ಯಾರೂ ನೋಡದ್ದನ್ನು ನಾನೂ ನೋಡಿಲ್ಲವೇ?

ಅಂಕಣ ಚಿತ್ತ~ಭಿತ್ತಿ : ಡಾ. ಸುವರ್ಣಿನೀ ಕೊಣಲೆ

She lost her legs in an accident, a day before the wedding.

 

The next day he lost his spine.  

 

ಹೀಗೊಂದು ಸಣ್ಣ ಕಥೆ. ಎಲ್ಲೋ ಓದಿದ್ದು. ಇದರಲ್ಲಿ ಎರಡನೆಯ ಸಾಲು ಕಾಡುವಂಥದ್ದು. ಮೊದಲನೆಯ ಸಾಲು ಯೋಚನೆಗೆ ನೂಕುವಂಥದ್ದು. ಅದರಲ್ಲಿ ಯೋಚಿಸುವಂಥದ್ದೇನಿದೆ? ರಸ್ತೆಗಿಳಿದ ಪ್ರತಿಯೊಬ್ಬನೂ ಇನ್ನೊಂದು ಕಡೆಗೆ ಸುರಕ್ಷಿತವಾಗಿ ತಲುಪುತ್ತಾನೆಯೇ ಅಥವಾ ಮಧ್ಯದಲ್ಲಿಯೇ ಯಮನ ದೂತರು ಅವನನ್ನು ತಮ್ಮ ವಾಹನದಲ್ಲಿ ಹೇರಿಕೊಂಡು ಹೋಗಿಬಿಡುತ್ತಾರೆಯೇ. ಅಥವಾ ಅಂಗಾಂಗ ಕಳೆದುಕೊಂಡು ಆತ ಬದುಕಿಡೀ ನೋವನುಭವಿಸುತ್ತಾನೆಯೇ ಎನ್ನುವುದು ಇಂದಿನ ಕಾಲದ ಉತ್ತರವಿಲ್ಲದ ಪ್ರಶ್ನೆ.  

 

 

ನಮ್ಮ ದೇಶದಲ್ಲಿ ಪ್ರತಿ ನಾಲ್ಕು ನಿಮಿಷಕ್ಕೆ 1, ಗಂಟೆಗೆ 16, ದಿನಕ್ಕೆ 377 ಸಾವುಗಳು ರಸ್ತೆ ಅಪಘಾತದಿಂದ ಸಂಭವಿಸುತ್ತದೆ. ನಮ್ಮ ಒಂದೂಕಾಲು ಬಿಲಿಯನ್ ಜನಸಂಖ್ಯೆಯಲ್ಲಿ ಇದು ಯಾವ ಲೆಕ್ಕವೂ ಅಲ್ಲದಿರಬಹುದು. ಆದರೆ ಆ ಕುಟುಂಬಗಳಿಗೆ ಅದು ಬದುಕನ್ನೇ ಬುಡಬೇಲಾಗಿಸುವ ಲೆಕ್ಕಾಚಾರ. 377 ಎಂದರೆ ಒಂದು ವಿಮಾನದ ಜನಸಂಖ್ಯೆ. ಅಂದರೆ, ಪ್ರತಿದಿನ ಒಂದು ವಿಮಾನ ಅಪಘಾತದಲ್ಲಿ ಉಂಟಾಗಬಹುದಾದಷ್ಟು ಸಾವು ನೇರವಾಗಿ ರಸ್ತೆ ಅಪಘಾತದಲ್ಲಿ, ಅಂದರೆ ನಾವು spot death ಎಂಬ categoryಗೆ ಸೇರಿಸುವ ಸಾವುಗಳು. ಅದಲ್ಲದೇ ಅಂಗವೈಕಲ್ಯ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದೂ ಫಲಕಾರಿಯಾಗದೆ ಕೆಲವು ದಿನಗಳ ಅನಂತರ ಸಾಯುವವರ ಲೆಕ್ಕ ಇದರಲ್ಲಿಲ್ಲ. ಸಾವಿನ ಮುಖ್ಯ ಕಾರಣಗಳಲ್ಲಿ ರಸ್ತೆ ಅಪಘಾತಕ್ಕೆ 9ನೆಯ ಸ್ಥಾನ. ವರ್ಷವೊಂದಕ್ಕೆ ಜಗತ್ತಿನಲ್ಲಿ ಒಟ್ಟು ಹನ್ನೆರಡುಲಕ್ಷ ಸಾವು ಅಪಘಾತದಿಂದಾಗಿ ಆಗುತ್ತದೆ ಎನ್ನುತ್ತವೆ ಅಧ್ಯಯನಗಳು. ಭಾರತದಲ್ಲಿ ಈ ಸಂಖ್ಯೆ ಒಂದುವರೆ ಲಕ್ಷದಷ್ಟು. ಪ್ರತಿದಿನ ಸುಮಾರು 1200ಕ್ಕಿಂತ ಹೆಚ್ಚು ಅಪಘಾತಗಳಾಗುತ್ತವೆ ಭಾರತದಲ್ಲಿ. ವರ್ಷದಲ್ಲಿ ನಾಲ್ಕುವರೆ ಲಕ್ಷ. ಇದರಲ್ಲಿ 25% ಅಪಘಾತಗಳು ದ್ವಿಚಕ್ರವಾಹನಗಳದ್ದು.  

