ಶ್ರೀ ಕ್ಷೇತ್ರ ಗಯಾ

ಅಂಕಣ ಆ ಕಣ್ಣಿಂದ : ಮೋಹನ ಭಾಸ್ಕರ ಹೆಗಡೆ ಹೆರವಟ್ಟ

ಬಿಹಾರ ರಾಜ್ಯದಲ್ಲಿ ಪಾಟ್ನಾದಿಂದ ಸುಮಾರು 200 ಕಿ.ಮೀ. ದೂರ ಇರುವ ಪುಣ್ಯಕ್ಷೇತ್ರ ಗಯಾ. ಈ ಕ್ಷೇತ್ರ ಕಾಲಶ್ರಾದ್ಧಕ್ಕೆ ಹೆಸರಾಗಿದೆ. ಇಲ್ಲಿ ಹಲವಾರು ಶಕ್ತಿ ಸ್ಥಳಗಳಿವೆ. ಬುದ್ಧಗಯಾ ಎಂಬ ಪ್ರಸಿದ್ಧ ಸ್ಥಳವೂ ಇಲ್ಲಿಯೇ ಇದೆ. ಈ ಕ್ಷೇತ್ರ ದರ್ಶನದ ಯೋಗಭಾಗ್ಯ ಸದ್ಯಕ್ಕೆ ಒದಗಿ ಬಂದಿದ್ದರಿಂದ, ಅದನ್ನು ವಿಶೇಷವಾಗಿ ನೋಡಿದ್ದರಿಂದ ಇಲ್ಲಿ ಹಂಚಿಕೊಳ್ಳಬಯಸಿದೆ.

ನಮ್ಮ ಸ್ನೇಹಿತರಾದ ಜಗದೀಶ ಪೈ, ಅಮೋಘ ಹಾಗೂ ಸುದೀಪ್ತ ಘೋಷರೊಂದಿಗೆ ಕಾರ್ಯಾರ್ಥ ಈ ಪುಣ್ಯಕ್ಷೇತ್ರದ ಸಮೀಪ ಹೋಗಿದ್ದೆ. ಹಾಗಾಗಿ ಈ ತೀರ್ಥಕ್ಷೇತ್ರವನ್ನು ದರ್ಶಿಸುವ ಮನಸ್ಸು ಮಾಡಿದೆವು.

 

ಅಲ್ಲಿ ಉತ್ತರಾದಿ ಮಠವಿದೆ. ಅಲ್ಲಿ ಮಠವನ್ನು ಘನ ತಪಸ್ವಿಗಳಾದ, ರುದ್ರಾಂಶ ಸಂಭೂತರೆಂದೇ ಭಾವಿಸಲಾದ ಶ್ರೀ ಶ್ರೀ ವಿದ್ಯಾದೀಶ ಶ್ರೀಪಾದಂಗಳವರು ಸ್ಥಾಪಿಸಿದರು. ಸುಮಾರು 400 ವರ್ಷಗಳಿಗೂ ಹಿಂದೆ. ಈಗ ಆ ಮಠದಲ್ಲಿದ್ದು ಅಲ್ಲಿಯ ಅರ್ಚನೆಯನ್ನು ನಡೆಸಿಕೊಂಡು ಬರುತ್ತಿರುವವರು ಮೂಲತಃ ಧಾರವಾಡದ ಬಾಗಲಕೋಟೆಯವರಾದ ವೇ.ಮೂ. ಮುರಳೀಧರ ಆಚಾರ್ಯರು. ಅವರು ತುಂಬ ಶ್ರದ್ಧೆ-ಭಕ್ತಿಯಿಂದ ವಿಷ್ಣುಪಾದದ ಪೂಜೆ-ಸೇವೆ ಸಲ್ಲಿಸುತ್ತಾ ಬರುತ್ತಿದ್ದಾರೆ. ಅನ್ನದಾನ – ಅತಿಥಿ ಸತ್ಕಾರವನ್ನು ನಿಸ್ಪೃಹವಾಗಿ ಮಾಡಿಕೊಂಡು ಬರುತ್ತಿದ್ದಾರೆ. ಸದಾ ಅಧ್ಯಯನಶೀಲರಾಗಿ ಪ್ರವಚನಗಳನ್ನು ಮಾಡುತ್ತಾ, ಭಕ್ತರ ಮನಸ್ಸಿಗೆ ಸಂತೋಷ ಉಂಟುಮಾಡುತ್ತಾರೆ. ಕಟ್ಟುನಿಟ್ಟಿನ ಆಚರಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು, ತಮ್ಮ ಪರಂಪರೆಯನ್ನು, ಗುರುಗಳ ಆದೇಶವನ್ನು ಪರಿಪಾಲಿಸಿಕೊಂಡು ಬರುತ್ತಿದ್ದಾರೆ.

