೇವೆ.

ಇವುಗಳಲ್ಲಿ ಇನ್ನೂ ಸೂಕ್ಷ್ಮವಾಗಿ ನೋಡಬೇಕಾದದ್ದು ಅದರ ಭಾವಗಳು. ಏನು ಭಾವಗಳು ಅಂದರೆ ಇಡೀ ಒಂದು ಸನ್ನಿವೇಶವನ್ನೇ ತೆಗೆದುಕೊಂಡರೆ ಅದಕ್ಕೊಂದು ಸ್ಥಾಯೀಭಾವ, ಅದರಲ್ಲೊಂದು ಸಂಚಾರೀ ಭಾವ, ಅಥವಾ ಅದರಲ್ಲಿ ಒಮ್ಮೆ ಆಚೆ ಒಮ್ಮೆ ಈಚೆ ಹೋಗಿ ಬರುವ ವ್ಯಭೀಚಾರೀ ಭಾವ, ಹೀಗೆ ವ್ಯತ್ಯಸ್ಥವಾದಂತಹ ಭಾವಗಳು ಅಡಕವಾಗುವುದನ್ನು ನಾವು ನೋಡುತ್ತೇವೆ. ಇವುಗಳನ್ನೂ ಅವುಗಳ ರಸಸ್ವರೂಪಗಳನ್ನು ಅಧ್ಯಯನ ಮಾಡಿ ಅಭಿವ್ಯಕ್ತಿಗೊಳಿಸಬೇಕಾದದ್ದು ನಟರಾದವರ ಕರ್ತವ್ಯ. ಇಡೀ ಒಂದು ಸನ್ನಿವೇಶಕ್ಕೆ ಒಂದು ಸ್ಪಷ್ಟವಾದ ಸ್ಥಾಯೀ ಭಾವ ಇದ್ದರೆ ಆ ಸನ್ನಿವೇಶವನ್ನು ವಿಂಗಡಿಸಿ ಬಿಟ್ಟರೆ ಅದು ಚೂರು ಚೂರಾಗಿದ್ದಾಗ ಅದಕ್ಕೂ ಒಂದು ರಸದ ಭಾವ ಇದ್ದೇ ಇರುತ್ತದೆ. ಅದನ್ನು ಹುಡುಕಿ ತೆಗೆದು ಕೊಡುವುದು ನಟರಾದವರ ಹೊಣೆಗಾರಿಕೆಯಾಗಿರುತ್ತದೆ. ಒಂದು ಮೈಸೂರುಪಾಕನ್ನು ಇಡಿಯಾಗಿ ನೋಡುವಾಗ ಅದು ಏನೆಲ್ಲ ತೋರಿಸುತ್ತದೆಯೋ ಅದರ ಬಿಡಿಯಾದ ಭಾಗದಲ್ಲಿ, ಹತ್ತು ತುಂಡು ಮಾಡಿದರೆ ಒಂದೊಂದು ತುಂಡಿನಲ್ಲಿಯೂ ಹೇಗೆ ಆ ಮೈಸೂರುಪಾಕಿನ ಸ್ವಾದ ಸಿಹಿಯೇ ಇರುತ್ತದೆಯೋ ಹಾಗೆಯೇ ಅದು ಇರಬೇಕಾದದ್ದು ಅದರ ಆದು ಆತ್ಯಂತಿಕವಾದಂತಹ ಒಂದು ಚಿತ್ರಣ.
ಹಾಗಂತ ನಡೆದುಹೋದಂತಹ ಘಟನೆಯನ್ನು ನಾವು ಗಂಭೀರವಾಗಿ ಯೋಚಿಸಿ ಅಭಿನಯಿಸುವಾಗ ಆ ರಸದಲ್ಲಿ ವೈವಿಧ್ಯ ಉಂಟಾಗುವುದನ್ನು ನಾವು ಗಮನಿಸಬೇಕಾಗುತ್ತದೆ. ಉದಾಹರಣೆಗೆ ‘ಶ್ರೀಕೃಷ್ಣ ಸಂಧಾನ’ ಎನ್ನುವಂತಹ ಒಂದು ಆಖ್ಯಾನವನ್ನು ಒಬ್ಬ ನಟನಾದವನು ಅಭಿನಯಿಸಿ ತೋರಿಸಬೇಕಾಗುತ್ತದೆ. ಒಂದು ತಂಡ ಅಭಿನಯಿಸಿ ತೋರಿಸಬೇಕಾಗುತ್ತದೆ ಎನ್ನುವಲ್ಲಿ ಯಾವ ಭಾಗವನ್ನು ಆಯ್ಕೆ ಮಾಡಿಕೊಳ್ಳುತ್ತೇವೆ ಎಂದು ನೋಡಿದರೆ ಇಡೀ ಮಹಾಭಾರತದ ಒಂದು ಭಾಗ, ಆ ಒಂದು ಭಾಗದಲ್ಲಿ ಧರ್ಮರಾಜ ಕೃಷ್ಣನನ್ನು ಕರೆದು ಹಸ್ತಿನಾವತಿಗೆ ಕಳುಹಿಸಿ, ಅವನು ಪುನಃ ಪಾಂಡವರೆಡೆಗೆ ಬಂದು ಈ ಪ್ರಕರಣವನ್ನು ಹೇಳುವವರೆಗಿನ ಭಾಗವಾದರೆ, ಆ ಪ್ರಸಂಗದ ಸ್ಥಾಯೀಭಾವ ಯಾವುದು? ಅದರಲ್ಲಿ ಕೃಷ್ಣನು ಧರ್ಮರಾಜನೊಂದಿಗೆ ಸಂವಾದಿಸುವಾಗ, ದ್ರೌಪದಿಯೊಂದಿಗೆ ಸಮಾಲೋಚಿಸುವಾಗ, ತಾನು ಹಸ್ತಿನಾವತಿಗೆ ಹೋಗಿ ವಿದುರನಲ್ಲಿ ಮಾತನಾಡುವಾಗ, ಕುಂತಿಯಲ್ಲಿ ಮಾತನಾಡುವಾಗ, ಕೌರವನನ್ನು ಮಾತನಾಡಿಸುವಾಗ, ಕರ್ಣನನ್ನು ಮಾತನಾಡಿಸುವಾಗ – ಇಷ್ಟೆಲ್ಲ ಭಾವಗಳು ಎಷ್ಟೊಂದು ಚಿತ್ರಣಗಳು ವ್ಯತಿರಿಕ್ತವಾಗಿ ಬರುತ್ತವೆ ಇದನ್ನು ಗಮನಿಸಬೇಕು.

