ದುಂಡನೆಯ ಬೆವರ ಹನಿಯೊಂದು ಹಣೆಯ ಮೇಲಿಂದ ಸರ್ರನೇ ಜಾರಿ, ಕಣ್ರೆಪ್ಪೆಯ ತುದಿಯಿಂದ ಜೋತು, ಕಣ್ಣೊಳಗೇ ಇಳಿದು ಒಂದು ಕ್ಷಣ ಅವನ ದೃಷ್ಟಿಯನ್ನು ಮಂಜಾಗಿಸಿತ್ತು. ಚಿಗುರು ಮೀಸೆಯ ಮೇಲೆಲ್ಲ ಸಾಲುಗಟ್ಟಿ ನಿಂತ ಬೆವರ ಹನಿಗಳು ಆಗೊಮ್ಮೆ ಈಗೊಮ್ಮೆ ತುಟಿಯ ಮೇಲಿಳಿದು ಉಗುಳನ್ನು ಉಪ್ಪಾಗಿಸುತ್ತಿದ್ದವು. ಎಲೆಗಳಿಲ್ಲದೇ ಬೆತ್ತಲಾಗಿರುವ ಮನೆಯ ಮುಂದಿನ ಮಾಮರಗಳು ಅಲುಗಾಟವಿಲ್ಲದೇ ಮಂಕಾಗಿ ನಿಂತಿದ್ದವು. ಆರಾಮ ಕುರ್ಚಿಯಲ್ಲಿ ಬುಸ್ಸೆಂದು ಪವಡಿಸಿದ ಅಪ್ಪ ಬೀಸಣಿಗೆಯನ್ನು ಬೀಸಿಕೊಳ್ಳುತ್ತಾ “ಅಬ್ಬಾ, ಉರಿಯೇ!” ಎಂದು ತನಗೆ ತಾನೇ ಗೊಣಗಿಕೊಳ್ಳುತ್ತಿದ್ದರು.
ಮುಂಬಾಗಿಲ ಬಳಿ ತೋರಣದಂತೆ ಬೆಳೆದು ನಿಂತ ಜಾಜಿ ಮಲ್ಲಿಗೆಯ ಒಣಗಿದೆಲೆಗಳ ನಡುವೆ ಅಲ್ಲಲ್ಲಿ ಅಡಗಿ ಕುಳಿತ ಮೊಗ್ಗುಗಳನ್ನು ಆಯ್ದು ಚಿವುಟಿ ಸೆರಗಿನ ತುದಿಯಲ್ಲಿ ಶೇಖರಿಸಿಕೊಳ್ಳುತ್ತಿದ್ದರು ಅಮ್ಮ.
ಅಂಗಳದ ಆ ಬದಿಯ ಆಕಳ ಕೊಟ್ಟಿಗೆಯಲ್ಲಿರುವ ಜೋಡೆತ್ತುಗಳು ತಮ್ಮ ಮುಂದೆ ಬಿದ್ದಿದ್ದ ಮೂರ್ನಾಲ್ಕು ಒಣ ಹುಲ್ಲಿನ ತುಣುಕುಗಳನ್ನು ನಾಲಿಗೆಯಿಂದ ನೆಕ್ಕಿ ಬಾಯೊಳಗೆ ಏರಿಸಿಕೊಳ್ಳುವುದಕ್ಕೆ ಹರಸಾಹಸ ಪಡುತ್ತಿದ್ದವು. ಪಕ್ಕದಲ್ಲಿಯೇ ಅಂಗಾತ ಬಿದ್ದ ನೇಗಿಲಿನ ಆ ತುದಿಯಿಂದ ಈ ತುದಿಗೆ ಹೆಣೆದ ಬಲೆಯೊಳಗೊಂದು ಜೇಡನು ಅಲ್ಲಿ ಹಾರಾಡುತ್ತಿರುವ ಒಂದೆರಡು ಕೀಟಗಳನ್ನೇ ಕಾತುರದಿಂದ ದಿಟ್ಟಿಸುತ್ತಿತ್ತು.
ಅಷ್ಟರಲ್ಲಿ ಗಿಲಿ ಗಿಲಿ ಸದ್ದಿನೊಂದಿಗೆ ಗುಡ್ಡದ ಮೇಲಿಂದ ಅಂಗಳದತ್ತ ಇಳಿದು ಬಂದವು ಮೂರ್ನಾಲ್ಕು ತರಗೆಲೆಗಳು. ಅದೋ ಅಂಗಳದ ಆ ಮೂಲೆಯಲ್ಲಿ ಪುಟ್ಟದೊಂದು ಸುಳಿಗಾಳಿ. ಕೆಂಧೂಳಿನ ಕಣಗಳೊಂದಿಗೆ ಕೊಂಚ ಹೊತ್ತು ಅಲ್ಲಿಯೇ ಸುಳಿದಾಡಿ ಸ್ತಬ್ಧವಾಯಿತದು ಕ್ಷಣಮಾತ್ರದಲ್ಲಿ.ಎಲ್ಲಿಂದಲೋ ಬಂದ ಒಂದೆರಡು ಪಾತರಗಿತ್ತಿಗಳು ಆ ಸುಳಿಗಾಳಿಯೊಂದಿಗೆ ಚೆಲ್ಲಾಟವಾಡುತ್ತಿದ್ದವು.