 

ನಮಗೆ ನಮ್ಮ ಅಮೋಘರಿಂದ ಪರಿಚಿತರಾದ ಈ ವಿದ್ವಾಂಸರಿಗೆ ವಂದಿಸಿ ನಮ್ಮೆಲ್ಲರಿಗೆ ಅವರೇ ಹೇಳಿದ ಗಯಾದ ಒಂದು ದೃಷ್ಟಾಂತವನ್ನು ನಿರೂಪಿಸಬಯಸುತ್ತೇನೆ.

 


ಭಗವಾನ್ ವಿಷ್ಣುವು ಈ ಭೂಮಿಯ ಮೇಲೆ ಮೊದಲು ಪಾದವಿಟ್ಟಿದ್ದು ಇಲ್ಲಿಯೇ. ಹಾಗಾಗಿಯೇ ಇದಕ್ಕೆ ವಿಷ್ಣುಪಾದ ಎಂದು ಹೆಸರು. ಜಗತ್ಪಾಲಕನಾದ ಶ್ರೀವಿಷ್ಣುವು ನಿಕ್ಷೇಪಿಸಿದ ಪಾದವನ್ನು ಎಲ್ಲರೂ ಕೈಯಾರೆ ಮುಟ್ಟಿ ಪೂಜಿಸುತ್ತಾರೆ. ಈ ಕ್ಷೇತ್ರ ಫಲ್ಗುಣೀ ನದಿಯ ತಟದಲ್ಲಿದೆ. ಇಲ್ಲಿ ಕಾಲಶ್ರಾದ್ಧ ಶ್ರೇಷ್ಠ. ಪಿತೃಗಳು ಇಲ್ಲಿ ನೀಡುವ ತರ್ಪಣದಿಂದ ಸಂತೃಪ್ತಿ ಹೊಂದುತ್ತಾರೆ ಎಂಬುದು ನಂಬಿಕೆ. ಯಾಕೆಂದರೆ ಸ್ವತಃ ದಶರಥನು ತೃಪ್ತನಾದದ್ದು ಇಲ್ಲಿಯೇ. ಆ ಸಂದರ್ಭ ಹಲವು ವಿಸ್ಮಯಗಳೂ ಇಲ್ಲಿ ನಡೆದಿವೆ. ಸೀತಾಮಾತೆಯ ಶಾಪಕ್ಕೂ ವರಕ್ಕೂ ಇಲ್ಲಿ ಕಾರಣವಾದ ಸಂಗತಿಗಳಿವೆ.

 

ಶ್ರೀರಾಮದೇವರು ಲಂಕಾಧಿಪತಿ ರಾವಣನನ್ನು ಕೊಂದು ಅಯೋಧ್ಯೆಗೆ ಹಿಂದಿರುಗಿದ ಬಳಿಕ, ಒಮ್ಮೆ ತನ್ನ ತಂದೆ ದಶರಥನ ಸದ್ಗತಿಯ ಬಗ್ಗೆ ಯೋಚಿಸುತ್ತಾನೆ. ಆಗ ಮಂತ್ರಿಗಳು ಹಾಗೂ ಮಹರ್ಷಿಗಳು ಆತನಿಗೆ ನೀವೆಲ್ಲರೂ ಮಕ್ಕಳು ಸೊಸೆಯಂದಿರು ಸೇರಿ ತೀರ್ಥಶ್ರಾದ್ಧ ಮಡಲು ಸೂಚಿಸುತ್ತಾರೆ (ತೀರ್ಥಶ್ರಾದ್ಧ ಎಂದರೆ ಹಲವಾರು ತೀರ್ಥಕ್ಷೇತ್ರಗಳಲ್ಲಿ ಮಿಂದು ಪಿತೃಗಳಿಗೆ ತರ್ಪಣ ನೀಡುವುದು). ಹಾಗಾಗಿ ಶ್ರೀರಾಮದೇವರು ಹಲವಾರು ತೀರ್ಥಕ್ಷೇತ್ರ ಸಂದರ್ಶಿಸಿ ಗಯಾ ಕ್ಷೇತ್ರಕ್ಕೆ ಬಂದು ಫಲ್ಗುಣೀ ನದಿತಟದಲ್ಲಿ ತಮ್ಮಂದಿರು-ಸೊಸೆಯರೊಂದಿಗೆ ಇರುತ್ತಾನೆ. ಹಾಗೂ ಆ ದಿನ ನಿಜವಾಗಿ ದಶರಥನಿಗೆ ಪಿಂಡಪ್ರದಾನ ಮಾಡುವ ಶ್ರಾದ್ಧದ ದಿನವೂ ಕೂಡಿ ಬಂದಿತ್ತು. ಆದುದರಿಂದ ಕಾಲಶ್ರಾದ್ಧ ಮಾಡಲು ನಿಶ್ಚಯಿಸುತ್ತಾರೆ.