 

 

ದೇಶದ ನಗರಗಳಲ್ಲಿ ರಾಜಧಾನಿ ನವದೆಹಲಿಯೇ ಮುಂಚೂಣಿಯಲ್ಲಿದೆ ರಸ್ತೆ ಅಪಘಾತದ ಸಂಖ್ಯೆಯಲ್ಲಿ. ಬೆಂಗಳೂರಿಗೆ ನಾಲ್ಕನೆಯ ಸ್ಥಾನ. ಅತಿಹೆಚ್ಚು ಅಪಘಾತಗಳಾಗುವ ಮೊದಲ ಹತ್ತು ದೇಶಗಳ ಪಟ್ಟಿಯಲ್ಲಿ ನಮ್ಮ ದೇಶ ಇಲ್ಲ ಎನ್ನುವುದಷ್ಟೇ ಸಮಾಧಾನದ ವಿಚಾರ.  

 

 

ಕುಡಿದು ವಾಹನ ಚಲಾಯಿಸುವುದು ಅಪಘಾತಗಳಿಗೆ ಮುಖ್ಯ ಕಾರಣ ಎಂದು ನಾವು ತಿಳಿದಿದ್ದೇವೆ. ಆದರೆ ಒಟ್ಟು ಅಪಘಾತದ 1.5%ದಷ್ಟು ಮಾತ್ರ ಕುಡಿತದಿಂದ ಆಗುವಂಥದ್ದು ಎನ್ನುತ್ತವೆ ಅಂಕಿಅಂಶಗಳು. ಆದರೆ ಪ್ರಾಣಾಂತಿಕವಾದ ಅಪಘಾತಗಳು ಹೆಚ್ಚು ಸಂಭವಿಸುವುದು ಮದ್ಯದಮಲಿನಲ್ಲಿ ವಾಹನ ಚಲಾಯಿಸಿದಾಗಲೇ ಎನ್ನುವುದು ಸತ್ಯ ವಿಚಾರ.  

 

 

ಆದರೆ ಇನ್ನುಳಿದ ಅಪಘಾತಗಳಿಗೇನು ಕಾರಣ?  

 

ರಸ್ತೆ ನಿಯಮ ಪಾಲಿಸದಿರುವುದು! 

***

 

 

ಸುಮಾರು ಆರುನೂರು ದಶಲಕ್ಷ ವರ್ಷಗಳ ಹಿಂದೆ ಭೂಮಿಯ ಒಂದು ದಿನ ಎಂದರೆ ಕೇವಲ 21 ಗಂಟೆಗಳಾಗಿದ್ದವಂತೆ. ಈಗ ದಿನಕ್ಕೆ 24 ಗಂಟೆಗಳು. ಪ್ರತಿ ಶತಮಾನ ಕಳೆದಂತೆ ಈ 24ಗಂಟೆಗೆ 1.7 ಮಿಲಿಸೆಕೆಂಡ್ ಸೇರ್ಪಡೆಯಾಗುತ್ತಿದೆಯಂತೆ.  

