ಅವನೊಬ್ಬನೇ ಅವನಂಥವನು

ಕಥಾಯನ : ಜಗದೀಶಶರ್ಮಾ ಸಂಪ

ವೈವಸ್ವತ ಮನು ಎಂದೊಬ್ಬನಿದ್ದ. ಮನೀಷಿಗಳಿಗೆ ಮಾನನೀಯ ಆತ. ರಾಜರೆಲ್ಲರಿಗೆ ಮೊದಲಿಗ. ವೇದಗಳಿಗೆ ಪ್ರಣವವಿದ್ದಂತೆ ಇದ್ದನವ.

 

ಅವನ ಶುದ್ಧವಾದ ವಂಶದಲ್ಲಿ ಜನಿಸಿದ‌ ದಿಲೀಪ. ಕ್ಷೀರಸಾಗರದಲ್ಲಿ ಚಂದ್ರ ಉದಿಸಿ ಬಂದಂತೆ. ಶುದ್ಧರಲ್ಲೇ ಶುದ್ಧನವ. ರಾಜರಲ್ಲಿ ಚಂದ್ರನವ.

 

ವಿಶಾಲವಾದ ಎದೆಯವ. ವೃಷಭದಂಥ ಹೆಗಲಿನವ. ಶಾಲವೃಕ್ಷದಂತೆ ಎತ್ತರದವ. ಮಹಾಭುಜದವ. ತನ್ನ ಕಾರ್ಯಕ್ಕೆ ಅನುಗುಣವಾದ ದೇಹವಿರುವವ. ಕ್ಷಾತ್ತ್ರಧರ್ಮವೇ ಆಶ್ರಯಿಸಿಕೊಂಡಂತೆ ಇರುವವ.

 

ಎಲ್ಲರನ್ನೂ ಮೀರಿದ ಬಲ ಅವನದಾಗಿತ್ತು. ಎಲ್ಲ ಜೀವಿಗಳನ್ನು ತನ್ನ ತೇಜಸ್ಸಿನಿಂದ ಮೀರಿ ನಿಂತಿದ್ದನಾತ. ಎಲ್ಲರಿಗಿಂತ ಎತ್ತರದ ವ್ಯಕ್ತಿತ್ವದಿಂದ ಭೂಮಿಯನ್ನೇ ಆಕ್ರಮಿಸಿ‌ನಿಂತಿದ್ದನವ ಮೇರುವಿನಂತೆ.

 

ಅವನ ಆಕಾರದಂತೆ ಇತ್ತು ಅವನ‌ ಪ್ರಜ್ಞೆ. ಅವನ‌ ಪ್ರಜ್ಞೆಗೆ ಸಮಾನವಾಗಿತ್ತು ಅವನ‌ ಶಾಸ್ತ್ರಜ್ಞಾನ. ಅವನ‌ ಶಾಸ್ತ್ರಜ್ಞಾನಕ್ಕೆ ಸಮಾನವಾಗಿದ್ದವು ಅವನ‌ ಕಾರ್ಯಗಳು. ಅವನ ಕಾರ್ಯಗಳಿಗೆ ಸಮಾನವಾಗಿತ್ತು ಅದರ ಪರಿಸಮಾಪ್ತಿ.

 

ಭಯ ಹುಟ್ಟಿಸುವ ರಾಜಗುಣದಿಂದಾಗಿ ಆಶ್ರಿತರು ಸನಿಹಕ್ಕೆ ಹೋಗಲಾರದಂತಿದ್ದ ಆತ. ಆಕರ್ಷಿಸುವ ರಾಜಸ್ವಭಾವದಿಂದಾಗಿ ಸಮೀಪಕ್ಕೆ ಸೆಳೆಯುತ್ತಿದ್ದ. ಜಲಚರಗಳ ಭಯದಿಂದ ಸಮುದ್ರಕ್ಕೆ ಹೋಗದಂತೆ ಮತ್ತು ರತ್ನಗಳ ಆಕರ್ಷಣೆಯಿಂದ ಹೋಗುವಂತೆ.

 

ಪ್ರಜೆಗಳ ಅಭಿವೃದ್ಧಿಗೆಂದೇ ಅವರಿಂದ ಕರ ಸ್ವೀಕರಿಸುತ್ತಿದ್ದ ಆತ. ಸಾವಿರಪಟ್ಟು ನೀಡಲೆಂದೇ ಸೂರ್ಯ ನೀರನ್ನು ಹೀರುವಂತೆ.