 

ತೀರ್ಥಶ್ರಾದ್ಧವಾದರೆ ತೀರ್ಥಕ್ಷೇತ್ರಗಳಲ್ಲಿ ಮಾಡುವ ಪಿಂಡಪ್ರದಾನದಲ್ಲಿ, ಸೂರ್ಯೋದಯದಿಂದ ಸೂರ್ಯಾಸ್ತದ ಒಳಗೆ ಪಿಂಡ ಪ್ರದಾನ ಮಾಡಿದರೆ ಸಾಕು. ಆದರೆ ಕಾಲಶ್ರಾದ್ಧವಾದರೆ ಅದೇ ದಿನ ಎಲ್ಲಾ ಪದಾರ್ಥಗಳನ್ನು ತಂದು ಅಂದೇ ಪಿಂಡಪ್ರದಾನ ಮಾಡಿ ಉಳಿದವರು ಸೇವಿಸುವರು. ಶೇಷವನ್ನು ಉಳಿಸಬಾರದು. ಹಾಗೂ ಇದನ್ನು ಅಪರಾಹ್ಣದ ಹೊತ್ತು ಮುಗಿಯುವುದರೊಳಗೇ ಪಿಂಡಪ್ರದಾನ ಮಾಡಬೇಕು. ಗಯಾದಲ್ಲಿ ಈ ಶ್ರಾದ್ಧ ಶ್ರೇಷ್ಠ ಎನ್ನುತ್ತಾರೆ ಶ್ರೀ ಮುರಳೀಧರ ಆಚಾರ್ಯರು.


ಈಗ ಸೀತಾಕುಂಡ ಎಂದು ಪ್ರಸಿದ್ಧವಾಗಿರುವ ಸ್ಥಳದಲ್ಲಿ ಸೀತಾಮಾತೆ, ಊರ್ಮಿಳಾ, ಮಾಂಡವಿ, ಶೃತಕೀರ್ತಿಯರು ಮಾತುಕತೆಯಲ್ಲಿ ಕುಳಿತಿದ್ದರು. ಶ್ರೀರಾಮದೇವರು ಪಿಂಡಪ್ರದಾನಕ್ಕೆ ತೆರಳಿದ್ದರು. ಅಲ್ಲಿ ಅವನಿಗೆ ಕೆಲವು ರಕ್ಕಸರು ಕಾಲ ಕಳೆದುಹೋಗಲಿ ಎಂದು ವಿಘ್ನ ಮಾಡುತ್ತಿದ್ದರು.
ಇತ್ತ ಆಕಾಶವಾಣಿ ಕೇಳಿಸಿತು. ಸೀತೆ ನನಗೆ ಈಗಲೇ ಆಹಾರ ನೀಡು ಹೊತ್ತು ಮೀರುತ್ತಲಿದೆ ಎಂಬ ಮಾತು ಕೇಳಿತು. ಸೀತಾಮಾತೆ ನೋಡುತ್ತಿರುವ ಹಾಗೆ ಸ್ವತಃ ದಶರಥ ಚಕ್ರವರ್ತಿಯೇ ಬಂದು ಅನ್ನ ನೀಡುವಂತೆ ಕೈ ನೀಡಿದ. ಆದರೆ ಈಗ ಏನೂ ಸಿದ್ಧವಿಲ್ಲ. ಅನ್ನ-ಆಹಾರಗಳಿಲ್ಲ ಎಂದು ಸೀತಾಮಾತೆ ಹೇಳಿದಾಗ ನೀನು ಉಸುಕಿನ ಪಿಂಡವನ್ನೇ ಆದರೂ ಮಾಡಿಕೊಡು ಎಂದು ಬೇಡಿದ. ಆಗ ನದಿಯಲ್ಲಿನ ಉಸುಕು (ಮರಳನ್ನು) ಅನ್ನದಂತೆ ಪಿಂಡಮಾಡಿ 3 ಪಿಂಡವನ್ನು ನೀಡಿದಳು. ಅದನ್ನು ತಿಂದು ನಾನು ತೃಪ್ತನಾದೆ ನನಗೆ ಮೋಕ್ಷವಾಯಿತು. ಎಂದು ದಶರಥ ಹೇಳಿದ ಆಕಾಶವಾಣಿ ಕೇಳಿತು. ಆಗ ಸೀತಾಮಾತೆ ಫಲ್ಗುನದಿಯನ್ನು, ಬ್ರಾಹ್ಮಣರನ್ನು, ತುಳಸಿಗಿಡವನ್ನು , ಗೋಮಾತೆಯನ್ನು, ದರ್ಭೆಯನ್ನು, ಎಳ್ಳು ಹಾಗೂ ವಟವೃಕ್ಷವನ್ನು ಈ ಘಟನೆಗೆ ನೀವು ಸಾಕ್ಷಿಯಾಗಿರಿ ಎಂದು ಪ್ರಾರ್ಥಿಸುತ್ತಾಳೆ.