ಈ ಎಲ್ಲ ಒಂದೊಂದೂ ಸಣ್ಣ ಸಣ್ಣ ಉಪಭಾಗಗಳಲ್ಲಿಯೂ ಮಹತ್ತ್ವಪೂರ್ಣವಾದ ರಸಗಳ ಆವಿಷ್ಕಾರಗಳನ್ನು ನಾವು ಕಾಣುತ್ತೇವೆ. ಆ ಎಲ್ಲ ರಸಗಳ ವಿಷಯದಲ್ಲಿಯೂ ನಟರಾದವರು, ನರ್ತಕರು ತಮ್ಮ ಸಿದ್ಧಿಯನ್ನು ಹೊಂದಿರಬೇಕಾಗುತ್ತದೆ. ಸನ್ನಿವೇಶಕ್ಕೆ ನಿಷ್ಠರಾಗಿ ರಸಕ್ಕೆ ಪೋಷಕರಾಗಿ ಅದರ ಭಾವಗಳನ್ನು ಅನುಸರಿಸುತ್ತ ಪ್ರೇಕ್ಷಕರಿಗೆ ಅಥವಾ ಅದನ್ನು ಅನುಸಂಧಾನ ಮಾಡುವಂತಹ ಕಲಾಸೇವಕರಿಗೆ ಅದನ್ನು ವರ್ಗಾಯಿಸುವುದು ಬಹುದೊಡ್ಡ ಹೊಣೆಗಾರಿಕೆಯಾಗಿರುತ್ತದೆ. ಇದನ್ನು ಆರ್ಜಿಸಿಕೊಳ್ಳುವುದು ಸಣ್ಣ ಕೆಲಸವಲ್ಲ. ಶಾಲೆಯ ವಿದ್ಯಾಭ್ಯಾಸ ಮಾಡಿದ ಹಾಗೆ ಇದು ಅಲ್ಲ. ಇದರಲ್ಲಿ ತುಂಬ ತಾಳ್ಮೆ ಬೇಕು. ಇದರಲ್ಲಿ ತುಂಬ ಹಿಡಿತ ಬೇಕು. ಇದನ್ನೇ ಅಭಿನಯಿಸಿ ತೋರಿಸಿ ಅದೇ ಭಾವವನ್ನು ಸ್ಫುಟವಾಗಿ ವರ್ಗಾಯಿಸುವಾಗ ಅಪೂರ್ವವಾದಂತಹ ಶಕ್ತಿ ಬೇಕು. ಅನುಷ್ಠಾನ ಬೇಕು. ಯಾವಾಗ ಇದು ಪರಿಪೂರ್ಣವಾಗಿ ವರ್ಗಾಯಿಸಲ್ಪಟ್ಟಿತೋ ಆಗ ನೋಡುವ ನೋಟಕರ ಕಣ್ಣಿನಲ್ಲಿ ಇನ್ನೊಂದು ಲೋಕದ ಪ್ರವೇಶದ ಸ್ಥಿತಿ ಉಂಟಾಗುತ್ತದೆ. ಪ್ರತಿಯೊಬ್ಬರೂ ಆ ಕ್ಷಣವನ್ನು ಅನುಭವಿಸುವಾಗ ತಾವೇ ಒಬ್ಬ ನಟನಾಗಿ ಬಿಡುತ್ತಾರೆ. ಆ ಸನ್ನಿವೇಶದ ಭಾಗವಾಗಿ ಬಿಡುತ್ತಾರೆ. ಇದು ನಿಜವಾದ ಕಲಾವಿದನಿಗೆ ಸಂದ ಗೌರವವಾಗುತ್ತದೆ. ಇದನ್ನು ತೋರಿಸಿಕೊಟ್ಟ ಗುರುವಿಗೆ ಇದು ನಿಜವಾಗಿ ನೀಡಿದಂತಹ ಪಾರಿತೋಷಕವಾಗುತ್ತದೆ.

