ಒಬ್ಬ ಕಳ್ಳ. ಅರಮನೆಯ ಖಜಾನೆಯನ್ನೇ ಕದಿಯಲು ಹೋಗಿ ಸಿಕ್ಕಿಹಾಕಿಕೊಂಡ. ತುಂಬ ಕಟ್ಟುನಿಟ್ಟಿನ ರಾಜ. ಅಲ್ಲಿ ಕದ್ದವರಿಗೆ ಗಲ್ಲುಶಿಕ್ಷೆ. ಇವನಿಗೂ ಅದೇ ಆಯಿತು. ಕೊನೆಯಾಸೆ ಕೇಳಿದರು ಕಳ್ಳನ ಬಳಿ. ನನ್ನ ಅಮ್ಮನನ್ನು ಭೇಟಿಯಾಗಬೇಕು ಎಂದ. ಕರೆಸಿದರು ಅವನ ತಾಯಿಯನ್ನು. ಅಮ್ಮನನ್ನು ಕಂಡವನೇ ತಾಯಿಯ ಕಿವಿಯನ್ನು ಕಚ್ಚಿ ಹರಿದುಬಿಟ್ಟ. “ಸಣ್ಣವನಿದ್ದಾಗ ಎಲ್ಲಿಂದಲೋ ಒಂದು ಹಣ್ಣನ್ನು ಕದ್ದು ತಂದಿದ್ದೆ. ಇದೇ ಕಿವಿಯಲ್ಲಿ ನಿನಗೆ ಗುಟ್ಟು ಹೇಳಿದ್ದೆ. ನೀನು ಅಂದು ಬೆನ್ನು ತಟ್ಟುವ ಬದಲು ಶಿಕ್ಷಿಸಿದ್ದರೆ, ಇಂದು ಈ ಸ್ಥಿತಿ ಬರುತ್ತಿರಲಿಲ್ಲ” ಎಂದನಂತೆ ಆ ಕಳ್ಳ. ಮಗನ ತಪ್ಪನ್ನು ತಿದ್ದದೇ ಮುಚ್ಚಿಡುವಂತೆ ಮಾಡಿದ್ದು, ತಾಯಿಗೆ ಮಗನ ಮೇಲಿದ್ದ ವ್ಯಾಮೋಹ.
ಹೀಗೊಂದು ಪುಟ್ಟ ಕಥೆ.
ಒಬ್ಬ ವ್ಯಕ್ತಿ. ಅವನಿಗೆ ಸಂಸಾರ ಸಾಕಾಗಿತ್ತು. ಒಂದು ದಿನ ಎಲ್ಲವನ್ನೂ, ಎಲ್ಲರನ್ನೂ ಬಿಟ್ಟು ಹೊರಟೇಬಿಟ್ಟ. ಮನೆಯಂಗಳ ದಾಟಿ, ರಸ್ತೆಗೆ ಇಳಿದಿದ್ದ. ಚಟಪಟನೆ ಉದುರಿತ್ತು ನಾಲ್ಕು ಮಳೆಯ ಹನಿ. “ಏಯ್, ಮಳೆ ಬರ್ತಾ ಇದೆ. ಅಲ್ಲಿ ಹಿಂದೆ ಆರಿಸಿದ ಬಟ್ಟೆ ಒದ್ದೆಯಾಗುತ್ತೆ. ಅಟ್ಟದ ಮೇಲೆ ಕಾಯಿ ಒಣಗಿಸಿದ್ದೆ. ನಾನಿಲ್ಲದಿದ್ದರೆ ಮನೆ ಜವಾಬ್ದಾರಿ ತೆಗೆದುಕೊಳ್ಳುವವರು ಯಾರೂ ಇಲ್ಲ ಇಲ್ಲಿ” ಎನ್ನುತ್ತಾ ಓಡಿ ವಾಪಾಸ್ ಬಂದೇಬಿಟ್ಟ. ಎಲ್ಲವನ್ನೂ ಬಿಟ್ಟುಬಿಡುತ್ತೇನೆ ಎಂದು ಹೊರಟ ವ್ಯಕ್ತಿಯನ್ನು ತಡೆದದ್ದು ಸಂಸಾರದ ಮೇಲಿನ ವ್ಯಾಮೋಹ.
