ಯಜ್ಞಕ್ಕೆಂದು ಕರೆದನವ ಭೂಮಿಯನ್ನು. ಸಸ್ಯಕ್ಕೆಂದು ಸ್ವರ್ಗವನ್ನು ಕರೆದ ಇಂದ್ರ. ಸಂಪತ್ತಿನ ವಿನಿಮಯದಿಂದ ಇಬ್ಬರೂ ಎರಡು ಭುವನಗಳನ್ನೂ ಪೋಷಿಸಿದರು.
ರಕ್ಷಕನಾದ ಅವನ ಯಶಸ್ಸನ್ನು ಕದಿಯಲಾಗಲಿಲ್ಲ ದೊರೆಗಳಿಗೆ. ಯಾಕೆಂದರೆ ಪರಸ್ವತ್ತುಗಳಿಂದ ಹಿಂದಿರುಗಿದ ಕಳ್ಳತನ ಶಬ್ದವಾಗಿ ಮಾತ್ರ ಉಳಿದಿತ್ತು.
ಸಜ್ಜನನಾದವ ದ್ವೇಷಿಯಾದರೂ ಅವನಿಗೆ ಸಮ್ಮತನಾಗಿದ್ದ. ರೋಗಿಗೆ ಔಷಧದಂತೆ. ದುಷ್ಟ ಪ್ರಿಯನಾಗಿದ್ದರೂ ತ್ಯಾಜ್ಯನಾಗಿದ್ದ ಅವನಿಗೆ. ಹಾವು ಕಡಿದ ಬೆರಳಿನಂತೆ.
ಸೃಷ್ಟಿಕರ್ತ ಮಹಾಭೂತಗಳಿಂದ ಅವನನ್ನು ಸೃಷ್ಟಿಸಿದ್ದನಷ್ಟೇ. ಹಾಗಾಗಿ ಅವನ ಗುಣಗಳೆಲ್ಲವೂ ಬೇರೆಯವರಿಗೆ ಅನುಕೂಲ ಒದಗಿಸಲೆಂದೇ ಇದ್ದವು.
ಸಮುದ್ರ ತೀರವೇ ಪ್ರಾಕಾರವಾಗಿದ್ದ, ಸಮುದ್ರವೇ ಜಲದುರ್ಗವಾಗಿದ್ದ, ಇನ್ನೊಬ್ಬರ ಶಾಸನಕ್ಕೆ ಒಳಪಡದ ಭೂಮಮಂಡಲವನ್ನು ಒಂದೇ ನಗರವೆಂಬಂತೆ ಆಳಿದನವ.
ಮಗಧವಂಶದಲ್ಲಿ ಜನಿಸಿದ, ದಾಕ್ಷಿಣ್ಯದಿಂದ ಪ್ರಸಿದ್ಧಳಾದ, ಸುದಕ್ಷಿಣೆ ಅವನ ಪತ್ನಿಯಾಗಿದ್ದಳು. ಯಜ್ಞಕ್ಕೆ ದಕ್ಷಿಣೆಯಂತೆ.
ಅನೇಕ ರಾಣಿಯರಿದ್ದರೂ ರಾಜನವ ಮನಸ್ವಿನಿಯಾದ ಲಕ್ಷ್ಮಿ ಅವಳಿಂದಾಗಿ ತನ್ನನ್ನು ಪತಿಯೆಂದು ಭಾವಿಸಿದ್ದ.
ತನಗೆ ಅನುರೂಪಳಾದ ಅವಳಲ್ಲಿ, ತಾನೇ ಹುಟ್ಟಿ ಬರಲು ಉತ್ಸುಕನಾಗಿದ್ದ ಆತ, ವಿಲಂಬಿತ ಫಲದ ಮನೋರಥಕ್ಕಾಗಿ ಕಾಲ ಕಾಯತೊಡಗಿದ್ದ.
ಸಂತಾನವನ್ನು ಪಡೆಯಲು ಬೇಕಾದ ಅನುಷ್ಠಾನಕ್ಕಾಗಿ ತನ್ನ ಭುಜದಿಂದ ಜಗತ್ತಿನ ಭಾರವನ್ನು ಇಳಿಸಿದ ಆತ, ಸಚಿವರ ಮೇಲಿಟ್ಟ ಅದನ್ನು.
