ಗೋಕರ್ಣ: ಶ್ರೀಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ವಿಲಂಬ ಸಂವತ್ಸರದ ಶಿವಗಂಗಾ ವಿವಾಹ ಮಹೋತ್ಸವವು, ಶ್ರೀಸಂಸ್ಥಾನದವರ ಮಾರ್ಗದರ್ಶನದಲ್ಲಿ ಆಶ್ವೀಜ ಬಹುಳ ಚತುರ್ದಶಿಯ ದಿನ ವೈಭವದಿಂದ ಜರುಗಿತು.
ಶ್ರೀಕ್ಷೇತ್ರ ಗೋಕರ್ಣದ ವಿಶಾಲವಾದ ಕಡಲ ತೀರದಲ್ಲಿ ಗೋಧೂಳಿ ಮುಹೂರ್ತದಲ್ಲಿ ಸಹಸ್ರಾರು ಭಕ್ತ ಜನರ ಸಮ್ಮುಖದಲ್ಲಿ ನಿಶ್ಚಯಿತ ವಧುವಾಗಿ ಬಂದ ಗಂಗಾಮಾತೆ ಜಗದೀಶ್ವರನನ್ನು ವರಿಸಿದಳು. ಕಡಲಿನ ಅಬ್ಬರ, ವಾದ್ಯಘೋಷ , ವೇದಘೋಷ, ವಿಶಿಷ್ಟ ತೋರಣ, ಗುಮಟೆಪಾಂಗ ಜಾನಪದ ಹಾಡುಗಳು ಉತ್ಸವಕ್ಕೆ ಮೆರುಗನ್ನು ನೀಡಿದವು. ಭಕ್ತರು ಆರತಿ ನೀಡಿ ದೇವದಂಪತಿಗಳನ್ನು ಬರಮಾಡಿಕೊಂಡರು.
ವಿವಾಹ ಮಹೋತ್ಸವದ ನಂತರ ಶಿವ-ಗಂಗೆಯರು ಶ್ರೀ ದೇವಾಲಯದ ‘ಅಮೃತಾನ್ನ’ ಭೋಜನ ಶಾಲೆಗೆ ಚಿತ್ತೈಸಿ ದೇವರಾಜೋಪಚಾರ ಪೂಜೆ ಸ್ವೀಕರಿಸಿದರು. ಆನಂತರ ಪ್ರಸಾದ ವಿತರಣೆ ನಡೆಯಿತು. ಉಪಾಧಿವಂತ ಮಂಡಲದ ಸದಸ್ಯರು, ಊರ ನಾಗರಿಕರು, ಎಲ್ಲ ಸಮಾಜದ ಬಂಧುಗಳು ಉಪಸ್ಥಿತರಿದ್ದರು.
ಅದೇ ದಿನ ಸಂಜೆ ಶ್ರೀಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ಸಣ್ಣ ಕೈಗಾರಿಕಾ ಸಚಿವ ಶ್ರೀ ಎಸ್. ಆರ್. ಶ್ರೀನಿವಾಸ ಇವರು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಆಡಳಿತಾಧಿಕಾರಿ ಶ್ರೀ ಜಿ. ಕೆ. ಹೆಗಡೆಯವರು ಸಚಿವರಿಗೆ ಆತ್ಮಲಿಂಗ ಸ್ಮರಣಿಕೆ ನೀಡಿ, ಶಾಲು ಹೊದೆಸಿ ಸನ್ಮಾನಿಸಿದರು.
ಶ್ರೀ ವೇ. ಗಣೇಶ ಭಟ್ ಜಂಭೆ ಪೂಜಾ ಕೈಂಕರ್ಯ ನೆರವೇರಿಸಿದರು.