ಇನ್ನೊಂದು ಸಣ್ಣ ಕಥೆ.
ಪರಾಕ್ರಮಿ ಅರ್ಜುನ. ಅದು ಕುರುಕ್ಷೇತ್ರ ಯುದ್ಧದ ಮೊದಲ ದಿನ. ಸಾರಥಿಯಾಗಿ ಸ್ವತಃ ಕೃಷ್ಣನಿದ್ದಾನೆ. ಭಯವೆಂದರೆ ಏನೆಂದೇ ತಿಳಿಯದ ಅರ್ಜುನ ಮೊದಲ ಬಾರಿಗೆ ನಡುಗಿದ್ದಾನೆ, ತನ್ನೆದುರು ಯುದ್ಧಕ್ಕೆ ನಿಂತ ತನ್ನವರನ್ನು ಕಂಡು. ಗಾಂಢೀವವನ್ನು ಕೆಳಗಿಳಿಸಿ, “ಯುದ್ಧ ಬೇಡ ಕೃಷ್ಣ” ಎಂದುಬಿಟ್ಟ. ಎಲ್ಲರೂ ತನ್ನವರು. ತನ್ನವರನ್ನು ಕೊಲ್ಲುವುದು ಪಾಪವಲ್ಲವೇ ಎಂಬ ಭೀತಿ. ಅರ್ಜುನನಂತಹ ಅರ್ಜುನನನ್ನು ನಡುಗಿಸಿದ್ದು ಎದುರಿದ್ದ ಶತ್ರುಸೈನ್ಯವಲ್ಲ. ಅವನನ್ನು ಆವರಿಸಿದ್ದ ವ್ಯಾಮೋಹ.
ಇದು ಇತಿಹಾಸ.
“ನೀನು ದೊಡ್ಡ ಆದ ಮೇಲೆ, ಕಾಲೇಜಿಗೆ ಹೋಗ್ತೀಯಲ್ಲ, ಆಗ ನಿಂಗೆ ಡಾನ್ಸ್ ಹೇಳಿಕೊಡ್ತೀನಿ ಅಮ್ಮಾ” ಅಂತ ತೊದಲು ನುಡಿಯಲ್ಲಿ ನುಡಿದ ಮಗ. “ನಂಗೆ ವಯಸ್ಸಾಯ್ತು ಕಣೋ. ಸ್ವಲ್ಪ ವರ್ಷ ಹೋದ್ರೆ ಮುದುಕಿ ಆಗ್ತೀನಿ. ಇನ್ನೇನು ಕಾಲೇಜು?” ಎಂದು ನಕ್ಕೆ. “ಅಜ್ಜಿ ಆಗೋದು ಬೇಡ. ಆಮೇಲೆ ದೇವ್ರು ಕರ್ಕೊಂಡು ಹೋಗಿಬಿಡ್ತಾನೆ. ನಂಗೆ ನೀನು ಯಾವಾಗಲೂ ಬೇಕು” ಎಂದು ಜೋರಾಗಿ ಅತ್ತ ಮಗ.
ಇದು ನನ್ನ ಕಥೆ.