 

ಹೀಗೆ ಸೀತಾಮಾತೆಯು ಸಾಕ್ಷಿಗಳಾಗಿರಿ ಎಂದು ಏಳು ಜನರನ್ನು ಪ್ರಾರ್ಥಿಸುತ್ತಾಳೆ. ಸಾಕ್ಷಿ ಎಂಬ ಪ್ರಜ್ಞೆಯೇ ಅನಾದಿಕಾಲದಿಂದಲೂ ನಮ್ಮಲ್ಲಿ ಉಳಿದುಕೊಂಡು ಬಂದಿದೆ. ನ್ಯಾಯದ ದೃಢೀಕರಣ ಆಗುವುದೇ ಸಾಕ್ಷಿಯಿಂದ. ಹಾಗಾಗಿ ಸಾಕ್ಷಿ ಎನ್ನುವುದು ಒಂದು ಮಹತ್ತರವಾದ ಘಟ್ಟ. ಹಾಗಾಗಿ ಅದರಲ್ಲಿ ಮೂರು ಅಥವಾ ಐದು ಅಥವಾ ಏಳು ಹೀಗೆ ಬೆಸಸಂಖ್ಯೆಯ ಸಾಕ್ಷಿಗಳನ್ನೇ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಇಲ್ಲಿಯೂ ಸೀತಾಮಾತೆ ಏಳು ಜನರನ್ನು ಆಹ್ವಾನಿಸುತ್ತಾಳೆ. ಸಾಕ್ಷಿಗಳಾಗಿರಿ ಎಂದು ಸೂಚಿಸುತ್ತಾಳೆ. ಆ ಏಳುಜನರು ಮೊದಲನೆಯದು ಫಲ್ಗುನದಿ, ಬ್ರಾಹ್ಮಣರು, ಗೋಮಾತೆ, ತುಳಸಿಗಿಡ, ಎಳ್ಳು, ದರ್ಭೆ ಹಾಗೂ ವಟವೃಕ್ಷ.

 