 

ಅವನ ಸೇನೆ ಛತ್ರ-ಚಾಮರದಂತೆ ಉಪಕರಣವಷ್ಟೇ ಆಗಿತ್ತು. ಉದ್ದೇಶದ ಈಡೇರಿಕೆಗೆ ಎರಡೇ ಸಾಧನವಾಗಿತ್ತು ಅವನಿಗೆ. ಶಾಸ್ತ್ರಗಳಲ್ಲಿ ತಡೆಯಿಲ್ಲದ ಪ್ರಜ್ಞೆ. ಧನುಸ್ಸಿಗೆ ಜೋಡಿಸಿಕೊಂಡೇ ಇದ್ದ ಶಿಂಜಿನಿ.

 

ಗುಪ್ತವಾಗಿಯೇ ಇರುತ್ತಿದ್ದ ಮಂತ್ರಾಲೋಚನೆಯಿಂದಾಗಿ, ಇಂಗಿತದ ಗೂಢತೆಯಿಂದಾಗಿ, ಫಲಿತಾಂಶ ಬಂದಮೇಲೆಯೇ ಅವನ ಕಾರ್ಯವನ್ನು ತರ್ಕಿಸಬೇಕಾಗಿತ್ತು. ಫಲದಿಂದಾಗಿ ಹಿಂದಿನ ಪೂರ್ವಕರ್ಮವನ್ನು ತರ್ಕಿಸುವಂತೆ.

 

ಧೈರ್ಯದಿಂದ ರಕ್ಷಸಿಕೊಂಡಿದ್ದ ದೇಹವನ್ನು. ರೋಗವಿಲ್ಲದೇ ಧರ್ಮವನ್ನು ಆಚರಿಸುತ್ತಿದ್ದ. ಲೋಭವಿಲ್ಲದೇ ಸಂಪತ್ತನ್ನು ಸಂಗ್ರಹಿಸಿದ್ದ. ಅಂಟಿಕೊಳ್ಳದೇ ಸುಖವನ್ನು ಅನುಭವಿಸುತ್ತಿದ್ದ.

 

ಜ್ಞಾನವಿದ್ದೂ ಮೌನ; ಶಕ್ತಿಯಿದ್ದೂ ಸಹನೆ; ತ್ಯಾಗ ಮಾಡಿಯೂ ಆತ್ಮಶ್ಲಾಘನೆ ಇಲ್ಲದಿರುವಿಕೆ; ಹೀಗೆ ವಿರುದ್ಧ ಗುಣಗಳು ಜೊತೆಗಿರುವುದರಿಂದ ಸಹೋದರರಂತೆ ಆಗಿದ್ದವು.

 

ವಿಷಯಗಳಿಗೆ ವಶನಾಗದ, ವಿದ್ಯೆಗಳ ಪಾರ ಕಂಡ, ಧರ್ಮಪ್ರೀತಿಯ ಅವನು ವಯಸ್ಸಾಗದೆಯೂ ವೃದ್ಧನಾಗಿದ್ದ.

 

ಶಿಕ್ಷಣ ನೀಡುವುದರಿಂದ, ರಕ್ಷಿಸುವುದರಿಂದ, ಪೋಷಿಸುವುದರಿಂದ ಪ್ರಜೆಗಳ ತಂದೆಯೇ ಇವನಾಗಿದ್ದ. ಅವರ ತಂದೆಯರು ಜನ್ಮ ಕೊಟ್ಟವರು ಮಾತ್ರ ಆಗಿದ್ದರು.

 

ಲೋಕದ ಸ್ಥಿತಿಗೆಂದು ಅಪರಾಧಿಗಳಿಗೆ ಮಾತ್ರ ಶಿಕ್ಷೆ ನೀಡುವ, ಸಂತಾನಕ್ಕೆಂದೇ ಪರಿಣಯವಾಗುವ, ವಿದ್ವಾಂಸನಾದ ಅವನ ಅರ್ಥ ಮತ್ತು ಕಾಮಗಳು ಧರ್ಮವೇ ಆಗಿದ್ದವು.

Leave a Reply

Your email address will not be published. Required fields are marked *