ಮೊದಲು ಅಯ್ಯೋ! ನನ್ನ ಮಗನಿಗೆ ನಾನೆಂದರೆ ಎಷ್ಟು ಪ್ರೀತಿ ಎಂಬ ಹೆಮ್ಮೆಯಾಯಿತು. ಅಥವಾ ಇದನ್ನೇ ಮೋಹವೆನ್ನುತ್ತಾರೆಯೇ ಎಂಬ ಸಂಶಯವಾಯಿತು. ನಾವು ಹುಟ್ಟುವಾಗಲೇ ಮೋಹದ ಹೊದಿಕೆಯನ್ನು ಹೊದ್ದುಕೊಂಡೇ ಹುಟ್ಟಿರುತ್ತೇವೇನೋ ಅಂತಲೂ ಅನ್ನಿಸಿತು. ಯಾಕೋ ವ್ಯಾಮೋಹದ ಬಗ್ಗೆ, ಮೋಹವೆಂಬ ಮಾಯೆಯ ಬಗ್ಗೆ ಮಾತನಾಡಬೇಕೆನಿಸಿತು.
ಮೋಹವೆಂದರೆ ಸುಡುವ ಬೆಂಕಿ. ಮೋಹವೆಂದರೆ ಬಿಡಿಸಲಾಗದ ಕಗ್ಗಂಟು. ಮೋಹವೆಂದರೆ ಪಾಶ. ಮೋಹವೆಂದರೆ ಗರ್ವ. ಮೋಹವೆಂದರೆ ಭ್ರಮೆ. ಮೋಹವೆಂದರೆ ಕತ್ತಲೆ. ಮೋಹವಿದ್ದಲ್ಲಿ ಕೋಪವಿದೆ. ಮೋಹವಿದ್ದಲ್ಲಿ ತೀರದ ಬಯಕೆಗಳಿವೆ. ಮೋಹವಿದ್ದಲ್ಲಿ ಷರತ್ತುಗಳಿವೆ. ಮೋಹವಿದ್ದಲ್ಲಿ ಸಂಶಯವಿದೆ. ಮೋಹವಿದ್ದಲ್ಲಿ ಯುದ್ಧವಿದೆ. ಮೋಹವಿದ್ದಲ್ಲಿ ನೋವಿದೆ. ಮೋಹವೆಂದರೆ ಮಾಯೆ. ಮಾಯೆಯಿಂದ ಬಿಡಿಸಿಕೊಳ್ಳುವುದು ಬಹು ಸುಲಭವಂತೆ. ಮಾಯೆಯಿದೆ ಎಂದು ಅರಿವಾದರೆ ಸಾಕಂತೆ. ಅರಿವಿದ್ದಲ್ಲಿ ಮಾಯೆ ಇರುವುದಿಲ್ಲವಂತೆ. ಹಾಗೆಂದು ಅದನ್ನರಿತವರು, ಅದನ್ನು ಮೀರಿದವರು ಹೇಳುತ್ತಾರೆ.
ಮೋಹಿನಿಯ ಮೋಹದಲ್ಲಿ ಬಂಧಿಯಾಗಿ ಭಸ್ಮವಾಗಿ ಹೋದ ಭಸ್ಮಾಸುರ. ಘೋರತಪಸ್ಸಿಗೆಂದು ಹೊರಟ ವಿಶ್ವಾಮಿತ್ರರನ್ನು ಆವರಿಸಿ, ತಡೆದಿದ್ದು ಮೇನಕೆ ಎಂಬ ಮಾಯೆ. ಅರಿತ ಮೇಲೆ ಅದರಿಂದ ಬಿಡಿಸಿಕೊಂಡರು. ರಾಜ ದಶರಥನಿಗೆ ಕೈಕೇಯಿಯ ಮೇಲೆ ಅದೇನೋ ಅತಿಯಾದ ಪ್ರೀತಿ. ಕೈಕೇಯಿಗೂ, ಮಂಥರೆಗೂ ಭರತನ ಮೇಲೆ ವ್ಯಾಮೋಹ. ಅದನ್ನರಿಯದೇ ಇದ್ದುದರಿಂದ ರಾಮನನ್ನು, ಜೊತೆಗೆ ಒಳಿತನ್ನೂ ಕಾಡಿಗಟ್ಟಿದರು. ರಾವಣನಿಗೆ ತಂಗಿ ಶೂರ್ಪನಖಿಯ ಮೇಲೆ ವ್ಯಾಮೋಹ, ಸಾಧ್ವಿ ಸೀತೆಗೆ ಬಂಗಾರದ ಜಿಂಕೆಯನ್ನು ಕಂಡೊಡನೆ ಆವರಿಸಿದ್ದು ಮೋಹ. ಪರಿಣಾಮ ಸೀತಾಪಹರಣ. ದೃತರಾಷ್ಟ್ರ-ಗಾಂಧಾರಿಗೆ ದುಷ್ಟ ಮಕ್ಕಳ ಮೇಲೆ ಕುರುಡು ಪ್ರೇಮ. ಪರಿಣಾಮ ಕೌರವ ನಾಶ.