ಇದು ಒಂದು ನರ್ತನ ವಿಭಾಗದ ಚಿಂತನೆಯಾದರೆ ಸಂಗೀತಕ್ಕೆ ಬಂದಾಗಲೂ ಇದಕ್ಕಿಂತ ಭಿನ್ನವಾದ ಇನ್ನೊಂದು ರೂಪವನ್ನು ನಾವು ನೋಡಲಾರೆವು. ಇದರಲ್ಲಿ ಕೂಡ ಇದೇ ರೀತಿಯಾದಂತಹ ಚಿತ್ರಣವಿದೆ. ಯಾವ ಮೂರ್ತವಾದಂತಹ ಏಳು ಸ್ವರಗಳು ಈ ವಾತಾವರಣದಲ್ಲಿ ಸ್ಪಷ್ಟವಾಗಿದ್ದವೋ ಆ ಸ್ವರಗಳನ್ನು ಆಧರಿಸಿ, ಅದರ ಮೂಲವನ್ನು ಗ್ರಹಿಸಿ ಮೂರ್ತವಾದಂತಹ ಸ್ವರಗಳು ಅಮೂರ್ತವಾದಂತಹ ಚಿತ್ರಣದೊಂದಿಗೆ ಮೇಳವಿಸಬೇಕಾಂದತಹ ಒಂದು ಕಲ್ಪನೆಯನ್ನೇ ‘ಸಂಗೀತ’ ಅಂತ ಕರೆದರು. ಹಾಗಾದರೆ ನಾವೆಲ್ಲರೂ ಮಾತನ್ನಾಡುತ್ತೇವೆ. ನಾವೆಲ್ಲರೂ ಕೇಳುತ್ತೇವೆ. ಪ್ರಾಣಿಪಕ್ಷಿಗಳೂ ಕೂಡ ತಮ್ಮ ಅಭಿವ್ಯಕ್ತಿಯನ್ನು ಸ್ವರದ ಮೂಲಕ ಹೇಳುತ್ತವೆ. ಯಾವುದು ಹಿತ, ಯಾವುದು ಅಹಿತ ಹೇಗೆ ಗುರುತಿಸುವುದು? ಬೆಳ್ಳಂಬೆಳಿಗ್ಗೆ ಕೂಗುವ ಕೋಗಿಲೆಯ ಸ್ವರ ‘ಪಂಚಮ’ದ ಸ್ವರ ಎಂದಾಯಿತು. ಯಾರು ಹೇಳಿದರು? ಯಾಕೆ ಕೂಗುವ ಕಾಗೆಯ ಸ್ವರ ‘ದೈವತ’ವಾಗಲಿಲ್ಲ? ಯಾಕೆ ಕೂಗುವ ನಾಯಿಯ ಶಬ್ದ ‘ನಿ’ ಆಗಲಿಲ್ಲ?