ತುಟಿಗಳ ಮೇಲೆ ಸಾಲುಗಟ್ಟಿ ನಿಂತ ಬೆವರ ಹನಿಗಳು ಒಮ್ಮೆಲೇ ತಂಪಾದಂತೆ ಭಾಸವಾಯಿತು ಅವನಿಗೆ. ಚಿಗುರು ಮೀಸೆ ಮೂಡಿದರೂ ಅವನಿನ್ನೂ ತುಂಟ ಪೋರನಲ್ಲವೇ? ಉಲ್ಲಸಿತಗೊಳ್ಳುವುದಕ್ಕೆ ಅಷ್ಟೇ ಸಾಕಾಗಿತ್ತು ಅವನಿಗೆ. ಬಾಯೊಳಗಿಂದ “ಕೀ ಕೀ” ಎಂದು ಸದ್ದು ಮಾಡುತ್ತಾ ಬೈಕ್ ಚಲಾಯಿಸುವ ಭಂಗಿಯಲ್ಲಿ ಅಂಗಳದತ್ತ ಓಡಿದನು ಅವನು. ಅತ್ತಿಂದಿತ್ತ ಸುಳಿದಾಡುತ್ತಿರುವ ಪಾತರಗಿತ್ತಿಗಳ ಹಿಂದೆ ಅವನ ಬೈಕ್ ಓಡುತ್ತಲೇ ಇತ್ತು. ಅಷ್ಟರಲ್ಲಿ ಮತ್ತದೇ ಗಿಲಿ ಗಿಲಿ ಸದ್ದು. ಆ ಸದ್ದಿನೊಂದಿಗೆ ತರಗೆಲೆಗಳ ಪುಂಜವೇ ಅಂಗಳದತ್ತ ಇಳಿದು ಬಂತು. ದಿಕ್ಕು ದೆಸೆಯಿಲ್ಲದೇ ಬೀಸಿ ಬಂದ ಹಿತವಾದ ತಂಗಾಳಿಯ ಸೆಳೆತಕ್ಕೆ ಸಿಕ್ಕು ಅಂಗಳದ ತುಂಬೆಲ್ಲ ಹರಡಿಕೊಂಡವು ತರಗೆಲೆಗಳು. ಇದ್ದಕ್ಕಿದ್ದಂತೆಯೇ ಸಂಜೆಯ ಎಳೆಬಿಸಿಲು ಮಸುಕಾಯಿತು. ಆಗಸವು ಕಪ್ಪಿಟ್ಟಿತು.
ಈಗ ಎಚ್ಚೆತ್ತುಕೊಂಡಿದ್ದರು ಅವನ ಅಪ್ಪ. ಅಂಗಳದಲ್ಲಿ ಒಣಹಾಕಿದ್ದ ಬಟ್ಟೆಗಳನ್ನು ಲಗುಬಗೆಯಿಂದ ಎಳೆದುಕೊಳ್ಳುತ್ತಾ “ಸಾವಿತ್ರೀ…” ಎಂದು ತನ್ನ ಮಡದಿಯನ್ನು ಕೂಗಿ ಕರೆದರು ಅವರು. ಅಪ್ಪನ ಕರೆಗೆ ಓಗೊಟ್ಟು, ಸೆರಗಿನ ಅಂಚಿನಿಂದ ಬೆವರೊರೆಸಿಕೊಳ್ಳುತ್ತಾ ಹೊರಬಂದಳು ಅಮ್ಮ. ಹೊರಗಿನ ವಾತಾವರಣದಲ್ಲಾದ ಬದಲಾವಣೆಗಳನ್ನು ಕಂಡು ದಂಗಾಗಿ ಹೋದರು ಅವರು. “ಅರೇ, ಇಷ್ಟು ಬೇಗ ಮೋಡ ಆವರಿಸಿಬಿಟ್ಟಿತೇ? ಮೊದಲ ಮಳೆ ಇಂದಾದರೂ ಬಂದಿದ್ದರೆ ಕೊಂಚವಾದರೂ ನಿರಾಳವಾಗುತ್ತಿತ್ತು” ಎನ್ನುತ್ತಲೇ ಅವರು