ಪುರಾಣೇತಿಹಾಸಗಳು ಹಾಗಿರಲಿ. ನಾವುಗಳೇನು ಕಡಿಮೆ? ನಾವು ಕೂಡ ಒಂದಿಲ್ಲೊಂದು ರೀತಿಯ ಮೋಹದ ಪಾಶದಲ್ಲಿ ಸಿಕ್ಕಿಹಾಕಿಕೊಂಡವರೇ ಅಲ್ಲವೇ? ಮೋಹ ಕೇವಲ ಮಕ್ಕಳ, ಸ್ವಜನರ ಅಥವಾ ಕೆಲವು ವ್ಯಕ್ತಿಗಳಲ್ಲಿ ಇರಬೇಕು ಎಂದಿಲ್ಲ. ಕೆಲವರಿಗೆ ಭೂಮಿಯ ಮೇಲೆ ಮೋಹ. ಎಷ್ಟಿದ್ದರೂ ಸಾಲದು. ವಿಶ್ವವೇ ತನ್ನದಾಗಬೇಕು ಎಂಬ ದುರಾಸೆ. ಕೆಲವರಿಗೆ ಬಂಗಾರದ ಮೇಲೆ ಮೋಹ. ಕೆಲವರಿಗೆ ಹಣದ ಮೇಲೆ ಮೋಹ. ಇನ್ನು ಕೆಲವರಿಗೆ ಅಧಿಕಾರದ ಮೋಹ. ಕೆಲವರಿಗೆ ವಾಹನಗಳ ಮೇಲೆ ವಿಪರೀತ ಮೋಹ. ಕೆಲವರಿಗೆ ಪಾದರಕ್ಷೆಗಳ ಮೇಲೆ ಅತಿಯಾದ ಆಸೆ. ಮತ್ತು ಕೆಲವರಿಗೆ ಬಟ್ಟೆಗಳ ಮೇಲೆ ಅತಿಯಾದ ಮೋಹ. ಇದನ್ನೇ ಅಲ್ಲವೇ ಪುರಂದರದಾಸರು ‘ಶಿಶು ಮೋಹ ಸತಿ ಮೋಹ ಜನನಿ ಜನಕರ ಮೋಹ’ ಎಂದಿದ್ದು? ಒಟ್ಟಿನಲ್ಲಿ ನಮಗೆ ಇಷ್ಟು ದೊರಕಿದರೆ ಮತ್ತಷ್ಟು ಬೇಕೆಂಬಾಸೆ. ಅಷ್ಟು ದೊರಕಿದರೆ ಮತ್ತಿಷ್ಟರಾಸೆ.