ಇದನ್ನು ನೋಡುವಾಗ ಕೇಳುವ ಅಥವಾ ಸಿದ್ಧಪಡಿಸಿದ ಒಂದು ಸೂಕ್ಷ್ಮಾತಿ ಸೂಕ್ಷ್ಮವಾದಂತಹ ಸ್ವರವೂ ಇನ್ನೊಂದು ಸ್ಪಷ್ಟವಾದಂತಹ ಸ್ವರದೊಂದಿಗೆ ತಲ್ಲೀನವಾದಾಗ, ಐಕ್ಯವಾದಾಗ ಆಗುವ ಆ ಅನಿರ್ವಚನೀಯವಾದ ಆನಂದವನ್ನು ಶೃತಿ ಅಂತ ಕರೆದರು. ಅದನ್ನು ಯಾವ ಋಷಿಮುನಿಗಳು, ಯಾವ ಸಾಧಕರು ತಮ್ಮ ಮನಸ್ಸಿನಲ್ಲಿ ಹಿಡಿದಿಟ್ಟುಕೊಂಡರೋ ಅದನ್ನು ಸ್ಮೃತಿ ಅಂತ ಕರೆದರು. ಶೃತಿಯೂ ಸ್ವರವೂ ಮೇಳವಿಸಿಕೊಂಡು ಯಾವ ಅಪೂರ್ವವಾದಂತಹ ಒಂದು ಶಕ್ತಿಯ ಗುಚ್ಛ ಸ್ಪಷ್ಟವಾಯಿತೋ ಅದನ್ನು ಸ್ವರಗುಚ್ಛಗಳು ಅಂತ ಕರೆದರು. ಹೀಗೆ ಸೃಷ್ಟಿಯಾದಂತಹ ಹಲವಾರು ಸ್ವರಗಳನ್ನು ಏಳು ಸ್ವರಗಳಲ್ಲಿ ಹಿಡಿದು ಉಳಿದೆಲ್ಲವೂ ಅದರ ಆಚೆ ಅಥವಾ ಈಚೆ ಅದರ ಅಕ್ಕ ಪಕ್ಕ ಇರುವಂತಹ ಸ್ಥಿತಿಯನ್ನು ಕಲ್ಪಿಸಿಕೊಂಡಿದ್ದರಿಂದಲೇ ನಮ್ಮ ಸಂಗೀತ ಕ್ಷೇತ್ರವು ಏಳು ಸ್ವರಗಳ ಭದ್ರಬುನಾದಿಯಿಂದ ನಿರ್ಮಾಣಗೊಂಡಂತಾಯಿತು.