 

ಇದರರ್ಥ ಭೂಮಿ ತನ್ನ ವೇಗವನ್ನು ಕಡಿಮೆಗೊಳಿಸಿಕೊಳ್ಳುತ್ತಿದೆ. 

 

ಒಂದು ಬೀಜ ಮೊಳಕೆಯೊಡೆದು, ಗಿಡವಾಗಿಯೋ ಮರವಾಗಿಯೋ ಬೆಳೆದು ಹೂಬಿಟ್ಟು, ಫಲ ಕೊಡಲು ಒಂದಷ್ಟು ಕಾಲ ಬೇಕು. ಅದಕ್ಕೆ ಸುತ್ತಲಿನ ವಾತಾವರಣ ಸರಿ ಇರಬೇಕು. ಬೇಕಾದ ನೀರು ಆಹಾರ ದೊರೆಯಬೇಕು. ಇಂದು ನೆಟ್ಟ ಗಿಡದಲ್ಲಿ ನಾಳೆಯೇ ಹಣ್ಣು ಬೇಕು ಎಂದು ನಾವು ಕ್ವಿಂಟಾಲುಗಟ್ಟಲೆ ಗೊಬ್ಬರ, ಲೀಟರುಗಟ್ಟಲೆ ನೀರು ಸುರಿದರೆ? ಗಿಡ ಸಾಯುತ್ತದೆಯೇ ಹೊರತು ಹಣ್ಣಂತೂ ಸಿಗುವುದಿಲ್ಲ.     

 

 

ಇದರರ್ಥ ಪ್ರಕೃತಿಯಲ್ಲಿ ಎಲ್ಲದಕ್ಕೂ ಒಂದು ಸಮಯವಿದೆ. ನಮ್ಮ ಮನಸ್ಸಿಗೆ ಬೇಕೆಂದಂತೆ ಪ್ರಕೃತಿ ನಡೆದುಕೊಳ್ಳುವುದಿಲ್ಲ.  

 

 

ಆದರೆ ನಾವು? ಪ್ರಕೃತಿಯ ನಿಯಮಗಳನ್ನು ನಾವು ಪಾಲಿಸುವುದಿಲ್ಲ. ಅನಿವಾರ್ಯವಾದಲ್ಲಿ, ಬದಲಾಯಿಸಲು ಸಾಧ್ಯವಾಗದಲ್ಲಿ ಮಾತ್ರ ಅದರ ಪಾಲನೆ ನಡೆಯುತ್ತದೆಯೇ ಹೊರತು ನಮ್ಮಿಂದ ಬದಲಾವಣೆ ಸಾಧ್ಯ ಅನಿಸಿದ್ದನ್ನು, ಅದರ ಪರಿಣಾಮದ ಬಗ್ಗೆ ಯೋಚಿಸದೆಯೇ, ಮೀರಿ ಬಿಡುತ್ತೇವೆ ನಾವು.  

 