ಅರೆ! ನಮ್ಮವರ ಮೇಲೆ ಪ್ರೀತಿಯಿರುವುದು ತಪ್ಪೇ? ನಮಗೆ ಇಷ್ಟವಿರುವ ವಸ್ತುಗಳ ಬಗ್ಗೆ ಆಸೆ ಪಡುವುದು ಸಹಜವಲ್ಲವೇ? ಈ ಪ್ರಶ್ನೆಗೆ ಕಗ್ಗದ ಕವಿ, ಡಿ.ವಿ.ಜಿ ಯವರು ‘ವ್ಯಾಮೋಹವಿಲ್ಲದ ಪ್ರೇಮ ನಿರ್ಭರವಿರಲಿ, ಬಂಧನವದೇನಲ್ಲ ಜೀವಜೀವಪ್ರೇಮ, ಬಾಂಧವ್ಯ ದೈವಕೃಪೆ’ ಎಂದುತ್ತರಿಸಿದ್ದಾರೆ. ಮಕ್ಕಳ ಮೇಲೆ ಪ್ರೀತಿಯಿರಲಿ, ಅವರ ತಪ್ಪುಗಳು ಕಾಣಿಸದೇ ಇರುವಷ್ಟು ಕುರುಡುಪ್ರೀತಿಯಲ್ಲ. ಅದು ಅನರ್ಥಕ್ಕೆ ಕಾರಣವಾಗಬಹುದು ಅಲ್ಲವೇ? ಬಟ್ಟೆ, ಬಂಗಾರ, ಹಣ, ವಾಹನ, ಅಧಿಕಾರ ಹೀಗೆ ಯಾವುದೇ ವಿಷಯದಲ್ಲಿ ಆಸಕ್ತಿಯಿರಲಿ, ತೀರದ ದಾಹವಲ್ಲ. ಅದು ನಮ್ಮನ್ನೇ ಸುಡಬಹುದು ಅಲ್ಲವೇ? ಸಂಸಾರದ ಮೇಲೆ ನಿರ್ಮಲ ಪ್ರೇಮವಿರಲಿ. ಅದಕ್ಕೇ ಅಂಟಿಕೊಳ್ಳುವುದು ಸಲ್ಲ. ನಾವೇ ಬಿಡಿಸಿಕೊಳ್ಳಲಾರದಂತೆ ಬಂಧಿಯಾಗಬಹುದು ಅಲ್ಲವೇ?
ಮಾತನಾಡುವುದು ಬಹು ಸುಲಭ. ಪ್ರೀತಿಯೋ! ಮೋಹವೋ! ಎಂದು ತಿಳಿಯುವುದು ಹೇಗೆ? ಮೋಹದಿಂದ ಪಾರಾಗುವುದು ಹೇಗೆ?
ಮೋಹ ಕವಿದು ಮಂಕಾದ ಅರ್ಜುನನಿಗೆ ಉತ್ತರವಾಗಿ, ಶ್ರೀಕೃಷ್ಣನ ಮುಖಾರವಿಂದದಿಂದ ಹರಿದ ಸುಧೆ ಭಗವದ್ಗೀತೆ. ಅದು ನಮಗೆ ನಿರ್ಮೋಹ ಜೀವನಮಾರ್ಗದ ಪಾಠವನ್ನು ಹೇಳಿಕೊಡುತ್ತದೆ. ಡಿ.ವಿ.ಜಿಯವರ ಮಂಕುತಿಮ್ಮನ ಕಗ್ಗದ ಅನೇಕ ಪದ್ಯಗಳು, ನಮ್ಮನ್ನು ಕವಿದ ಮೋಹವೆಂಬ ಮಂಕನ್ನು ಹೋಗಲಾಡಿಸಲು ಸಹಾಯ ಮಾಡುತ್ತವೆ. ಆದಿಗುರು ಶಂಕರಾಚಾರ್ಯರ ಮೋಹಮುದ್ಗರ ‘ಭಜ ಗೋವಿಂದಂ’ ಮೋಹವನ್ನು ಪರಿಚಯಿಸಿ, ಆ ಪಾಶದಿಂದ ತಪ್ಪಿಸಿಕೊಳ್ಳುವ ಉಪಾಯನ್ನು ಕಲಿಸುತ್ತದೆ. ಜನಸಾಮಾನ್ಯರಿಗೆ ಅರ್ಥವಾಗುವಂತೆ ಬರೆದು ಹಾಡಿದ ಅನೇಕ ದಾಸರಪದಗಳಿವೆ. ಲಕ್ಷ್ಮಣನ ಮೇಲಿನ ಮಮಕಾರವನ್ನು ಬದಿಗೊತ್ತಿ, ಅಣ್ಣನಿದ್ದಲ್ಲಿ ನೆರಳಾಗಿ ನೀನಿರು ಎಂದು ವನವಾಸಕ್ಕೆ ಕಳುಹಿಸಿದ ಸುಮಿತ್ರಾಮಾತೆಯಿದ್ದಾಳೆ. ಜೀವಕ್ಕೆ ಜೀವವಾದ ಸೀತೆಯನ್ನು ರಾಜಧರ್ಮದ ಮರ್ಯಾದೆಗಾಗಿ ಕಾಡಿನಲ್ಲಿರಿಸಿ, ಮನದಲ್ಲಿ ಕೇವಲ ಅವಳನ್ನೇ ಧ್ಯಾನಿಸಿದ ಶ್ರೀರಾಮನಿದ್ದಾನೆ. ಯಾವುದೇ ಷರತ್ತುಗಳಿಲ್ಲದೇ ಕೃಷ್ಣನನ್ನು ಕೃಷ್ಣನಿದ್ದಂತೆಯೇ ಪ್ರೀತಿಸಿದ ರಾಧೆಯೂ ಇದ್ದಾಳೆ. ತನ್ನ ಜೀವನದುದ್ದಕ್ಕೂ ಎಲ್ಲಿಗೂ, ಯಾರಿಗೂ ಅಂಟಿಕೊಳ್ಳದೇ, ಎಲ್ಲರ ಹೃದಯಲ್ಲಿಯೂ ಮನೆ ಮಾಡಿದ ಆ ಮೋಹನಾಂಗ ಶ್ರೀಕೃಷ್ಣನಿದ್ದಾನೆ. ಹೀಗೆ ಮೋಹದಿಂದ ಮುಕ್ತರಾಗುವ ಮನಸ್ಸಿದ್ದರೆ ಅನೇಕ ಮಾರ್ಗಗಳಿವೆ. ಮನಸ್ಸಿದ್ದರೆ ಮಾರ್ಗವಲ್ಲವೇ?
ಆ ನಿರ್ಮೋಹಿ ಪರಮಾತ್ಮನು ಅವನಿಂದ ಬೇರಾಗಿ ಬಂದ ಜೀವಾತ್ಮಗಳಿಗೆ ಒಡ್ಡುವ ಪರೀಕ್ಷೆಯಿರಬಹುದು ಈ ಮೋಹವೆಂಬ ಮಾಯೆ. ವ್ಯಾಮೋಹಕ್ಕೂ, ಪ್ರೇಮಕ್ಕೂ ನಡುವೆ ಇರುವ ವ್ಯತ್ಯಾಸವನ್ನು ಅರಿತು, ಮನಸ್ಸು ಪ್ರೇಮದಿಂದ ವ್ಯಾಮೋಹಕ್ಕೆ ದಾಟದ ಹಾಗೆ ಲಕ್ಷ್ಮಣರೇಖೆಯನ್ನು ನಾವೇ ಎಳೆದುಕೊಳ್ಳೋಣ. ಮೋಹವನ್ನು ಗೆದ್ದ ಮೇಲೆ, ಜೀವನವೇ ಮೋಕ್ಷಮಾರ್ಗವಲ್ಲವೇ? ಬ್ರಹ್ಮಪದಕ್ಕೆ ಪಥವಲ್ಲವೇ? ಪರಮಪದಕ್ಕೆ ಬಾಗಿಲಲ್ಲವೇ?
ಕೊನೆಹನಿ – ಮೋಹವು ಮನುಷ್ಯನ ಅರಿ. ಆ ಅರಿಯನ್ನು ಅರಿಯೋಣ. ಅರಿತು ಸೋಲಿಸೋಣ. ಗೆದ್ದು ಜೀವಿಸೋಣ.