ಶ್ರಮದಷ್ಟೇ ಮುಖ್ಯ ಮಾಡುವ ಕ್ರಮ!

ಅಂಕಣ ಇಳೆಯ ಹೊಳೆ : ಕವಿತಾ ಧನಂಜಯ ಜೋಯ್ಸ್

ಹೀಗೊಂದು ಕಾಡಿದ ಪ್ರಶ್ನೆ. ಕೆಲಸವನ್ನು ಕಷ್ಟಪಟ್ಟು ಮಾಡ್ತೀವಾ? ಇಷ್ಟಪಟ್ಟು ಮಾಡ್ತೀವಾ? ಕೇವಲ ಕಷ್ಟಪಟ್ಟು ಮಾಡಿದ ಕೆಲಸ ಯಶಸ್ಸು ಕಾಣತ್ತ?


  
ಕಷ್ಟಪಟ್ಟು ಕೆಲಸ ಮಾಡಿದರೆ ಉದ್ಧಾರ ಆಗಬಹುದು. ಕಷ್ಟಪಟ್ಟು ಓದಿದ್ರೆ ಒಳ್ಳೆ ಮಾರ್ಕ್ಸ್ ಬರತ್ತೆ. ಬೆಳಗ್ಗೆಯಿಂದ  ಮನೆ ಕೆಲಸನ ಪಾಪ, ಕಷ್ಟಪಟ್ಕೊಂಡು ಮಾಡತಾನೇ ಇದಾಳೆ. ಕಷ್ಟ ಪಟ್ಟರೆ ಸುಖ. ಹೀಗೆ ಕಷ್ಟ ಎಂಬ ಪದಗಳ ಸರಮಾಲೆ. ಅಯ್ಯೋ ದೇವರೇ ಕಷ್ಟ ಕೊಡಬೇಡಪ್ಪ ಅಂತ ಬೇಡಿಕೊಳ್ಳೋದೂ ನಾವೇ. ಇಲ್ಲಿ ಎಲ್ಲ ಕೆಲಸವನ್ನು ಕಷ್ಟಪಟ್ಟು ಮಾಡಬೇಕು ಅನ್ನೋದೂ ನಾವೇ. ಹಾಗಾದ್ರೆ ಕಷ್ಟ ಅನ್ನೋದು ದೇಹಕ್ಕಾ? ಮನಸ್ಸಿಗಾ? ಬುದ್ದಿಗಾ?


ಕಷ್ಟಪಟ್ಟು, ಬೆವರು ಸುರಿಸಿ ದುಡಿದವರೆಲ್ಲ ಒಳ್ಳೇ ಸಂಪಾದಿಸೋರೆ ಆಗಿದ್ರೆ ಯಜಮಾನನಿಗಿಂತ ಹೆಚ್ಚು ಕಷ್ಟಪಡೋನು ಕೆಲಸಗಾರನೇ ಅಲ್ವಾ? ದಿವಾನನಿಗೆ ಬುದ್ಧಿಗೆ ಕಸರತ್ತು, ಜವಾನನಿಗೆ ದೇಹಕ್ಕೆ ಕಸರತ್ತು.