ಸ್ವಲ್ಪೇ ಸಮಯದ ಅನಂತರ ಶ್ರೀರಾಮದೇವರು ಹಿಂದಿರುಗಿ ಬರುತ್ತಾರೆ. ಆಗ ಸೀತಾಮಾತೆ ಶ್ರೀರಾಮಚಂದ್ರ ದೇವರಿಗೆ ಹೇಳುತ್ತಾಳೆ. ಮಾವ ದಶರಥ ಇಲ್ಲಿಗೆ ಬಂದಿದ್ದರು. ನನ್ನ ಕೈಯಾರೆ ಉಸುಕಿನ ಪಿಂಡವನ್ನು ಸ್ವೀಕರಿಸಿ ನನಗೆ ಮೋಕ್ಷವಾಯಿತು ಎಂದು ಸಂತೃಪ್ತಿಯಿಂದ ಹೇಳಿ ಹೋದರು ಎನ್ನುತ್ತಾಳೆ. ಆದರೆ ಶ್ರೀರಾಮಚಂದ್ರ ಅದನ್ನು ನಂಬುವುದಿಲ್ಲ. ಹಾಗೆ ಬರಲು ಸಾಧ್ಯವಿಲ್ಲ, ಹಾಗೆ ಹೇಳಿರಲಿಕ್ಕಿಲ್ಲ ಎಂದು ಸಂದೇಹ ವ್ಯಕ್ತಪಡಿಸುತ್ತಾನೆ.
ಆಗ ಸೀತಾಮಾತೆ ಫಲ್ಗುನದಿಯನ್ನು ಕರೆದು ಕೇಳುತ್ತಾಳೆ. ಹೇಳು ನೀನು ನೋಡಿದ್ದೀಯಲ್ಲ ಎಂದು. ಫಲ್ಗು ನದಿ ನಾನು ನೋಡಿಲ್ಲ ಎಂದುಬಿಡುತ್ತಾಳೆ. ಕೋಪಗೊಂಡ ಸೀತಾಮಾತೆ ಫಲ್ಗುನದಿಗೆ ನೀನು ಗುಪ್ತಗಾಮಿನಿಯಾಗು ಎಂದು ಶಾಪಕೊಡುತ್ತಾಳೆ. ಆಗ ಆತಂಕಕ್ಕೆ ಒಳಗಾದ ಫಲ್ಗುನದಿ ಸೀತಾಮಾತೆಯನ್ನು ಪರಿಪರಿಯಾಗಿ ಪ್ರಾರ್ಥಿಸುತ್ತಾಳೆ. ಕರುಣೆಗೆ ಬಂದ ಸೀತಾಮಾತೆ ಅವಳಿಗೆ ಹೇಳುತ್ತಾಳೆ -ನೀನು ನಾಲ್ಕು ತಿಂಗಳು ತುಂಬಿ ಹರಿ, ಆದರೆ ಆಮೇಲೆ ನೀನು ಬತ್ತಿಹೋಗು ಮತ್ತು ಗುಪ್ತಗಾಮಿನಿಯಾಗಿರು, ಎಂದು. ಹಾಗಾಗಿ ಇಂದಿಗೂ ಫಲ್ಗುಣೀನದಿಯು ಮಳೆಗಾಲದ ನಾಲ್ಕು ತಿಂಗಳು ತುಂಬಿ ಹರಿಯುತ್ತಾಳೆ. ಆಮೇಲೆ ಗುಪ್ತಗಾಮಿನಿಯಾಗಿಯೇ ಇರುತ್ತಾಳೆ. ಅದರಲ್ಲಿಯೂ ಶ್ರೀಕೃಷ್ಣನ ಜನ್ಮಕ್ಕೆ ಸಂಬಂಧಪಟ್ಟ ದಿನಗಳಲ್ಲಿ ಅವಳು ತುಂಬಿ ಹರಿಯುತ್ತಿರುತ್ತಾಳೆ.
ಎರಡನೆಯದಾಗಿ ಬ್ರಾಹ್ಮಣರನ್ನು ಕರೆದು ಕೇಳುತ್ತಾಳೆ. ಆಗ ಬ್ರಾಹ್ಮಣರೂ ಸಹ ತಾವು ನೋಡಿಲ್ಲ ಎಂದುಬಿಡುತ್ತಾರೆ. ಅವರ ಮೇಲೂ ಸಿಟ್ಟಾದ ಸೀತಾಮಾತೆ ನೀವು ಸದಾ ಅಸಂತುಷ್ಟರಾಗಿಯೇ ಇರಿ. ನಿಮಗೆ ಎಷ್ಟು ದಕ್ಷಿಣೆ ಸಿಕ್ಕಿದರೂ ಇನ್ನಷ್ಟು ಕೊಡಬಹುದಿತ್ತಲ್ಲ ಎಂಬ ಭಾವನೆಯೇ ನಿಮ್ಮಲ್ಲಿ ಇರಲಿ ಎನ್ನುತ್ತಾಳೆ.
ಮೂರನೆಯದಾಗಿ ಗೋಮಾತೆಯನ್ನು ಕೇಳುತ್ತಾಳೆ. ಗೋಮಾತೆ ಸಹ ತಾನು ನೋಡಿಲ್ಲ ಎಂದುಬಿಡುತ್ತಾಳೆ. ಅವಳ ಮೇಲೂ ಸಿಟ್ಟಾದ ಸೀತಾಮಾತೆ (ಅವರಿಗೆಲ್ಲ ಆಗ ಪಶುಪಕ್ಷಿಗಳಿಗೆ ಮಾತು ಬರುತ್ತಿತ್ತು) ಆಗಲೇ ಗೋಮಾತೆಗೆ ಶಾಪಕೊಟ್ಟಳು. ನಿನಗೆ ಮಾತು ಬಾರದಿರಲಿ. ನಿನ್ನ ಬಾಯಿಗೆ ಪೂಜೆ ನಡೆಯದಿರಲಿ, ಬದಲಿಗೆ ನಿನ್ನ ಬಾಲಕ್ಕೆ ಪೂಜೆ ನಡೆಯಲಿ, ಹಾಗೂ ಗಯಾದಲ್ಲಿ ನಿಮ್ಮ ಸಂತತಿ ಗಿಡ್ಡವಾಗಿರಲಿ ಎಂದು ಶಪಿಸುತ್ತಾಳೆ.