ಕೊಟ್ಟಿಗೆಯಲ್ಲಿ ಜೋಡಿಸಿಟ್ಟಿದ್ದ ಮೂರ್ನಾಲ್ಕು ಬುಟ್ಟಿಗಳನ್ನು ಲಗುಬಗೆಯಿಂದ ಕೈಗೆತ್ತಿ ಅಂಗಳದತ್ತ ಎಸೆದರು. ಬಿಸಿಲಲ್ಲಿ ಒಣಗಲೆಂದು ಅಂಗಳದ ತುಂಬೆಲ್ಲಾ ಹರಡಿದ್ದ ಅಡಿಕೆ, ಕಾಳುಮೆಣಸುಗಳ ಮೇಲೆ ನೆಟ್ಟಿತ್ತು ಅವರ ದೃಷ್ಟಿ. ಲಗುಬಗೆಯಿಂದ ಅವೆಲ್ಲವನ್ನೂ ಬುಟ್ಟಿಯಲ್ಲಿ ತುಂಬಿಕೊಳ್ಳತೊಡಗಿದರು ಅಮ್ಮ. ಎಳೆದುಕೊಂಡ ಬಟ್ಟೆಗಳನ್ನು ಪಡಸಾಲೆಯಲ್ಲಿ ಗುಡ್ಡೆ ಹಾಕಿ ಮರಳಿ ಬಂದ ಅಪ್ಪನೂ ಅವರೊಂದಿಗೆ ಕೈಜೋಡಿಸಿದರು. ಪಾತರಗಿತ್ತಿಗಳ ಹಿಂದೆ ಓಡುತ್ತಲೇ ಇದ್ದನು ತುಂಟ ಪೋರ. ಅಪ್ಪ ಅಮ್ಮನ ಲಗುಬಗೆಯನ್ನು ಕಂಡು ಕಾತುರಗೊಂಡನು ಅವನು.”ಅಪ್ಪಾ, ಈವತ್ತು ಮಳೆ ಬರುತ್ತಾ?” ಎನ್ನುತ್ತಲೇ ಅವನೂ ಅವರ ಜೊತೆ ಕೈಜೋಡಿಸಿದನು.
ಘಳಿಗೆ ಘಳಿಗೆಗೂ ಆಗಸವನ್ನು ದಿಟ್ಟಿಸುತ್ತಲೇ, ಕ್ಷಣ ಕ್ಷಣಕ್ಕೂ ಏರುತ್ತಿರುವ ತಂಗಾಳಿಯ ವೇಗವನ್ನು ಗಮನಿಸುತ್ತಲೇ ಇನ್ನಷ್ಟು ಲಗುಬಗೆಯಿಂದ ಬುಟ್ಟಿ ತುಂಬುತ್ತಿದ್ದರು ಅವರು.ಅಂಗಳದಲ್ಲಿ ಹರಡಿದ್ದ ಅಡಕೆಗಳು ಇನ್ನೂ ಖಾಲಿಯಾಗಿರಲಿಲ್ಲ. ಅದೋ, ಪಟಪಟನೇ ಉದುರಿದವು ಅಲ್ಲೊಂದು ಇಲ್ಲೊಂದು ನೀರ ಹನಿಗಳು. ಬೀಸಿ ಬರುವ ತಂಗಾಳಿಯ ತುಂಬೆಲ್ಲಾ ಮಣ್ಣಿನ ವಾಸನೆ.ತಿಂಗಳುಗಳಿಂದ ಸುರಿಯುತ್ತಲೇ ಇದ್ದ ಬಿಸಿಲ ಧಗೆಗೆ ಕಾವೇರಿದ ನೆಲದ ಬಿಸಿಯು ಒಂದು ಅಲೆಯಂತೆ ಮೇಲೇಳುತ್ತಲೇ ಇತ್ತು. ಆ ಬಿಸಿಯೊಂದಿಗೆ ಸ್ಪರ್ಧೆಗಿಳಿದಂತೆ ಬೀಳುತ್ತಿರುವ ತಂಪು ಮಳೆಹನಿಗಳು ಕ್ಷಣ ಕ್ಷಣಕ್ಕೂ ಬಿರುಸಾಗುತ್ತಲೇ ಸಾಗಿದವು.