ಇಲ್ಲೇ ಹತ್ತಿರದ ಒಂದು ಹಳ್ಳಿ. ಅಣ್ಣ ತಮ್ಮ ಇಬ್ಬರಿಗೂ ಅಕ್ಕಪಕ್ಕ ಜಮೀನು. ಅಣ್ಣ ತೋಟ-ಗದ್ದೆ ಅಂತ  ಕಷ್ಟಪಟ್ಟು ದುಡಿಯೋ ಮನುಷ್ಯ. ಬೆಳಗ್ಗೆಯಿಂದ ಸಂಜೆ ವರೆಗೂ ತೋಟದಲ್ಲೇ ಇರುತಿದ್ದ. ತಾನೇ ಸ್ವಂತ ಕೆಲಸ ಮಾಡಿಕೊಳ್ಳುತ್ತಿದ್ದ. ಆದರೆ ತಮ್ಮ ಹಾಗಲ್ಲ. ಇರುವಷ್ಟು ಕೆಲಸವನ್ನ ಬೇಗ ಮುಗಿಸಿ ಬೇರೆ ಏನಾದರು ಉಪಉದ್ಯೋಗ ಮಾಡೋಣ ಅನ್ನೋ ವ್ಯಕ್ತಿ. ಇರೋ ನೀರನ್ನು ಅಗತ್ಯಕ್ಕಿಂತ ಹೆಚ್ಚು ಅಡಿಕೆ ಬೆಳೆಗೆ ಹಾಯಿಸಿ ದಿನವಿಡೀ ತೋಟದಲ್ಲಿ ದುಡಿದು ಬರುತ್ತಿದ್ದ ಅಣ್ಣ. ಇರೋ ನೀರನ್ನ ಹೇಗೆಲ್ಲ ಬೇರೆ ಬೇರೆ ಬೆಳೆಗೆ ಉಪಯೋಗಿಸಿ ಕಮ್ಮಿ ಕೆಲಸದಲ್ಲಿ, ಕಮ್ಮಿ ಜಾಗದಲ್ಲಿ ಹೆಚ್ಚು ಲಾಭ ಪಡೆಯಬಹುದು ಅಂತ ಯೋಚಿಸುತಿದ್ದ ತಮ್ಮ. ಹನಿ ನೀರಾವರಿ ಮೂಲಕ ಅಡಿಕೆ ಜೊತೆ ಇನ್ನು ನಾಲ್ಕಾರು  ಉಪಬೆಳೆಗಳನ್ನು ಬೆಳೆದು ಹೆಚ್ಚು ಲಾಭ ಪಡೆದು ಕೆಲಸಗಾರರ ಮೂಲಕ ಹೆಚ್ಚು ಅಭಿವೃದ್ಧಿ ಕೆಲಸವನ್ನು ಮಾಡಿಸಿ ತಾನು ಸ್ವಲ್ಪ ಆರಾಮಾಗಿ ಇರುತಿದ್ದ ತಮ್ಮ. ಇದೆಲ್ಲ ನೋಡಿ ಅಣ್ಣನಿಗೆ ಅಸಮಾಧಾನ. ಒಂದೇ ತರ ಜಮೀನು. ಅಷ್ಟೇ ನೀರಾವರಿ. ಅವನು ಅರ್ಧದಿನ ಊರು ಊರು ಸುತ್ತಿಕೊಂಡು ಆರಾಮಾಗಿ ಇರುವನು. ನಾನು ಮಾತ್ರ ಹೀಗೆ ಎಷ್ಟಢ ದುಡಿದರೂ ಇಷ್ಟೇ. ನನ್ನ ಹಣೆಬರಹ ಸರಿ ಇಲ್ಲ ಅನ್ನೋ ಭಾವ. ಬುದ್ದಿಗೆ ಕಷ್ಟಕೊಡದೇ ದೇಹಕಷ್ಟೇ ಶ್ರಮ ಕೊಟ್ಟು ಅಪ್ಪ ನೆಟ್ಟ ಅಡಿಕೆ ಮರವನ್ನೇ ಬೆಳೆಸಿದ ಅಣ್ಣ. ಇರೋ ತೋಟದಲ್ಲೇ ಇನ್ನೂ ಏನಾದರೂ ಹೊಸತನ ತರಬಹುದೇನೋ ಅಂತ ಯೋಚಿಸುತ್ತಿದ್ದ ತಮ್ಮ.
 