ನಾಲ್ಕನೆಯದಾಗಿ ಎಳ್ಳನ್ನು ಕರೆದು ಕೇಳುತ್ತಾಳೆ. ಎಳ್ಳು ಕೂಡ ತಾನು ನೋಡಿಲ್ಲ ಎನ್ನುತ್ತದೆ. ಮತ್ತೆ ಸಿಟ್ಟಾದ ಸೀತಾಮಾತೆ ಎಳ್ಳಿಗೆ ಶಪಿಸುತ್ತಾಳೆ. ನಿನ್ನ ಬಣ್ಣ ಕಪ್ಪಾಗಲಿ ಮತ್ತೆ ನಿನ್ನ ಉಪಯೋಗಿಸಿದ ಅನಂತರ ಯಾರೂ ಉಪಯೋಗಿಸದಿರಲಿ ಎಂದು ಶಪಿಸುತ್ತಾಳೆ.
ಐದನೆಯದಾಗಿ ದರ್ಭೆಯನ್ನು ಕೇಳುತ್ತಾಳೆ. ದರ್ಭೆ ಎಂದರೆ ಪರಮಾತ್ಮನ ಕೂದಲು ಎಂಬರ್ಥವಿದೆ ಎಂಬ ನಂಬಿಕೆಯಿದೆ. ಪವಿತ್ರವಾದದ್ದು. ಮೊದಲೆಲ್ಲ ಯಜ್ಞಯಾಗಾದಿಗಳಲ್ಲಿ ಅದನ್ನು ಹಲವು ಸಲ ಬಳಸುತ್ತಿದ್ದರು. ದರ್ಭೆ ಕೂಡ ತಾನು ನೋಡಿಲ್ಲ ಎಂದು ಬಿಡುತ್ತದೆ. ಮತ್ತೆ ಸಿಟ್ಟಾದ ಸೀತಾಮಾತೆ ದರ್ಭೆಯನ್ನು ಶಪಿಸುತ್ತಾಳೆ ನಿನ್ನನ್ನು ಒಮ್ಮೆ ಬಳಸಿದ ಮೇಲೆ ಹೊರಗಡೆ ಬಿಸಾಡುವ ಹಾಗೆ ಆಗಲಿ ಎಂದು ಶಪಿಸುತ್ತಾಳೆ. ದರ್ಭೆ ಪರಮಶ್ರೇಷ್ಠವಾದದ್ದು, ಆದರೂ ಕೂಡ ಈ ಶಾಪಕ್ಕೆ ತುತ್ತಾಗಬೇಕಾಗಿ ಬಂತು.
ಆಮೇಲೆ ತುಳಸೀಗಿಡವನ್ನು ಕರೆದು ಸೀತಾಮಾತೆ ಹೇಳುತ್ತಾಳೆ- ನೀನು ನೋಡಿದ್ದೀಯಲ್ಲ, ಹೇಳು. ತುಳಸೀಗಿಡವೂ ಕೂಡ ತಾನು ನೋಡಿಲ್ಲ ಎಂದುಬಿಡುತ್ತಾಳೆ. ಮತ್ತೆ ಕೋಪಕ್ಕೊಳಗಾದ ಸೀತಾಮಾತೆ ತುಳಸೀಗಿಡವನ್ನು ಶಪಿಸುತ್ತಾಳೆ- ನೀನು ಈ ಕ್ಷೇತ್ರದಲ್ಲಿ ಯಾವಾಗಲೂ ಗಿಡ್ಡವಾಗಿರು. ಹೆಚ್ಚು ಎತ್ತರ ಬೆಳೆಯದಿರು. ಹಾಗೂ ನೀನು ಅತ್ಯಂತ ಸೂಕ್ಷ್ಮವಲ್ಲ, ನಿನ್ನನ್ನು ಅಶೌಚ ಇದ್ದವರು ಹಾಗೂ ಚಂಡಾಲರು ಇವರು ಯಾರೂ ನಿನ್ನನ್ನು ಸ್ಪರ್ಶಿಸಬಾರದಲ್ಲ. ಆದರೆ ಈ ಕ್ಷೇತ್ರದಲ್ಲಿ ಯಾರು ಬೇಕಾದರೂ ನಿನ್ನನ್ನು ಸ್ಪರ್ಶಿಸುವಂತಾಗಲಿ ಎಂದು ಶಪಿಸುತ್ತಾಳೆ.
ಕೊನೆಯದಾಗಿ ಸೀತಾಮಾತೆಗೆ ಒಂದು ನಂಬಿಕೆ ಇರುವುದು ವಟವೃಕ್ಷದ ಮೇಲೆ. ವಟವೃಕ್ಷವನ್ನು ಕರೆದು ಕೇಳುತ್ತಾಳೆ -ನೀನು ನೋಡಿದ್ದೀಯಲ್ಲ, ಹೇಳು ಎಂದು ಆಗ ವಟವೃಕ್ಷ ತಾನು ನೋಡಿದ್ದು ಸತ್ಯ ಎನ್ನುತ್ತಾಳೆ. ಇದನ್ನು ಕೇಳಿ ಸೀತಾಮಾತೆ ವಟವೃಕ್ಷಕ್ಕೆ ಅಜರಾಮರವಾಗು ಎಂದು ವರವನ್ನು ಕೊಡುತ್ತಾಳೆ.