ನಾವು ನಮ್ಮ ನಿಯಮಗಳನ್ನಾದರೂ ಪಾಲಿಸುತ್ತೇವೆಯೇ ಎಂದರೆ ಅದೂ ಇಲ್ಲ. ಹೆಚ್ಚಿನ ರಸ್ತೆ ಅಪಘಾತಗಳನ್ನು ತಡೆಯುವುದು ನಮ್ಮ ಕೈಯಲ್ಲೇ ಇರುವ ಜಾದೂದಂಡ. ಆದರೆ ಅದನ್ನು ನಾವು ಬಳಸುವುದಿಲ್ಲ. ಫೂಟ್ಪಾತಿನ ಮೇಲೆ ವಾಹನ ಚಲಾಯಿಸುವುದು, ಕೆಂಪು ಸಿಗ್ನಲಿದ್ದಾಗ ಆಚೀಚೆ ನೋಡಿ ಹೋಗಿಬಿಡುವುದು, ವನ್ ವೇ ಇದ್ದಲ್ಲಿ ನುಗ್ಗುವುದು, ಅಪಾಯಕಾರಿ ತಿರುವುಗಳಲ್ಲಿ ಅಜಾಗರೂಕತೆಯಿಂದ ಹೋಗುವುದು, ವೇಗದ ಮಿತಿಯನ್ನು ಮೀರುವುದು, ಸೀಟ್-ಬೆಲ್ಟ್ ಹೆಲ್ಮೆಟ್ ಧರಿಸದೇ ಇರುವುದು… ಹೀಗೇ ಪಟ್ಟಿ ಉದ್ದವಿದೆ. ಇವುಗಳನ್ನೆಲ್ಲ ತಡೆಯುವುದಕ್ಕೆ ರಸ್ತೆಗೆ ನಾಲ್ಕು ಜನ ಟ್ರಾಫಿಕ್ ಪೋಲೀಸರ ಅಗತ್ಯ ಯಾಕಿದೆ?  

 

 

ಬೇಕಿದೆ ನಮಗೆ ಅಂತಹ ಕಣ್ಗಾವಲು!  ಮನುಷ್ಯರಲ್ಲವೇ ನಾವು! ಬುದ್ಧಿ ತುಂಬಿ ಕಳುಹಿಸಿದ್ದಾನೆ ಮೇಲಿನವನು. ಇರುವೆಗಳಾಗಿದ್ದರೆ ಸಾಗುತ್ತಿದ್ದೆವು ಒಂದರ ಹಿಂದೆ ಇನ್ನೊಂದು.  

 

 

ಭೂಮಿಗೆ, ಸೂರ್ಯನಿಗೆ, ನಕ್ಷತ್ರಗಳಿಗೆ, ಸಸ್ಯರಾಶಿಗೆ, ಪ್ರಾಣಿಗಳಿಗೆ… ಯಾವುದಕ್ಕೂ ಇಲ್ಲದ ಅವಸರ ಮನುಷ್ಯನಿಗೆ ಮಾತ್ರ! ಕೆಂಪು ಸಿಗ್ನಲ್ ಕಳೆದು ಹಸಿರು ಬರುವ ತನಕ ಹತ್ತು ಸೆಕೆಂಡ್ ನಾವು ಕಾಯಲಾರೆವು ಏಕೆ? ಸಿನೆಮಾ ಟಿಕೆಟ್ಟಿಗೆ ಕಾಯುವ ತಾಳ್ಮೆ ಕೆಂಪು ಸಿಗ್ನಲ್ಲಿನೆದುರು ಇರುವುದಿಲ್ಲ ನಮಗೆ. ಇತ್ತೀಚೆಗೆ ಮನುಷ್ಯ ಹೆಚ್ಚು ಹೆಚ್ಚು ಅಸಮಾಧಾನಿಯಾಗುತ್ತಿರುವುದು ಸಾಬೀತಾದ ಸತ್ಯ. ಏನೋ ಚಡಪಡಿಕೆ. ನಿಂತಲ್ಲಿ ನಿಲ್ಲಲಾರೆವು. ಸಮಯದ ಉಳಿತಾಯ ಎನ್ನುವುದು ನೆಪವಷ್ಟೇ. ಕಾರಣ ನಮ್ಮ ಹೊರಮುಖ ಲಹರಿಗಳು. ಒಳಗಿಳಿಯುವುದೇ ಇಲ್ಲ ನಾವು.  