ಇದನ್ನು ಹುಡುಕುತ್ತ ಈ ಸ್ವರಗಳು ಯಾವೆಲ್ಲ ಪರಸ್ಪರ ಸೌಹಾರ್ದ ಭಾವವನ್ನು ಪ್ರಚೋದಿಸಬಲ್ಲದೋ ಯಾವ ವಿನೂತನ ಆನಂದವನ್ನು ಕೊಡುವುದಕ್ಕೆ ಕಾರಣೀಭೂತವಾಗಬಲ್ಲದೋ ಅಂತಹ ಸ್ವರಸಾಧ್ಯತೆಗಳ ಸಂಕಲನವೇ ಒಂದು ರಾಗವಾಯಿತು. ಹಾಗೆ ಉಂಟಾಗುವಂತಹ ರಾಗವು ಅದನ್ನು ಆದಿಯಿಂದ ಇನ್ನೊಂದು ಹಂತದವರೆಗೆ ಏರಿಸಿಕೊಂಡು ಹೋಗುವ ಕ್ರಮವನ್ನು, ಅಲ್ಲಿಂದ ಪುನರಪಿ ಅದರ ಮೂಲಸ್ಥಾನಕ್ಕೆ ತಂದು ನಿಲ್ಲಿಸುವಂತಹ ವಿಧಾನವನ್ನು ರೂಪಿಸುವಾಗ ‘ಆರೋಹಣ’, ‘ಅವರೋಹಣ’ ಚಿತ್ರಣವಾಯಿತು. ಹೀಗೆ ಆರೋಹಣ ಮತ್ತು ಅವರೋಹಣದ ಕ್ರಮದಲ್ಲಿ ಸ್ವರದ ಸ್ಥಾಯಿಯನ್ನು ಗುರುತಿಸಲಾಯಿತು. ಇದನ್ನು ತಪ್ಪಿದರೆ ‘ಅವನು ರಾಗವನ್ನು ತಪ್ಪಿದ, ಶೃತಿಯನ್ನು ಬಿಟ್ಟ’ ಎಂದು ಹೇಳುವ ಮಾತುಗಳನ್ನು ನಾವು ಕೇಳುತ್ತೇವೆ. ಇದಕ್ಕೊಂದು ಆಕೃತಿ ಸ್ಪಷ್ಟವಾದದ್ದರಿಂದ ಇದಕ್ಕೊಂದು ಪರಿವರ್ತನೆಯ ವಿಧಾನ ಸ್ಪಷ್ಟವಾದದ್ದರಿಂದ ಇದನ್ನು ಸಂಸ್ಕರಿಸಲಾಯಿತು ಎಂದರು.

ಇನ್ನೊಂದು ಬಹಳ ರೋಚಕವಾದ ವಿಚಾರವನ್ನು ತಾವು ಗಮನಿಸಬಹುದು ಏನೆಂದರೆ ಒಂದೇ ರಾಗವನ್ನು ಅದಕ್ಕೊಂದು ಚೌಕಟ್ಟನ್ನು ಹಾಕಿದ್ದನ್ನು ನಾವು ಕಾಣುತ್ತೇವೆ. ಅದನ್ನು ಎಲ್ಲೆಲ್ಲಿ ವಿಸ್ತರಿಸಿ ಯಾವ್ಯಾವ ರೀತಿಯಲ್ಲಿ ಅದು ಸಂಚರಿಸಬಹುದು ಅಂತ ಹೇಳಿದ್ದನ್ನೂ ನಾವು ಕಾಣುತ್ತೇವೆ. ಆದರೆ ಹಾಡುವ ಗಾಯಕನ ಮನೋಧರ್ಮವೂ ಸ್ವರಧರ್ಮವೂ ಮೇಳವಿಸಿ ಅದು ಉಂಟು ಮಾಡುವ ಪ್ರಭಾವವು ಮಾತ್ರ ಪ್ರತ್ಯೇಕವಾದ ಪ್ರಭಾವನ್ನೇ ತೋರಿಸುತ್ತದೆ ಎನ್ನುವುದನ್ನು ನಾವು ಗಮನಿಸಬೇಕು. ಉದಾಹರಣೆಗೆ ಭಾರತರತ್ನ ಪೂಜ್ಯ ಭೀಮಸೇನ ಜೋಶಿಯವರು ಒಂದು ರಾಗವನ್ನು ಪ್ರಸ್ತುತ ಪಡಿಸಿದರೆ ಅವರ ಮನೋಧರ್ಮದಿಂದಾಗಿ, ಅವರು ತಮ್ಮ ಮನೋಧರ್ಮವನ್ನು ಇನ್ನೊಂದು ಸ್ವರಧರ್ಮದಲ್ಲಿ ಆರೋಪಿಸಿದ ಸಾಧ್ಯತೆಯಿಂದಾಗಿ ಆ ರಾಗದ ಕಾಂತಿ ಬೇರೆಯಾಯಿತು. ಅದನ್ನೇ ಇನ್ನೋರ್ವ ಭಾರತರತ್ನ ಪೂಜ್ಯರಾದ ಎಂ. ಎಸ್. ಸುಬ್ಬುಲಕ್ಷ್ಮಿಯವರು ಹಾಡುವಾಗ ಅದು ಇನ್ನೊಂದು ಕಾಂತಿಯನ್ನು ಕಂಡಿತು. ಎರಡೂ ಸ್ವರನಿಷ್ಠವೇ. ಎರಡೂ ಸ್ವರಧರ್ಮನಿಷ್ಠವೇ. ಎರಡೂ ಭಾವನಿಷ್ಠವೇ. ಭಾವಪ್ರಚೋದಕವೇ. ರಸನಿಷ್ಠವೇ. ಆದರೂ ಯಾವ ದೇಹಧರ್ಮದ, ಯಾವ ಮನೋಧರ್ಮದ, ಯಾವ ಅನ್ವೇಷಕೀ ಬುದ್ಧಿಯಿಂದ ಅದನ್ನು ಕಟ್ಟಲಾಯಿತೋ ಆ ವಿಚಾರ ಪ್ರತ್ಯೇಕವಾಗಿ ಇದ್ದಿದ್ದರಿಂದ ಅದರ ಕಾಂತಿ ಮತ್ತು ಅದರ ಪ್ರಭಾವ, ಅದರ ತೇಜಸ್ಸು ಮತ್ತು ಅದು ಉಂಟುಮಾಡುವಂತಹ ಪ್ರಭಾವ ಇವೆರಡೂ ವ್ಯತ್ಯಾಸವಾಯಿತು. ವ್ಯತ್ಯಾಸವಾಗಿ ಅಪಚಾರವಾಗಲಿಲ್ಲ. ಈ ಲೋಕಕ್ಕೆ ಹೊಸ ಸಾಧ್ಯತೆಯ ಒಂದು ಕಾಣ್ಕೆಯನ್ನು ಅದು ಕೊಟ್ಟಿತು.