 


ಈಗ ಒಂದು ಕುತೂಹಲ ಯಾಕೆ ಆ ಎಲ್ಲ 6 ಸಾಕ್ಷಿಗಳು ಸುಳ್ಳು ಹೇಳಿದರು ಎಂದು. ಮುರಳೀಧರ ಆಚಾರ್ಯರು ನೀಡಿದ ವಿವರಣೆ ಸೂಕ್ತವಾಗಿದೆ. ಅವುಗಳ ಯೋಚನೆಗಳು ಹೇಗಿರಬಹುದು ಎನ್ನುತ್ತಾರೆ. ಫಲ್ಗುನದಿ ಏನು ಯೋಚಿಸಿರಬಹುದು ಎಂದರೆ ಪರಮಾತ್ಮನನ್ನೇ ಸೇವಿಸಿದ ನದಿಯನ್ನು ಮಲಿನಮಾಡಬಾರದೆಂಬ ಉದ್ದೇಶ. ಹಾಗೆಯೇ ಬ್ರಾಹ್ಮಣರು, ಗೋಮಾತೆ ಇವರೆಲ್ಲ ಯೋಚಿಸಿದ್ದು ಕೂಡ ಪರಮಾತ್ಮನನ್ನು ಸೇವಿಸಿದ ಮೇಲೆ ಅವನಿಗೆ ತೊಂದರೆ ತಮ್ಮಿಂದ ಆಗಬಾರದು ಎಂದು. ತಾವೆಲ್ಲಿಯಾದರೂ ದಶರಥನನ್ನು ಕಂಡಿದ್ದೆವೆಂದು ಹೇಳಿದರೆ ಏನೋ ಅಪಚಾರ ಆಗುತ್ತದೆ ಎಂದು.
ಇಂದಿಗೂ ಗಯಾಕ್ಷೇತ್ರದಲ್ಲಿ ಇದೇ ನಂಬುಗೆ ಇದೆ. ಫಾಲ್ಗುಣೀ ನದಿ ಎಂದರೆ ಗಂಗಾಮಾತೆಯ ಜೊತೆಯೇ ಭೂಮಿಗೆ ಬಂದವಳು. ಅವಳಿಗೆ ಫಲ್ಗುಣೀಗಂಗಾ ಎಂದೂ ಹೆಸರಿದೆ. ಇಲ್ಲಿ ಮೂರು ನದಿಗಳು ಒಟ್ಟಿಗೇ ಹರಿಯುತ್ತವೆ. ಫಾಲ್ಗುಣೀ, ನಿರಂಜನ ಹಾಗೂ ಸರಸ್ವತೀ ನದಿಗಳ ತ್ರಿವೇಣಿ ಸಂಗಮದ ಪುಣ್ಯಕ್ಷೇತ್ರ.
ಮಾಧ್ವಸಂಪ್ರದಾಯದಲ್ಲಿ ಸ್ವಾಮೀಜಿಗಳು ತೀರ್ಥಯಾತ್ರೆ ಹೋಗುವ ಕ್ರಮ ಇಲ್ಲಿ. ಏಕೆಂದರೆ ಕ್ಷೇತ್ರಗಳಲ್ಲೇ ಎಲ್ಲಿ ದೇವಸನ್ನಿಧಿ ಇರುತ್ತದೆ ಅದಕ್ಕೆ ವಾದಿನಿಗ್ರಹಯಾತ್ರೆ ಎನ್ನುತ್ತಾರೆ.