 

ರಸ್ತೆ ನಿಯಮಗಳನ್ನು ಮೀರಿ ವಾಹನ ಚಲಾಯಿಸಿ, ಸಿಕ್ಕಿಹಾಕಿಕೊಳ್ಳದೆಯೇ ತಪ್ಪಿಸಿಕೊಂಡು ಬಂದೆ ಎನ್ನುವುದು ಕೆಲವರಿಗೆ ಹೆಮ್ಮೆಯ ವಿಚಾರ. ಅದೊಂದು ಮಹತ್ ಸಾಧನೆ! ನಾನು ಈ ಎಲ್ಲ ನಿಯಮಗಳನ್ನೂ ಮೀರಿದವನು – ಎನ್ನುವುದೊಂದು ಭಾವ ಇದೆಯಲ್ಲ. ಅದು ಇಲ್ಲಿಯೂ ಕೆಲಸ ಮಾಡುತ್ತದೆ.  ಕೋಟಿಕೋಟಿ ಸಂಖ್ಯೆಯಲ್ಲಿರುವ ತಾರಮಂಡಲಗಳಲ್ಲಿ ನಮ್ಮ ಅಸ್ತಿತ್ವ ಏನು ಎಂಬ ಒಂದು ಪ್ರಶ್ನೆ ನಮಗೆ ಮೂಡುವುದಿಲ್ಲ ಎನ್ನುವುದೇ ಖೇದಕರ. ಹಾಗಾಗಿಯೇ ನಮ್ಮ ತಪ್ಪಿದ್ದಲ್ಲೂ ಟ್ರಾಫಿಕ್ ಪೋಲೀಸರ ಮೇಲೇ ಆರೋಪ ಹೊರಿಸುವ ಭೂಪರು ನಮ್ಮ ನಡುವೆ ಇರುವುದು. ಆತನ ಪ್ರಶ್ನೆ ಅಹಂಕಾರದ ಬುಗ್ಗೆಗೆ ಚುಚ್ಚಿದ ಪಿನ್ನಾಗುತ್ತದೆ. ತಾನು ಮಾಡಿದ ತಪ್ಪಿನ ಬಗ್ಗೆ ಏನೇನೂ ಅನಿಸದವನಿಗೆ ಸಿಕ್ಕಿಬಿದ್ದದ್ದು ಅವಮಾನವೆನಿಸುತ್ತದೆ.  

 

 

ಅಷ್ಟಕ್ಕೂ ಈ ನಿಯಮಗಳ ಪಾಲನೆ ಯಾರಿಗಾಗಿ? ಯಾಕಾಗಿ? ‘ಯಾರೂ ನೋಡಲಿಲ್ಲ’ ಎನ್ನುವ ಧೈರ್ಯದ ಮೇಲೆ ತಪ್ಪುಗಳನ್ನು ಮಾಡುವಾಗ ಬೇರೆ ಯಾರೋ ಯಾಕೆ, ನಾನೇ ನೋಡಿದ್ದೇನಲ್ಲ! ನನಗೇ ತಿಳಿದಿದೆಯಲ್ಲ ಇದು ತಪ್ಪು ಎನ್ನುವುದು ಎಂಬ ಯೋಚನೆ ಯಾಕೆ ಬರುವುದಿಲ್ಲ ನಮಗೆ? ಇದು ಅಪಘಾತವೊಂದಕ್ಕೇ ಅಲ್ಲ. ಎಲ್ಲ ವಿಚಾರಗಳಿಗೂ ಅನ್ವಯವಲ್ಲವೇ?  

 

 

ಒಮ್ಮೆ ಗುರುವೊಬ್ಬರು ಎಲ್ಲರಿಗೂ ಬಾಳೆಹಣ್ಣನ್ನು ಕೊಟ್ಟು, ‘ಯಾರಿಗೂ ಕಾಣದಂತೆ ತಿನ್ನಿ’ ಎನ್ನುತಾರೆ. ಎಂತೆಂತಹುದೋ ಅಡಗುದಾಣಗಳಲ್ಲಿ ಬಾಳೆಹಣ್ಣು ತಿನ್ನುತ್ತಾರೆ ಎಲ್ಲರೂ. ಒಬ್ಬನನ್ನು ಬಿಟ್ಟು. ಅದಕ್ಕವನು ಕೊಡುವ ಕಾರಣ – ‘ದೇವರು ಎಲ್ಲೆಡೆಯೂ ಇದ್ದಾನಲ್ಲವೇ?’ ಎಂದು.  