ಯಾಕೋ, ಎಲ್ಲರಿಗಿಂತ ಸ್ವಲ್ಪ ಹೆಚ್ಚಾಗಿಯೇ ಬೆವೆತುಕೊಂಡಿದ್ದರು ಅಪ್ಪ. “ಸಾವಿತ್ರೀ, ಯಾಕೋ ಅತಿಯಾದ ಬಳಲಿಕೆ. ನನ್ನ ಕೈಲಾಗದು. ಒಳಕ್ಕೆ ಹೋಗೋಣ ಬಾ” ಎನ್ನುತ್ತಲೇ ಕುಸಿದು ಕುಳಿತಿದ್ದರು ಅವರು. ಈಗ ಜೋರಾಗಿ ಮಳೆ ಸುರಿಯತೊಡಗಿತ್ತು. ಬುಟ್ಟಿಯಲ್ಲಿ ತುಂಬಿದ್ದ ಅಡಿಕೆ, ಕಾಳು ಮೆಣಸುಗಳನ್ನು ತುಂಟ ಪೋರನ ಸಹಾಯದಿಂದ ಒಳಕ್ಕೆ ಸಾಗಿಸಿದ್ದಳು ಅಮ್ಮ. ಏತನ್ಮಧ್ಯೆ ಮತ್ತೆ ತನ್ನ ಆರಾಮ ಕುರ್ಚಿಯಲ್ಲಿ ಪವಡಿಸಿದ್ದರು ಅಪ್ಪ.
ಗಂಟೆಗಳ ಕಾಲ ಸುರಿದಿತ್ತು ಮಳೆ! ಅದೆಷ್ಟೋ ಹೊತ್ತು ಆ ಮಳೆಗೆ ಮೈಯೊಡ್ಡಿ ಅಂಗಳದಲ್ಲಿ ಕುಣಿದಾಡಿದ್ದನು ಪುಟ್ಟ ಪೋರ. ಪುಟ್ಟದೊಂದು ತೊರೆಯುವಂತೆ ಗುಡ್ಡದ ಮೇಲಿಂದ ಇಳಿದು ಬಂದ ಕೆನ್ನೀರು. ಅಂಗಳದ ತುಂಬೆಲ್ಲಾ ಹರಡಿದ್ದ ಕಸ ಕಡ್ಡಿಗಳನ್ನೂ, ತರಗೆಲೆಗಳನ್ನೂ ಹೊತ್ತು ದಿಕ್ಕು ದೆಸೆಯಿಲ್ಲದೇ ಹರಿಯುತ್ತಿತ್ತು ಅದು. ಆ ಕೆನ್ನೀರಿನಲ್ಲಿ ಅಲ್ಲಲ್ಲಿ ಮೂಡಿ ಬರುತ್ತಿದ್ದ ನೀರಗುಳ್ಳೆಗಳು. ಬಿರುಸಾಗಿ ಬೀಳುತ್ತಿರುವ ಮಳೆಹನಿಗಳ ಹೊಡೆತಕ್ಕೆ ಕ್ಷಣಮಾತ್ರದಲ್ಲಿ ಒಡೆದು ಮರೆಯಾಗುತ್ತಿದ್ದವು ಅವು.
ಮನತಣಿಯುವಷ್ಟು ಕಾಲ ಸುರಿವ ಮಳೆಯಲ್ಲಿ ನಿಂತು ನೀರಾಟವಾಡಿದ ಅವನು ಮರಳಿ ಮನೆಯೊಳಗೆ ಬರುವಷ್ಟರಲ್ಲಿ….
ಆರಾಮ ಕುರ್ಚಿಯ ಮೇಲೆ ಕುಳಿತ ಆ ಭಂಗಿಯಲ್ಲಿಯೇ ತನ್ನ ಶರೀರವನ್ನು ಬಿಟ್ಟು ನೀರಗುಳ್ಳೆಯಂತೆಯೇ ಮರೆಯಾಗಿ ಹೋಗಿದ್ದರು ಅಪ್ಪ. ಚಿಗುರು ಮೀಸೆಯ ಪೋರನೊಳಗಿದ್ದ ತುಂಟತನವೂ ಆ ಕ್ಷಣದಲ್ಲಿಯೇ ಮರೆಯಾಗಿತ್ತು. ಮೊದಲ ಮಳೆಯಂತೆಯೇ ಅವನ ಹೆಗಲ ಮೇಲೆ ಸುರಿದು ಭೋರ್ಗರೆದ ಜವಾಬ್ದಾರಿಗಳನ್ನು ದಿಟ್ಟತನದಿಂದಲೇ ಹೊತ್ತು ನಡೆದಿರುವನು ಅವನು ಅಂದಿನಿಂದ ಇಂದಿನವರೆಗೆ.
ಇಂದಿಗೂ ಮೊದಲ ಮಳೆಯೆಂದರೆ ಅದೇನೋ ಒಂದು ಪುಳಕ ಅವನಿಗೆ. ಯಾಕೆಂದರೆ ಅದು ಅಪ್ಪನ ನೆನಪುಗಳನ್ನೇ ಕಣ್ಮುಂದೆ ಸುರಿಯುತ್ತದೆ.