ಯಾರು ಯಾವ ಕೆಲಸವನ್ನು ಬೇಕಾದರು ಕಷ್ಟಪಟ್ಟು ಮಾಡಿಬಿಡಬಹುದು. ಆದರೆ ಅದನ್ನ ಕಮ್ಮಿ ಸಮಯದಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಮಾಡೋದು ಹೇಗೆ ಅನ್ನೋದು ಬುದ್ಧಿಗೆ ಕಸರತ್ತು ಕೊಟ್ಟು ಅದರಲ್ಲೇ ಪಳಗಿದವರಿಗೆ ಮಾತ್ರ ಸಾಧ್ಯ. ಬೆಳಗ್ಗೆಯಿಂದ ರಾತ್ರಿ ವರೆಗೆ ಕಷ್ಟಪಟ್ಟು ಒಬ್ಬಳು ಓದಿದ್ದೇ ಓದಿದ್ದು. ಇನ್ನೊಬ್ಬಳು ಕೆಲವು ಗಂಟೆ ಅಷ್ಟೇ ಓದಿದ್ದು. ಅಂಕ ಮಾತ್ರ ಕಮ್ಮಿ ಸಮಯ ಓದಿದವಳಿಗೆ. ಇಲ್ಲೊಬ್ಬ ಗೃಹಿಣಿ ಬೆಳಗ್ಗೆಯಿಂದ ಅಡುಗೆಮನೆ ಕೆಲಸ, ಮನೆ ಕೆಲಸ ಮಾಡ್ತಾನೇ ಇದ್ಲು. ಯಾವಾಗ ಕೇಳಿದರೂ, ಅಯ್ಯೋ ಮನೆ ಕೆಲಸನೇ ಮುಗಿಯಲ್ಲಾರಿ ಅಂತ ಉದ್ದ ಪಟ್ಟಿ ಕೊಡ್ತಾ ಇದ್ದಳು. ಅದೇ ಕೆಲಸವನ್ನು ಇನ್ನೊಬ್ಬರು ಅವಳಿಗಿಂತ ಬೇಗ,
ಚನ್ನಾಗಿ ಮಾಡಿ ಮುಗಿಸಬಲ್ಲರು. ಅದು ಹೇಗೆ ಸಾಧ್ಯ? ಯಾವ  ಕೆಲಸ ಆದಮೇಲೆ ಯಾವ ಕೆಲಸ, ಯಾವ ಕೆಲಸದ ಜೊತೆ ಯಾವ ಕೆಲಸ ಮಾಡಿ ಮುಗಿಸಿದರೆ ಬೇಗ ಆಗತ್ತೆ ಅನ್ನೋದು ಒಂದು ವಿದ್ಯೆ. ಅದಕ್ಕೆ ಕಷ್ಟ ಪಡಬೇಕಾಗಿಲ್ಲ. ಇಷ್ಟಪಟ್ಟು ಅದನ್ನೇ ಮೆಚ್ಚಿಕೊಂಡು ಮಾಡಿದ್ರೆ ಆಯ್ತು. ಅಯ್ಯೋ  ಮಾಡಿ ಮುಗಿಸಬೇಕಲಪ್ಪ ಅಂದ್ರೆ ಎಷ್ಟೇ ಹೊತ್ತು ಆದ್ರೂ ಆ ಕೆಲಸ ಅಲ್ಲೇ ಇರತ್ತೆ.


ಇದೆಲ್ಲ ಗಮನಿಸಿದಾಗ ಕಷ್ಟ ಅನ್ನೋದು ಬರಿ ದೇಹಕ್ಕೆ ಮಾತ್ರವಲ್ಲ. ಅದು ಬುದ್ಧಿಗೂ, ಮನಸ್ಸಿಗೂ ಸಂಬಂಧಿಸಿದ್ದು. ಬರೀ ಕಷ್ಟಪಟ್ಟು ದೇಹಕ್ಕೆ ಶ್ರಮವಹಿಸಿ ದುಡಿಯೋದು ಮಾತ್ರ ದುಡಿಮೆಯಲ್ಲ.  ಬುದ್ಧಿನೂ ಉಪಯೋಗಿಸಿ ಕಮ್ಮಿ ಸಮಯವನ್ನು ಹೆಚ್ಚು ಚೆನ್ನಾಗಿ ಉಪಯೋಗಿಸಿಕೊಳ್ಳೋದನ್ನ ಕಲಿತುಕೊಳ್ಳಬೇಕು. ನಾವು ಮಾಡೋ ಪ್ರತಿ ಕೆಲಸ ಒಂದು ಪರೀಕ್ಷೆ. ಅದೆಷ್ಟು ನಾಜೂಕಾಗಿ, ಅದೆಷ್ಟು ಸಲೀಸಾಗಿ ಬರಿತೀವಿ ಅನ್ನೋದರ ಮೇಲೆ ಅದರ ಫಲಿತಾಂಶ.


ಮಾಡೋ ಪ್ರತಿ ಕೆಲಸದಲ್ಲೂ ಪ್ರತಿ ಹಂತದಲ್ಲೂ ಅದರ ಬಗ್ಗೆ ಪ್ರೀತಿ ಬೇಕು. ಆ ಕೆಲಸವನ್ನು ಇನ್ನಷ್ಟು ಚಂದ ಹೇಗೆ ಮಾಡಲು ಸಾಧ್ಯ ಎಂಬ ಅನ್ವೇಷಣೆ ಬೇಕು. ನಮ್ಮೊಳಗೆ ಒಬ್ಬ ರೈತ, ವಿಜ್ಞಾನಿ, ಕವಿ ,ಇಂಜಿನಿಯರ್ ಎಲ್ಲ ಇರುವರು. ಸಮಯಕ್ಕೆ ತಕ್ಕಂತೆ ಅವರನ್ನು ಉಪಯೋಗಿಸಿಕೊಳ್ಳುವ ಕಲೆ ನಮ್ಮದು.

Author Details


Srimukha

Leave a Reply

Your email address will not be published. Required fields are marked *