 

 

ಈ ಕಥೆಯನ್ನು ನಾವು ನೆನಪಿನಲ್ಲಿಡಬೇಕು. ದೇವರು ಎಲ್ಲೆಡೆಯೂ ಇದ್ದಾನೆ. ನಾವು ಇರುವಲ್ಲೆಲ್ಲ ನಮ್ಮ ಆತ್ಮಸಾಕ್ಷಿಯೂ ಇದ್ದೇ ಇರುತ್ತದೆ. ಹಾಗೂ ಅದೆರಡೂ ಒಂದೇ.    

 

ನಿಯಮಗಳನ್ನು ನಾವು ನಮಗಾಗಿ ಪಾಲಿಸಬೇಕೇ ಹೊರತು ನಿಯಮ ರೂಪಿಸಿದವರಿಗಾಗಿ ಅಲ್ಲ. ಅದು ರಸ್ತೆಯ ನಿಯಮ ಇರಬಹುದು, ಸಮಾಜದ ನಿಯಮ ಇರಬಹುದು, ಧಾರ್ಮಿಕ ಕ್ಷೇತ್ರಗಳ ನಿಯಮ ಇರಬಹುದು, ಯಾವುದೇ ಸಂಸ್ಥ-ಸಂಘಟನೆಗಳದ್ದಿರಬಹುದು. ಅದನ್ನು ಮೀರಿದಾಗ ನಮ್ಮ ಅಹಂಕಾರಕ್ಕೆ ತೃಪ್ತಿ ದೊರೆಯಬಹುದು. ಆದರೆ ನಮ್ಮೊಳಗಿನ ಸತ್ಯಕ್ಕೆ ನಾವು ಮಾಡುವ ಮೋಸ ಅದು. ನಮಗೇ ನಾವು ಮಾಡಿಕೊಳ್ಳುವ ಮೋಸ.

 

***

 

ರಸ್ತೆಯ ಹೊಂಡಗಳೂ, ಅವೈಜ್ಞಾನಿಕವಾಗಿ ನಿರ್ಮಿಸಲ್ಪಟ್ಟ ರಸ್ತೆಗಳೂ ಅಪಘಾತಕ್ಕೆ ಮುಖ್ಯ ಕಾರಣಗಳೇ ಹೌದು ಎನ್ನುವುದನ್ನು ನಾವು ಗಮನಿಸದೇ ಬಿಡುವಂತಿಲ್ಲ. ಆದರೆ ಕಾರಣಕ್ಕೆ ನಾವು ನಮ್ಮ ತಪ್ಪುಗಳನ್ನು ಮುಚ್ಚಿಬಿಡುವಂತಿಲ್ಲ.  

 

ಹಾಗಾಗಿ ರಸ್ತೆ ಅಪಘಾತಕ್ಕೆ ಒಂದೇ ಮುಖ್ಯ ಕಾರಣ. ನಮ್ಮೊಳಗಿನ ಅಸಂಬದ್ಧತೆ. ಅದು ನಮ್ಮ ವಿನಾಕಾರಣ ಅವಸರಕ್ಕೆ ಮತ್ತು ಅಹಂಕಾರಕ್ಕೆ ಕಾರಣವಾಗುತ್ತದೆ. ಈ ಎರಡೂ ನಿಯಮಗಳ ಪಾಲನೆಯನ್ನು ತಡೆಯುತ್ತವೆ.  

 

ನಮ್ಮೊಳಗೆ ಕತ್ತಲಿರುವಾಗ ರಸ್ತೆ ಕಾಣುವುದಾದರೂ ಹೇಗೆ? ದಾರಿ ತೋರುವ ಜ್ಯೋತಿ ಇರಲೊಂದು ಒಳಗೆ.

 

Leave a Reply

Your email address will not be published. Required fields are marked *