ಆಮೇಲೆ ಸೃಷ್ಟಿಕರ್ತನನ್ನು ಪೂಜಿಸಿ, ಪುತ್ರಕಾಮನೆಯಿಂದ ಆ ದಂಪತಿಗಳು ಗುರು ವಸಿಷ್ಠರ ಆಶ್ರಮಕ್ಕೆ ಹೊರಟರು.
ಮಧುರ ಗಂಭೀರ ಶಬ್ದದ ಒಂದೇ ರಥವನ್ನೇರಿದರು ಅವರು. ಮಳೆಗಾಲದಲ್ಲಿ ನೀರನ್ನು ಹೊತ್ತು ಸಾಗುವ ಮೋಡವನ್ನು ಮಿಂಚು ಮತ್ತು ಐರಾವತಗಳು ಏರುವಂತೆ.
ಆಶ್ರಮಕ್ಕೆ ತೊಡಕಾಗಬಾರದೆಂದು ಪರಿಮಿತ ಪರಿಚರರೊಡಗೂಡಿದ ಅವರು ವಿಶಿಷ್ಟ ತೇಜಸ್ಸಿನಿಂದಾಗಿ ಸೇನೆಯಿಂದ ಸುತ್ತುವರಿದಂತೆಯೇ ಕಾಣುತ್ತಿದ್ದರು.
ಶಾಲವೃಕ್ಷದಿಂದ ಹೊರಬಂದ ಪರಿಮಳವನ್ನು ಹೊತ್ತ, ವನರಾಜಿಗಳನ್ನು ಅಲ್ಪವೇ ಕಂಪಿಸುವಂತೆ ಮಾಡುತ್ತಿರುವ, ಪುಷ್ಪಪರಾಗಗಳನ್ನು ಚೆಲ್ಲಾಡುತ್ತಿರುವ, ಸುಖಸ್ಪರ್ಶಿಯಾದ ಗಾಳಿಯಿಂದ ಸೇವೆಗೊಳಪಡುತ್ತಾ;
ರಥಚಕ್ರದ ಶಬ್ದ ಕೇಳಿ ಕತ್ತೆತ್ತಿ, ಷಡ್ಜಸ್ವರಕ್ಕೆ ಸಂವಾದಿನಿಯಾದ, ಎರಡಾಗಿ ವಿಭಾಗಗೊಂಡ, ಮನೋಭಿರಾಮವಾಗಿ ಕೂಗುತ್ತಿರುವ ನವಿಲುಗಳ ಕೇಕಾರವವನ್ನು ಕೇಳುತ್ತಾ;
ಮಾರ್ಗದ ಸನಿಹದಲ್ಲಿ ನಿಂತು, ರಥದಲ್ಲಿಯೇ ಕಣ್ಣು ನೆಟ್ಟ ಹೆಣ್ಣು ಗಂಡು ಜಿಂಕೆಗಳ ಜೋಡಿಯಲ್ಲಿ ತಮ್ಮ ತಮ್ಮ ಕಣ್ಣಿನ ಸಾದೃಶ್ಯವನ್ನು ಕಾಣುತ್ತಾ ಸಾಗುತ್ತಿದ್ದರವರು.
ಅನುಕೂಲವಾಗಿ ಬೀಸುತ್ತಿದ್ದ ಗಾಳಿ, ಪ್ರಾರ್ಥನೆಯ ಸಿದ್ಧಿಯ ಸೂಚನೆಯನ್ನು ನೀಡುತ್ತಿತ್ತು. ಕುದುರೆಯ ಓಟದಿಂದೆದ್ದ ಧೂಳು ರಾಣಿಯ ಮುಂಗುರುಳನ್ನಾಗಲೀ ರಾಜನ ಮುಂಡಾಸನ್ನಾಗಲೀ ಸ್ಪರ್ಶಿಸುತ್ತಿರಲಿಲ್ಲ.