ಆದುದರಿಂದಲೇ ಈ ಹೊತ್ತು ಒಂದೇ ರಾಗವನ್ನು ಎಷ್ಟೇ ಜನ ಹಾಡುತ್ತ ಬಂದರೂ, ಒಂದೇ ಗುರುವಿನ ಶಿಷ್ಯರಾಗಿ ಅದೆಷ್ಟೋ ಜನ ಅದನ್ನು ಪ್ರಸ್ತುತ ಪಡಿಸುತ್ತ ಬಂದರೂ ಪ್ರತಿಯೊಂದು ಕೂಡ ಪ್ರತ್ ಪ್ರತ್ಯೇಕವಾದಂತಹ ಕಾಂತಿಯನ್ನು ತೇಜಸ್ಸನ್ನು ಕೊಡುತ್ತಲೇ ಬಂದಿತು. ಕೊಡುವುದಕ್ಕೆ ಇನ್ನೂ ಅದೆಷ್ಟೋ ಸಾಧ್ಯತೆಗಳು ಇವೆ ಅನ್ನುವುದನ್ನು ತೋರಿಸುತ್ತಲೇ ಬಂದಿತು.

ಇನ್ನು ಈ ಸಂಗೀತ ಪ್ರಪಂಚದಲ್ಲಿ ನಾವು ಕೇಳುವ ಉತ್ತರಾದಿ, ದಕ್ಷಿಣಾದಿ ಎಂಬ ವರ್ಗವೋ ಹಿಂದೂಸ್ತಾನೀ, ಕರ್ನಾಟಕೀ ಎನ್ನುವ ಪ್ರಬೇಧವೋ ಇವುಗಳನ್ನು ಅವಲೋಕಿಸುತ್ತ ಸಾಗಿದರೆ ಅದು ತನ್ನ ಸ್ವರೂಪದಿಂದಾಗಿ ಭಿನ್ನತೆಯನ್ನು ಕಂಡಿದೆ. ಕಲಾವಿದರ ಶಕ್ತಿಯಿಂದಾಗಿ ಅದು ತನ್ನ ದಿವ್ಯತೆಯನ್ನು ವೈಭವವನ್ನು ಮನಗಂಡಿದೆ. ಇದೊಂದು ದೊಡ್ಡ ವಿಧಾನ. ಇದೊಂದು ದೊಡ್ಡ ವಿಭಾಗ. ಆದರೆ ಈ ಎರಡರ ಮೂಲವಾದಂತಹ ಉದ್ದೇಶ ಆನಂದವನ್ನು ಹೊಂದುವುದು, ಆನಂದವನ್ನು ಕೊಡುವುದು. ಯಾವುದು ತನ್ನದೋ ಅದನ್ನು ಇನ್ನೊಬ್ಬರಿಗೆ ಹಂಚುವ, ಯಾವುದನ್ನು ಹಂಚುತ್ತ ಹಂಚುತ್ತ ತಾನೂ ಆನಂದದ ಇನ್ನೊಂದು ಮಟ್ಟವನ್ನು ಮುಟ್ಟುವ ಸಾಧ್ಯತೆಯನ್ನು ತೋರ್ಪಡಿಸುವ ಕಾರ್ಯವಿದೆಯೋ ಅದು ಸರ್ವಶ್ರೇಷ್ಠವಾದದ್ದು. ಅದು ಸಾಧ್ಯವಾಗುವುದು ಈ ಸಾಂಸ್ಕಂತಿಕ ಮಾರ್ಗದಿಂದ. ಸಂಗೀತದ ಮಾರ್ಗದಿಂದ. ಅಥವಾ ನೃತ್ಯದ ಮಾರ್ಗದಿಂದ.