 

ಹಾಗೊಮ್ಮೆ 400 ವರ್ಷಗಳ ಹಿಂದೆ ವಿದ್ಯಾಧೀಶ ತೀರ್ಥ ಶ್ರೀಪಾದಂಗಳವರು ಸೀತಾಕುಂಡದಲ್ಲಿ ತಂಗಿದ್ದಾಗ ಒಂದು ಘಟನೆ ನಡೆಯಿತಂತೆ. ಅವರು ಭಕ್ತರನ್ನು ಹರಸಲು ಕುಳಿತಿದ್ದಾಗ ಪಕ್ಕದಲ್ಲೇ ಇದ್ದ ಅವರ ಧರ್ಮದಂಡದ ಮೇಲೆ ತೀರ್ಥದ ಹನಿ ಬಿತ್ತಂತೆ. ದಂಡ ಚಿಗುರಿತಂತೆ. ಅದನ್ನು ನೋಡಿದ ಗಯಾದ ಜನರು ತಮ್ಮಲ್ಲಿ ಬಾಡಿಹೋದ ಅಕ್ಷವೃಕ್ಷಗಳು ಪುನಃ ಚಿಗುರುತ್ತಿರುವಂತೆ ಆಶೀರ್ವದಿಸಿ ಎಂದು ಪ್ರಾರ್ಥಿಸಿದರು. (ಗಯಾದಲ್ಲಿ 54 ಬಗೆಯ ಶ್ರಾದ್ಧಗಳು ಪ್ರಸಿದ್ಧ. ಅದರಲ್ಲಿ ಕಟ್ಟಕಡೆಯ ಶ್ರಾದ್ಧವೇ ಅಕ್ಷವೃಕ್ಷದಲ್ಲಿ ನಡೆಸುವ ಶ್ರಾದ್ಧ. ಆದುದರಿಂದ ಅದು ಚಿಗುರಿರಬೇಕಾದದ್ದು ಅನಿವಾರ್ಯವಾಗಿತ್ತು.) ಅದನ್ನು ಒಪ್ಪಿ ಮೆಚ್ಚಿದ ಶ್ರೀಗಳು ಭಕ್ತರಲ್ಲಿ ನಾವು ಹಾಗೆ ಮಾಡಿದರೆ ತಾವೇನು ಸಮರ್ಪಿಸುತ್ತೀರಿ ಎಂದು ಕೇಳುತ್ತಾರೆ. ಆಗ ನೀವೇ ಹೇಳಿ ಗುರುಗಳೇ ಎಂದು ಭಕ್ತರು ಹೇಳುತ್ತಾರೆ. ಅದಕ್ಕೆ ಶ್ರೀಗಳು ವಿಷ್ಣುಪಾದದ ನಾಲ್ಕು ಪೂಜಾದಲ್ಲಿ ಮಧ್ಯಾಹ್ನದ ಪೂಜಾ ಸೇವಾ ಭಾಗ್ಯವನ್ನು ಉತ್ತರಾದಿ ಮಠಕ್ಕೆ ನೀಡುವಂತೆಯೂ, ಎಲ್ಲರೂ ಮಠದ ಶಿಷ್ಯರಾಗುವಂತೆಯೂ ಹೇಳಿ ಎನ್ನುತ್ತಾರೆ. ಅಂತೆಯೇ ಶ್ರೀಪಾದಂಗಳವರು ವಟವೃಕ್ಷವು ಚಿಗುರುವಂತೆ ಮಾಡುತ್ತಾರೆ. ಇಂದಿಗೂ ಈ ಕ್ಷೇತ್ರದಲ್ಲಿ ಉತ್ತರಾದಿ ಮಠದ ಶ್ರೀಗಳವರನ್ನು ಭಕ್ತರು ತಮ್ಮ ಹೆಗಲ ಮೇಲೇ ಹೊತ್ತುಕೊಂಡು ಮನೆಗೆ ಹೋಗುತ್ತಾರೆ. ಪಲಕ್ಕಿ ಎಂದರೆ ಹೆಗಲೇ ಇಲ್ಲಿ.

 


ಈ ಎಲ್ಲ ಮಾಹಿತಿಗಳನ್ನು ನನಗೆ ನೀಡಿದ ನನ್ನ ಪ್ರೀತಿಯ ವೇ.ಮೂ. ಮುರಳೀಧರ ಆಚಾರ್ಯರನ್ನು ಹೃತ್ಪೂರ್ವಕವಾಗಿ ಆದರಿಸಿ ಗೌರವಿಸುತ್ತೇನೆ.

Author Details


Srimukha

Leave a Reply

Your email address will not be published. Required fields are marked *