ಇದನ್ನು ಅರ್ಥೈಸಿಕೊಂಡು ಈ ಮಹೋನ್ನತ ಉದ್ದೇಶದೆಡೆಗೆ ಸಾಗುವ ಎಲ್ಲರೂ ಕೂಡ ಅಭಿನಂದಾನರ್ಹರು. ಪ್ರತಿಯೊಬ್ಬರೂ ಈ ವಿಷಯದಲ್ಲಿ ತಮ್ಮ ದಾರಿಯನ್ನು ಕಂಡುಕೊಂಡು ಕಾರ್ಯ ಮಾಡುವುದು ನಿರಂತರ ನಡೆಯುವ ಒಂದು ಯಜ್ಞ. ಸಂಗೀತವನ್ನು ನಿರಂತರ ನಡೆಯುವ ಶ್ರಾವ್ಯ ಯಜ್ಞ ಅಂತ ಹೇಳಬಹುದು. ನರ್ತನವನ್ನು ಲೋಚನ ಯಜ್ಞ ಅಂತಲೇ ಗುರುತಿಸಬಹುದು. ನೃತ್ಯವನ್ನು ಲೋಚನ ಯಜ್ಞ ಅಂತ ಗುರುತಿಸುವುದನ್ನು ಭರತಮುನಿಯೇ ಉಲ್ಲೇಖಿಸಿದ್ದಾನೆ. ಹೀಗೊಂದು ಶ್ರೇಷ್ಠವಾದಂತಹ ಕಾರ್ಯದಲ್ಲಿ ನಿರತವಾಗಿರುವ ಎಲ್ಲ ಸಂಗೀತ ಶಾಲೆಗಳು, ಅದರಲ್ಲಿ ಒಂದು ನಿಸ್ಪ್ರಹ ಪರಮಾನಂದವನ್ನು ಇಟ್ಟು ದುಡಿಯುವ ಶಿಕ್ಷಕರು, ಅಲ್ಲಿಗೆ ತಮ್ಮ ಮಕ್ಕಳನ್ನು ಕಳುಹಿಸುವ ಒಂದು ಸಾತ್ವಿಕ ಮನೋಭಾವದ ಪಾಲಕರು, ಪೋಷಕರು ತಾವು ತಮ್ಮ ಅಭ್ಯಾಸದ ಒತ್ತಡಗಳ ನಡುವೆಯೂ ಯಾವುದೋ ಒಂದು ಆಸಕ್ತಿಯಿಂದ ಈ ಕರ್ತವ್ಯದಲ್ಲಿ ನಿರತರಾಗಿರುವವರು ಭುವನದ ಭಾಗ್ಯ. ಭವಿಷ್ಯದ ಯೋಗ. ಹಾಗೂ ಈ ಸಾಂಸ್ಕೃತಿಕ ಪ್ರಸಕ್ತಿ ಸಾವಿರ ಕಾಲಕ್ಕೂ ಪ್ರಸ್ತುತ.

Author Details


Srimukha

Leave a Reply

Your email address will not be published. Required fields are marked *